ಕಳಸ ಹೊಸ ತಾಲೂಕು ರಚನೆಗೆ ನೂರೆಂಟು ವಿಘ್ನ
ಹಲವು ವರ್ಷಗಳ, ವಿವಿಧ ಹಂತದ ಹೋರಾಟಕ್ಕೆ ರಾಜ್ಯದ ಮೈತ್ರಿ ಸರ್ಕಾರ ಮನ್ನಣೆ ನೀಡಿ ಕಳೆದ ಬಜೆಟ್‌ನಲ್ಲಿ ಕಳಸ ತಾಲೂಕು ಕೇಂದ್ರವಾಗಿ ಘೋಷಣೆಯಾದರೂ ತಾಲೂಕು ರಚನೆ ಪ್ರಕ್ರಿಯೆ ಮಾತ್ರ ಆರಂಭವಾಗಿಲ್ಲ. ಪ್ರತಿ ಹಂತದಲ್ಲೂ ಒಂದೊಂದು ಅಡ್ಡಿ ಎದುರಾಗುತ್ತಿದೆ.
ಚಿಕ್ಕಮಗಳೂರು(ಜು.26): ಕಳಸ ಹೊಸ ತಾಲೂಕು ರಚನೆ ಹಲವು ಸಮಸ್ಯೆಗಳ ಕೇಂದ್ರ ಬಿಂದುವಾಗುತ್ತಿದೆ. ದಿನಕ್ಕೊಂದು ಸಮಸ್ಯೆಗಳು ಜಿಲ್ಲಾಡಳಿತದ ಮುಂದೆ ಬರುತ್ತಿವೆ. ಈ ಕಾರಣಕ್ಕಾಗಿಯೇ ಈ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ.
ಹಲವು ವರ್ಷಗಳ, ವಿವಿಧ ಹಂತದ ಹೋರಾಟಕ್ಕೆ ರಾಜ್ಯದ ಮೈತ್ರಿ ಸರ್ಕಾರ ಮನ್ನಣೆ ನೀಡಿ ಕಳೆದ ಬಜೆಟ್‌ನಲ್ಲಿ ಕಳಸ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಲಾಯಿತು. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮಾಡಿಕೊಳ್ಳಬೇಕಾದ ಸಿದ್ಧತೆ ಸಾಧ್ಯವಾಗುತ್ತಿಲ್ಲ.
ಮೂಡಿಗೆರೆ ತಾಲೂಕಿನಲ್ಲಿ ಒಟ್ಟು ಎಷ್ಟುಹೋಬಳಿಗಳು ಇವೆ. ಕಳಸ ತಾಲೂಕು ಕೇಂದ್ರಕ್ಕೆ ಯಾವ ಯಾವ ಗ್ರಾಮ ಪಂಚಾಯಿತಿಗಳ ಊರುಗಳನ್ನು ಸೇರ್ಪಡೆ ಮಾಡಬಹುದು. ಇವುಗಳ ಅಂತರ, ತಾಲೂಕು ಮಟ್ಟದ ಸರ್ಕಾರಿ ಕಚೇರಿಗಳನ್ನು ತೆರೆಯಲು ಬೇಕಾಗುವ ಸರ್ಕಾರಿ ಕಟ್ಟಡಗಳು ಈ ಕುರಿತ ಮಾಹಿತಿಯ ವರದಿಯನ್ನು ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಕಳುಹಿಸಬೇಕು. ಈ ವರದಿಯ ಆಧಾರದ ಮೇಲೆ ರಾಜ್ಯ ಸರ್ಕಾರ ಹೊಸ ತಾಲೂಕಿನ ಗಡಿ ಗುರುತು ಮಾಡಿ, ಅದನ್ನು ಅಧಿಸೂಚನೆಯನ್ನಾಗಿ ಹೊರಡಿಸಲಿದೆ. ಅಲ್ಲಿಗೆ ಹೊಸ ತಾಲೂಕು ಅಧಿಕೃತವಾಗಿ ಘೋಷಣೆಯದಂತೆ.
ಯಾವುದೇ ಪ್ರಕ್ರಿಯೆ ಆರಂಭವಾಗಿಲ್ಲ:
ಅಂದರೆ ಈ ಎಲ್ಲ ಪ್ರಕ್ರಿಯೆಗಳು ಈವರೆಗೆ ನಡೆದಿಲ್ಲ. ಜಿಲ್ಲಾಡಳಿತ, ಈ ಕುರಿತು ಉಪವಿಭಾಗಾಧಿಕಾರಿಗೆ ವರದಿ ಕೇಳಿದೆ. ಇದು, ಕೈಗೆ ಸಿಗುತ್ತಿದ್ದಂತೆ ಸರ್ಕಾರಕ್ಕೆ ಕಳುಹಿಸಲಾಗುವುದು. ಮೂಡಿಗೆರೆ, ಭೌಗೋಳಿಕವಾಗಿ ದೊಡ್ಡ ತಾಲೂಕು. ಆದರೆ, ಇಲ್ಲಿರುವುದು 5 ಹೋಬಳಿ ಮಾತ್ರ. ಕಳಸ, ಬಾಳೂರು ಹೋಬಳಿಗಳನ್ನು ಕಳಸ ತಾಲೂಕು ಕೇಂದ್ರಕ್ಕೆ ಸೇರಿಸಿಕೊಳ್ಳುವುದು. ಇನ್ನುಳಿದ ಗೋಣಿಬೀಡು, ಬಣಕಲ್ ಹಾಗೂ ಮೂಡಿಗೆರೆ ಕಸಬಾ ಹೋಬಳಿಗಳನ್ನು ಮೂಡಿಗೆರೆ ತಾಲೂಕು ಆಡಳಿತ ವ್ಯಾಪ್ತಿಗೆ ಬರುವಂತೆ ರಚನೆ ಮಾಡುವುದು ಸದ್ಯಕ್ಕಿರುವ ಪ್ಲಾನ್.
ಮಲೆನಾಡಿಗರನ್ನು ಒಕ್ಕಲೆಬ್ಬಿಸುವ ಮತ್ತೊಂದು ಬ್ರಹ್ಮಾಸ್ತ್ರ..!
4 ಗ್ರಾಪಂ ಆಕ್ಷೇಪ:
ಬಾಳೂರು ಹೋಬಳಿಯ ಬಾಳೂರು, ಜಾವಳಿ, ನಿಡುವಾಳೆ ಹಾಗೂ ಕೂವೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಗ್ರಾಮಗಳು ತಮ್ಮ ಊರುಗಳನ್ನು ಕಳಸ ತಾಲೂಕಿಗೆ ಸೇರಿಸಿಕೊಳ್ಳಬಾರದೆಂದು ಜಿಲ್ಲಾಡಳಿತಕ್ಕೆ ಕೋರಿಕೊಂಡಿವೆ. ಈ ನಾಲ್ಕು ಗ್ರಾಮ ಪಂಚಾಯಿತಿಗಳು ಕಳಸ ಪಟ್ಟಣದಿಂದ ಸುಮಾರು 50-60 ಕಿ.ಮೀ. ದೂರದಲ್ಲಿವೆ. ಕಚೇರಿ ಕೆಲಸಗಳ ನಿಮಿತ್ತ ಅಲ್ಲಿಗೆ ಹೋಗಿ ಬರಲು ಕಷ್ಟವಾಗುತ್ತದೆ. ಸಕಾಲದಲ್ಲಿ ಬಸ್ಸುಗಳ ಸೌಲಭ್ಯ ಇಲ್ಲ. ಆದ್ದರಿಂದ ಈ 4 ಪಂಚಾಯಿತಿಗಳು 20-25 ಕಿ.ಮೀ. ದೂರದಲ್ಲಿರುವ ಮೂಡಿಗೆರೆ ತಾಲೂಕಿನಲ್ಲಿಯೇ ಉಳಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಈಗಾಗಲೇ ಬಾಳೂರು, ಜಾವಳಿ ಗ್ರಾಮ ಪಂಚಾಯಿತಿಗಳ ಗ್ರಾಮ ಸಭೆಗಳಲ್ಲಿ ಚರ್ಚಿಸಿ ಈ ಪಂಚಾಯಿತಿಗಳನ್ನು ಕಳಸ ತಾಲೂಕಿನಿಂದ ಕೈಬಿಡಬೇಕೆಂಬ ನಿರ್ಣಯವನ್ನು ಕೈಗೊಂಡು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. ತಾಲೂಕು ಕಚೇರಿಗಳನ್ನು ತೆರೆಯಲು ಕಳಸದಲ್ಲಿ ಸರ್ಕಾರಿ ಕಟ್ಟಡಗಳ ಕೊರತೆ ಇದೆ. ಆದ್ದರಿಂದ ಕುದುರೆಮುಖದಲ್ಲಿರುವ ಕಟ್ಟಡಗಳನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿರುವುದಕ್ಕೆ ಸಾರ್ವಜನಿಕರಿಂದ ವಿರೋಧ ಬಂದಿದೆ. ಈ ಹಿನ್ನೆಲೆಯಲ್ಲಿ ಈ ವಿಷಯವನ್ನು ಕೈಬಿಡಲಾಗಿದೆ. ಅಂದರೆ ಹೊಸ ತಾಲೂಕು ಕಾರ್ಯಾರಂಭ ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಿದೆ.