ಕಳೆದ ಐದು ವರ್ಷದಿಂದ ನಡೆಯುತ್ತಿರುವ ನಾಗಸಂದ್ರ-ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (ಬಿಐಇಸಿ) ಮೆಟ್ರೋ ಮಾರ್ಗದ ಕೆಲಸವನ್ನು ಆಗಸ್ಟ್‌ನಲ್ಲಿ ಪೂರ್ಣಗೊಳಿಸಿ ಸೆಪ್ಟೆಂಬರ್ ಅಂತ್ಯದಿಂದ ಜನಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.
ಮಯೂರ್ ಹೆಗಡೆ
ಬೆಂಗಳೂರು (ಜೂ.21): ಕಳೆದ ಐದು ವರ್ಷದಿಂದ ನಡೆಯುತ್ತಿರುವ ನಾಗಸಂದ್ರ-ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (ಬಿಐಇಸಿ) ಮೆಟ್ರೋ ಮಾರ್ಗದ ಕೆಲಸವನ್ನು ಆಗಸ್ಟ್‌ನಲ್ಲಿ ಪೂರ್ಣಗೊಳಿಸಿ ಸೆಪ್ಟೆಂಬರ್ ಅಂತ್ಯದಿಂದ ಜನಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ. ಮೆಟ್ರೋ ಕಾಮಗಾರಿಗಳ ಪೈಕಿ ಆಮೆಗತಿಯದ್ದು ಎಂಬ ಹಣೆಪಟ್ಟಿಹೊತ್ತಿರುವ ಹಸಿರು ಮಾರ್ಗದ ವಿಸ್ತರಿತ (ರೀಚ್-3ಸಿ) ಯೋಜನೆ ಇದು. 3.77 ಕಿಮೀ ಉದ್ದದ ಈ ಮಾರ್ಗದ ಕಾಮಗಾರಿ ಅಂತೂ ಅಂತಿಮ ಘಟ್ಟ ತಲುಪಿದೆ. 964.64 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಈ ಯೋಜನೆ ಈಗಾಗಲೇ ಹಲವು ಡೆಡ್‌ಲೈನ್ ಮೀರಿದೆ.
ಈಗಲೂ ಒಂದಿಷ್ಟು ಕಾಮಗಾರಿ ನಡೆಯುತ್ತಲೇ ಇದೆ. ಕಾಮಗಾರಿ ನಿರ್ವಹಿಸುತ್ತಿರುವ ಸಿಂಪ್ಲೆಕ್ಸ್ ಕಂಪನಿ ಆರಂಭದಿಂದ ಬಿಎಂಆರ್‌ಸಿಎಲ್ ಸೂಚನೆಯಂತೆ ನಿಗದಿತ ಕಾಲಾವಧಿಯಲ್ಲಿ ಕಾಮಗಾರಿ ಮುಗಿಸಿಲ್ಲ. ಕಳೆದ ವರ್ಷಾಂತ್ಯಕ್ಕೆ ಈ ಮಾರ್ಗವನ್ನು ಜೂನ್ ತಿಂಗಳಲ್ಲೇ ಪೂರ್ಣಗೊಳಿಸಿ ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸಲು ಬೆಂಗಳೂರು ಮೆಟ್ರೋ ರೈಲ್ವೆ ನಿಗಮದ ಅಧಿಕಾರಿಗಳು ಸೂಚಿಸಿದ್ದರು. ಆದರೆ, ಈ ಅವಧಿಯಲ್ಲೂ ಕಂಪನಿ ಕೆಲಸ ಪೂರ್ಣಗೊಳಿಸಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು.
10 ಕೆಜಿ ಉಚಿತ ಅಕ್ಕಿ ಜುಲೈನಲ್ಲಿ ಜಾರಿ ಅನುಮಾನ: ಸಿಎಂ ಸಿದ್ದರಾಮಯ್ಯ
ಶೇ.95ರಷ್ಟು ಪೂರ್ಣ: ಪ್ರಸ್ತುತ ಮಾರ್ಗದಲ್ಲಿ ಸದ್ಯ ಶೇ.95 ಸಿವಿಲ್ ಕಾಮಗಾರಿ ಮುಗಿದಿದ್ದು, ಮೂರು ನಿಲ್ದಾಣಗಳ ಶೇ.56ರಷ್ಟು ಒಳ ವಿನ್ಯಾಸ ಮುಗಿದಿದೆ. ಮಾರ್ಗದಲ್ಲಿನ 125 ಪಿಲ್ಲರ್‌ಗಳನ್ನು ನಿರ್ಮಿಸಲಾಗಿದ್ದು, ಇನ್ನು ಕೆಲವು ಪಿಲ್ಲರ್‌ಗಳಿಗೆ ಸೆಗ್ಮೆಂಟ್ ಜೋಡಿಸುವ ಕಾಮಗಾರಿ ನಡೆಯುತ್ತಿದೆ. ನೈಸ್ ರೋಡ್ ಜಂಕ್ಷನ್ ಬಳಿ ಇನ್ನೂ ಮೂರು ಸ್ಟೀಲ್ ಗರ್ಡರ್‌ಗಳ ಅಳವಡಿಕೆ ಬಾಕಿ ಇದೆ ಎಂದು ಬಿಎಂಆರ್‌ಸಿಲ್ ತಿಳಿಸಿದೆ.
ಐದು ವರ್ಷದ ಕಾಮಗಾರಿ: 2017ರಲ್ಲೇ ಆರಂಭವಾದ ಕಾಮಗಾರಿ 2019ರಲ್ಲೇ ಪೂರ್ಣಗೊಳ್ಳಬೇಕಿತ್ತು. ಆದರೆ, ಭೂ ವಿವಾದ, ಗುತ್ತಿಗೆದಾರರ ವಿಳಂಬದಿಂದ ಇನ್ನೂ ಕಾಮಗಾರಿ ಮುಗಿದಿಲ್ಲ. ಭೂಸ್ವಾಧೀನ ಪ್ರಕ್ರಿಯೆಗೆ ಕಾನೂನಿನ ತೊಡಕು ಎದುರಾಗಿದ್ದರಿಂದ ಹಾಗೂ ಹೈಕೋರ್ಚ್‌ನಲ್ಲಿ ದಾವೆ ಇದ್ದ ಕಾರಣ ಕಾಮಗಾರಿ ಮಧ್ಯದಲ್ಲೇ ನಿಲ್ಲಿಸಲಾಗಿತ್ತು. ಚಿಕ್ಕಬಿದರಕಲ್ಲು ಮೂಲಕ ಜಿಂದಾಲ್-ಪ್ರೆಸ್ಟಿಜ್ ಲೇಔಟ್ ಹಾಗೂ ಅಂಚೆಪಾಳ್ಯ ಮೆಟ್ರೋ ನಿಲ್ದಾಣಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲು ಹೆಚ್ಚುವರಿ ಭೂಸ್ವಾದೀನ ಪ್ರಕ್ರಿಯೆ ಬಗೆಹರಿಸಿಕೊಳ್ಳಲು ಬಿಎಂಆರ್‌ಸಿಎಲ್ ವರ್ಷಗಳ ಕಾಲ ವ್ಯಯಿಸಿತು.
ಪ್ರೆಸ್ಟಿಜ್ ಸಂಸ್ಥೆ ತನ್ನ ಪ್ರದೇಶದಲ್ಲಿ 12.5 ಅಡಿ ರಸ್ತೆ ನಿರ್ಮಿಸಲು ಒಪ್ಪಿದ ಬಳಿಕ ಕಾಮಗಾರಿ ಮುಂದುವರಿಯಲು ಸಾಧ್ಯವಾಯಿತು. ನಾಗಸಂದ್ರ-ಬಿಐಇಸಿ ಮೆಟ್ರೋದಿಂದ ತುಮಕೂರು ರಸ್ತೆಯ ಸಂಚಾರ ದಟ್ಟಣೆ ಸಮಸ್ಯೆಗೆ ಒಂದಿಷ್ಟು ಪರಿಹಾರ ಸಿಗಲಿದೆ. ನೆಲಮಂಗಲ ಸುತ್ತಮುತ್ತಲ ಜನತೆ ನಗರಕ್ಕೆ ಬದಲು ಅನುಕೂಲವಾಗಲಿದೆ. ಸದ್ಯ ಈ ಪ್ರದೇಶದ ಜನ ನಾಗಸಂದ್ರದವರೆಗೆ ಬಂದು ಮೆಟ್ರೋ ಏರಬೇಕಿದೆ.
ಸತೀಶ್ ಜಾರಕಿಹೊಳಿ ಹೇಳಿಕೆ ಹಾಸ್ಯಾಸ್ಪದ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಸೆಪ್ಟೆಂಬರ್‌ಗೆ ಸೇವೆ?: ಮುಂದಿನ ಆಗಸ್ಟ್‌ನಲ್ಲಿ ಎಲ್ಲಾ ಕಾಮಗಾರಿ ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿದೆ. ಹಳಿಗಳ ಜೋಡಣೆ, ಸಿಗ್ನಲಿಂಗ್ ಪೂರ್ಣಗೊಂಡು ಮೆಟ್ರೋ ಆಯುಕ್ತರು ತಪಾಸಣೆ ನಡೆಸಿ ಒಪ್ಪಿಗೆ ಸೂಚಿಸಿದ ಬಳಿಕ ಜನಸಂಚಾರ ಆರಂಭವಾಗಲಿದೆ. ಇದಕ್ಕೆ ಇನ್ನೊಂದು ತಿಂಗಳು ತಗಲುವ ಸಾಧ್ಯತೆಯಿದ್ದು, ಸೆಪ್ಟೆಂಬರ್‌ನಿಂದ ಈ ಮಾರ್ಗದಲ್ಲಿ ಜನಸಂಚಾರ ಆರಂಭವಾಗಬಹುದು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.
