ಕೆ.ಆರ್.ನಗರದ ಟೆಲಿಕಾಂ ಬಡಾವಣೆಯಲ್ಲಿ ಮನೆಯೊಂದರ ಆರ್‌ಸಿಸಿ ಮೇಲ್ಛಾವಣಿಯ ಕೇವಲ ಮೂರು ಅಡಿ ಎತ್ತರದಲ್ಲಿ ಅಪಾಯಕಾರಿ ವಿದ್ಯುತ್ ತಂತಿ ಹಾದುಹೋಗಿದೆ. ಇಷ್ಟೊಂದು ಅಪಾಯವಿದ್ದರೂ ಸೆಸ್ಕಾಂ ಮತ್ತು ಪುರಸಭೆ ಅಧಿಕಾರಿಗಳು ಈ ಬಗ್ಗೆ ತಮಗೇನೂ ತಿಳಿದಿಲ್ಲವೆಂದು ಜಾರಿಕೊಳ್ಳುತ್ತಿದ್ದಾರೆ.
ರಾಜೇಂದ್ರ ರಾವ್
ಕೆ.ಆರ್.ನಗರ (ಸೆ.30): ಪಟ್ಟಣದಲ್ಲಿ ಮನೆ ನಿರ್ಮಾಣ ಮಾಡಲು, ಮನೆಗೆ ವಿದ್ಯುತ್‌ಸಂಪರ್ಕ ಪಡೆಯಲು ಯಾವುದೆ ಅಧಿಕಾರಿ ಅನುಮತಿ ಬೇಕಿಲ್ಲ, ಇದ್ದರೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾತ್ರ ಇದ್ಯಾವುದು ತಿಳಿಯದೆ ಎಲ್ಲವೂ ಆಗಿರುತ್ತದೆ ಎಂಬುದಕ್ಕೆ ಪಟ್ಟಣದ ಟೆಲಿಕಾಂ ಬಡಾವಣೆಯಲ್ಲಿ ಮನೆಯ ಮೇಲೆ ವಿದ್ಯುತ್ ತಂತಿ ಹಾದು ಹೋಗಿ ಸಂಪರ್ಕ ಪಡೆದಿರುವುದೆ ಸಾಕ್ಷಿಯಾಗಿದೆ.
ಟೆಲಿಕಾಂ ಬಡಾವಣೆಯ ಅವ್ಯವಸ್ಥೆ
ಪಟ್ಟಣದ ನೂತನ ಬಡಾವಣೆಯಾದ ಟೆಲಿಕಾಂ ಬಡಾವಣೆಯಲ್ಲಿ ವಿದ್ಯುತ್‌ತಂತಿ ಸಮನೆಯ ಆರ್‌ಸಿಸಿ ಮಧ್ಯಭಾಗದಲ್ಲಿ ಹಾದುಹೋಗಿದ್ದು ಇಲ್ಲಿ ಸಾವು ನೋವು ಸಂಭವಿಸಿದರೆ ಯಾರು ಹೊಣೆ ಎಂಬುದು ತಿಳಿಯದಾಗಿದೆ. ಈ ಬಗ್ಗೆ ಸಂಬಂಧಪಟ್ಟ ಸೆಸ್ಕಾಂ ಮತ್ತು ಪುರಸಭೆ ಅಧಿಕಾರಿಗಳಿಗೆ ಪ್ರಶ್ನಿಸಿದರೆ ಯಾರಿಂದಲೂ ಸಮಪರ್ಕವಾದ ಉತ್ತರವಿಲ್ಲ.
ಅದೃಷ್ಟವಶಾತ್ ಕೇವಲ ಮೂರು ಅಡಿ ಎತ್ತರದಲ್ಲಿ ಆರ್‌ಸಿಸಿ ಮೇಲೆ ವಿದ್ಯುತ್‌ತಂತಿ ಹಾದುಹೋಗಿದ್ದು ಈ ಮಟ್ಟದಲ್ಲಿ ಮನೆ ನಿರ್ಮಾಣ ಮಾಡಿ ಅದೇ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರೂ ಸಹ ಸೆಸ್ಕಾಂ ಅಧಿಕಾರಿಗಳ ಗಮನಕ್ಕೆ ಹೋಗಿಲ್ಲ ಎಂದರೆ ಇದೆಂತಹ ವಿಪರ್ಯಾಸ ಎಂಬುದು ಸಾರ್ವಜನಿಕರ ಆಶ್ಚರ್ಯಕರ ಪ್ರಶ್ನೆಯಾಗಿದೆ.
ಮನೆ ಮೇಲೆ ಕುಳಿತು ತಲೆಯೆತ್ತಿದರೆ ವಿದ್ಯುತ್ ತಂತಿ ತಾಗುತ್ತೆ!
ಮನೆ ಮೇಲೆ ಕುಳಿತು ತಲೆ ಎತ್ತಿದರೆ ಸಾಕು ವಿದ್ಯುತ್ ತಂತಿ ತಲೆಗೆ ತಾಗಿ ಪ್ರಾಣಹಾನಿಯಾಗುವುದು ಗ್ಯಾರಂಟಿ ಇಷ್ಟಾದರೂ ಸಹ ವಿದ್ಯುತ್ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚಿಕೊಂಡು ಸಂಪರ್ಕ ನೀಡಿದ್ಧಾದರೂ ಹೇಗೆ, ಇತ್ತಿಚೆಗೆ ಸಾಕಷ್ಟು ವಿದ್ಯುತ್ ಅವಘಡಗಳು ನಡೆದು ಪ್ರಾಣಹಾನಿಯಾಗುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮನೆ ನಿರ್ಮಾಣ ಮಾಡಲು ಅನುಮತಿ ನೀಡಿದ್ದಾದರೂ ಹೇಗೆ ಎಂಬುದು ಸ್ಥಳಿಯ ಜನತೆಯ ಪ್ರಶ್ನೆಯಾಗಿದೆ. ಇಂತಹ ಹತ್ತಾರು ಪ್ರಕರಣಗಳು ಪಟ್ಟಣದ ಹಲವಾರು ಬಡಾವಣೆಗಳಲ್ಲಿ ಇದ್ದರೂ ಎಲ್ಲಿ ಸಾರ್ವಜನಿಕರಿಂದ ಆಕ್ಷೇಪ ಬರುತ್ತದೋ ಅಲ್ಲಿಮಾತ್ರ ಸರಿಪಡಿಸಿ ಬೇರೆಡೆ ಹಾಗೆಬಿಡುವುದು ಮಾಮೂಲಾಗಿದ್ದು ಇದರಿಂದ ಮುಂದಿನ ದಿನಗಳಲ್ಲಿ ಪ್ರಾಣಹಾನಿಯಾದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಖಾರಿಗಳೇ ಜವಾಬ್ದಾರರಾಗುತ್ತಾರೆ ಎಂದು ಪಟ್ಟಣದ ಪ್ರಜ್ಞಾವಂತ ನಾಗರೀಕರು ಎಚ್ಚರಿಸಿದ್ಧಾರೆ.
ನಾವು ಮನೆ ನಿರ್ಮಾಣ ಮಾಡಲು ಇಲ್ಲವೆ ವಿದ್ಯುತ್ ಸಂಪರ್ಕ ಪಡೆಯಲು ಯಾವುದೆ ಅನುಮತಿ ನೀಡಿಲ್ಲ. ಅಕ್ರಮ ನಿರ್ಮಾಣವಾಗಿದ್ದು ಅದಕ್ಕೂ ನಮಗೂ ಯಾವುದೆ ಸಂಬಂಧವಿಲ್ಲ.
- ರಮೇಶ್ ಪುರಸಭೆ ಮುಖ್ಯಾಧಿಕಾರಿ.
ಯಾವ ಬಡಾವಣೆ ಯಾವ ಮನೆಯ ಮೇಲೆ ವಿದ್ಯುತ್ ತಂತಿ ಹಾದು ಹೋಗಿದೆ ಎಂದು ನನಗೆ ಗೊತ್ತಿಲ್ಲ. ಸ್ಥಳ ಪರಿಶೀಲನೆ ನಡೆಸಿ ನಂತರ ಕ್ರಮ ಕೈಗೊಳ್ಳುತ್ಥೇನೆ.
- ಪ್ರಸನ್ನ ಜೆಇ ಸೆಸ್ಕ್
ನಾವು ಎಲ್ಲೂ ಸಹ ಪಟ್ಟಣದಲ್ಲಿ ಆ ರೀತಿ ಮನೆಯ ಮೇಲೆ ವಿದ್ಯುತ್ ತಂತಿ ಬಿಟ್ಟಿಲ್ಲ. ನೀವು ಹೇಳುತ್ತಿರುವುದು ಸರಿಯಿಲ್ಲ. ನಮ್ಮ ಇಲಾಖೆ ಅಧಿಕಾರಿಗಳನ್ನು ಕೇಳಿ ವಿಚಾರ ತಿಳಿದು ಕ್ರಮ ಕೈಗೊಳ್ಳುತ್ತೇನೆ.
- ಅರ್ಕೇಶ್ವರಮೂರ್ತಿ ಎಇಇ ಸೆಸ್ಕ್.
ನಾವು ಗ್ರಾಪಂ ವ್ಯಾಪ್ತಿಯಿಂದ ಆ ರೀತಿ ಮನೆ ನಿರ್ಮಾಣ ಮಾಡಲು ಅನುಮತಿ ನೀಡಿಲ್ಲ. ನಮಗೆ ಆಬಗ್ಗೆ ತಿಳಿಯದು ಏನಿದ್ದರೂ ಪುರಸಭೆಯವರನ್ನು ಕೇಳಿಕೊಳ್ಳಿ.
-ಹೆಸರು ಹೇಳಲಿಚ್ಚಿಸದ ಅಧಿಕಾರಿ ದೊಡ್ಡೇಕೊಪ್ಪಲು ಗ್ರಾಪಂ


