10 ಕೆಜಿ ಉಚಿತ ಅಕ್ಕಿ ಜುಲೈನಲ್ಲಿ ಜಾರಿ ಅನುಮಾನ: ಸಿಎಂ ಸಿದ್ದರಾಮಯ್ಯ
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲೊಂದಾದ ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿದಾರರಿಗೆ ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ.ಅಕ್ಕಿ ಕೊಡುವುದು ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಹೆಚ್ಚಿದ್ದು, ಜುಲೈ ತಿಂಗಳಲ್ಲೂ ಈ ಯೋಜನೆ ಜಾರಿಯಾಗುವುದೂ ಅನುಮಾನ ಎನ್ನಲಾಗುತ್ತಿದೆ.
ಬೆಂಗಳೂರು (ಜೂ.21): ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲೊಂದಾದ ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿದಾರರಿಗೆ ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ.ಅಕ್ಕಿ ಕೊಡುವುದು ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಹೆಚ್ಚಿದ್ದು, ಜುಲೈ ತಿಂಗಳಲ್ಲೂ ಈ ಯೋಜನೆ ಜಾರಿಯಾಗುವುದೂ ಅನುಮಾನ ಎನ್ನಲಾಗುತ್ತಿದೆ. ಈ ಸಂಬಂಧ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು ನೀಡಿರುವ ಹೇಳಿಕೆಗಳು ಇದಕ್ಕೆ ಪುಷ್ಠಿ ನೀಡುತ್ತಿವೆ. ವಿಧಾನಸೌಧದಲ್ಲಿ ಮಂಗಳವಾರ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 10 ಕೆ.ಜಿ. ಅಕ್ಕಿ ನೀಡುವ ವಿಚಾರದಲ್ಲಿ ನಾವು ಜನರಿಗೆ ಕೊಟ್ಟ ಮಾತಿನಂತೆ ನಡೆಯುತ್ತೇವೆ ಆದರೆ ಸ್ವಲ್ಪ ತಡವಾಗಬಹುದು ಎಂದಿದ್ದಾರೆ.
ಕೇಂದ್ರಕ್ಕೆ ಮೊರೆ: ಎಫ್‌ಸಿಐನಿಂದ ಅಲ್ಲದಿದ್ದರೂ ಕೇಂದ್ರೀಯ ಭಂಡಾರ, ನಾಫೆಡ್, ಎನ್‌ಸಿಸಿಎಫ್‌ನಿಂದ ಅಕ್ಕಿ ಖರೀದಿಸುವ ಅವಕಾಶ ನೀಡುವಂತೆ ಕೇಂದ್ರದ ಮೇಲೆ ಒತ್ತಡ ತರಲು ಸರ್ಕಾರ ಮುಂದಾಗಿದೆ. ಹಾಗಾಗಿಯೇ ಬುಧವಾರ ದೆಹಲಿಗೆ ತೆರಳಿರುವ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು, ಕೇಂದ್ರ ಆಹಾರ ಸರಬರಾಜು ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಅಧಿಕೃತವಾಗಿಯೇ ಮನವಿ ಮಾಡಲಿದ್ದಾರೆ.
ಬಿಬಿಎಂಪಿ ಚುನಾವಣೆ ತಡೆಗೆ ‘ವಿಂಗಡಣೆ’ ನೆಪ: ಬಿಜೆಪಿಯ ತಂತ್ರವೇ ಮತ್ತೆ ಬಳಕೆ
ಶಾಗೆ ಸಿದ್ದು ಮನವಿ?: ಈ ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಬುಧವಾರ ದೆಹಲಿಗೆ ಪ್ರಯಾಣ ಬೆಳೆಸಲಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ. ಇದೊಂದು ಸೌಜನ್ಯದ ಭೇಟಿಯಾಗಿರಲಿದೆ ಎಂದು ಮುಖ್ಯಮಂತ್ರಿ ಅವರು ಹೇಳಿದ್ದರೂ ಕೂಡ ಅಮಿತ್ ಶಾ ಅವರೊಂದಿಗೆ ರಾಜ್ಯಕ್ಕೆ ಅಕ್ಕಿ ಖರೀದಿಸಲು ಅವಕಾಶ ನೀಡುವ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಆರ್ಥಿಕ ಇಲಾಖೆ ಮೂಲಗಳ ಪ್ರಕಾರ, ಕೇಂದ್ರ ಸರ್ಕಾರ ಸ್ವಾಮ್ಯದ ಆಹಾರ ನಿಗಮ ಅಥವಾ ಇನ್ಯಾವುದೇ ಸಂಸ್ಥೆಗಳಿಂದ ಆಹಾರ ಭದ್ರತಾ ಕಾಯ್ದೆಯಡಿ ಇರುವ ಪ್ರಾತಿನಿಧ್ಯ ಬಳಸಿಕೊಂಡು ರಾಜ್ಯಗಳಿಗೆ ರಿಯಾಯಿತಿ ದರದಲ್ಲಿ ಅಕ್ಕಿ ಖರೀದಿಸಬಹುದಾಗಿದೆ. ಅದೇ ಅಕ್ಕಿಯನ್ನು ಖಾಸಗಿಯಾಗಿ ಅಥವಾ ಹೊರ ರಾಜ್ಯಗಳಿಂದ ನೇರವಾಗಿ ಖರೀದಿಸಲು ಹೋದರೆ ಅದರ ವೆಚ್ಚ ದುಪ್ಪಟ್ಟಾಗಲಿದೆ. ಹಾಗಾಗಿಯೇ ಸರ್ಕಾರ ಹೊರ ರಾಜ್ಯದಿಂದ ಅಕ್ಕಿ ಖರೀದಿಗೆ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ.
ಘನ ತ್ಯಾಜ್ಯ ಕಂಪನಿ ಹಣ ದುರ್ಬಳಕೆ: ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶ
ವಿಳಂಬ ಏಕೆ?: ಒಂದೆಡೆ ಭಾರತೀಯ ಆಹಾರ ನಿಗಮದಿಂದ (ಎಫ್‌ಸಿಐ) ಅಕ್ಕಿ ಖರೀದಿಗೆ ಅವಕಾಶ ಸಿಕ್ಕಿಲ್ಲ. ಮತ್ತೊಂದೆಡೆ ಬೇರೆ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸುವ ಪ್ರಯತ್ನ ಇನ್ನೂ ಫಲಪ್ರದವಾಗಿಲ್ಲ. ಹಾಗಾಗಿ ಅನ್ನಭಾಗ್ಯ ಯೋಜನೆಯಡಿ ಜುಲೈನಲ್ಲೂ 10 ಕೆ.ಜಿ ಅಕ್ಕಿ ಸಿಗುತ್ತದೆ ಎಂಬುದಕ್ಕೆ ಖಚಿತತೆ ಇಲ್ಲ. ಎಫ್‌ಸಿಐನಿಂದ ಅಕ್ಕಿ ಖರೀದಿಗೆ ಅವಕಾಶ ದೊರೆಯದ ಹಿನ್ನೆಲೆಯಲ್ಲಿ ಒಡಿಶಾ, ಛತ್ತೀಸಗಢ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹೊರ ರಾಜ್ಯಗಳಿಂದ ಅಕ್ಕಿ ಖರೀದಿಸಲು ಉದ್ದೇಶಿಸಲಾಗಿತ್ತಾದರೂ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದ ಹೊರೆ ಬೀಳುವ ಹಿನ್ನೆಲೆಯಲ್ಲಿ ಮತ್ತೆ ಕೇಂದ್ರದ ಮೊರೆ ಹೋಗಲು ನಿರ್ಧರಿಸಿದೆ.