ಬಾಗಲಕೋಟೆ: ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ, ಪ್ರವಾಹದ ಎಚ್ಚರಿಕೆ

*  ದಿನೇ-ದಿನೇ ಹೆಚ್ಚುತ್ತಿರುವ ಒಳಹರಿವು 
*  ಭಯಭೀತಗೊಂಡ ನದಿತೀರದ ಜನ
*  ನದಿ ದಡಕ್ಕೆ ತಮ್ಮ ಜಾನುವಾರುಗಳನ್ನು ಬಿಡದಂತೆ ಎಚ್ಚರ ವಹಿಸಲು ಸೂಚನೆ 
 

Flood Warning Due to Water Inflow Increasing to Krishna River in Bagalkot grg

ಜಮಖಂಡಿ/ಹುನಗುಂದ(ಜು.13): ಕೃಷ್ಣಾ ನದಿಗೆ ಹೆಚ್ಚಿನ ನೀರು ಹರಿದುಬರುತ್ತಿದ್ದು, ನದಿ ಪಾತ್ರದ ಜನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕೆಂದು ತಾಲೂಕು ಆಡಳಿತ ಮುನ್ನೆಚ್ಚರಿಕೆ ನೀಡಿದೆ. ತಾಲೂಕಿನಲ್ಲಿ ಹರಿಯುತ್ತಿರುವ ಕೃಷ್ಣೆ ತನ್ನ ಅಬ್ಬರ ತೋರಿಸುತ್ತಿದ್ದು, ದಿನೇ-ದಿನೇ ಒಳಹರಿವು ಹೆಚ್ಚಾಗುತ್ತಿದ್ದು, ನದಿತೀರದ ಜನ ಭಯಭೀತಗೊಂಡಿದ್ದಾರೆ. ಈಗಾಗಲೇ ತಾಲೂಕು ಆಡಳಿತ ನದಿ ತೀರದ ಪ್ರತಿಯೊಂದು ಗ್ರಾಮಗಳಲ್ಲಿ ಡಂಗುರ ಸಾರಿ ನದಿ ದಡಕ್ಕೆ ತಮ್ಮ ಜಾನುವಾರುಗಳನ್ನು ಬಿಡದಂತೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದೆ.

ತಾಲೂಕಿನ ಮುತ್ತೂರು ಗ್ರಾಮಕ್ಕೆ ನೀರು ಸುತ್ತುವರಿದಿದ್ದು, ಗ್ರಾಮಸ್ಥರು ಕೂಡಲೇ ಸ್ಥಳಾಂತರಗೊಳ್ಳಲು ಸೂಚಿಲಾಗಿದೆ. ತಾಲೂಕಿನ ಚಿಕ್ಕಪಡಸಲಗಿ ಶ್ರಮಬಿಂದು ಸಾಗರ ಈಗಾಗಲೇ ಸಂಪೂರ್ಣ ಭರ್ತಿಯಾಗಿದ್ದು, ಅದರ ಅಕ್ಕಪಕ್ಕದ ಹೊಲಗದ್ದೆಗಳಲ್ಲಿ ನೀರು ಮುಗ್ಗುವ ಅಪಾಯವಿದೆ. ನದಿ ತೀರದ ಗ್ರಾಮಸ್ಥರು ತೋಟ-ಗದ್ದೆಗಳಿಂದ ಗ್ರಾಮದೆಡೆ ಬರುವಂತೆ ತಿಳಿಸಲಾಗಿದೆ.

ಮಹಾರಾಷ್ಟ್ರ, ಬೆಳಗಾವಿಯಲ್ಲಿ ಮಳೆಯ ಅಬ್ಬರ: ಕೃಷ್ಣಾ ಮಟ್ಟ ಹೆಚ್ಚಳ

ಹೆಚ್ಚಿದ ನೀರಿನ ಪ್ರಮಾಣ-ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ಗೆ ದಿನೆ-ದಿನೇ ನೀರಿನ ಒಳಹರಿವು ಹೆಚ್ಚಾಗುತ್ತಿದ್ದು, ಅಷ್ಟೆಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗಿದೆ.ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾಗಿ ಸುರಿಯುತ್ತಿರುವ ಪರಿಣಾಮ ಹಿಪ್ಪರಗಿ ಬ್ಯಾರೇಜ್‌ಗೆ 95 ಸಾವಿರ ಕ್ಯುಸೆಕ್‌ ಒಳಹರಿವು ಇದ್ದು, 94 ಸಾವಿರ ಕ್ಯುಸೆಕ್‌ ನೀರನ್ನು ಬಿಡಲಾಗಿದೆ.

ರಾಜಾಪೂರ ಬ್ಯಾರೇಜಿನಿಂದ 82 ಸಾವಿರ ಕ್ಯುಸೆಕ್‌, ದೂಧಗಂಗಾ ಬ್ಯಾರೇಜಿನಿಂದ 22 ಸಾವಿರ ಕ್ಯುಸೆಕ್‌ ಹಾಗೂ ಕಲ್ಲೋಳ್ಳ ಬ್ಯಾರೇಜಿನಿಂದ 1.40ಲಕ್ಷ ಕ್ಯುಸೆಕ್‌ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದೆ. ಜಮಖಂಡಿಯಲ್ಲಿ 8 ಎಂ.ಎಂ ಹಾಗೂ ಮಧರಖಂಡಿಯಲ್ಲಿ 5 ಎಂಎಂ ಮಳೆ ಬಿದ್ದಿದೆ ಎಂದು ತಾಲೂಕು ಆಡಳಿತ ತಿಳಿಸಿದೆ.

ಪ್ರವಾಹ ಎದುರಿಸಲು ಜಿಲ್ಲಾಡಳಿತ ಸನ್ನದ್ಧ

ಹುನಗುಂದ: ಸಾರ್ವಜನಿಕರ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಮಧ್ಯದಲ್ಲಿರುವ ಸಮಸ್ಯೆಗಳ ಜೊತೆಗೆ ಕುಂದು ಕೊರತೆಗಳಿಗೆ ತಕ್ಷಣ ಕ್ರಮ ತೆಗೆದುಕೊಳ್ಳುವ ಉದ್ದೇಶವಾಗಿದೆ. ಸರ್ಕಾರದ ಸೌಲಭ್ಯಗಳನ್ನು ಪ್ರತಿಯೊಬ್ಬ ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಿಳಿಸಿದರು.

ಪಟ್ಟಣದ ತಹಶೀಲ್ದಾರ ಕಚೇರಿಗೆ ಮಂಗಳವಾರ ಭೇಟಿ ನೀಡಿ ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿ, ಆರ್‌ಒ, ಸಿಬ್ಬಂದಿ ಸಭೆ ನಡೆಸಿ ನಂತರ ಅವರು ಇಲಾಖೆ ಮಾಹಿತಿ ಪಡೆದು ಹುನಗುಂದ ತಾಲೂಕು ಆಡಳಿತ ಸಾರ್ವಜನಿಕರಿಗೆ ಇಲಾಖೆ ಮಾಹಿತಿ ಒದಗಿಸುವಲ್ಲಿ ಮತ್ತು ತೀವ್ರಗತಿಯಲ್ಲಿ ಕೆಲಸ ಮುಗಿಸುವಲ್ಲಿ ಸಿಬ್ಬಂದಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂಬ ಮಾಹಿತಿ ಮೇರೆಗೆ ಇಲ್ಲಿ ಸಭೆ ನಡೆಸಲಾಗಿದೆ. ತಾಲೂಕು ಆಡಳಿತದಲ್ಲಿ ಸಣ್ಣ-ಪುಟ್ಟವ್ಯಾಜ್ಯ, ಮನವಿ ಪತ್ರಗಳು, ಕೋರ್ಟ ಕೇಸ್‌ಗಳನ್ನು ಡಿಸಿ ಮತ್ತು ಎಸಿ ಕಚೇರಿಗೆ ಕಳಿಸದೆ ಇಲ್ಲಿಯೇ ಬಗೆ ಹರಿಸಿ ಸಂಬಂಧಿಸಿದ ಸಾರ್ವಜನಿಕರಿಗೆ ತಕ್ಷಣ ಪರಿಹಾರ ಒದಗಿಸಬೇಕು, ಸಧ್ಯ ಎಲ್ಲವೂ ಆನ್‌ಲೈನ್‌ ಸೇವೆ ಇದ್ದು, ಸರ್ಕಾರದ ಯೋಜನೆಗಳ ಸೌಲಭಕ್ಕಾಗಿ ಬಂದ ಸಾರ್ವಜನಿಕರನ್ನು ಅಲೆದಾಡಿಸದೆ ತಕ್ಷಣ ಮಾಹಿತಿ ಒದಗಿಸಿ ಅವರ ಕೆಲಸ ಮುಗಿಸಬೇಕು. ತಪ್ಪಿದಲ್ಲಿ ಅಂತಹ ಸಿಬ್ಬಂದಿ ಮೇಲೆ ಕ್ರಮ ಜರುಗಿಸಲಾಗುವದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ರುದ್ರಭೂಮಿಯ ಸಮಸ್ಯೆ ಇದ್ದು ತಾಲೂಕಿನಲ್ಲಿ 89 ಗ್ರಾಮಗಳ ಪೈಕಿ 63 ರುದ್ರಭೂಮಿಗಳಿವೆ. 26 ಗ್ರಾಮಗಳಲ್ಲಿ ರುದ್ರಭೂಮಿ ಇರದೆ ಕಾರಣ ನದಿ ದಡದಲ್ಲಿ ಮತ್ತು ಹಳ್ಳಗಳಲ್ಲಿ ಸೇರಿ 11 ಕಡೆಗಳಲ್ಲಿ ಪ್ರಸ್ತಾವ ಸಲ್ಲಿಸಲಾಗಿದೆ. ಅಲ್ಲಿಯ ಸ್ಥಳದ ಮತ್ತು ಇಲಾಖೆ ಮಾಹಿತಿ ಪಡೆದುಕೊಳ್ಳಬೇಕೆಂದು ಉಪವಿಭಾಗಾಧಿಕಾರಿ ಶ್ವೇತಾ ಬಿಡೀಕರ ಅವರಿಗೆ ಸೂಚಿಸಿದರು.

ಪ್ರವಾಹ ಮುನ್ನೆಚ್ಚರಿಕೆ ಕ್ರಮ:

ಕಳೆದ ಒಂದು ವಾರದಿಂದ ಸತತವಾಗಿ ಮಳೆ ಸುರಿಯುತ್ತಿದೆ. ಮೇಲಿನ ಜಲಾಶಯಗಳ ಹೊರ ಹರಿವಿನಿಂದ ಆಲಮಟ್ಟಿ ಜಲಾಶಯಕ್ಕೆ 1ಲಕ್ಷ ಕ್ಯೂಸೆಕ್‌ ನೀರು ಬರುತ್ತಿದೆ. ಇದರಿಂದ ನಮ್ಮ ತಾಲೂಕಿನ ನದಿ ದಡ ಪ್ರದೇಶದ ಗ್ರಾಮಗಳಿಗೆ ಮತ್ತು ಜನರಿಗೆ ಯಾವದೆ ರೀತಿಯ ತೊಂದರೆ ಇರುವದಿಲ್ಲ. ಆದಾಗ್ಯೂ ಸಹಿತ ಅಲ್ಲಿ ಟಾಸ್ಕ್‌ಫೋರ್ಸ್‌ ತಂಡವನ್ನು ರಚಿಸಿ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಡಿಸಿ ಸುನೀಲಕುಮಾರ ವಿವರಿಸಿದರು.

ಬೆಳಗಾವಿ: ಖಾನಾಪುರದಲ್ಲಿ ಮಳೆ ಆರ್ಭಟ, ಮಲಪ್ರಭಾ ತೀರದಲ್ಲಿ ಪ್ರವಾಹ

ಈಗಾಗಲೇ ಮಲಪ್ರಭೆಯಿಂದ 26, ಮತ್ತು ಕೃಷ್ಣಾ ನದಿ ಪಾತ್ರದಿಂದ 6 ಗ್ರಾಮಗಳು ಸೇರಿ ಒಟ್ಟು ಮುಳುಗಡೆಯಾದ 31 ಗ್ರಾಮಗಳ ಪೈಕಿ 21 ಗ್ರಾಮಗಳು ಸಂಪೂರ್ಣವಾಗಿ ಪುನರ್‌ ವಸತಿ ಕೇಂದ್ರಗಳಾಗಿವೆ. ಆದರೆ ಅಲ್ಲಿ ಕೆಲವು ಮೂಲಭೂತ ಸೌಕರ್ಯಗಳ ಕೊರತೆ ಇದೆ ಎಂದು ಸಾರ್ವಜನಿಕ ದೂರುಗಳು ಬಂದಿವೆ. ಆದರೆ ಇನ್ನುಳಿದ 9 ಗ್ರಾಮಗಳು ಪುನರ್‌ ವಸತಿ ಕೇಂದ್ರಗಳಾಗಬೇಕಾಗಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿಸಿ ಸುನಿಲಕುಮಾರ ಮಾಹಿತಿ ಒದಗಿಸಿದರು.

ಸೌಲಭ್ಯಗಳ ಕೊರತೆ ಡಿಸಿ ಗರಂ:

ತಾಲೂಕು ತಹಸೀಲ್ದಾರ ಕಚೇರಿ ಒಳಗೆ ಮತ್ತು ಹೊರಗೆ ಸಂಪೂರ್ಣ ವ್ಯವಸ್ಥೆ ಹದಗೆಟ್ಟಿದೆ. ಸಿಬ್ಬಂದಿಗೆ ಹಾಗೂ ಜನರಿಗೆ ಶೌಚಾಲಯದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ವಾಹನ ನಿಲುಗಡೆಗೆ ಸ್ಥಳ, ಕಚೇರಿ ಸುತ್ತಲೂ ಸ್ವಚ್ಛತೆ ಮತ್ತು ಕಂಪೌಂಡ್‌, ಸೌಕರ್ಯ ಒದಗಿಸಬೇಕೆಂದು ಜಿಲ್ಲಾಧಿಕಾರಿಗಳು ಶಿರಸ್ತೇದಾರರಿಗೆ ತಿಳಿಸಿದರು. ಉಪ ವಿಭಾಗಾಧಿಕಾರಿ ಶ್ವೇತಾ ಬಿಡೀಕರ, ಶಿರಸ್ತೆದಾರ ಈಶ್ವರ ಗಡ್ಡಿ ಇದ್ದರು.

Latest Videos
Follow Us:
Download App:
  • android
  • ios