ಕೊಪ್ಪಳದ ಆಟೋ ಚಾಲಕ ಯಲ್ಲಪ್ಪ ಅವರ ಇಬ್ಬರು ಮಕ್ಕಳು ಎಂಬಿಬಿಎಸ್‌ಗೆ ಆಯ್ಕೆಯಾಗಿ ಅಪರೂಪದ ಸಾಧನೆ ಮಾಡಿದ್ದಾರೆ. ಮಕ್ಕಳ ಸಾಧನೆಯಿಂದ ಪೋಷಕರಿಗೆ ಅತೀವ ಸಂತೋಷವಾಗಿದ್ದರೂ, ವೈದ್ಯಕೀಯ ಶಿಕ್ಷಣದ ದುಬಾರಿ ವೆಚ್ಚ ಭರಿಸಲಾಗದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಬಡ ಕುಟುಂಬ ದಾನಿಗಳ ನೆರವಿನ ನಿರೀಕ್ಷೆಯಲ್ಲಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ (ಸೆ.30): ಸಾಧನೆಗೆ ಯಾವುದೇ ಪಾರವಿಲ್ಲ ಎಂಬ ಮಾತಿಗೆ ಅರ್ಥವಾಗಿ ಕೊಪ್ಪಳದ ಆಟೋ ರಿಕ್ಷಾ ಚಾಲಕನ ಮಕ್ಕಳಿಬ್ಬರೂ ಸಹ ಎಂಬಿಬಿಎಸ್‌ ಶಿಕ್ಷಣಕ್ಕೆ ಆಯ್ಕೆಯಾಗಿದ್ದು, ಅವರ ಪೋಷಕರ ಸಂತಸಕ್ಕೆ ಮಿತಿಯಿಲ್ಲದಂತಾಗಿದೆ. ಆದರೆ ಇಬ್ಬರು ಮಕ್ಕಳ ಕೋರ್ಸ್‌ ಕನಸು ತಂದೆಗೆ ಭಾರವಾಗ ತೊಡಗಿರುವುದು ಕುಟುಂಬದ ಆತಂಕಕ್ಕೆ ಕಾರಣವಾಗಿದೆ.

ಇದು ಕೊಪ್ಪಳದ ಭಾಗ್ಯನಗರ ನಿವಾಸಿ, ಆಟೋ ಚಾಲಕ ಯಲ್ಲಪ್ಪ ಪಡಸಾಲಿ ಅವರ ಕುಟುಂಬದ ಸಾಧನೆ ಹಾಗೂ ಸಂಕಷ್ಟದ ಕಥೆ.

ಯಲ್ಲಪ್ಪ ಅವರ ಪುತ್ರಿ ಜ್ಯೋತಿ ಪಡಸಾಲಿ 2024ರಲ್ಲಿ ಎಂಬಿಬಿಎಸ್‌ಗೆ ಪ್ರವೇಶ ಪಡೆದು ಉಜಿರೆಯ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮಗಳ ವಿದ್ಯಾಭ್ಯಾಸಕ್ಕಾಗಿ ಈಗಾಗಲೇ ಸಾಲ ಮಾಡಿ ಶುಲ್ಕ ಪಾವತಿಸುತ್ತಿರುವ ತಂದೆಗೆ, ಇದೀಗ ಮತ್ತೊಂದು ದೊಡ್ಡ ಜವಾಬ್ದಾರಿ ಎದುರಾಗಿದೆ. 2026ರ ನೀಟ್ ಪರೀಕ್ಷೆಯಲ್ಲಿ ಪುತ್ರ ಮಂಜುನಾಥ್ 561ನೇ ರ‍್ಯಾಂಕ್ ಪಡೆದು ಮೈಸೂರಿನ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್‌ಗೆ ಆಯ್ಕೆಯಾಗಿದ್ದಾನೆ.

ಮಕ್ಕಳಿಬ್ಬರ ವೈದ್ಯರಾಗುವ ಕನಸು ನನಸಾಗಿಸಲು ತಂದೆಯೊಬ್ಬರು ಎದುರಿಸುತ್ತಿರುವ ಈ ಆರ್ಥಿಕ ಸಂಕಷ್ಟಕ್ಕೆ ನೆರವಿನ ಹಸ್ತ ಚಾಚುವವರು 7483804247 ಸಂಖ್ಯೆಗೆ ಸಂಪರ್ಕಿಸಬಹುದು.

ಹೀಗಾಗಿ, ಒಂದೇ ಕುಟುಂಬದಲ್ಲಿ ಇಬ್ಬರು ಮಕ್ಕಳು ವೈದ್ಯಕೀಯ ಶಿಕ್ಷಣ ಪಡೆಯುವ ಅಪರೂಪದ ಸಾಧನೆ ಮಾಡಿದ್ದಾರೆ.

ಸರ್ಕಾರಿ ಶಾಲೆ... ರಿಯಾಯ್ತಿ ಶಿಕ್ಷಣ:

ಮಂಜುನಾಥ ಸರ್ಕಾರಿ ಆದರ್ಶ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದಾನೆ. ಬಳಿಕ ಗ್ರಾಮದ ನವಚೇತನ ಪಿಯು ಕಾಲೇಜಿನಲ್ಲಿ ರಿಯಾಯ್ತಿಯೊಂದಿಗೆ ಪಿಯುಸಿ ವ್ಯಾಸಂಗ ಮಾಡಿದ್ದಾನೆ. ಪಿಯುಸಿಯಲ್ಲಿ ಶೇ.95 ಅಂಕ ಗಳಿಸಿದ್ದ ಆತ, ನೀಟ್‌ನಲ್ಲೂ ಉತ್ತಮ ಸಾಧನೆ ಮಾಡಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾನೆ.

ಮಕ್ಕಳಿಬ್ಬರ ಸಾಧನೆಯಿಂದ ತಂದೆ-ತಾಯಿಗಳ ಸಂತೋಷಕ್ಕೆ ಪಾರವೇ ಇಲ್ಲ. ಬಡತನದ ನಡುವೆಯೂ ಮಕ್ಕಳು ಜಾಣತನದಿಂದ ಓದಿ ವೈದ್ಯಕೀಯ ಸೀಟು ಪಡೆದಿರುವುದು ಹೆಮ್ಮೆಯ ಸಂಗತಿ ಎನ್ನುತ್ತಾರೆ ಯಲ್ಲಪ್ಪ. ಆದರೆ, ಈ ಸಂತೋಷದ ಹಿಂದೆ ಆರ್ಥಿಕ ಸಂಕಷ್ಟವೂ ಇದೆ.

ಕಷ್ಟವಾದರೂ ಓದಿಸಿಯೇ ಓದಿಸುತ್ತೇನೆ

ಮಗಳ ಮೆಡಿಕಲ್ ಕಾಲೇಜಿನ ವಿದ್ಯಾಭ್ಯಾಸದ ಆರ್ಥಿಕ ಹೊರೆಯನ್ನು ಹೇಗೋ ನಿಭಾಯಿಸುತ್ತಿದ್ದೇವೆ. ಅದಕ್ಕಾಗಿ ಮಾಡಿರುವ ಸಾಲದ ಬಡ್ಡಿಯೂ ಹೊರೆಯಾಗಿದೆ. ಈ ನಡುವೆ ಮಗ ಮಂಜುನಾಥ್ ಕೂಡ ಎಂಬಿಬಿಎಸ್‌ಗೆ ಆಯ್ಕೆಯಾಗಿದ್ದಾನೆ. ಮಕ್ಕಳ ಸಾಧನೆಯ ಸಂದರ್ಭದಲ್ಲಿ ನಮ್ಮ ಕಷ್ಟವನ್ನು ಅವರಿಗೆ ಹೇಳಬಾರದು ಎಂದು ನಿರ್ಧರಿಸಿ, ಮೈಸೂರಿನ ಮೆಡಿಕಲ್ ಕಾಲೇಜಿಗೆ ಪ್ರವೇಶ ಮಾಡಿಸಿದ್ದೇನೆ. ಎಷ್ಟೇ ಹೊರೆಯಾದರೂ ಮಕ್ಕಳನ್ನು ಓದಿಸಿಯೇ ಓದಿಸುತ್ತೇನೆ ಎಂದು ಯಲ್ಲಪ್ಪ ಹೆಮ್ಮೆಯಿಂದ ಹೇಳುತ್ತಾರೆ.

ಮಕ್ಕಳಿಬ್ಬರ ವೈದ್ಯರಾಗುವ ಕನಸು ನನಸಾಗಿಸಲು ತಂದೆಯೊಬ್ಬರು ಎದುರಿಸುತ್ತಿರುವ ಈ ಆರ್ಥಿಕ ಸಂಕಷ್ಟಕ್ಕೆ ನೆರವಿನ ಹಸ್ತ ಚಾಚುವವರು 7483804247 ಸಂಖ್ಯೆಗೆ ಸಂಪರ್ಕಿಸಬಹುದು.

ಮಕ್ಕಳಿಬ್ಬರಿಗೂ ಮೆಡಿಕಲ್ ಸೀಟು ಸಿಕ್ಕಿರುವುದು ಸಂತೋಷದ ಸಂಗತಿ. ಆದರೆ, ಆರ್ಥಿಕ ಸಂಕಷ್ಟವಿದೆ. ಸಾಲ ಮಾಡಿಯಾದರೂ ಮಕ್ಕಳನ್ನು ಓದಿಸುತ್ತೇನೆ. ಸಹಾಯ ಸಿಕ್ಕರೆ ಪುಣ್ಯವಾಗುತ್ತದೆ.

ಯಲ್ಲಪ್ಪ ಪಡಸಾಲಿ, ಆಟೋ ಚಾಲಕ