ಚಿಕ್ಕಮಗಳೂರು(ಜು.24): ಮಲೆನಾಡಿನ ಜನರ ನೆಮ್ಮದಿಯ ಬದುಕನ್ನು ಅರಣ್ಯ ಕಾಯ್ದೆ ಒಂದಲ್ಲಾ ಒಂದು ರೀತಿಯಲ್ಲಿ ಕಾಡುತ್ತಿದೆ. ಮಲೆನಾಡಿನ ಮೇಲೆ ರಾಷ್ಟ್ರೀಯ ಉದ್ಯಾನವನ, ಮೀಸಲು ಅರಣ್ಯ, ಬಫರ್‌ ಜೋನ್‌, ಡೀಮ್ಡ್‌ ಫಾರೆಸ್ಟ್‌ ಅಸ್ತ್ರಗಳು ಪ್ರಯೋಗವಾಗಿದ್ದು, ಇದೀಗ ಸೆಕ್ಷನ್‌-17 ಉದ್ಘೋಷಣಾ ಅಸ್ತ್ರ ಜನರ ನಿದ್ದೆಗೆಡಿಸಿದೆ.

40,738-30 ಎಕರೆ ಪ್ರದೇಶವನ್ನು ಮೀಸಲು ಅರಣ್ಯ ಎಂದು ಘೋಷಿಸಲು ಸಿದ್ಧತೆ:

ಜಿಲ್ಲೆಯ ಮಲೆನಾಡಿನ ನಾಲ್ಕು ತಾಲೂಕುಗಳಲ್ಲಿ 40,738-30 ಎಕರೆ ಪ್ರದೇಶವನ್ನು ಹೊಸದಾಗಿ ಮೀಸಲು ಅರಣ್ಯವನ್ನಾಗಿ ಘೋಷಿಸಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಅರಣ್ಯ ವ್ಯವಸ್ಥಾಪನಾಧಿಕಾರಿ (ಫಾರೆಸ್ಟ್‌ ಸೆಟ್ಲ್‌ಮೆಂಟ್ ಆಫೀಸರ್‌) ನಿಯಮಬದ್ಧವಾಗಿ ತೀರ್ಮಾನ ತೆಗೆದುಕೊಳ್ಳದೆ ಹೋದರೆ ಜಿಲ್ಲೆಯ ಸಾವಿರಾರು ಜನರಿಗೆ ಅನ್ಯಾಯವಾಗಲಿದೆ. ಇದು, ಜಿಲ್ಲೆಯಲ್ಲಿ ಮತ್ತೊಂದು ಹೋರಾಟಕ್ಕೆ ನಾಂದಿಯಾಗಲಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.

ಹಳೆಯ ವಿವಾದ:

ಇದು, ಸುಮಾರು ಒಂದು ದಶಕದ ಹಿಂದೆ ನಡೆದಿರುವ ಬೆಳವಣಿಗೆ, ಎಲ್ಲೆಲ್ಲಿ ಗೋಮಾಳ, ಖರಬು, ಸೊಪ್ಪಿನಬೆಟ್ಟಸೇರಿದಂತೆ ಇತರೆ (ಅರಣ್ಯ ಹೊರತುಪಡಿಸಿ) ಪ್ರದೇಶಗಳಲ್ಲಿ ಹೆಚ್ಚು ಮರಗಳು ಇದ್ದರೆ ಆ ಜಾಗವನ್ನು ಅರಣ್ಯ ಎಂಬುದಾಗಿ ಘೋಷಿಸಲು ಕರ್ನಾಟಕ ಅರಣ್ಯ ಕಾಯ್ದೆ 1963ರಡಿಯಲ್ಲಿ 4(1) ಅಧಿಸೂಚನೆಯನ್ನು ರಾಜ್ಯ ಸರ್ಕಾರ 2011ರಲ್ಲಿ ಹೊರಡಿಸಿತ್ತು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅನಂತರದಲ್ಲಿ ಮುಂದಿನ ಹಂತದ ಪ್ರಕ್ರಿಯೆ ನಡೆದಿರಲಿಲ್ಲ, ಈಗ ಇದಕ್ಕೆ ಮರುಜೀವ ನೀಡಲಾಗಿದ್ದು, 5(1) ಪ್ರಕಾರ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿಗಳು ಉದ್ಘೋಷಣೆ (ಆಕ್ಷೇಪಣೆ) ಹೊರಡಿಸಿದ್ದಾರೆ. ಪರಿಣಾಮ ಜಿಲ್ಲೆಯ ಹಲವೆಡೆ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಈ ಕ್ರಮವನ್ನು ಕೈಬಿಡಬೇಕೆಂದು ಕಂದಾಯ ಇಲಾಖೆಗೆ ಹಲವು ಆಕ್ಷೇಪಣಾ ಅರ್ಜಿಗಳು ಬರುತ್ತಿವೆ. ಇದೇ ಅಂತಿಮವಲ್ಲ, ಮುಂದೆ ಇನ್ನು ಹಲವು ಸುತ್ತಿನ ಪ್ರಕ್ರಿಯೆಗಳು ನಡೆಯಲಿವೆ. ಬಲ್ಲ ಮೂಲಗಳ ಪ್ರಕಾರ ಸದ್ಯ ಗುರುತು ಮಾಡಿರುವ 40,738-30 ಎಕರೆಯಲ್ಲಿ ಹೆಚ್ಚಿನ ಪ್ರದೇಶ ಮೀಸಲು ಅರಣ್ಯ ಪ್ರದೇಶವಾಗಲಿದೆ.

ಆತಂಕ:

ಅರಣ್ಯ ಇಲಾಖೆ ಮತ್ತು ಜನರ ನಡುವಿನ ಅಂತರ ಹೆಚ್ಚುತ್ತಲೇ ಹೋಗುತ್ತಿದೆ. ಕಾಡಿನಲ್ಲಿ ವಾಸವಾಗಿರುವ ಜನರು ಒಂದಿಲ್ಲೊಂದು ರೀತಿಯಲ್ಲಿ ತೊಂದರೆಯನ್ನು ಅನುಭವಿಸುತ್ತಲೇ ಇದ್ದಾರೆ. ಜಿಲ್ಲೆಯಲ್ಲಿ ಒಂದೆಡೆ ಡೀಮ್ಡ್‌ ಫಾರೆಸ್ಟ್‌ ಸರ್ವೆ ಜನರ ನಿದ್ದೆಗೆಡಿಸಿದೆ, ಇನ್ನೊಂದೆಡೆ ಈಗ ಸೆಕ್ಷನ್‌ 17 ಮನಸ್ಸು ಕೆಡಿಸಿದೆ. ಇದರಿಂದ ಮಲೆನಾಡಿನ ಜನರಲ್ಲಿ ಆತಂಕ ಮನೆ ಮಾಡಿದೆ.

ಮೀಸಲು ಅರಣ್ಯ ಘೋಷಣೆಯ ಹಂತಗಳು:

ಈಗಾಗಲೇ ಗುರುತುಪಡಿಸಿರುವ ಪ್ರದೇಶಗಳ ನಕಾಶೆಗಳನ್ನು ತೆಗೆದು ಪ್ರಕರಣಗಳಿಗೆ ಸಂಖ್ಯೆಗಳನ್ನು ನೀಡಬೇಕಾಗಿದೆ. ಅನಂತರದಲ್ಲಿ ಸರ್ವೆ ನಂಬರ್‌ಗಳ ಪಹಣಿ, ಗ್ರಾಮ ನಕಾಶೆಗಳನ್ನು ಪರಿಶೀಲಿಸಿ, ಅವುಗಳಲ್ಲಿ ಹಿಡುವಳಿ ಜಮೀನು, ಸಾಗುವಳಿಗೆ ಮಂಜೂರಿ ಆಗಿರುವ ಜಮೀನು, ಮನೆ, ದೇವಸ್ಥಾನ ಇರುವ ಜಮೀನುಗಳನ್ನು ಕೆಲವು ಪ್ರಕರಣಗಳಲ್ಲಿ ಸೇರಿಸಿ ನಕಾಶೆ ತಯಾರಿಸಲಿದ್ದಾರೆ.

ಬಂಡೀಪುರ ಬೆನ್ನಲ್ಲೇ ಸೊಳ್ಳೆಪುರ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು

ಕರ್ನಾಟಕ ಅರಣ್ಯ ಕಾಯ್ದೆ 1963ರ ಅಧಿನಿಯಮ 6 ರಂತೆ ಸದರಿ ಭೂಮಿಯನ್ನು ಮಂಜೂರಿ ಮಾಡುವುದಾಗಲೀ, ಮನೆ ಹಾಗೂ ಇತರೆ ಅರಣ್ಯೇತರ ಚಟುವಟಿಕೆ ಮಾಡುವ ಹಾಗಿಲ್ಲ ಹಾಗೂ ಯಾರೊಬ್ಬರು ಹಕ್ಕನ್ನು ಸ್ಥಾಪಿಸುವ ಬಗ್ಗೆ ಇರುವ ದಾವೆಯನ್ನು ವಿಚಾರಣೆಗೆ ತೆಗೆದುಕೊಳ್ಳುವಂತಿಲ್ಲ. ಆಕ್ಷೇಪಣೆ ಸಲ್ಲಿಸಿದ ನಂತರ ಮೂರು ತಿಂಗಳೊಳಗೆ ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸರ್ವೆ ಮಾಡಬೇಕು. ಸಾಗುವಳಿ ಪ್ರದೇಶ, ಒತ್ತುವರಿ ಪ್ರದೇಶ, ನೀರಿನ ಪ್ರದೇಶ, ದಾರಿಯ ಪ್ರದೇಶ, ಹುಲ್ಲುಗಾವಲು ಪ್ರದೇಶ, ಸಾಗುವಳಿದಾರರ ಬಳಿ ಸಮರ್ಪಕ ಮಾಹಿತಿ ಇದ್ದರೂ ಅದು ಸೆಕ್ಷನ್‌ 17ರಡಿ ಮೀಸಲು ಅರಣ್ಯವೆಂದು ಜಿಲ್ಲಾಧಿಕಾರಿಗಳ ವರದಿಯ ಆಧಾರದ ಮೇಲೆ ಸರ್ಕಾರ ಘೋಷಣೆ ಮಾಡಿದರೆ ಬಾಧಿತ ಜನರು ರಾಜ್ಯದ ಮೇಲ್ಮನವಿ ನ್ಯಾಯಾಧೀಕರಣ (ಕೆಎಟಿ)ದಲ್ಲಿ ಮೇಲ್ಮನವಿ ಸಲ್ಲಿಸಬಹುದು.

ಚಿಕ್ಕಮಗಳೂರು ಉಪವಿಭಾಗದಲ್ಲಿ 4(1) ಅಧಿಸೂಚಿತವಾಗಿರುವ ಪ್ರದೇಶಗಳ ವಿವರ

ತಾಲೂಕು ಒಟ್ಟು ಪ್ರಕರಣಗಳು ಒಟ್ಟು ವಿಸ್ತೀರ್ಣ (ಎಕರೆಗಳಲ್ಲಿ)

  • ಚಿಕ್ಕಮಗಳೂರು 07 2313-26
  • ಕೊಪ್ಪ 46 25721- 25
  • ಮೂಡಿಗೆರೆ 13 2746- 38
  • ಶೃಂಗೇರಿ 22 9955-21

ಒಟ್ಟು 89 40738-30

- ಆರ್‌.ತಾರಾನಾಥ್‌