ಬೆಂಗಳೂರು(ಫೆ.10):  ಸತತ ನಷ್ಟ ಹಾಗೂ ಕೊರೋನಾದಿಂದ ತತ್ತರಿಸಿರುವ ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ನಿಗಮದ ನಿರ್ವಹಣೆಗೆ ಹಣ ಹೊಂದಿಸಲು ಶಾಂತಿನಗರ ಟಿಟಿಎಂಸಿ ಕಟ್ಟಡವನ್ನು ಕೆನರಾ ಬ್ಯಾಂಕ್‌ಗೆ ಅಡಮಾನ ಇರಿಸಿ 160 ಕೋಟಿ ರು. ಸಾಲ ಪಡೆದಿದ್ದು, ಮಾಸಿಕ 1.04 ಕೋಟಿ ರು. ಬಡ್ಡಿ ಪಾವತಿಸುತ್ತಿದೆ.

ಸಾರಿಗೆ ಆದಾಯ ಕುಸಿತವಾಗಿ ನಿಗಮದ ಆರ್ಥಿಕ ಸ್ಥಿತಿ ಅಧೋಗತಿಗೆ ತಲುಪಿದೆ. ಕೊರೋನಾ ಪೂರ್ವದಲ್ಲಿ ನಿಗಮದ ನಿರ್ವಹಣೆ ಹಾಗೂ ನೌಕರರ ವೇತನಕ್ಕೆ ಸರಿಹೋಗುವಷ್ಟು ಸಾರಿಗೆ ಆದಾಯ ಬರುತ್ತಿತ್ತು. ಕೊರೋನಾ ಲಾಕ್‌ಡೌನ್‌ ಬಳಿಕ ನಿಗಮದ ಆದಾಯ ಸಂಪೂರ್ಣ ಕುಸಿತವಾಗಿತ್ತು. ಇದೀಗ ಪ್ರಯಾಣಿಕರ ಕೊರತೆಯಿಂದ ಪೂರ್ಣ ಪ್ರಮಾಣದಲ್ಲಿ ಬಸ್‌ ಕಾರ್ಯಾಚರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಬಸ್‌ ಕಾರ್ಯಾಚರಣೆ ಮಾಡುತ್ತಿದೆ.

ಮೊಬೈಲ್‌ ಶಾಲೆಯಾದ ಬಿಎಂಟಿಸಿ ಹಳೆ ಬಸ್‌..!

ನಿಗಮದ ನಿರ್ವಹಣೆಗೆ ಒದ್ದಾಡುತ್ತಿರುವ ಬಿಎಂಟಿಸಿ, ನೌಕರರ ವೇತನ ಪಾವತಿಸಲು ಹಣ ಇಲ್ಲದೆ ಆರ್ಥಿಕ ನೆರವಿಗಾಗಿ ಸರ್ಕಾರದ ಕದ ಬಡಿಯುತ್ತಿದೆ. ಮತ್ತೊಂದೆಡೆ ನಿಗಮದ ಆಸ್ತಿಗಳನ್ನು ಅಡಮಾನ ಇರಿಸಿ ಬ್ಯಾಂಕ್‌ಗಳಿಂದ ಸಾಲ ಪಡೆಯುತ್ತಿದೆ. ಹೀಗಾಗಿ ನಿಗಮದ ಸಾಲದ ಮೊತ್ತ ವರ್ಷದಿಂದ ವರ್ಷಕ್ಕೆ ಬೆಟ್ಟದಂತೆ ಏರಿಕೆಯಾಗುತ್ತಿದೆ.