ಅಕ್ಕಲಕೋಟ(ಡಿ.23): ಹೊರನಾಡು ಕನ್ನಡಿಗರ ಹಾಗೂ ಕನ್ನಡ ಭಾಷೆ ಅಭಿವೃದ್ಧಿಗಾಗಿ ಸರ್ಕಾರ 3 ತಿಂಗಳೊಳಗಾಗಿ ಹೊರನಾಡ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು ಎಂದು ನಾಡೋಜ ಪಾಟೀಲ ಪುಟ್ಟಪ್ಪ ಒತ್ತಾಯಿಸಿದ್ದಾರೆ. 

ಮಹಾರಾಷ್ಟ್ರದ ಅಕ್ಕಲಕೋಟದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ಅಖಿಲ ಭಾರತ ಹೊರನಾಡ ಕನ್ನಡಿಗರ ಸಂಘದ 8ನೇ ಮಹಾಮೇಳದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಈ ಹಕ್ಕೊತ್ತಾಯ ಮಾಡಿದರು. ಸರ್ಕಾರ ಮನಸ್ಸು ಮಾಡಿದರೆ ಪ್ರಾಧಿಕಾರ ರಚನೆಗೆ ಹೆಚ್ಚಿನ ಕಾಲಾವಕಾಶ ಬೇಕಿಲ್ಲ. 3 ತಿಂಗಳೊಳಗಾಗಿ ಪ್ರಾಧಿಕಾರ ರಚನೆ ಮಾಡುತ್ತಾರೆಂಬ ವಿಶ್ವಾಸವಿದೆ. ಇದಕ್ಕೆ ಸರ್ಕಾರದಲ್ಲಿನ ಎಲ್ಲ ಶಕ್ತಿಗಳು ಸಹಕಾರ ನೀಡಲಿ. ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಗಮನಹರಿಸಬೇಕು. ಸರ್ಕಾರ ಮಾಡುವ ಕೆಲಸಗಳು ಇನ್ನೂ ಅಪೂರ್ಣವಾಗಿವೆ. ಅವುಗಳನ್ನೆಲ್ಲ ಪೂರ್ಣಗೊಳಿಸಬೇಕು. ಸರ್ಕಾರದಲ್ಲಿರುವ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಿದರೆ ಅಸಾಧ್ಯ ಎನ್ನುವುದು ಇಲ್ಲ ಎಂದು ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮೈಸೂರು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಭಾರತೀಯ ಭಾಷಾ ಸಂಸ್ಥೆಯ ಯುವಜನ ನಿರ್ದೇಶಕ ಡಾ.ಕೆ.ಆರ್.ದುರ್ಗಾದಾಸ್ ಸಮಾರೋಪ ಭಾಷಣ ಮಾಡಿ, ಜೊತೆಗೆ ಬದುಕುತ್ತಿರುವುದರಿಂದ ಕನ್ನಡ ಮತ್ತು ಮರಾಠಿಗರಲ್ಲಿ ಹೊಂದಾಣಿಕೆ ಬಂದಿದೆ. ಕನ್ನಡಿಗರು ಜಗಳಗಂಟರಲ್ಲ. ಎಲ್ಲರೊಂದಿಗೆ ಉತ್ತಮ ಸಂಬಂಧ ಹೊಂದಿರುತ್ತಾರೆ. ಆದರೆ, ಕನ್ನಡಕ್ಕೆ ಆಪತ್ತು ಬಂದಾಗ ಗಟ್ಟಿಯಾಗಿ ಮಾತನಾಡುವ ಶಕ್ತಿ ಕನ್ನಡಿಗರಿಗಿದೆ. ಶೈಕ್ಷಣಿಕ ಸೌಲಭ್ಯ ಕಲ್ಪಿಸುವುದು, ಉದ್ಯೋಗ ಕೊಡುವುದು ಸರ್ಕಾರದ ಕೈಯಲ್ಲಿದೆ. ಸೊಲ್ಲಾಪುದಲ್ಲಿ ೩ ಲಕ್ಷಕ್ಕೂ ಹೆಚ್ಚು ಕನ್ನಡಿಗರಿದ್ದಾರೆ ಎಂಬ ಮಾಹಿತಿಯಿದೆ. ಆದರೆ, ಆಡಳಿತಾತ್ಮಕವಾಗಿ ಮಹಾರಾಷ್ಟ್ರ ಸರ್ಕಾರದ ಅಧೀನದಲ್ಲಿದೆ. ಕನ್ನಡ ಶಾಲೆಗಳು ರಾಜ್ಯದಲ್ಲಿಯೇ ಅವನತಿಯಲ್ಲಿದೆ. ಇನ್ನು ಹೊರನಾಡಿನಲ್ಲಿ ಕನ್ನಡಿಗರ ಸ್ಥಿತಿ ಅರ್ಥವಾಗುತ್ತದೆ ಎಂದು ಹೇಳಿದರು. 

ಇಳಕಲ್ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಕನ್ನಡಪರ ಹೋರಾಟಗಾರ ಭೀಮಾಶಂಕರ ಪಾಟೀಲ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ, ನಾಡೋಜ ಪಿ. ಎಸ್.ಶಂಕರ್, ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ ಇತರರು ಇದ್ದರು. 

ಕನ್ನಡದ ಅಸ್ಮಿತೆ ಎಲ್ಲರ ಬೆಸೆಯುವ ಕೊಂಡಿ: ಡಾ. ತಮಿಳ್ ಸೆಲಿ

ಕನ್ನಡದ ಅಸ್ಮಿತೆಯು ಎಲ್ಲ ರಾಜ್ಯ, ರಾಷ್ಟ್ರಗಳಲ್ಲಿರುವ ಕನ್ನಡಿಗರ ಮನಸ್ಸಿನಲ್ಲಿ ವಿಸ್ತರಿಸಿಕೊಂಡು ಸಂಬಂಧದ ಕೊಂಡಿಯಾಗಿ, ಮಾಧ್ಯಮವಾಗಿ ಕಾರ್ಯ ಮಾಡುತ್ತಿದೆ ಎಂದು ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ತಮಿಳ್ ಸೆಲ್ವಿ ಹೇಳಿದರು. 

ಅಖಿಲ ಭಾರತ ಹೊರನಾಡು ಕನ್ನಡ ಸಂಘಗಳ 8ನೇ ಮಹಾಮೇಳದ ಗೋಷ್ಠಿಯಲ್ಲಿ ಹೊರನಾಡಿನಲ್ಲಿ ಕನ್ನಡ ಅಸ್ಮಿತೆ ಮತ್ತು ಕನ್ನಡ -ಮರಾಠಿ ಸಾಂಸ್ಕೃತಿಕ ಸಂಬಂಧಗಳು ಎಂಬ ವಿಷಯದ ಕುರಿತು ವಿಷಯ ಮಂಡಿಸಿದರು. ರಾಜ್ಯ, ರಾಷ್ಟ್ರಗಳಲ್ಲಿರುವ ಕನ್ನಡ ಸಂಘ ಸಂಸ್ಥೆಗಳು ಕನ್ನಡ ಭಾಷೆಯನ್ನು, ಕಲೆ, ಸಂಸ್ಕೃತಿಯ ಪರಂಪರೆಯನ್ನು ಪರಸ್ಪರ ವಿನಿಮಯದೊಂದಿಗೆ ಕನ್ನಡವನ್ನು ಶ್ರೀಮಂತವಾಗುವಂತೆ ಮಾಡುತ್ತಿದ್ದಾರೆ ಎಂದರು. 

ಮರಾಠಿಯಿಂದ ಕನ್ನಡಕ್ಕೆ ಅನುವಾದ ಸಾಹಿತ್ಯ ಎಂಬ ವಿಷಯದ ಕುರಿತು ಪ್ರಾಧ್ಯಾಪಕಿ ಡಾ.ಪ್ರಜ್ಞಾ ಮತ್ತಿಹಳ್ಳಿ ಮಾತನಾಡಿದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯ ಭಾಷಾಂತರ ವಿಭಾಗದ ಪ್ರಾಧ್ಯಾಪಕ ಡಾ. ವಿಠ್ಠಲರಾವ್ ಗಾಯಕವಾಡ ಕನ್ನಡ ಮತ್ತು ಮರಾಠಿ ಸಂಸ್ಕೃತಿ ಬಗ್ಗೆ ವಿಷಯ ಮಂಡನೆ ಮಾಡಿದರು. ರಂಗಕರ್ಮಿ ವಿಠ್ಠಲ ಕೊಪ್ಪದ ಭಾಷೆ ಬೆಳವಣಿಗೆಯಲ್ಲಿ ರಂಗಭೂಮಿಯ ಕೊಡುಗೆ ವಿಷಯದ ಕುರಿತು, ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಬಸವರಾಜ ಮಸೂತಿ ಹೊರನಾಡಿನಲ್ಲಿ ರಂಗಭೂಮಿ ಬಗ್ಗೆ ವಿಷಯದ ಮಂಡನೆ ಮಾಡಿದರು. ಚಿಂತಕ ನಾಗರಾಜ ಹೊಂಗಲ ಗಡಿ ಹೊರನಾಡ ಕನ್ನಡಿಗರ ಕುರಿತು ಮಾತನಾಡಿದರು. ದುಧನಿ ಶಾಂತಲಿಂಗೇಶ್ವರ ಶ್ರೀ ಸಾನ್ನಿಧ್ಯ ವಹಿಸಿದ್ದರು. ಕೆ.ಎಸ್. ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು. ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಎಸ್.ಎಂ. ರಾಚಯ್ಯನವರ ವಂದಿಸಿದರು.

ಬದುಕಿನ ಹೋರಾಟದಲ್ಲಿ ಹೊರನಾಡ ಕನ್ನಡಿಗರು

ಹೊರನಾಡ ಕನ್ನಡಿಗರು ಎರಡು ಭಾಷೆಗಳನ್ನು ಸಮರ್ಥವಾಗಿ ಬಳಸಲು ಶಕ್ತರಿದ್ದರೂ ಇತ್ತ ಕರ್ನಾಟಕದಿಂದ ಮತ್ತು ಇತ್ತ ರಾಜ್ಯದಿಂದ ವಂಚಿತರಾಗಿ ಬದುಕಿನ ಹೋರಾಟದಲ್ಲಿ ಸಿಲಿಕಿದ್ದೇವೆ. ನಾವು ವಂಚಿತರಾದರೂ ಸಹ ಕನ್ನಡ ಉಳಿಸಿ ಬೆಳೆಸಿಕೊಂಡು ಹೋಗುತ್ತಿದ್ದೇವೆ ಎಂಬ ಹೆಮ್ಮೆ ನಮಗಿದೆ ಎಂದು ಅಕ್ಕಲಕೋಟ ಸಿಬಿ ಖೇಡಗಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ. ಗುರುಲಿಂಗಪ್ಪ ದಬಾಲೆ ಹೇಳಿದರು. 

ಸೊಲ್ಲಾಪುರದ ಅಕ್ಕಲಕೋಟದಲ್ಲಿ ನಡೆಯುತ್ತಿರುವ ಅಖಿಲ ಭಾರತ ಹೊರನಾಡು ಕನ್ನಡಿಗರ ಸಂಘದ ಮಹಾಮೇಳದ ಹೊರನಾಡು- ಗಡಿನಾಡು ಕನ್ನಡಿಗರ ಸಮಸ್ಯೆಗಳು ಮತ್ತು ಪರಿಹಾರ ಶೈಕ್ಷಣಿಕ ಸವಾಲುಗಳು ಗೋಷ್ಠಿಯಲ್ಲಿ ಹೊರನಾಡು ಕನ್ನಡಿಗರ ಉದ್ಯೋಗದ ಸವಾಲುಗಳು ಕುರಿತು ವಿಷಯ ಮಂಡನೆ ಮಾಡಿದರು. ಮಾಧ್ಯಮದ ಸಮಸ್ಯೆಗಳನ್ನು ಇಟ್ಟುಕೊಂಡು ಉದ್ಯೋಗಕ್ಕೆ ಕೊಕ್ಕೆ ಹಾಕುವ ಕಾರ್ಯವಾಗಬಾರದು ಎಂದರು. 

ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಸಿದ್ರಾಮ ಮನಹಳ್ಳಿ ಹೊರನಾಡು ಮತ್ತು ಒಳನಾಡು ಶೈಕ್ಷಣಿಕ ಸೌಲಭ್ಯ ಮತ್ತು ತಾರತಮ್ಯಗಳು ವಿಷಯದ ಕುರಿತು ಮಾತನಾಡಿ, ಶೈಕ್ಷಣಿಕವಾಗಿ ಕರ್ನಾಟಕದ ಮಕ್ಕಳಿಗೆ ಶಿಕ್ಷಣಕ್ಕೆ ನೀಡುತ್ತಿರುವ ಸೌಲಭ್ಯಗಳನ್ನು ಹೊರನಾಡಿನಲ್ಲಿ ಕಲಿಯುತ್ತಿರುವ ಕನ್ನಡಿಗರಿಗೂ ವಿಸ್ತರಣೆಯಾದರೆ ಸಮಾನತೆಯ ಶಿಕ್ಷಣಕ್ಕೆ ಮಹತ್ವ ಸಿಗಲಿದೆ ಎಂದು ಹೇಳಿದರು. 

ಸಾಮಾಜಿಕ ಚಿಂತಕರಾದ ನಾಗರಾಜ ಹೊಂಗಲ ಅವರು ಗಡಿ-ಹೊರನಾಡು ಕನ್ನಡಿಗರ ಸ್ಥಿತಿ-ಗತಿ, ಸವಾಲುಗಳು ಮತ್ತು ಪರಿಹಾರೋಪಾಯಗಳು ಕುರಿತು, ಶಿಕ್ಷಕರಾದ ಗದ್ಗಿಹಳ್ಳಿ ಗುರುಬಸವರಾಜ ಆಂಧ್ರ ಪ್ರದೇಶದಲ್ಲಿ ಕನ್ನಡ ಶೈಕ್ಷಣಿಕ ಸವಾಲುಗಳು ಮತ್ತು ಪರಿಹಾರೋಪಾಯ ಉದ್ಯೋಗ ಸವಾಲುಗಳು ವಿಷಯ ಮಂಡನೆ ಮಾಡಿದರು. 

ಡಾ. ರಮೇಶ ಮೂಲಗೆ, ಡಾ. ಡಿ.ಬಿ ಕರಡೋಣಿ ಪ್ರತಿಕ್ರಿಯೆ ನೀಡಿದರು. ಸಂಗಮೇಶ್ವರ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ. ಬಿ.ಬಿ. ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಸತೀಶ ತುರಮರಿ ನಿರೂಪಿಸಿದರು. ಸುನೀಲ ಸವಳಿ ಸ್ವಾಗತಿಸಿದರು. ಸೋಮಣ್ಣ ಕುಂಬಾರ ವಂದಿಸಿದರು.

10 ನಿರ್ಣಯಗಳು...

ಅಖಿಲ ಭಾರತ ಹೊರನಾಡ ಕನ್ನಡಿಗರ ಸಂಘದ ೮ನೇ ಮಹಾಮೇಳದ ಸಮಾರೋಪ ಸಮಾರಂಭದಲ್ಲಿ ಹೊರನಾಡು ಕನ್ನಡಿಗರ ಅಭಿವೃದ್ಧಿ ಪ್ರಾಧಿಕಾರ ರಚನೆ ಸೇರಿದಂತೆ 10 ನಿರ್ಣಯಗಳನ್ನು ಕೈಗೊಂಡು ಅದರ ಅನುಷ್ಠಾನಕ್ಕೆ ಸರ್ಕಾರವನ್ನು ಒತ್ತಾಯಿಸಿತು. 

* ಕರ್ನಾಟಕ -ಮಹಾರಾಷ್ಟ್ರ ಗಡಿ ವಿಷಯ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯದಲ್ಲಿರುವ ಬಾಕಿ ಪ್ರಕರಣಗಳ ಶೀಘ್ರ ಇತ್ಯರ್ಥಗೊಳಿಸಲು ಕರ್ನಾಟಕ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು 

* ರಾಜ್ಯದ ಗಡಿ ಪ್ರದೇಶಗಳು ಸೇರಿದಂತೆ ಹೊರನಾಡಿನಲ್ಲಿ ಕನ್ನಡ ಸಾಂಸ್ಕೃತಿಕ ಭವನಗಳನ್ನು ನಿರ್ಮಿಸುವುದು ಥಿ ಪ್ರಥಮ ಹೆಜ್ಜೆಯಾಗಿ ಅಕ್ಕಲಕೋಟದಲ್ಲಿ ಕನ್ನಡ ಸಾಂಸ್ಕೃತಿಕ ಭವನ ನಿರ್ಮಿಸಬೇಕು 

* ಹೊರನಾಡು ಕನ್ನಡಿಗರ ಹಾಗೂ ಕನ್ನಡ ಭಾಷೆ ಅಭಿವೃದ್ಧಿಗಾಗಿ ಹೊರನಾಡು ಕನ್ನಡಿಗರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಒತ್ತಾಯ ಥಿ ಹೊರನಾಡಿನ ಕನ್ನಡ ವಿದ್ಯಾರ್ಥಿಗಳು ಪಿಎಚ್‌ಡಿ, ಸಂಶೋಧನೆಗೆ ವಿಶೇಷ ಹಣಕಾಸಿನ ನೆರವು 

* ಗಡಿನಾಡಲ್ಲಿ ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ನಿರ್ದೇಶನಾಲಯ ಸ್ಥಾಪಿಸಬೇಕು 

* ಗಡಿ ಮತ್ತು ಹೊರನಾಡಿನಲ್ಲಿ ಬಾಲವಾಡಿ, ಅಂಗನವಾಡಿ ತೆರೆಯುವುದು ಹಾಗೂ ರಾಜ್ಯದ ಶಾಲಾ ಮಕ್ಕಳಿಗೆ ಪೂರೈಸುತ್ತಿರುವ ಸೈಕಲ್ ಭಾಗ್ಯ ಯೋಜನೆಯನ್ನು ಗಡಿನಾಡ ಕನ್ನಡ ಶಾಲೆಗಳಿಗೂ ವಿಸ್ತರಿಸುವುದು 

* ಹೊರನಾಡಿನಿಂದ ಬಂದ ಕನ್ನಡಿಗರು, ಕನ್ನಡ ಸಂಘ ಸಂಸ್ಥೆಗಳ ಪತ್ರಗಳಿಗೆ ಸರ್ಕಾರದಿಂದ ೩ ತಿಂಗಳೊಳಗಾಗಿ ಸ್ಪಂದಿಸಿ ಪರಿಹಾರ ಕಲ್ಪಿಸಬೇಕು 

* ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಉಪ ಕಚೇರಿ ಬೆಳಗಾವಿಯಲ್ಲಿ ಸ್ಥಾಪಿಸಬೇಕು 

* ಅನ್ನದ ಭಾಷೆ ಕನ್ನಡವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಶೇ.80ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಬೇಕು