ಬೆಂಗಳೂರು(ಫೆ.11): ಬಿಎಂಟಿಸಿ ನೌಕರರ ಬಾಕಿ ವೇತನವನ್ನು ವಾರದೊಳಗೆ ಪಾವತಿಸುವುದಾಗಿ ಬಿಎಂಟಿಸಿ ಅಧ್ಯಕ್ಷ ನಂದೀಶ್‌ ರೆಡ್ಡಿ ಕಾರ್ಮಿಕರಿಗೆ ಭರವಸೆ ನೀಡಿದ್ದಾರೆ.

ಮಹಿಳಾ ನೌಕರರಿಗೆ ಬೆಳಗ್ಗೆ 8ರಿಂದ ರಾತ್ರಿ 8 ಗಂಟೆವರೆಗೆ ಪಾಳಿಗಳಲ್ಲಿ ಕೆಲಸ ಮಾಡಿಸುವ ವ್ಯವಸ್ಥೆಯನ್ನು ಹಂತ ಹಂತವಾಗಿ ಜಾರಿ ಮಾಡಲಾಗುವುದು. ವಿದ್ಯುತ್‌ ಬಸ್‌ಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಓಡಿಸುವ ಬದಲು ಸಂಸ್ಥೆ ವತಿಯಿಂದಲೇ ಚಲಾಯಿಸುವ ಕುರಿತು ಸರ್ಕಾರದೊಂದಿಗೆ ಚರ್ಚಿಸಿ ನಿರ್ಣಯಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ.

ಬುಧವಾರ ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿ ಸಮೀಪ ಬಿಎಂಟಿಸಿ ಕಾರ್ಮಿಕ ಸಂಘ, ಸಿಐಟಿಯು ನೇತೃತ್ವದಲ್ಲಿ ಹಲವು ಸಂಘಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಬಿಎಂಟಿಸಿ ಅಧ್ಯಕ್ಷ ನಂದೀಶ್‌ ರೆಡ್ಡಿ, ಪ್ರತಿಭಟನಾಕಾರರ ಮುಖಂಡರೊಂದಿಗೆ ಸಂಧಾನ ಸಭೆ ನಡೆಸಿ ಈ ಭರವಸೆ ನೀಡಿದ್ದಾರೆ.

ಸಂಧಾನ ಸಭೆಯ ನಂತರ ಈ ವಿಷಯ ತಿಳಿಸಿದ ಬಿಎಂಟಿಸಿ ಕಾರ್ಮಿಕ ಸಂಘದ ಅಧ್ಯಕ್ಷ ಎಚ್‌.ಡಿ.ರೇವಪ್ಪ, ಡಿಸೆಂಬರ್‌ ಮತ್ತು ಜನವರಿಯಲ್ಲಿ ಸಾರಿಗೆ ನೌಕರರಿಗೆ ಅರ್ಧ ಸಂಬಳ ನೀಡಲಾಗಿದೆ. ಉಳಿದ ಸಂಬಳವನ್ನು ವಾರದೊಳಗೆ ಬಿಡುಗಡೆ ಮಾಡಲು ಕ್ರಮಕೈಗೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ ಎಂದರು.

ಹದಗೆಟ್ಟ ಆರ್ಥಿಕ ಸ್ಥಿತಿ: ಸಾಲಕ್ಕಾಗಿ ಬಸ್‌ ನಿಲ್ದಾಣವನ್ನೇ ಅಡವಿಟ್ಟ ಬಿಎಂಟಿಸಿ..!

ನೌಕರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮ ಕೈಗೊಳ್ಳುವ ಭರವಸೆಯನ್ನು ಆಡಳಿತ ಮಂಡಳಿ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆದಿದ್ದೇವೆ. ಒಂದು ವೇಳೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಬಿಎಂಟಿಸಿ ಕಾರ್ಮಿಕ ಸಂಘದ ಉಪಾಧ್ಯಕ್ಷ ಡಾ.ಕೆ.ಪ್ರಕಾಶ್‌, ಮುಖಂಡರಾದ ಎನ್‌.ನಾಗರಾಜ್‌, ಉದಯಕುಮಾರ್‌ ಸೇರಿದಂತೆ 200ಕ್ಕೂ ಹೆಚ್ಚು ನೌಕರರು ಪಾಲ್ಗೊಂಡಿದ್ದರು.

ಪ್ರಮುಖ ಬೇಡಿಕೆಗಳು

ಕೋವಿಡ್‌ನಿಂದ ಮೃತಪಟ್ಟ ನೌಕರರಿಗೆ ಘೋಷಣೆಯಾಗಿರುವ 30 ಲಕ್ಷ ರು.ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು
ವಾರದ ರಜೆ ಜೊತೆಗೆ ನೌಕರರ ಪಾಲಿನ ರಜೆಗಳಿಗೆ ಹಾಜರಾತಿ ನೀಡಬೇಕು. ನೌಕರರಿಗೆ ನಾಲ್ಕು ಪಾಳಿಗಳಲ್ಲಿ ಕೆಲಸ ನೀಡಬೇಕು
ಮಹಿಳಾ ಕಾರ್ಮಿಕರಿಗೆ ಮೊದಲಿನಂತೆ ಸಾಮಾನ್ಯ ಪಾಳಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು
ಕಾರ್ಮಿಕರ ಕುಂದು ಕೊರತೆ ನಿವಾರಣಾ ಸಮಿತಿ ರಚನೆ ಮಾಡಬೇಕು
300 ಎಲೆಕ್ಟ್ರಿಕ್‌ ಬಸ್‌ಗಳನ್ನು ಗುತ್ತಿಗೆ ಬದಲು ಸಾರಿಗೆ ನಿಗಮವೇ ಓಡಿಸಲು ಕ್ರಮಕೈಗೊಳ್ಳಬೇಕು