ಮೈಸೂರಿನಲ್ಲಿ ನಡೆಯುವ 48 ಗಂಟೆಗಳ ನಿರಂತರ ಕಂಬಳಕ್ಕೆ 150ಕ್ಕೂ ಹೆಚ್ಚು ಜೋಡಿ ಕೋಣಗಳು ಆಗಮಿಸುತ್ತಿದ್ದು, ಭಾರಿ ನಿರೀಕ್ಷೆ ಮೂಡಿಸಿದೆ. ವಿಜೇತ ಕೋಣಗಳಿಗೆ ಚಿನ್ನದ ಬಹುಮಾನವಿದ್ದರೂ, ಸ್ಪರ್ಧಿಗಳು ಕೇವಲ ಗೌರವಕ್ಕಾಗಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ. ಕಂಬಳ ವೀಕ್ಷಣೆಗೆ ಉಚಿತ ಪ್ರವೇಶವಿದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಮೈಸೂರು: ಕಂಬಳದಲ್ಲಿ ಯಾರು ಕೂಡ ಬಹುಮಾನಕ್ಕೋಸ್ಕರ ಭಾಗವಹಿಸುವುದಿಲ್ಲ, ಕಂಬಳದಲ್ಲಿ ಪಾಲ್ಗೊಳ್ಳುವುದೇ ಗೌರವದ ಪ್ರತೀಕವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ಗೆದ್ದ ಕೋಣಗಳಳಿಗೆ ಚಿನ್ನ ಬಹುಮಾನ!

ಮೈಸೂರಿನಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ಕಂಬಳಕ್ಕೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. 150 ಜೋಡಿ ಕೋಣಗಳಿಗೆ ಅವಕಾಶ ಕಲ್ಪಿಸುತ್ತಿದ್ದೇವೆ. ಇನ್ನು ನೂರಕ್ಕೂ ಹೆಚ್ಚು ಜೋಡಿ ಕೋಣಗಳು ಭಾಗವಹಿಸಲು ಸಿದ್ದವಾಗಿವೆ. ಹಾಗಾಗಿ ಹೆಚ್ಚುವರಿಯಾಗಿ ಹತ್ತು ಜೋಡಿಕೋಣಗಳಿಗೆ ಅವಕಾಶ ನೀಡಲು ಚಿಂತಿಸುತ್ತಿದ್ದೇವೆ‌‌. ಕಂಬಳದಲ್ಲಿ ಭಾಗವಹಿಸುವ ಕೋಣಗಳಿಗೆ ಮೊದಲ ಬಹುಮಾನವಾಗಿ 16 ಗ್ರಾಂ ಚಿನ್ನ ನೀಡುತ್ತೇವೆ. ದ್ವಿತೀಯ ಬಹುಮಾನವಾಗಿ 8 ಗ್ರಾಂ ಚಿನ್ನ ನೀಡುತ್ತೇವೆ. ಉಳಿದವರಿಗೆ ಸರ್ಟಿಫಿಕೇಟ್ ಕೊಡುತ್ತೇವೆ. ಆದರೆ ಯಾರು ಕೂಡ ಬಹುಮಾ‌ನಕ್ಕಾಗಿ ಕಂಬಳದಲ್ಲಿ ಭಾಗವಹಿಸುವುದಿಲ್ಲ. ಕಂಬಳದಲ್ಲಿ ಭಾಗವಹಿಸುವುದು ಗೌರವದ ಪ್ರತೀಕವಾಗಿದೆ. ಹಾಗಾಗಿ ನಿರೀಕ್ಷೆಗೂ ಮೀರಿ ಕಂಬಳದಲ್ಲಿ ಪಾಲ್ಗೊಳ್ಳಲು ಬರುತ್ತಿದ್ದಾರೆ.

ಮೈಸೂರಿನಲ್ಲಿ ಎರಡು ದಿನಗಳ ಕಾಲ ನಡೆಯುವ ಕಂಬಳಕ್ಕೆ ಸಕಲ ಸಿದ್ದತೆ ಮಾಡಿದ್ದೇವೆ. ಹಗಲು ಇರುಳು ಸೇರಿ ಒಟ್ಟು 48 ಗಂಟೆಗಳ ಕಾಲ ನಿರಂತರವಾಗಿ ಕಂಬಳ ನಡೆಯುತ್ತದೆ. ಇದಕ್ಕಾಗಿ ಎರಡು ಟ್ಯ್ರಾಕ್ ಗಳನ್ನು ನಿರ್ಮಿಸಿದ್ದೇವೆ. ಟ್ಯ್ರಾಕ್ ನ ಇಕ್ಕೆಲಗಳಲ್ಲಿ ಗ್ಯಾಲರಿಗಳನ್ನು ನಿರ್ಮಿಸಿದ್ದೇವೆ‌. ಕೋಣಗಳ ವಾಸ್ತವ್ಯಕ್ಕೆ ಸೂಕ್ತ ವ್ಯವಸ್ಥೆ ಮಾಡಿದ್ದೇವೆ‌. ಕಂಬಳ‌ ವೀಕ್ಷಣೆಗೆ ಉಚಿತ ಪ್ರವೇಶವಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಂಬಳ ವೀಕ್ಷಣೆ ಮಾಡಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.