Asianet Suvarna News Asianet Suvarna News

ಬೋರ್‌ವೆಲ್ ಕೊರೆಸೋ‌ ವಿಚಾರ : ಶುರುವಾಗಿದೆ ಆತಂಕ!

ನೂರರಷ್ಟು ಅಂತರ್ಜಲ ಬಳಕೆಯಾಗಿದ್ದು, ಇದರಿಂದ ನೀರು ಬರಿದಾಗುತ್ತಿದೆ. ಈ ನಿಟ್ಟಿನಲ್ಲಿ ಕಠಿಣ ನಿಯಮ ಜಾರಿಗೆ ತರಲಾಗುತ್ತಿದೆ.

Permission Mandatory For Digging Bore well In Chikkaballapura
Author
Bengaluru, First Published Aug 30, 2020, 2:53 PM IST

ಚಿಕ್ಕಬಳ್ಳಾಪುರ(ಆ.30):ರಾಜ್ಯದಲ್ಲಿ 45 ತಾಲೂಕುಗಳನ್ನು ಅಂತರ್ಜಲ ಅತೀ ಬಳಕೆ ತಾಲೂಕುಗಳು ಎಂದು ಘೋಷಿಸಿ ಅಧಿಸೂಚನೆ ಹೊಡಿಸಿರುವ ರಾಜ್ಯ ಸರ್ಕಾರ ಬರಪೀಡಿತ ಬಯಲು ಸೀಮೆಯ ಇಡೀ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಸಹ ಅಂತರ್ಜಲ ಅತಿ ಬಳಕೆ ಪ್ರದೇಶವನ್ನು ಘೋಷಿಸಿದೆ.

ರೈತರಲ್ಲಿ ಮೂಡಿದ ಆತಂಕ

ಈ ಮೊದಲು ಬಾಗೇಪಲ್ಲಿ ತಾಲೂಕು ಹೊರತುಪಡಿಸಿ ಉಳಿದ ಐದು ತಾಲೂಕುಗಳನ್ನು ಮಾತ್ರ ಅಂತರ್ಜಲ ಅತಿ ಬಳಕೆ ತಾಲೂಕುಗಳಾಗಿ ಘೊಷಿಸಲಾಗಿತ್ತು. ಆದರೆ ಕರ್ನಾಟಕ ಅಂತರ್ಜಲ ಅಧಿನಿಯಮ-2017 ರನ್ವಯ ಮೌಲ್ಯೀಕರಣಗೊಂಡು ಜಿಲ್ಲೆಯ ಗುಡಿಬಂಡೆ, ಬಾಗೇಪಲ್ಲಿ, ಚಿಂತಾಮಣಿ, ಶಿಡ್ಲಘಟ್ಟ, ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರ ಸೇರಿ ಇಡೀ ಜಿಲ್ಲೆಯನ್ನು ಅಂತರ್ಜಲ ಅತಿ ಬಳಕೆ ಜಿಲ್ಲೆಯೆಂದು ರಾಜ್ಯ ಸರ್ಕಾರ ಘೋಷಿಸಿದೆ. ಇಡೀ ಜಿಲ್ಲೆಯಲ್ಲಿ ಶೇ.100 ರಷ್ಟುಅಂತರ್ಜಲ ಬಳಕೆ ಆಗಿದೆ ಎನ್ನುವುದನ್ನು ರಾಜ್ಯ ಅಂತರ್ಜಲ ಪ್ರಾಧಿಕಾರ ಗುರುತಿಸಿರುವುದು ಜಿಲ್ಲೆಯ ಜನರಲ್ಲಿ ವಿಶೇಷವಾಗಿ ರೈತಾಪಿ ಜನರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ನೀರೆ ಇಲ್ಲದ ಬೋರಿನಲ್ಲಿ ಆಗಸದೆತ್ತರಕ್ಕೆ ಚಿಮ್ಮುತ್ತಿರುವ ನೀರು !..

ಹೇಳಿ ಕೇಳಿ ಚಿಕ್ಕಬಳ್ಳಾಪುರ ದಶಕಗಳಿಂದಲೂ ಮಳೆ ಬಳೆ ಇಲ್ಲದೇ ತೀವ್ರ ಬರಗಾಲಕ್ಕೆ ತುತ್ತಾಗಿದೆ. ಸುಮಾರು 15 ವರ್ಷಗಳಲ್ಲಿ 11, 12 ವರ್ಷಗಳು ಕಾಲ ಮಳೆ ಇಲ್ಲದೇ ಬರಗಾಲಕ್ಕೆ ತುತ್ತಾಗಿದ್ದ ಜಿಲ್ಲೆಯಲ್ಲಿ ಅಂತರ್ಜಲ ಅತಿಯಾದ ಬಳಕೆ ಆಗಿದೆ. ಜೊತೆಗೆ ಯಾವುದೇ ಶಾಶ್ವತ ನದಿ ನಾಲೆಗಳು ಇಲ್ಲದ ಜಿಲ್ಲೆಯಲ್ಲಿ ರೈತರು ಕೃಷಿ ಚಟುವಟಿಕೆಗಳಿಗೆ ಯೇಥೇಚ್ಚವಾಗಿ ಕೊಳವೆ ಬಾವಿಗಳನ್ನು ಅವಲಂಬಿಸಿ ಮಿತಿ ಮೀರಿ ಅಂತರ್ಜಲಕ್ಕೆ ಕೈ ಹಾಕಿದ ಪರಿಣಾಮ ಜಿಲ್ಲೆಯ ಅಂತರ್ಜಲ ಬರಡಾಗಿದೆ. ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಜಿಲ್ಲೆಯ ಅಂತರ್ಜಲ ಮಟ್ಟ1,500 ಅಡಿಯ ಗಡಿ ದಾಟಿ 2,000ಕ್ಕೆ ಮುಟ್ಟಿದೆ. ಪರೋಕ್ಷವಾಗಿ ಜಿಲ್ಲೆಯಲ್ಲಿ ನಡೆದ ಅಕ್ರಮ ಮರಳು ದಂಧೆ, ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಜನಪ್ರತಿನಿದಿಗಳ ಅಸಡ್ಡೆ ಇವೆಲ್ಲಾವು ಕೂಡ ಜಿಲ್ಲೆಯ ಅಂತರ್ಜಲ ಅತಿ ಬಳಕೆಗೆ ಕಾರಣ ಆಗಿವೆ.

ಬೋರ್‌ವೆಲ್‌ಗೆ ಅನುಮತಿ ಕಡ್ಡಾಯ

ರಾಜ್ಯ ಸರ್ಕಾರ ಇಡೀ ಜಿಲ್ಲೆಯನ್ನು ಅಂತರ್ಜಲ ಅತಿ ಬಳಕೆ ಪ್ರದೇಶವೆಂದು ಘೊಷಿಸಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಜಿಲ್ಲೆಯಲ್ಲಿ ಯಾವುದೇ ತಾಲೂಕಿನಲ್ಲಿ ಕರ್ನಾಟಕ ಅಂತರ್ಜಲ ಅಧಿನಿಯಮ-2011 ರನ್ವಯ ಯಾವುದೇ ಉದ್ದೇಶಕ್ಕಾಗಿ ತೆರೆದ ಬಾವಿ, ಕೊಳವೆ ಬಾವಿ ಕೊರೆಸಲು ಜಿಲ್ಲಾ ಅಂತರ್ಜಲ ಪ್ರಾಧಿಕಾರದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.

ಬೋರ್ವೆಲ್ ಕೊರೆಸುವಾಗ ಕೊಂಚ ಎಚ್ಚರ ವಹಿಸಿ....

ಚಿಂತಾಮಣಿ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಗುಡಿಬಂಡೆ, ಶಿಡ್ಲಘಟ್ಟಮತ್ತು ಬಾಗೇಪಲ್ಲಿ ತಾಲ್ಲೂಕುಗಳಲ್ಲಿ ಪ್ರಸ್ತುತ ಬಳಕೆಯಲ್ಲಿರುವ ಬಾವಿಕೊಳವೆ ಬಾವಿಗಳಿಂದ ಅಂತರ್ಜಲವನ್ನು ಬಳಸುತ್ತಿರುವವರು ಜಿಲ್ಲಾ ಅಂತರ್ಜಲ ಪ್ರಾಧಿಕಾರದಲ್ಲಿ ಆಗಸ್ಟ್‌ 05 ರಿಂದ ಅನ್ವಯವಾಗುವಂತೆ 120 ದಿನಗಳ ಒಳಗಾಗಿ, ಪ್ರಾಧಿಕಾರಕ್ಕೆ ತಾನು ಪ್ರಸ್ತುತ ಮಾಡುತ್ತಿರುವ ಬಳಕೆಗೆ ಮನ್ನಣೆ ನೀಡಿ ನೋಂದಣಿ ಪ್ರಮಾಣ ಪತ್ರ ಕೋರಿ ಅರ್ಜಿ ಸಲ್ಲಿಸುವುದು ಕೂಡ ಕಡ್ಡಾಯವಾಗಿದೆ.

ಅನಧಿಕೃತ ಬಾವಿಗೆ ದಂಡ

ಯಾರೇ ನಿಯಮ ಮೀರಿ ಅನಧಿಕೃತ ಕೊಳವೆ ಬಾವಿಗಳನ್ನು ಅಧಿಸೂಚಿತ ಪ್ರದೇಶದಲ್ಲಿ ಕೊರೆಯುವುದು ದಂಡನಾರ್ಹ ಅಪರಾಧವಾಗಿದ್ದು ಇಂತಹ ಪ್ರಕರಣಗಳು ನಡೆದಲ್ಲಿ ಕಾನೂನು ರೀತ್ಯ ಕ್ರಮಕೈಗೊಳ್ಳಲು ಜಿಲ್ಲಾ ಅಂತರ್ಜಲ ಪ್ರಾಧಿಕಾರ ಸಿದ್ಧತೆ ನಡೆಸುತ್ತಿದೆ.

ಒಟ್ಟಾರೆ ಹಲವು ದಶಕಗಳಿಂದಲೂ ಮಳೆ ಬೆಳೆ ಇಲ್ಲದೇ ತೀವ್ರ ಬರಗಾಲಕ್ಕೆ ತುತ್ತಾದ ಪರಿಣಾಮ ಜಿಲ್ಲೆಯ ರೈತರು ಕೊಳವೆ ಬಾವಿಗಳನ್ನು ತಮ್ಮ ಕೃಷಿ ಚಟುವಟಿಕೆಗಳಿಗೆ ಅಶ್ರಯಿಸಿದ ಹಿನ್ನಲೆಯಲ್ಲಿ ಇಡೀ ಜಿಲ್ಲೆಯನ್ನು ಈಗ ಅಂತರ್ಜಲ ಅತಿ ಬಳಕೆ ಜಿಲ್ಲೆಯ ಪಟ್ಟಿಗೆ ಸೇರಿಸಿದ್ದು ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂತರ್ಜಲ ಮಟ್ಟಪಾತಳಕ್ಕೆ ಕುಸಿದಿರುವುದು ಜಿಲ್ಲೆಯ ಭವಿಷ್ಯದ ಬಗ್ಗೆ ತೀವ್ರ ಆತಂಕ ಮೂಡಿಸಿದೆ.

Follow Us:
Download App:
  • android
  • ios