Nelamangala Accident: ಮಹಾರಾಷ್ಟ್ರದಲ್ಲಿರುವ ವೃದ್ಧ ತಾಯಿಗಿನ್ನೂ ಮುಟ್ಟಿಲ್ಲ ಮಗನ ಸಾವಿನ ಸುದ್ದಿ!
ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಐಎಎಸ್‌ಟಿ ಸಾಫ್ಟ್‌ವೇರ್ ಸಲ್ಯೂಷನ್ಸ್ ಕಂಪನಿಯ ಮಾಲೀಕ ಚಂದ್ರಮ್ ಯೇಗಪ್ಪಗೋಳ ಕುಟುಂಬದ ಒಟ್ಟು ಆರು ಜನ ಸಾವನ್ನಪ್ಪಿದ್ದಾರೆ.
ಬೆಂಗಳೂರು (ಡಿ.21): ತುಮಕೂರು-ಬೆಂಗಳೂರು ಹೆದ್ದಾರಿಯ ನೆಲಮಂಗಲದ ಬಳಿ ಭೀಕರ ರಸ್ತೆ ಅಪಘಾತದಲ್ಲಿ ಐಎಎಸ್‌ಟಿ ಸಾಫ್ಟ್‌ವೇರ್ ಸಲ್ಯೂಷನ್ಸ್ ಕಂಪನಿಯ ಮಾಲೀಕ ಮಹಾರಾಷ್ಟ್ರ ಮೂಲದ ಚಂದ್ರಮ್ ಯೇಗಪ್ಪಗೋಳ ಕುಟುಂಬ ದಾರುಣ ಸಾವು ಕಂಡಿದೆ. ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಒಟ್ಟು ಆರು ಮಂದಿ ಸಾವು ಕಂಡಿದ್ದಾರೆ. ಚಂದ್ರಮ್ ಯೇಗಪ್ಪಗೋಳ ಅವರ ಪತ್ನಿ, ಮಗಳು ಸೇರಿದಂತೆ ಕುಟುಂಬದ 6 ಮಂದಿ ದುರ್ಮರಣಕ್ಕೆ ಈಡಾಗಿದ್ದಾರೆ. ಚಂದ್ರು ಅವರ ಸಾಂಗ್ಲಿಯ ಮೊರಬಗಿ ಗ್ರಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಮಹಾರಾಷ್ಟ್ರದ ಜತ್ ತಾಲೂಕಿನ ಮೊರಬಗಿ ಗ್ರಾಮ ಚಂದ್ರಮ್ ಯೇಗಪ್ಪಗೋಳ ಅವರ ಮೂಲವಾಗಿದ್ದು, ಚಂದ್ರಮ್ ಅವರ ತಂದೆ ಈರಗೊಂಡ, ತಾಯಿ ಜಕ್ಕವ್ವಗೆ ಇದುವರೆಗೂ ಸುದ್ದಿ ಮುಟ್ಟಿಸಿಲ್ಲ. ಚಂದ್ರು ತಾಯಿ ,ತಂದೆ ವಯೋವೃದ್ದರಾದ ಕಾರಣ ಅವರಿಗೆ ಇನ್ನೂ ಸುದ್ದಿ ತಿಳಿದಿಲ್ಲ.ಕ್ರಿಸಮಸ್ ರಜೆ ಹಿನ್ನೆಲೆ ಸ್ವಂತ ಊರು ಮೊರಬಗಿಗೆ ಕುಟುಂಬ ಹೋಗುವಾಗ ಘಟನೆ ನಡೆದಿದೆ. ಕುಟುಂಬದ ಕೆಲವರಿಗಷ್ಟೇ ಇದರ ಮಾಹಿತಿ ತಲುಪಿದ್ದು, ಇಡೀ ಕುಟುಂಬದ ಸಾವು ಇಡೀ ಗ್ರಾಮದಲ್ಲಿ ಸಂಚಲನ ಸೃಷ್ಟಿಸಿದೆ.
ಅಷ್ಟಕ್ಕೂ ಘಟನೆ ನಡೆದಿದ್ದು ಹೇಗೆ: ಬೆಂಗಳೂರು ತುಮಕೂರು ಎನ್ ಎಚ್ 48ರ ತಿಪ್ಪಗೊಂಡನಹಳ್ಳಿ ಬಳಿ ಅಪಘಾತ ಸಂಭವಿಸಿದೆ. ಬೆಂಗಳೂರು ಕಡೆಯಿಂದ ತುಮಕೂರು ಕಡೆಗೆ ಈಚರ್ ಕ್ಯಾಂಟರ್ ಹೋಗುತ್ತಿತ್ತು. ಇದೇ ಕ್ಯಾಂಟರ್‌ನ ಹಿಂದೆ ಚಂದ್ರಮ್ ಅವರ ವೋಲ್ವೋ ಕಾರು ಹೋಗುತ್ತಿತ್ತು. ಇನ್ನು ಪಕ್ಕದ ರಸ್ತೆಯಲ್ಲಿ ಬೆಂಗಳೂರು ಕಡೆಗೆ ಕಂಟೈನರ್ ಲಾರಿಯೊಂದು ವೇಗವಾಗಿ ಹೋಗುತ್ತಿತ್ತು. ನಿಯಂತ್ರಣ ತಪ್ಪಿದ ಕಂಟೇನರ್ ಚಾಲಕ ರಸ್ತೆಯ ಮಧ್ಯದ ಮೀಡಿಯನ್ಅನ್ನು ಹತ್ತಿಸಿದ್ದಾರೆ. ಪಕ್ಕದ ರಸ್ತೆಗೆ ಇಳಿದ ಕಂಟೇನರ್ ತುಮಕೂರು ಕಡೆ ಹೋಗ್ತಿದ್ದ ಕ್ಯಾಂಟರ್ ಗೆ ಡಿಕ್ಕಿ ಹೊಡೆದಿದೆ. ಕ್ಯಾಂಟರ್‌ಗೆ ಢಿಕ್ಕಿಯಾದ ಕಂಟೇನರ್, ಅದರ ಹಿಂದೆಯೇ ಬರುತ್ತಿದ್ದ ವೋಲ್ವೋ ಕಾರ್‌ನ ಮೇಲೆ ಏಕಾಏಕಿ ಬಿದ್ದಿದೆ. ಕಂಟೇನರ್ ಬಿದ್ದ ಪರಿಣಾಮಕ್ಕೆ ಇಡೀ ವೋಲ್ವೋ ಕಾರ್ ಅಪ್ಪಚ್ಚಿಯಾಗಿದೆ. ಆಗ ಕಾರಿನಲ್ಲಿದ್ದ 6 ಜನ ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಲಾರಿ ಹಾಗೂ ಕ್ಯಾಂಟರ್ ಚಾಲಕ ಇಬ್ಬರಿಗೂ ಸಣ್ಣಪುಟ್ಟ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯಲ್ಲಿ ಐಎಎಸ್‌ಟಿ ಕಂಪನಿಯ ಮಾಲೀಕ 48 ವರ್ಷದ ಚಂದ್ರಮ್ ಯೇಗಪ್ಪಗೋಳ, 42 ವರ್ಷದ ಗೌರಾಬಾಯಿ, 12 ವರ್ಷದ ದೀಕ್ಷಾ, 16 ವರ್ಷದ ಗ್ಯಾನ್, 36 ವರ್ಷದ ವಿಜಯಲಕ್ಷ್ಮೀ ಹಾಗೂ 6 ವರ್ಷದ ಆರ್ಯ ಸಾವು ಕಂಡಿದ್ದಾರೆ.
Photos: ನೆಲಮಂಗಲ ಭೀಕರ ಆಕ್ಸಿಡೆಂಟ್, IAST ಕಂಪನಿ ಮಾಲೀಕ ಚಂದ್ರಮ್ ಇಡೀ ಕುಟುಂಬ ಸಾವು
ವಾಟ್ಸ್‌ಅಪ್ ಗ್ರೂಪ್‌ನಲ್ಲಿ ಮಾಹಿತಿ ಬಂದಂತೆ ಸಿಬ್ಬಂದಿಯಲ್ಲಿ ನೀರವ ಮೌನ: ಹೆಚ್ಎಸ್ಆರ್ ಲೇಔಟ್ ಬಳಿಯಿರುವ ಐಎಎಸ್‌ಟಿ ಸಾಫ್ಟ್‌ವೇರ್ ಸಲ್ಯೂಷನ್‌ನ ಸಿಬ್ಬಂದಿಗಳ ವಾಟ್ಸ್‌ಅಪ್ ಗ್ರೂಪ್‌ಗೆ ಘಟನೆ ನಡೆದ ಬಳಿಕ ಮಾಹಿತಿ ಬಂದಿದೆ. ಇದರ ಬೆನ್ನಲ್ಲಿಯೇ ಸಿಬ್ಬಂದಿ ಅರ್ಧಕ್ಕೆ ಕೆಲಸ ನಿಲ್ಲಿಸಿ ಹೊರಟಿದ್ದಾರೆ. ಮಾಲೀಕನ ಸಾವಿನಿಂದ ಸಿಬ್ಬಂದಿ ದಿಗ್ಭ್ರಂತರಾಗಿದ್ದಾರೆ. ಗ್ರೂಪ್‌ನಲ್ಲಿ ಬಂದ ಮೆಸೇಜ್ ನೋಡಿ ಶಾಕ್‌ಗೆ ಒಳಗಾಗಿದ್ದ ಎಲ್ಲರೂ, ಲಾಗ್‌ಔಟ್ ಮಾಡಿ ಬೇಸರದಿಂದಲೇ ಮನೆಯ ಕಡೆ ಹೊರಟಿದ್ದಾರೆ. 2018ರಲ್ಲಿ ಆರಂಭವಾಗಿದ್ದ ಕಂಪನಿಯಲ್ಲಿ 100ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರು.
ಕಳೆದವಾರ ಬಂದದ್ದ ಅಣ್ಣ ಈಗಿಲ್ಲ: ಕಳೆದ ವಾರ ನಮ್ಮ ಅಜ್ಜನಿಗೆ ಆರೋಗ್ಯ ಸಮಸ್ಯೆ ಇದ್ದಾಗ ಕುಟುಂಬ ಸಮೇತ ಬಂದಿದ್ದರು. ಆದರೆ, ಈಗ ಇಲ್ಲ ಅನ್ನೋದನ್ನ ಹೇಗೆ ನಂಬೋದು. ಟಿವಿಯಲ್ಲಿ ನೋಡಿದ ಬಳಿಕವೇ ಅಪಘಾತದ ಬಗ್ಗೆ ಮಾಹಿತಿ ಸಿಕ್ಕಿದೆ. ಬೆಂಗಳೂರಿನಲ್ಲಿ ಕಂಪನಿಯೊಂದರ ಮಾಲೀಕರಾಗಿದ್ದ. ಕುಟುಂಬದ ಎಲ್ಲಾ ಸದಸ್ಯರನ್ನ ಅವರೇ ನೋಡಿಕೊಳ್ಳುತ್ತಿದ್ದರು ಎಂದು ಮೃತ ಚಂದ್ರಮ್ ಅವರ ಸಹೋದರಿ ಗೌರವ್ವ ಮಹಾರಾಷ್ಟ್ರದ ಜತ್‌ನಿಂದಲೇ ಅಳಲು ತೋಡಿಕೊಂಡಿದ್ದಾರೆ.
Breaking: ನೆಲಮಂಗಲ ಹೆದ್ದಾರಿಯಲ್ಲಿ ಕಾರ್‌ನ ಮೇಲೆ ಬಿದ್ದ ಕಂಟೇನರ್ ಲಾರಿ, 6 ಮಂದಿ ಅಪ್ಪಚ್ಚಿ!