ಮೈಸೂರು ಅರಮನೆ ಆಸ್ತಿ ಮತ್ತು ಅಂಬಾರಿ ವಿವಾದದ ಬಗ್ಗೆ ಸಚಿವ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಅರಮನೆ ಜನರ ತೆರಿಗೆಯಿಂದ ನಿರ್ಮಾಣವಾಗಿದ್ದು, ಅದು ಜನರಿಗೇ ಸೇರಿದ್ದು ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ಜೆಟ್ಟಿ ಕಾಳಗ ರದ್ದು ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.

ಮೈಸೂರು: ಸಾಂಸ್ಕೃತಕ ನಗರ ಮೈಸೂರಿನ ಅರಮನೆ ಆಸ್ತಿ ಹಕ್ಕು, ದಸರಾ ಆಚರಣೆ ಹಾಗೂ ಅಂಬಾರಿ ವಿವಾದಕ್ಕೆ ಸಂಬಂಧಿಸಿದಂತೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಸುದ್ದಿಗೋಷ್ಠಿ ನಡೆಸಿ ದಾಖಲೆಗಳ ಸಮೇತ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಮಾತನಾಡಿ, ಮತ್ತೊಮ್ಮೆ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ, ಸರ್ಕಾರ ಆಗಲಿ, ರಾಜಾಡಳಿತವಾಗಲಿ ಜನರ ತರಿಗೆಯಿಂದಲೇ ನಡೆಯುವುದು. ಹೀಗಾಗಿ ಎಲ್ಲವೂ ಜನರಿಗೆ ಸೇರಿದ್ದು ಎಂದು ತಿಳಿಸಿದ್ದಾರೆ.

ಸಿಂಹಾಸನ, ಅಂಬಾರಿ ಸರ್ಕಾರದ್ದು ಎಂದು ಹೇಳಿಲ್ಲ!

ಮೈಸೂರಿನಲ್ಲಿ ಮಾಧ್ಯಮಳೊಂದಿಗೆ ಮಾತನಾಡಿ ಪ್ರಮೋದಾದೇವಿ ಒಡೆಯರ್ ಅವರು ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಚಿವ ಯತೀಂದ್ರ ಅವರು, ಸಿಂಹಾಸನ, ಅಂಬಾರಿ ಸರ್ಕಾರದ್ದು ಎಂದು ನಾನು ಎಲ್ಲಿಯೂ ಹೇಳಿಲ್ಲ. ನಾವು ಬಾಡಿಗೆ ಕೊಡುತ್ತೇವೆ ಎಂದು ಹೇಳಿದ್ದೆ. ಅವರು ಅದನ್ನ ಗೌರವಧನ ಎಂದು ಹೇಳಿದ್ದಾರೆ. ಇದರಲ್ಲಿ ಅಂತಹ ವ್ಯತ್ಯಾಸವೇನು ಇಲ್ಲ‌ ಎಂದಿದ್ದಾರೆ.

ಆದರೆ, ಅರಮನೆ ಕಟ್ಟಿದ್ದು ಮಹರಾಜರೇ. ನಾನು ಅರಮನೆ ಮಹಾರಾಜರು ಕಟ್ಟಿಲ್ಲ ಎಂದು ಹೇಳಿಲ್ಲ‌. ಅರಮನೆ ಕೂಡ ಜನರ ತೆರಿಗೆ ಹಣದಿಂದಲೇ ಕಟ್ಟಿದ್ದು. ಹೀಗಾಗಿ ಎಲ್ಲವೂ ಜನರಿಗೇ ಸೇರಬೇಕು. ಸರ್ಕಾರ ಆಗಲಿ, ರಾಜಾಡಳಿತವಾಗಲಿ ಜನರ ತರಿಗೆಯಿಂದಲೇ ನಡೆಯುವುದು. ಹೀಗಾಗಿ ಎಲ್ಲವೂ ಜನರಿಗೆ ಸೇರಿದ್ದು. ಪ್ರತಿ ವರ್ಷವೂ ರಾಜಮನೆತನದವರು ಸಹಕಾರ ಕೊಟ್ಟಿದ್ದಾರೆ. ಈ ವರ್ಷ ಒಂದಿಷ್ಟು ಗೊಂದಲ ಆಗಿದೆ. ಮುಂದಿನ ದಿನಗಳಲ್ಲಿ ಅವರು ಸಿಎಂ ಜೊತೆ ಮಾತನಾಡಿ ಎಲ್ಲಾ ಗೊಂದಲ ಬಗೆ ಹರಿಸಿಕೊಳ್ಳುತ್ತಾರೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಯಾರೇ ತಪ್ಪು ಮಾಡಿದ್ದರು ಕ್ರಮ ಆಗುತ್ತೆ!

ಇದೇ ವೇಳೆ ಅರಮನೆಯಲ್ಲಿ ಜೆಟ್ಟಿಕಾಳಗ ರದ್ದು ವಿಚಾರವಾಗಿಯೂ ಪ್ರಕ್ರಿಯೆ ನೀಡಿದ ಸಚಿವರು, ಈ ಬಗ್ಗೆ ಅಧಿಕಾರಿಗಳಿಂದ ವರದಿ ಕೇಳಿದ್ದೇನೆ. ಈಗಾಗಲೇ ಕೆಲವರ ಮೇಲೆ ಕರ್ತವ್ಯ ಲೋಪದ ದೂರುಗಳು ಬಂದಿವೆ. ಅಧಿಕಾರಿಗಳ ವರದಿ ಸಂಪೂರ್ಣವಾಗಿ ಬರಲಿ. ವರದಿ ಬಂದ ಮೇಲೆ‌ ಯಾರೇ ತಪ್ಪು ಮಾಡಿದ್ರು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಸಿದ್ದರಾಮಯ್ಯ ಮತ್ತು ಮಹಾದೇವಪ್ಪ ನಡುವೆ ಸಣ್ಣ ಪುಟ್ಟ ವ್ಯತ್ಯಾಸ

ಮಾಜಿ ಸಚಿವ ಮಹದೇವಪ್ಪ‌ ಭೇಟಿ ವಿಚಾರ ಮಾತನಾಡಿ, ನಮ್ಮ ತಂದೆ ಹಾಗೂ ಮಹದೇವಪ್ಪ ನಡುವೆ ಸಂಬಂಧ ಏನು ಕೆಟ್ಟಿಲ್ಲ. ಅವರಿಬ್ಬರದ್ದು 40 ವರ್ಷದ ಸ್ನೇಹ. 40 ವರ್ಷ ಸ್ನೇಹ ಅಷ್ಟು ಸುಲಭವಾಗಿ ಮುರಿದು ಹೋಗುವುದಿಲ್ಲ. ಏನೋ ಸಣ್ಣ ಪುಟ್ಟ ವ್ಯತ್ಯಾಸಗಳು ಆಗಿದೆ. ಅದನ್ನ ಅವರೇ ಬಗ್ಗೆ ಹರಿಸಿಕೊಳ್ಳುತ್ತಾರೆ. ಮಹದೇವಪ್ಪ‌ ಪ್ರತ್ಯೇಕವಾಗಿ ಸಂವಿಧಾನ ದಿನಾಚರಣೆ ಮಾಡುತ್ತಿಲ್ಲ. ಸರ್ಕಾರ ಮಾಡುವ ಸಂವಿಧಾನ ದಿನಾಚರಣೆಗೆ ಅವರನ್ನ ಆಹ್ವಾನಿಸಿದ್ದೇನೆ. ಬೇರೆ ಬೇರೆ ಸಂಘಟನೆಗಳು ಪ್ರತ್ಯೇಕವಾಗಿ ಮಾಡಬಹದು ಅದನ್ನ ತಪ್ಪು ಎಂದು ಹೇಳಲು ಆಗುವುದಿಲ್ಲ ಎಂದಿದ್ದಾರೆ.