ಬೆಳಗಾವಿಯಲ್ಲಿ ಮಳೆಯ ಆರ್ಭಟ ಕ್ಷೀಣ, ಆದ್ರೆ ‘ಮಹಾ’ಕಂಟಕ!
- ಮಹಾರಾಷ್ಟ್ರದಿಂದ ಬರುತ್ತಿದೆ ಭಾರಿ ನೀರು
- ನಾರಾಯಣಪುರ ಡ್ಯಾಂ ಭರ್ತಿ, ನೆರೆ ಭೀತಿ
- ರಾಯಚೂರು, ಯಾದಗಿರಿಗೆ ಹೈಅಲರ್ಚ್
- ಟಿಬಿ ಡ್ಯಾಂನಿಂದ 43000 ಕ್ಯುಸೆಕ್ ಬಿಡುಗಡೆ
- ಸಾವಿರಾರು ಹೆಕ್ಟೇರ್ ಜಲಾವೃತ
ಬೆಳಗಾವಿ (ಜು.13): ಬೆಳಗಾವಿಯಲ್ಲಿ ಪುನರ್ವಸು ಮಳೆಯ ಆರ್ಭಟ ಕ್ಷೀಣಿಸಿದೆ. ಆದರೆ ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಇನ್ನೂ ಧಾರಾಕಾರ ಮಳೆ ಸುರಿಯುತ್ತಿದೆ. ಪರಿಣಾಮವಾಗಿ ಕೃಷ್ಣಾ, ದೂಧಗಂಗಾ, ವೇದಗಂಗಾ, ಪಂಚಗಂಗಾ ನದಿಗಳ ಹರಿವಿನಲ್ಲಿ ಹೆಚ್ಚಳವಾಗಿದೆ. ಮಂಗಳವಾರವೂ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಮತ್ತೆ ಎರಡು ಸೇತುವೆಗಳು ಮುಳುಗಡೆಯಾಗಿದ್ದು, ಒಟ್ಟು ಎಂಟು ಸೇತುವೆಗಳು ಸಂಪೂರ್ಣವಾಗಿ ಮುಳುಗಡೆಯಾಗಿವೆ. ಆದರೂ ಎಲ್ಲಿಯೂ ಪ್ರವಾಹದ ಭೀತಿ ಇಲ್ಲ. ಇದೆ ವೇಳೆ ಖಾನಾಪುರದಲ್ಲಿ ಮತ್ತೊಂದು ಶಾಲಾ ಗೋಡೆ ಬಿದ್ದಿದೆ. ವಿಜಯಪುರ ಜಿಲ್ಲೆಯಲ್ಲಿ ಮಳೆ ಗಾಳಿಗೆ ಮನೆ ಚಾವಣಿ ಕುಸಿದಿದ್ದು ಅದೃಷ್ಟವಶಾತ್ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಯ್ನಾ ಸೇರಿದಂತೆ ಮಹಾರಾಷ್ಟ್ರದ ಯಾವುದೇ ಜಲಾಶಯದಿಂದ ನೀರು ಬಿಡದಿದ್ದರೂ ಅಲ್ಲಿ ಮಳೆ ಅಬ್ಬರ ಹೆಚ್ಚಾಗಿರುವುದರಿಂದ ಕೃಷ್ಣಾ ನದಿಗೆ 1.04 ಲಕ್ಷ ಕ್ಯುಸೆಕ್ ನೀರು ಹರಿದುಬರುತ್ತಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನದಿತೀರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದೆ. ನದಿತೀರದ ಅಕ್ಕಪಕ್ಕದಲ್ಲಿರುವ ಸಾವಿರಾರು ಹೆಕ್ಟೇರ್ ಕೃಷಿ ಜಮೀನಿಗೆ ನೀರು ನುಗ್ಗಿದೆ. ಎದೆ ಎತ್ತರಕ್ಕೆ ಬಂದ ಬೆಳೆಗಳೆಲ್ಲವೂ ನೀರಿನಲ್ಲಿ ನಿಂತಿವೆ. ಬೆಳಗಾವಿ ಜಿಲ್ಲೆಯ ಉಳಿದೆಡೆ ಮಳೆ ಕಡಿಮೆಯಾಗಿದ್ದರೂ ಖಾನಾಪುರ ತಾಲೂಕಿನಲ್ಲಿ ಉತ್ತಮ ಸುರಿಯುತ್ತಿದ್ದು ಮುಗಳಿಹಾಳ ಗ್ರಾಮದ ಸರ್ಕಾರಿ ಕನ್ನಡ ಶಾಲೆಯ ಕಟ್ಟಡ ಕುಸಿದು ಬಿದ್ದಿದೆ.
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ಸಮೀಪ ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆ ಗಾಳಿಗೆ ಮನೆಯ ಚಾವಣಿ ಕುಸಿದಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಮನೆಯ ಶಬ್ದಕ್ಕೆ ಹೆದರಿ ಮನೆಯೊಳಗಿದ್ದವರು ಹೊರಗೆ ಓಡಿಬಂದು ಪ್ರಾಣ ಉಳಿಸಿಕೊಂಡಿದ್ದಾರೆ.
ಮಹಾರಾಷ್ಟ್ರ, ಬೆಳಗಾವಿಯಲ್ಲಿ ಮಳೆಯ ಅಬ್ಬರ: ಕೃಷ್ಣಾ ಮಟ್ಟ ಹೆಚ್ಚಳ
ತುಂಗಭದ್ರಾ ಜಲಾಶಯದ 12 ಗೇಟ್ ಓಪನ್
ಮಹಾಮಳೆಯ ಬಳಿಕ ಇದೀಗ ಭರ್ತಿಯಾಗಿರುವ ನಾರಾಯಣಪುರ ಸೇರಿದಂತೆ ರಾಜ್ಯದ ಹಲವು ಪ್ರಮುಖ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ನದಿ ತೀರ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದ 12 ಗೇಟ್‌ಗಳನ್ನು ತೆರೆದು 43 ಸಾವಿರ ಕ್ಯುಸೆಕ್ ನೀರು ಮಂಗಳವಾರ ನದಿಗೆ ಹರಿಸಲಾಗಿದೆ. ಜಲಾಶಯವು ಗುರುವಾರ ಸಂಪೂರ್ಣವಾಗಿ ಭರ್ತಿಯಾಗುವ ಸಾಧ್ಯತೆಯಿದೆ.
ಮಹಾರಾಷ್ಟ್ರ ಘಟ್ಟಪ್ರದೇಶ ಮತ್ತು ಬೆಳಗಾವಿಯ ಖಾನಾಪುರದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಕೃಷ್ಣಾ ಮತ್ತು ಅದರ ಉಪನದಿಗಳು ತುಂಬಿ ಹರಿಯುತ್ತಿದ್ದು ಆಲಮಟ್ಟಿಜಲಾಶಯಕ್ಕೆ 1 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಹರಿದುಬರುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಅಲಮಟ್ಟಿಜಲಾಶಯದಿಂದ ಮಂಗಳವಾರ 90 ಸಾವಿರ ಕ್ಯುಸೆಕ್ ನೀರನ್ನು ಸಮನಾಂತರ ಜಲಾಶಯವಾದ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಹರಿಬಿಡಲಾಗಿದೆ. ಹೀಗಾಗಿ ಇಲ್ಲಿನ ನೀರಿನ ಮಟ್ಟ491.34 ಮೀ.(492.25 ಮೀ ಗರಿಷ್ಠ ಮಟ್ಟ) ಮಟ್ಟಕ್ಕೇರಿ 29.19 ಟಿಎಂಸಿ ನೀರು ಸಂಗ್ರಹವಾಗಿದೆ. ಮಂಗಳವಾರ 14 ಕ್ರಸ್ಟ್ ಗೇಟ್‌ಗಳಿಂದ 1 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಮಂಗಳವಾರ ರಾತ್ರಿಯ ವೇಳೆಗೆ ನದಿಗೆ ಇನ್ನಷ್ಟುನೀರು ಹರಿಸುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ನದಿ ತೀರದ ಗ್ರಾಮಗಳಲ್ಲಿ ಹೈ ಅಲರ್ಚ್ ಘೋಷಿಸಲಾಗಿದೆ.
ಬಾಗಲಕೋಟೆ: ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ, ಪ್ರವಾಹದ ಎಚ್ಚರಿಕೆ
ಅಪಾಯದ ಮಟ್ಟದಲ್ಲಿ ಕಪಿಲಾ: ಕೇರಳದ ವೈನಾಡು ಪ್ರದೇಶದಲ್ಲಿ ಮಳೆ ಅಧಿಕವಾಗಿರುವ ಕಾರಣ ಕಬಿನಿ ಜಲಾಶಯದಿಂದ ನದಿಗೆ 35,000 ಕ್ಯುಸೆಕ್‌ಗಿಂತಲೂ ಹೆಚ್ಚಿನ ನೀರು ಹರಿಸಲಾಗುತ್ತಿದ್ದು ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ಸ್ನಾನಘಟ್ಟ, ಪರಶುರಾಮ ದೇವಾಲಯ, ಮಲ್ಲನಮೂಲೆ ಮಠ, ಐತಿಹಾಸಿಕ 16 ಕಾಲುಮಂಟಪ ನೀರಿನಿಂದ ಮುಳುಗಡೆಯಾಗಿವೆ. ಇನ್ನು ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದಿಂದ 56 ಸಾವಿರ ಕ್ಯುಸೆಕ್ ನೀರನ್ನು ಕಾವೇರಿ ನದಿಗೆ ಬಿಡಲಾಗಿದೆ.