ಮೈಸೂರಿನಲ್ಲಿ ಪೊಲೀಸ್ ಅಧಿಕಾರಿಗಳು ಸಂಚರಿಸುತ್ತಿದ್ದ ಸರ್ಕಾರಿ ವಾಹನವೊಂದರ ಹಿಂಬದಿಯ ನಂಬರ್ ಪ್ಲೇಟ್ ನಾಪತ್ತೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.  ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.

ಮೈಸೂರು: ಮೈಸೂರಿನಲ್ಲಿ ಪೊಲೀಸ್ ಅಧಿಕಾರಿಗಳು ಸಂಚರಿಸುತ್ತಿದ್ದ ಸರ್ಕಾರಿ ವಾಹನದ ಮೇಲೆಯೇ ಸಂಚಾರ ನಿಯಮ ಉಲ್ಲಂಘನೆಯ ಆರೋಪ ಕೇಳಿಬಂದಿದ್ದು, ಈ ಘಟನೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಬುಧವಾರ ಮಧ್ಯಾಹ್ನ ಸುಮಾರು 12.30ರ ವೇಳೆಗೆ ಮೈಸೂರು ನಗರದ ಕಾಂತರಾಜ್ ಅರಸ್ ರಸ್ತೆಯ ಅಕ್ಷಯ ಭಂಡಾರ ಸಮೀಪ ಪೊಲೀಸ್ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಸರ್ಕಾರಿ ವಾಹನ ನಿಂತಿರುವುದು ಕಂಡುಬಂದಿದೆ.

Add Asianetnews Kannada as a Preferred SourcegooglePreferred

ಆದರೆ, ಈ ವಾಹನದ ಹಿಂಭಾಗದ ನಂಬರ್ ಪ್ಲೇಟ್ ಸಂಪೂರ್ಣವಾಗಿ ನಾಪತ್ತೆಯಾಗಿರುವುದು ಸ್ಥಳೀಯರ ಗಮನ ಸೆಳೆದಿದೆ. ಸಂಚಾರ ನಿಯಮಗಳ ಪ್ರಕಾರ ಯಾವುದೇ ವಾಹನದಲ್ಲೂ ನಂಬರ್ ಪ್ಲೇಟ್ ಸ್ಪಷ್ಟವಾಗಿ ಅಳವಡಿಸಿರಬೇಕಾದುದು ಕಡ್ಡಾಯವಾಗಿದ್ದು, ನಂಬರ್ ಪ್ಲೇಟ್ ಇಲ್ಲದಿರುವುದು ಅಥವಾ ವಿರೂಪಗೊಂಡಿರುವುದು ದಂಡನಾರ್ಹ ಅಪರಾಧವಾಗಿದೆ.

ನಂಬರ್ ಪ್ಲೇಟ್ ವಿರೂಪಣೆ — ವಂಚನೆಯೇ?

ನಂಬರ್ ಪ್ಲೇಟ್‌ನಲ್ಲಿರುವ ಸಂಖ್ಯೆಯನ್ನು ಮರೆಮಾಚುವುದು ಅಥವಾ ಉದ್ದೇಶಪೂರ್ವಕವಾಗಿ ತೆಗೆದುಹಾಕುವುದು ಭಾರತೀಯ ನಾಗರಿಕ ಸಂಹಿತೆ 2023ರ ಸೆಕ್ಷನ್ 318 (ಹಳೆಯ ಐಪಿಸಿ ಸೆಕ್ಷನ್ 420) ಅಡಿ ವಂಚನೆಗೆ ಸಮಾನವಾಗಿದೆ. ಈ ವಿಧಾನದಡಿ ಇಂತಹ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ವಂಚನೆ ಪ್ರಕರಣ ದಾಖಲಿಸುವ ಅವಕಾಶವಿದ್ದು, ಮೈಸೂರಿನ ಪೊಲೀಸರು ಈ ಹಿಂದೆ ಇಂತಹ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ದಾಖಲಿಸಿರುವ ಉದಾಹರಣೆಗಳೂ ಇವೆ.

ಇಂತಹ ಪರಿಸ್ಥಿತಿಯಲ್ಲಿ, ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಪೊಲೀಸ್ ಇಲಾಖೆಯ ಅಧಿಕಾರಿಗಳೇ ಸಂಚರಿಸುವ ವಾಹನದಲ್ಲಿ ನಂಬರ್ ಪ್ಲೇಟ್ ಕಾಣೆಯಾಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಕಾನೂನು ಜಾರಿ ಮಾಡುವವರೇ ಕಾನೂನು ಉಲ್ಲಂಘಿಸಿದರೆ?

ನಂಬರ್ ಪ್ಲೇಟ್ ಇಲ್ಲದೇ ಸಂಚರಿಸುವ ವಾಹನವು ಅಪಘಾತಕ್ಕೆ ಕಾರಣವಾಗಿ ಪ್ರಾಣ ಹಾನಿ ಸಂಭವಿಸಿದರೆ, ಆ ವಾಹನವನ್ನು ಪತ್ತೆಹಚ್ಚುವುದು ಹೇಗೆ ಎಂಬ ಗಂಭೀರ ಪ್ರಶ್ನೆ ಎದುರಾಗಿದೆ. ಅದೇ ರೀತಿ, ನಂಬರ್ ಪ್ಲೇಟ್ ಇಲ್ಲದ ಸರ್ಕಾರಿ ವಾಹನದಲ್ಲಿ ಸಂಚರಿಸುವ ಅಧಿಕಾರಿಗಳು ಯಾವುದೇ ಕಾನೂನುಬಾಹಿರ ಕೃತ್ಯ ಎಸಗಿದರೆ, ಅಂತಹವರನ್ನು ಗುರುತಿಸಿ ಕ್ರಮ ಕೈಗೊಳ್ಳುವುದು ಹೇಗೆ ಎಂಬುದೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕಾನೂನು ಜಾರಿ ಮಾಡುವ ಹೊಣೆಗಾರಿಕೆ ಹೊಂದಿರುವ ಪೊಲೀಸ್ ಇಲಾಖೆಯೇ ನಿಯಮಗಳನ್ನು ನಿರ್ಲಕ್ಷ್ಯ ಮಾಡಿದರೆ, ಸಾಮಾನ್ಯ ನಾಗರಿಕರಿಂದ ನಿಯಮ ಪಾಲನೆ ನಿರೀಕ್ಷಿಸುವುದು ಹೇಗೆ ಎಂಬ ಪ್ರಶ್ನೆಯೂ ಸಹಜವಾಗಿ ಮೂಡಿದೆ.

ಸರ್ಕಾರಿ ವಾಹನ ಜಪ್ತಿ ಮಾಡಿ ಕ್ರಮಕ್ಕೆ ಆಗ್ರಹ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೈಸೂರಿನ ನ್ಯಾಯವಾದಿ ಪಿ.ಜೆ. ರಾಘವೇಂದ್ರ ಅವರು, ನಂಬರ್ ಪ್ಲೇಟ್ ಇಲ್ಲದೇ ಸಂಚರಿಸುತ್ತಿದ್ದ ಸರ್ಕಾರಿ ವಾಹನವನ್ನು ತಕ್ಷಣವೇ ಜಪ್ತಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ, ಆ ವಾಹನವನ್ನು ಬಳಸುತ್ತಿದ್ದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯ ವಿರುದ್ಧ ಭಾರತೀಯ ನಾಗರಿಕ ಸಂಹಿತೆ 2023ರ ಅನ್ವಯ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

“ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದು ಕೇವಲ ಮಾತಲ್ಲ, ಅದನ್ನು ಕಾರ್ಯರೂಪದಲ್ಲೂ ತೋರಿಸಬೇಕು. ಕಾನೂನಿಗಿಂತ ಯಾರೂ ಮೇಲಲ್ಲ ಎಂಬುದನ್ನು ಪೊಲೀಸ್ ಇಲಾಖೆ ಈ ಪ್ರಕರಣದ ಮೂಲಕ ಸಾಬೀತುಪಡಿಸಬೇಕಿದೆ,” ಎಂದು ಅವರು ಹೇಳಿದ್ದಾರೆ.

ಈ ಘಟನೆ ಮೈಸೂರಿನಲ್ಲಿ ಕಾನೂನು ಜಾರಿಯ ಬಗ್ಗೆ ಮತ್ತೊಮ್ಮೆ ಸಾರ್ವಜನಿಕ ಗಮನ ಸೆಳೆದಿದ್ದು, ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ನೋಡಬೇಕಿದೆ.