ಕೊಡಗು ಪ್ರವಾಸಕ್ಕೆ ಬಂದಿದ್ದ ಮೈಸೂರಿನ ಯುವತಿಯೊಬ್ಬರು ಸೋಮವಾರಪೇಟೆಯ ಹೋಂಸ್ಟೇ ಬಾತ್‌ರೂಮ್‌ನಲ್ಲಿ ಗ್ಯಾಸ್ ಗೀಸರ್‌ನಿಂದ ವಿಷಾನಿಲ ಸೋರಿಕೆಯಾಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ವೆಂಟಿಲೇಷನ್ ಇಲ್ಲದ ಬಾತ್‌ರೂಮ್‌ನಲ್ಲಿ ಈ ದುರಂತ ಸಂಭವಿಸಿದ್ದು, ಹೋಂಸ್ಟೇ ಮಾಲೀಕರ ನಿರ್ಲಕ್ಷ್ಯದ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಕೊಡಗು (ಜೂ.07): ಪ್ರಕೃತಿ ಸೌಂದರ್ಯವನ್ನು ಸವಿಯಲು ಕೊಡಗಿಗೆ ಪ್ರವಾಸಕ್ಕೆ ಬಂದಿದ್ದ ಮೈಸೂರಿನ ಯುವತಿಯೊಬ್ಬರು ಹೋಂಸ್ಟೇ ಬಾತ್‌ರೂಮ್‌ನಲ್ಲಿ ಗ್ಯಾಸ್ ಗೀಸರ್‌ನಿಂದ ವಿಷಾನಿಲ ಸೋರಿಕೆಯಾಗಿ ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಮೈಸೂರಿನ ಯರಗನಹಳ್ಳಿಯ ಪಾಪಣ್ಣ ಬಡಾವಣೆಯ ನಿವಾಸಿಯಾದ ವಿನೂತ (27) ಮೃತಪಟ್ಟ ದುರ್ದೈವಿ ಪ್ರವಾಸಿ ಮಹಿಳೆಯಾಗಿದ್ದಾರೆ. ಇವರು ಜಗನ್ನಾಥ್ ಹಾಗೂ ರೇಣುಕಾ ದಂಪತಿಯ ಪುತ್ರಿಯಾಗಿದ್ದಾರೆ.

ಕಿಟಕಿ ಇಲ್ಲದ ಬಾತ್‌ರೂಮ್ ತಂದೊಡ್ಡಿದ ಕಂಟಕ:

ಮೃತ ವಿನೂತ ಅವರು ಮೈಸೂರಿನಿಂದ ಕೊಡಗು ಪ್ರವಾಸಕ್ಕೆಂದು ಆಗಮಿಸಿದ್ದು, ಸೋಮವಾರಪೇಟೆಯ ಚೌಡ್ಲು ಗ್ರಾಮದ ಹೋಂಸ್ಟೇ ಒಂದರಲ್ಲಿ ತಂಗಿದ್ದರು. ಭಾನುವಾರ (ಜೂನ್ 7) ಸ್ನಾನ ಮಾಡಲು ಬಾತ್‌ರೂಮಿಗೆ ತೆರಳಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಬಾತ್‌ರೂಮ್‌ನಲ್ಲಿದ್ದ ಗ್ಯಾಸ್ ಗೀಸರ್‌ನಿಂದ (Gas Geyser) ಹಠಾತ್ ಗ್ಯಾಸ್ ಸೋರಿಕೆಯಾಗಿದೆ (Carbon Monoxide). 

ಪ್ರಾಥಮಿಕ ಮಾಹಿತಿಯ ಪ್ರಕಾರ, ಸದರಿ ಹೋಂಸ್ಟೇಯ ಬಾತ್‌ರೂಮ್‌ನಲ್ಲಿ ಯಾವುದೇ ಕಿಟಕಿ ಅಥವಾ ವೆಂಟಿಲೇಷನ್ ವ್ಯವಸ್ಥೆ ಇರಲಿಲ್ಲ ಎನ್ನಲಾಗಿದೆ. ಇದರಿಂದಾಗಿ ಸೋರಿಕೆಯಾದ ವಿಷಾನಿಲ ಹೊರಗೆ ಹೋಗಲಾಗದೆ ಇಡೀ ಬಾತ್‌ರೂಮ್ ಆವರಿಸಿಕೊಂಡಿದೆ. ಪರಿಣಾಮವಾಗಿ ವಿನೂತ ಅವರು ಉಸಿರುಗಟ್ಟಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಸಾವನ್ನಪ್ಪಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು:

ಯುವತಿ ಸ್ನಾನಕ್ಕೆ ಹೋದವಳು ಬಹಳ ಹೊತ್ತಾದರೂ ಹೊರಗೆ ಬಾರದಿದ್ದಾಗ ಅನುಮಾನಗೊಂಡು ಪರಿಶೀಲಿಸಿದಾಗ ಈ ಭೀಕರ ಘಟನೆ ಬೆಳಕಿಗೆ ಬಂದಿದೆ. ಹೋಂಸ್ಟೇ ಮಾಲೀಕರ ಬೇಜವಾಬ್ದಾರಿತನ ಹಾಗೂ ಸುರಕ್ಷತಾ ಕ್ರಮಗಳ ಕೊರತೆಯೇ ಈ ಸಾವಿಗೆ ನೇರ ಕಾರಣ ಎಂದು ಶಂಕಿಸಲಾಗಿದೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಪ್ರವಾಸಕ್ಕೆ ಬಂದು ಹೆತ್ತ ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.