ಬೆಂಗಳೂರು(ಮಾ.13): ತೀವ್ರ ವೈರಸ್‌ ಸೋಂಕು ಪೀಡಿತವಾಗಿರುವ ಇಟಲಿ ಸೇರಿದಂತೆ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರುವುದಾಗಿ ಆರೋಗ್ಯ ಸಚಿವ ಶ್ರೀ ರಾಮುಲು ಭರವಸೆ ನೀಡಿದ್ದಾರೆ.

ರೋಮ್‌ ವಿಮಾನ ನಿಲ್ದಾಣದಲ್ಲಿ 15 ಇಂಜಿನಿಯರಿಂಗ್‌ ವಿದ್ಯಾರ್ಥಿಗಳು, ಕನ್ನಡಿಗರು ಸೇರಿದಂತೆ ಹಲವರು ಭಾರತಕ್ಕೆ ಮರಳಲು ಹರಸಾಹಸ ನಡೆಸಿದ್ದಾರೆ. ಅವರು ಭಾರತಕ್ಕೆ ವಾಪಸ್‌ ಬರಲು ವೈದ್ಯಕೀಯ ಪ್ರಮಾಣ ಪತ್ರ ಬೇಕಿದ್ದು, ಅಲ್ಲಿ ವೈದ್ಯಕೀಯ ಪ್ರಮಾಣ ಪತ್ರ ಸಿಗುವುದು ಕಷ್ಟವಾಗಿದೆ. ಹೀಗಾಗಿ ತಮ್ಮನ್ನು ಭಾರತಕ್ಕೆ ಕರೆಸಿಕೊಳ್ಳುವಂತೆ ಇಟಲಿಯಲ್ಲಿರುವ ಕನ್ನಡಿಗರು ವಿಡಿಯೋ ಕ್ಲಿಪ್ಪಿಂಗ್‌, ಫೋಟೋಗಳನ್ನು ಕಳುಹಿಸಿಕೊಡುವ ಮೂಲಕ ಮನವಿ ಮಾಡಿದ್ದಾರೆ. ಈಗಾಗಲೇ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌, ವಿದೇಶಾಂಗ ಸಚಿವರು ಸೇರಿದಂತೆ ಇಟಲಿಯ ಭಾರತದ ರಾಯಭಾರಿ ಕಚೇರಿ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಶೀಘ್ರವೇ ವಿಶೇಷ ವಿಮಾನ ವ್ಯವಸ್ಥೆ ಮಾಡಿ ಕನ್ನಡಿಗರು ಸೇರಿದಂತೆ ಭಾರತೀಯರನ್ನು ಕರೆತರಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

'ಕೈ, ಬಾಯಿಗೆ ಬ್ರಾಂದಿ ಹಾಕ್ಕೊಂಡ್ರೆ ಕೊರೋನಾ ಸಾಯುತ್ತಾ’?

ಕನ್ನಡಿಗರ ಪರವಾಗಿ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ವಿದೇಶಗಳ ವಿಮಾನ ನಿಲ್ದಾಣಗಳಲ್ಲಿ ಉಳಿದುಕೊಂಡಿರುವ ಕನ್ನಡಿಗರನ್ನು ಭಾರತಕ್ಕೆ ಕರೆತರುವ ವ್ಯವಸ್ಥೆ ಮಾಡುತ್ತಿದ್ದು, ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದಾರೆ. ಕನ್ನಡಿಗರು ಕೊರೋನಾ ಬಗ್ಗೆ ಭಯಭೀತರಾಗಬಾರದು. ಸುರಕ್ಷಿತವಾಗಿ ಎಲ್ಲರನ್ನು ವಾಪಸ್‌ ಕರೆತರಲಾಗುವುದು ಎಂದು ಭರವಸೆ ನೀಡಿದರು.

ಈ ಕುರಿತು ಟ್ವೀಟ್‌ ಮಾಡಿರುವ ಉಪಮುಖ್ಯಮಂತ್ರಿ ಅಶ್ವಥ್‌ ನಾರಾಯಣ್‌, ಇಟಲಿ ಸೇರಿದಂತೆ ಕೊರೋನಾ ಪೀಡಿತ ಹೊರದೇಶಗಳಲ್ಲಿರುವ ಕನ್ನಡಿಗರನ್ನು ಕರೆತರಲು ನಮ್ಮ ಸರ್ಕಾರ ಪ್ರಧಾನಿ ನರೇಂದ್ರಮೋದಿ ಅವರ ಸರ್ಕಾರದ ಜತೆಗೆ ಸಹಕರಿಸಿ ಕಾರ್ಯೋನ್ಮುಖವಾಗಿದೆ. ತಜ್ಞ ವೈದ್ಯರನ್ನು ಕರೆದುಕೊಂಡು ಹೋಗಿ ಅಲ್ಲಿಯೇ ತೀವ್ರ ತಪಾಸಣೆಗೆ ಒಳಪಡಿಸಿ ಸುರಕ್ಷತೆಯಿಂದ ಅವರನ್ನು ಇಲ್ಲಿಗೆ ವಾಪಸ್‌ ಕರೆತರಲಾಗುವುದು ಎಂದಿದ್ದಾರೆ.

ಬೆಂಗಳೂರಿಂದ ಅನಂತ​ಪು​ರಕ್ಕೆ ಆರಂಭವಾಗಲಿದೆ ಫ್ಲೈ ಬಸ್‌ ಸೇವೆ

ಇಟಲಿಯಿಂದ ಭಾರತಕ್ಕೆ ಬಂದಿರುವ ಹಲವರಿಗೆ ಕೊರೋನಾ ಸೋಂಕು ಇರುವುದು ಖಚಿತವಾಗಿದೆ. ಹೀಗಾಗಿ ಇಟಲಿಯಲ್ಲಿ ಸಿಲುಕಿಕೊಂಡಿರುವ ಕನ್ನಡಿಗರಿಗೆ ಆತಂಕ ಹೆಚ್ಚಿಸಿದೆ. ಮತ್ತೊಂದೆಡೆ ಇಟಲಿಯಲ್ಲೂ ಕೊರೋನಾ ಪ್ರಕರಣಗಳ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚುತ್ತಲೇ ಇದೆ. ಈವರೆಗೆ 12,462ಕ್ಕೂ ಅಧಿಕ ಮಂದಿಗೆ ಕೊರೋನಾ ಪತ್ತೆಯಾಗಿದೆ. ಸುಮಾರು 827 ಮಂದಿ ಈ ಸೋಂಕಿನಿಂದ ಸಾವನ್ನಪ್ಪಿದ್ದಾರೆ.