ಮಂಡ್ಯ(ಡಿ.10): ಕೆ.ಸಿ.ನಾರಾಯಣಗೌಡ ಈ ಮೊದಲು ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಎರಡು ಭಾರಿ ಆಯ್ಕೆಯಾಗಿದ್ದರು. ಇಂದಿನ ಗೆಲವು ಹ್ಯಾಟ್ರಿಕ್‌. ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ನಾರಾಯಣಗೌಡ ಬಿಜೆಪಿಗೆ ಗೆಲವು ತಂದುಕೊಡುತ್ತಾರೆಂದು ಯಾರೂ ಭಾವಿಸಿರಲಿಲ್ಲ.

ಕೆ. ಆರ್‌. ಪೇಟೆ ಕ್ಷೇತ್ರದ ಅಭಿವೃದ್ಧಿಗೆ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಅನುದಾನ ಕೊಡದೇ ನನ್ನನ್ನು ಕೀಳಾಗಿ ಕಂಡು, ನಿರ್ಲಕ್ಷ್ಯ ಮಾಡಿದರು ಎಂಬ ಕಾರಣ ನೀಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಅನರ್ಹ ಶಾಸಕ ಎಂದು ಹಣೆ ಪಟ್ಟಿಕಟ್ಟಿಕೊಂಡು ಸುಪ್ರೀಂ ಮೆಟ್ಟಿಲೇರಿ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕೂಡ ಗಿಟ್ಟಿಸಿದರು. ನಂತರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯ ಸಾಧಿಸುವ ಮೂಲಕ ಹ್ಯಾಟ್ರಿಕ್‌ ಗೆಲವು ತಮ್ಮದಾಗಿಸಿಕೊಂಡರು. ಯಡಿಯೂರಪ್ಪ ತವರು ಕ್ಷೇತ್ರದಲ್ಲಿ ಇದುವರೆಗೂ ಒಂದೇ ಒಂದು ಶಾಸಕ ಸ್ಥಾನವನ್ನು ಇದುವರೆಗೂ ಗೆದ್ದಿರಲಿಲ್ಲ. ಇದೀಗ ಕೆ.ಸಿ. ನಾರಾಯಣಗೌಡರು ಗೆಲುವು ಸಾಧಿಸುವ ಮೂಲಕ ಮಂಡ್ಯದಲ್ಲಿ ಕಮಲ ಹರಳಿಸಿ ಗೆಲುವಿನ ನಗೆ ಬೀರಿದ್ದಾರೆ.

ಮೊದಲ ಹ್ಯಾಟ್ರಿಕ್‌:

ಕೆ.ಆರ್‌. ಪೇಟೆ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿಯೇ ಇದುವರೆಗೂ ಹ್ಯಾಟ್ರಿಕ್‌ ಗೆಲುವು ಯಾರೂ ಪಡೆದಿರಲಿಲ್ಲ. ನಾರಾಯಣಗೌಡರೇ ಮೊದಲಿಗರು. ಕಾಂಗ್ರೆಸ್‌ ಕೆ.ಬಿ. ಚಂದ್ರಶೇಖರ್‌ ಎರಡು ಬಾರಿ, ಮಾಜಿ ಸ್ಪೀಕರ್‌ ಕೃಷ್ಣ ಎರಡು ಬಾರಿ ಆಯ್ಕೆಯಾಗಿದ್ದರು. ಜೆಡಿಎಸ್‌ನಿಂದ ಕೆ.ಸಿ. ನಾರಾಯಣಗೌಡರು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಇದೀಗ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿ ಹ್ಯಾಟ್ರಿಕ್‌ ಸಾಧಿಸಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.

ಕೆಬಿಸಿಗೆ ಹ್ಯಾಟ್ರಿಕ್‌ ಸೋಲು:

ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್‌ ಕಳೆದೆರೆಡು ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಈ ಉಪಚುನಾವಣೆಯಲ್ಲಿ ತಮ್ಮ ಬಗ್ಗೆ ಅನುಕಂಪಕದ ಅಲೆ ಇದೆ. ಗೆಲ್ಲುವ ಅವಕಾಶವಿದೆ ಎಂದು ಮತದಾರರು ಹೇಳುತ್ತಿದ್ದಾರೆಂದು ಅವರು ಹೇಳುತ್ತಿದ್ದರು. ಆದರೆ, ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿದ್ದಾರೆ. ಇದರೊಂದಿಗೆ ಹ್ಯಾಟ್ರಿಕ್‌ ಸೋಲನ್ನು ಒಪ್ಪಿಕೊಂಡರು. ಜೆಡಿಎಸ್‌ನ ದೇವರಾಜ್‌ ಕೂಡ ಎರಡು ಬಾರಿ ವಿಧಾನಸಭೆಗೆ ಸ್ಪರ್ಧೆ ಮಾಡಿದ್ದಾರೆ. ಇದೀಗ ಎರಡನೇ ಬಾರಿ ಸೋತು ದಾಖಲೆ ಬರೆದಿದ್ದಾರೆ.

ಸುಮಲತಾ ಬೆಂಬಲ ಇಲ್ಲದೇ ಬಿಜೆಪಿ ಗೆಲುವು..!