ದಸರಾ(Mysuru dasara 2026)ದಲ್ಲಿ ಕಂಬಳ ಬೇಡ ಎಂದು ದಸರಾ ಉನ್ನತಮಟ್ಟದ ಸಭೆಯಲ್ಲಿ ನಾನು ಸ್ಪಷ್ಟವಾಗಿ ಹೇಳಿದ್ದೇನೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್(Yaduveer Krishnadatta Chamaraja Wadiyar) ತಿಳಿಸಿದರು.
ಮೈಸೂರು (ಜು.12): ದಸರಾ(Mysuru dasara 2026)ದಲ್ಲಿ ಕಂಬಳ ಬೇಡ ಎಂದು ದಸರಾ ಉನ್ನತಮಟ್ಟದ ಸಭೆಯಲ್ಲಿ ನಾನು ಸ್ಪಷ್ಟವಾಗಿ ಹೇಳಿದ್ದೇನೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್(Yaduveer Krishnadatta Chamaraja Wadiyar) ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಬಳ(Kambala) ವಿಚಾರದಲ್ಲಿ ಶಾಸಕ ಅಶೋಕ ರೈ ನನಗೆ ಯಾವ ವಿವರಣೆಯನ್ನೂ ನೀಡಿಲ್ಲ. ಆ ವಿಚಾರದಲ್ಲಿ ನನ್ನ ಜೊತೆ ಅವತ್ತು ಏನ್ನನೂ ಚರ್ಚೆ ಮಾಡಿಲ್ಲ. ಕಂಬಳದ ಬಗ್ಗೆ ನನಗೆ ಅಶೋಕ ರೈ ವಿವರಣೆ ಕೊಡುವ ಅಗತ್ಯ ಇಲ್ಲ ಎಂದರು.
ದಸರಾ ಸಾಂಸ್ಕೃತಿಕ ಹಿನ್ನೆಲೆಯೇ ಬೇರೆ, ಕಂಬಳವೇ ಬೇರೆ.
ದಸರಾ ಸಾಂಸ್ಕೃತಿಕ ಹಿನ್ನೆಲೆಯೇ ಬೇರೆ, ಕಂಬಳವೇ ಬೇರೆ. ಎಲ್ಲದಕ್ಕೂ ನೀವು ದಸರಾವನ್ನ ಜೋಡಿಸುವುದು ಸರಿಯಲ್ಲ. ಮೈಸೂರಿನ ಜನತ ಭಾವನೆ ಕೂಡ ಇದೇ ಆಗಿದೆ. ಸರ್ಕಾರ ಕಂಬಳ ಮಾಡಿದರೆ ಇದು ಮೈಸೂರು ಜನರ ವಿರುದ್ಧವಾಗಿ ಮಾಡಿದಂತೆ ಎಂದು ಹೇಳಿದರು.
ಈ ಸರ್ಕಾರ ಇದುವರೆಗೂ ಜನತ ಭಾವನೆ ವಿರುದ್ಧವಾಗಿ ಕೆಲಸ ಮಾಡಿದೆ. ಈಗ ಕಂಬಳವನ್ನ ಜನರ ಭಾವನೆ ವಿರುದ್ಧವಾಗಿಯೇ ಮಾಡುತ್ತಿದೆ. ನಾವು ಕಂಬಳಕ್ಕೆ ವಿರುದ್ಧ ಇಲ್ಲ. ದಸರಾ ವೇಳೆ ಕಂಬಳ ಬೇಡ ಎಂದಿದ್ದೇನೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ಇರುವ ದಸರಾವನ್ನೇ ಅಚ್ಚುಕಟ್ಟಾಗಿ ಮಾಡಿ. ಕಳೆದ ಮೂರು ವರ್ಷಗಳಿಂದ ದಸರಾ ಯಶಸ್ವಿಯಾಗಿ ನಡೆದಿಲ್ಲ. ಈ ಬಾರಿಯಾದರೂ ಅಚ್ಚುಕಟ್ಟಾಗಿ ದಸರಾ ಮಾಡಲಿ. ಪ್ರತಿ ದಸರಾದಲ್ಲೂ ಒಂದಿಲ್ಲೊಂದು ವಿವಾದ ಸೃಷ್ಟಿ ಮಾಡುತ್ತಿದೆ. ವಿವಾದ ಹೋರಾಟದ ನಡುವೆ ದಸರಾ ನಡೆಯುವಂತೆ ಆಗಿದೆ. ಈ ಬಾರಿಯೂ ಅದು ಮುಂದುವರೆಯುತ್ತಿದೆ ಎಂದು ಅವರು ಕಿಡಿಕಾರಿದರು.
ದಸರಾ ಪಾಸ್ ವ್ಯವಸ್ಥೆ ರದ್ದುಗೊಳಿಸಿ
ದಸರಾದ ಪಾಸ್ ವ್ಯವಸ್ಥೆ ರದ್ದು ಮಾಡಿ. ಗ್ಲೋಬಲ್ ಟೆಂಡರ್ ಮೂಲಕ ದಸರಾ ಪಾಸ್ ಹಂಚಿ. ಸಿಎಂಗೆ ನಾನು ಈ ಸಲಹೆ ಕೊಟ್ಟಿದ್ದೇನೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ದಸರಾ ವೇಳೆ ಪಾಸ್ ಗಳದ್ದೇ ದೊಡ್ಡ ಗದ್ದಲ ನಡೆಯುತ್ತಿದೆ. ಮಾಡುವ ಕೆಲಸ ಬಿಟ್ಟು ಪಾಸ್ ಬಗ್ಗೆ ಜಟ್ಟಾಪಟ್ಟಿ ಇರುತ್ತದೆ. ಈ ಗೊಂದಲ ತಪ್ಪಬೇಕು. ಪಾಸ್ ವ್ಯವಸ್ಥೆಯನ್ನ ಸಂಪೂರ್ಣವಾಗಿ ರದ್ದು ಮಾಡಿ ಎಂದು ಹೇಳಿದ್ದೇನೆ. ಸರಳ ದಸರಾ ಎಂಬ ಹೆಸರು ಹಾಕಿದರೆ ಅದು ಮೈಸೂರಿನ ಪ್ರವಾಸೋದ್ಯಮಕ್ಕೆ ಧಕ್ಕೆ ಬರುತ್ತದೆ. ಹೀಗಾಗಿ, ಸರಳ ದಸರಾ ಎಂದು ಬೇಡ ಎಂದು ಹೇಳಿದ್ದೇನೆ ಎಂದರು.
ದಸರಾ ಕಮರ್ಷಿಯಲ್ ಆಗೋದು ಬೇಡ : ಟಿ.ಎಸ್. ಶ್ರೀವತ್ಸ
ಮೈಸೂರು: ದಸರಾ ಕಮರ್ಷಿಯಲ್ ಆಗೋದು ಬೇಡ. ದಸರಾ ಆಚರಣೆ ಸಾಂಸ್ಕೃತಿಕ ಹಬ್ಬವಾಗಿ ನಡೆಯಲಿ ಎಂದು ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾದಲ್ಲಿ ಕಂಬಳ ಬೇಡ ಎಂಬ ಸಂಸದ ಯದುವೀರ್ ಒಡೆಯರ್ ಅವರ ಹೇಳಿಕೆಗೆ ನನ್ನ ಸಹಮತವಿದೆ. ಕಂಬಳ ಬೇಡ ಎಂದು ಸಭೆಯಲ್ಲಿ ಹೇಳಿದ್ದೇವೆ. ಯತೀಂದ್ರ ಅವರು ಕೂಡ ವಿರೋಧ ವ್ಯಕ್ತವಾಗುವುದರ ಬಗ್ಗೆ ತಿಳಿಸಿದ್ದಾರೆ ಎಂದರು.
ದಸರಾ ಪಾಸ್ ಎಲ್ಲವನ್ನು ಟೆಂಡರ್ ಮೂಲಕವೇ ನೀಡಲಿ. ಪಾಸ್ ತೆಗೆದುಕೊಂಡರೆ ಗೊಂದಲ ಸೃಷ್ಟಿಯಾಗುತ್ತದೆ. ಗೋಲ್ಡ್ ಕಾರ್ಡ್ ವಿಚಾರದಲ್ಲೂ ಹೀಗೇ ಆಗಿದೆ. ಗೋಲ್ಡ್ ಕಾರ್ಡ್ ಪಡೆದವರು ಒಳಗೆ ಹೋದಾಗ, ಬೇರೆಯವರು ಕುಳಿತಿರುವ ಘಟನೆ ಕೂಡ ಆಗಿದೆ. ಹೀಗಾಗಿ, ಎಲ್ಲವನ್ನು ಟೆಂಡರ್ ಮೂಲಕವೇ ನೀಡಲಿ ಎಂದು ಅವರು ಆಗ್ರಹಿಸಿದರು.
ಯುವ ದಸರಾ ಬೇಕಾ? ಬೇಡವಾ? ಎಂಬ ವಿಚಾರ ಕೂಡ ಚರ್ಚೆ ಆಗಿತ್ತು. ಯತೀಂದ್ರ ಅವರು ಯುವಕರಿಗೋಸ್ಕರ ಯುವ ದಸರಾ ಇರಲಿ ಎಂದರು. ಈಗಿರುವ ಕಾರ್ಯಕ್ರಮವನ್ನು ಮುಂದುವರೆಸೋಣ. ಹೊಸ ಕಾರ್ಯಕ್ರಮ ಸಾಧ್ಯವಾದರೆ ಸೇರಿಸೋಣ ಎಂಬ ತೀರ್ಮಾನಕ್ಕೂ ಬರಲಾಗಿದೆ ಎಂದರು.
ದಸರಾ ಉದ್ಘಾಟಕರ ಆಯ್ಕೆ ವಿಚಾರವು ಸಿಎಂ ನೇತೃತ್ವದ ದಸರಾ ಸಭೆಯಲ್ಲಿ ಎಲ್ಲವೂ ಚರ್ಚೆ ಆಗಿದೆ. 25 ವರ್ಷದಿಂದ ಸುತ್ತೂರು ಸಂಸ್ಥಾನಕ್ಕೆ ದಸರಾ ಉದ್ಘಾಟನೆಗೆ ಅವಕಾಶ ಸಿಕ್ಕಿಲ್ಲ. ಈ ಬಾರಿಯಾದರೂ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದೇನೆ. ಉದ್ಘಾಟಕರ ಆಯ್ಕೆ ವಿಚಾರವನ್ನು ಮುಖ್ಯಮಂತ್ರಿಗೆ ಬಿಟ್ಟಿದ್ದೇವೆ ಎಂದರು.


