Asianet Suvarna News Asianet Suvarna News

Mysuru : ವಿಶ್ವ ಅಹಿಂಸಾ ದಿನಾಚರಣೆ, ಸ್ವಚ್ಛತಾ ಅಭಿಯಾನ

ನಗರದ ಶ್ರೀ ನಟರಾಜ ಪ್ರತಿಷ್ಠಾನದ ವತಿಯಿಂದ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ವಿಶ್ವ ಅಹಿಂಸಾ ದಿನಾಚರಣೆ ಮತ್ತು ಸರ್ವಧರ್ಮ ಪ್ರಾರ್ಥನೆ ಹಾಗೂ ಸ್ವಚ್ಛತಾ ಅಭಿಯಾನವನ್ನು ಸೋಮವಾರ ಆಯೋಜಿಸಲಾಗಿತ್ತು.

Mysuru : World Day of Non-Violence, Cleanliness Campaign snr
Author
First Published Oct 3, 2023, 6:54 AM IST

  ಮೈಸೂರು :  ನಗರದ ಶ್ರೀ ನಟರಾಜ ಪ್ರತಿಷ್ಠಾನದ ವತಿಯಿಂದ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ವಿಶ್ವ ಅಹಿಂಸಾ ದಿನಾಚರಣೆ ಮತ್ತು ಸರ್ವಧರ್ಮ ಪ್ರಾರ್ಥನೆ ಹಾಗೂ ಸ್ವಚ್ಛತಾ ಅಭಿಯಾನವನ್ನು ಸೋಮವಾರ ಆಯೋಜಿಸಲಾಗಿತ್ತು.

ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಗಾಂಧಿ ಎಂದರೆ ಭಾರತ, ಭಾರತವೆಂದರೆ ಗಾಂಧಿ ಎಂದರೆ ತಪ್ಪಾಗಲಾರದು. ಸರಳತೆ, ಅಹಿಂಸೆ, ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಗಾಂಧಿ ಎಂದು ಹೇಳಿದರು.

ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಕೂಡ ಉತ್ತಮ ಆಡಳಿತಗಾರರಾಗಿದ್ದವರು. ಉನ್ನತ ಸ್ಥಾನದಲ್ಲಿ ಇದ್ದರು ಸರಳತೆ ಬಹುಮುಖ ವ್ಯಕ್ತಿತ್ವ ಹೊಂದಿದವರು. ಈ ಇಬ್ಬರು ಮಹನೀಯರು ನಮ್ಮ ದೇಶದ ಪ್ರಾತಃ ಸ್ಮರಣೀಯರು ಎಂದು ಅವರು ತಿಳಿಸಿದರು.

ಮೇಯರ್ ಶಿವಕುಮಾರ್ ಮಾತನಾಡಿ, ಈ ಸ್ವಚ್ಛತಾ ಅಭಿಯಾನ ಕೇವಲ ಭೌತಿಕವಾಗಿ ಆಚರಿಸಿದರೆ ಸಾಲದು. ಮನೆ, ಮನಸ್ಸು, ಕುಟುಂಬ, ಸಮಾಜ ದೇಶ ಮುಖೇನವಾಗಿ ಸ್ವಚ್ಛತೆಯಾದರೆ ಗಾಂಧೀಜಿ ಕಂಡ ಕನಸು ನನಸಾಗುವುದು. ರಾಮ ರಾಜ್ಯದ ಪರಿಕಲ್ಪನೆ ಸಫಲವಾಗುತ್ತದೆ. ಸರಳತೆ ಬದುಕಿನ ಭಾಗವಾಗಬೇಕು. ಅಲ್ಲದೆ ಇತರರಿಗೂ ಕೂಡ ಮಾದರಿಯಾಗಬೇಕು ಎಂದರು. ನಗರ ಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್ ಇದ್ದರು.

ನಮ್ಮ ಮನಸ್ಸು ಕೂಡ ಸ್ವಚ್ಛವಾಗಿರಬೇಕು:

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾರತೀಯ ವಾಯುಪಡೆಯ ನಿವೃತ್ತ ಏರ್ ಕಮೊಡೊರ್ ವಿ. ರಮೇಶ್ ಮಾತನಾಡಿ, ಸತ್ಯ ಮತ್ತು ಅಹಿಂಸೆಯನ್ನು ನಂಬಿದವರು, ಸತ್ಯವನ್ನು ಕಾರ್ಯದಲ್ಲಿ ಮತ್ತು ಮನಸ್ಸಿನಲ್ಲಿ ಅಳವಡಿಸಿ ಕೊಂಡವರು ಶಾಂತಿಯಿಂದ ಬದುಕುವುದೇ ಮನುಷ್ಯನಿಗೆ ಪ್ರಮುಖ ಗುರಿಯಾಗಿರಬೇಕು ಎಂದರು.

ಸರ್ವೋದಯ ಸ್ವರಾಜ್, ಸ್ವದೇಶೀ ತತ್ವಗಳನ್ನು ಅಳವಡಿಸಿಕೊಂಡವರು ಗಾಂಧಿಜೀ. ಶಾಂತಿಯುತ ಸಮಾಜವನ್ನು ನಾವು ನಿರ್ಮಾಣ ಮಾಡಬೇಕಾಗಿದೆ. ನಾವಿರುವ ಸ್ಥಳ ಸ್ವಚ್ಛವಾಗಿದ್ದರೆ ಸಾಲದು. ನಮ್ಮ ಮನಸ್ಸು ಕೂಡ ಸ್ವಚ್ಛವಾಗಿರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ಗಾಂಧಿ ತತ್ವಗಳನ್ನು ಪ್ರತಿದಿನ ನಮ್ಮ ಬದುಕಿನಲ್ಲಿ ಚಿಂತನ, ಮಂಥನ ಮಾಡಿಕೊಂಡು ಅನುಷ್ಠಾನಕ್ಕೆ ತಂದಾಗ ಗಾಂಧಿ ಜಯಂತಿಯ ಆಚರಣೆ ಸಾರ್ಥಕವಾಗುತ್ತದೆ ಎಂದರು.

ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ನಟರಾಜ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ.ಎನ್.ಜಿ. ಲೋಕೇಶ್, ಡಾ.ಜಿ. ಪ್ರಸಾದಮೂರ್ತಿ, ವಿ.ಡಿ. ಸುನಿತಾರಾಣಿ, ಡಾ.ಬಿ. ಮಹೇಶ ದಳಪತಿ, ಸತ್ಯಸುಲೋಚನಾ, ಡಾ.ಎನ್. ರಾಜೇಶ್, ಪದ್ಮಾ ಇದ್ದರು. ಶಿಕ್ಷಕಿ ವಾಣಿ ದೇಶಭಕ್ತಿ ಗೀತೆಯನ್ನು ಹಾಡಿದರು. ಬಿ. ರಾಧಾ ಸ್ವಾಗತಿಸಿದರು. ಕೆ.ಎಸ್. ಪುಷ್ಪ ನಿರೂಪಿಸಿದರು.

Follow Us:
Download App:
  • android
  • ios