ಕಾಗತಿ ನಾಗರಾಜಪ್ಪ

 ಚಿಕ್ಕಬಳ್ಳಾಪುರ (ಸೆ.07): ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದ ಜಿಲ್ಲೆಯ ವಿಶ್ವವಿಖ್ಯಾತ ನಂದಿ ಗಿರಿಧಾಮ ಪ್ರವೇಶಕ್ಕೆ ಇಂದಿನಿಂದ ಅವಕಾಶ ನಿಡುತ್ತಿದ್ದು  ಗಿರಿಧಾಮ ವೀಕ್ಷಣೆಗೆ ಪ್ರವಾಸಿಗರು ತುದಿಗಾಲಲ್ಲಿ ನಿಂತಿದ್ದಾರೆ.

ಪ್ರತಿ ಶನಿವಾರ, ಭಾನುವಾರ ಸಹಸ್ರಾರು ಸಂಖ್ಯೆಯಲ್ಲಿ ಗಿರಿಧಾಮಕ್ಕೆ ಲಗ್ಗೆ ಇಟ್ಟು ಬೆಟ್ಟದ ಕಾನನ ಮಧ್ಯೆ ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದು ಹೋಗುತ್ತಿದ್ದ ಐಟಿ, ಬಿಟಿ ಉದ್ಯೋಗಿಗಳಿಗೆ, ಪ್ರೇಮಿಗಳಿಗೆ ಸತತ ಐದು ತಿಂಗಳಿಂದ ಗಿರಿಧಾಮಕ್ಕೆ ಪ್ರವೇಶವಿಲ್ಲವಾಗಿತ್ತು. ಆದರೆ ಕೇಂದ್ರ ಸರ್ಕಾರ ಅನ್‌ಲಾಕ್‌ ಮಾರ್ಗಸೂಚಿ 4.0 ಪ್ರಕಟಿಸಿದ ಬೆನ್ನಲೇ ಜಿಲ್ಲಾಡಳಿತ ಗಿರಿಧಾಮ ಪ್ರವಾಸಿಗರಿಗೆ ಮುಕ್ತ ಮಾಡಿದೆ.

ವೈದ್ಯರ ಸಲಹೆಗೆ ಇನ್ಮುಂದೆ ಆಸ್ಪತ್ರೆಗೆ ಹೋಗಬೇಕಾಗಿಲ್ಲ, ವೈದ್ಯರೇ ಕಾಲ್ ಮಾಡ್ತಾರೆ

ಸಮುದ್ರ ಮಟ್ಟದಿಂದ ಬರೋಬ್ಬರಿ 4,000 ಅಡಿಗಳಷ್ಟುಮೇಲಿರುವ ನಂದಿಗಿರಿಧಾಮ ಜಾಗತಿಕವಾಗಿ ಗಮನ ಸೆಳೆದಿದೆ. ಸಹಸ್ರಾರು ಸಸ್ಯ ಪ್ರಭೇದಗಳನ್ನು ಹೊಂದಿರುವ ಗಿರಿಧಾಮಕ್ಕೆ ಸಾಕಷ್ಟುಇತಿಹಾಸಿಕ ಹಾಗೂ ಪುರಾತ್ವದ ಹಿನ್ನೆಲೆ ಇದೆ. ಪ್ರವಾಸಿಗರ ಮನ ಸೆಳೆಯುವ ಟಿಪ್ಪು ಡ್ರಾಪ್‌, ಗಾಂಧಿ ನಿಲಯ, ನೆಹರು ನಿಲಯ, ಯೋಗ ನರಸಿಂಹ ದೇವಾಲಯ ಸೇರಿದಂತೆ ಹಳೆಯ ಪುಷ್ಕರಣಿ ಮತ್ತಿತರ ಪ್ರದೇಶಗಳಿದ್ದು, ಇಡೀ ದಿನ ಸುತ್ತಾಡಿದರೂ ಗಿರಿಧಾಮವನ್ನು ಕಣ್ಣು ತುಂಬಿಸಿಕೊಳ್ಳಲು ಸಾಧ್ಯವಿಲ್ಲ. ಸಾಕಷ್ಟುವಿಶಾಲ ಪ್ರದೇಶದಲ್ಲಿ ಗಿರಿಧಾಮ ಹರಡಿಕೊಂಡಿದ್ದು ವಿಶೇಷವಾಗಿ ಪ್ರೇಮಿಗಳ ಪಾಲಿಗೆ ಸ್ವರ್ಗವಾಗಿದೆ. 5 ತಿಂಗಳ ಬಳಿಕ ಗಿರಿಧಾಮ ಪ್ರವಾಸಿಗರಿಗೆ ಮುಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಪ್ರವಾಸಿಗರ ಆಗಮ ಹೆಚ್ಚಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ನಂದಿಬೆಟ್ಟಕ್ಕೆ ಶನಿವಾರ, ಭಾನುವಾರ ವೀಕೆಂಡ್‌ನಲ್ಲಿ ಸುಮಾರು 8 ರಿಂದ 10 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಹೋಗುತ್ತಾರೆ. ಇದರಿಂದ ಪ್ರವಾಸೋದ್ಯಮ ಇಲಾಖೆಗೆ ವಾರ್ಷಿಕ ಕೋಟ್ಯಂತರ ರು. ಆದಾಯ ಹರಿದು ಬರುತ್ತಿತ್ತು.

ಬೋರ್‌ವೆಲ್ ಕೊರೆಸೋ‌ ವಿಚಾರ : ಶುರುವಾಗಿದೆ ಆತಂಕ! .

ಭಾನುವಾರ ಬಂದ ಪ್ರವಾಸಿಗರು ವಾಪಸು:

ನಂದಿಗಿರಿಧಾಮ ಪ್ರವೇಶಕ್ಕೆ ಜಿಲ್ಲಾಡಳಿತ ಸೆ. 7ರಿಂದ ಅವಕಾಶ ಕಲ್ಪಿಸಿದ್ದರೂ ಬಹಳಷ್ಟುಪ್ರವಾಸಿಗರು ಬೆಂಗಳೂರು ಸೇರಿದಂತೆ ವಿವಿಧಡೆಗಳಿಂದ ಭಾನುವಾರ ಆಗಮಿಸಿದ್ದರು. ಆದರೆ ಅಧಿಕಾರಿಗಳು ಗಿರಿಧಾಮ ಪ್ರವೇಶಕ್ಕೆ ಅವಕಾಶ ಕೊಡದೇ ವಾಪಸು ಕಳಿಸಿದರು. ಇನ್ನೂ ಗಿರಿಧಾಮ ಪ್ರವಾಸಿಗರಿಗೆ ತೆರೆದುಕೊಳ್ಳಲಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಭದ್ರತೆ ಹಿತದೃಷ್ಟಿಯಿಂದ 5 ಗೃಹ ರಕ್ಷಕರನ್ನು, ಇಬ್ಬರು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

20 ದಿನಗಳ ಹಿಂದೆಯೆ ಇ-ಬುಕ್ಕಿಂಗ್‌:

ಸೆ. 7ರಿಂದ ನಂದಿಗಿರಿಧಾಮ ಪ್ರವೇಶ ಮುಕ್ತವಾಗಲಿದ್ದರೂ ಪ್ರವಾಸೋದ್ಯಮ ಇಲಾಖೆ ಕಳೆದ 20 ದಿನಗಳ ಹಿಂದೆಯೇ ಗಿರಿಧಾಮದಲ್ಲಿರುವ ವಸತಿ ಗೃಹಗಳ ಬುಕ್ಕಿಂಗ್‌ಗೆ ಅನುವು ಮಾಡಿಕೊಟ್ಟಿದೆ. ಹೀಗಾಗಿ ಗಿರಿಧಾಮದ ಪ್ರಾಕೃತಿಕ ಸೌಂದರ್ಯವನ್ನು ಆಸ್ವಾದಕ್ಕೆ ತುದಿಗಾಲಲ್ಲಿ ನಿಂತಿದ್ದ ಪ್ರವಾಸಿಗರು 20 ದಿನಗಳ ಹಿಂದೆಯೆ ಗಿರಿಧಾಮದಲ್ಲಿರುವ ವಸತಿ ಗೃಹಗಳನ್ನು ಮುಗಂಡವಾಗಿ ಬುಕ್ ಮಾಡಿದ್ದಾರೆ. ವಿವಿಐಪಿಗೆ ಪ್ರತ್ಯೇಕ ವಸತಿ ಗೃಹಗಳಿದ್ದು ಪ್ರವಾಸಿಗರಿಗೆ 10 ಮಿನಿ ಸೂಟ್ಸ್‌ ಸೌಲಭ್ಯ ಇದೆ. 1200 ರಿಂದ 2,200 ರು. ವರೆಗೂ ಬಾಡಿಗೆ ನಿಗದಿಪಡಿಸಲಾಗಿದೆ.

ಸೆ. 7 ರಿಂದ ನಂದಿಗಿರಿಧಾಮವನ್ನು ಪ್ರವಾಸಿಗರಿಗೆ ಮುಕ್ತಗೊಳಿಸಲಾಗುತ್ತಿದೆ. ಬೆಳಗ್ಗೆ 8ರಿಂದ ಸಂಜೆ 5 ಗಂಟೆವರೆಗೂ ಮಾತ್ರ ಗಿರಿಧಾಮ ವೀಕ್ಷಣೆಗೆ ಸಮಯ ನಿಗಧಿಪಡಿಸಲಾಗಿದೆ. ನಂದಿ ಗ್ರಾಪಂ ಅಧಿಕಾರಿಗಳ ಉಸ್ತುವಾರಿಯಲ್ಲಿ ಮಾಸ್ಕ್‌ ಧರಿಸದವರಿಗೆ ದಂಡ ಹಾಕಲಾಗುತ್ತದೆ. ಕೊರೋನಾ ಹಿನ್ನೆಲೆಯಲ್ಲಿ ಪ್ರವಾಸಿಗರ ಆರೋಗ್ಯದ ಹಿತದೃಷ್ಟಿಯಿಂದ ಗಿರಿಧಾಮದಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಗೋಪಾಲ್‌, ವಿಶೇಷ ಅಧಿಕಾರಿ, ನಂದಿಗಿರಿಧಾಮ.

ಬ್ಯಾಟರಿ ಚಾಲಿತ ವಾಹನಗಳು ಸದ್ಯಕ್ಕಿಲ್ಲ!

ನಂದಿಗಿರಿಧಾಮದಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ತೋಟಗಾರಿಕೆ ಹಾಗೂ ಪ್ರವಾಸೋದ್ಯಮ ಇಲಾಖೆ ಗಿರಿಧಾಮದಲ್ಲಿ ಪ್ರವಾಸಿಗರನ್ನು ಬೆಟ್ಟದ ಮೇಲೆ ಕರೆದುಕೊಂಡು ಹೋಗಲು ಆರಂಭಿಸಿದ್ದ ಬ್ಯಾಟರಿ ಚಾಲಿತ ವಾಹನಗಳ ಸೌಲಭ್ಯ ಸದ್ಯಕ್ಕಿಲ್ಲವಾಗಿದೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಪ್ರವಾಸಿಗರನ್ನು ನಿರ್ಬಂಧಿಸಿದ್ದರ ಹಿನ್ನಲೆಯಲ್ಲಿ ವಾಹನ ಸೌಲಬ್ಯ ಸ್ಥಗಿತಗೊಳಿಸಲಾಗಿತ್ತು. ಈಗ ಟೆಂಡರ್‌ ಮುಗಿದಿರುವ ಕಾರಣ ಹೊಸದಾಗಿ ಟೆಂಡರ್‌ ಕರೆಯಬೇಕಿರುವುದರಿಂದ ಪ್ರವಾಸಿಗರಿಗೆ ಹಲವು ದಿನಗಳ ಕಾಲ ಬ್ಯಾಟರಿ ಚಾಲಿತ ವಾಹನಗಳ ಸೌಲಭ್ಯ ಸಿಗುವುದಿಲ್ಲ.