ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್‌ಗೆ ನಿಂದಿಸಿದ ಆರೋಪದ ಮೇಲೆ ನಟ ಧನ್ವೀರ್ ವಿರುದ್ಧ ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ. ದರ್ಶನ್ ಅವರಿಗೆ ಅನ್ಯಾಯವಾಗುತ್ತಿದ್ದು, ಶೀಘ್ರದಲ್ಲೇ ಎಲ್ಲರ ಮುಖವಾಡ ಕಳಚುವುದಾಗಿ ಧನ್ವೀರ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು (ಅ.23): ಸ್ಯಾಂಡಲ್‌ವುಡ್‌ ನಟ ಹಾಗೂ ನಟ ದರ್ಶನ್‌ ಅವರ ಆಪ್ತಮಿತ್ರ ಧನ್ವೀರ್‌ ಅವರ ಮೇಲೆ ಕೇಸ್‌ ದಾಖಲಾಗಿದೆ. ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಅವರ ವಿರುದ್ಧ ಎನ್‌ಸಿಆರ್‌ ದಾಖಲು ಮಾಡಲಾಗಿದೆ. ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮೀ ಅವರ ಮ್ಯಾನೇಜರ್‌ ನಾಗರಾಜ್‌ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪದ ಮೇಲೆ ಧನ್ವೀರ್‌ ಅವರ ಮೇಲೆ ಎನ್‌ಸಿಆರ್‌ ದಾಖಲು ಮಾಡಿದ್ದಾರೆ. ಸ್ವತಃ ನಾಗರಾಜ್‌ ಅವರೇ ಪೊಲೀಸ್‌ ಠಾಣೆಗೆ ಹೋಗಿ ಧನ್ವೀರ್‌ ಅವರ ವಿರುದ್ಧ ದೂರು ನೀಡಿದ್ದು, ಆಡಿಯೋ ಪ್ರೂಫ್‌ ಅನ್ನು ದಾಖಲೆಯಾಗಿ ನೀಡಿದ್ದಾರೆ.

ಈ ಬಗ್ಗೆ ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವ ಧನ್ವೀರ್‌ ಗೌಡ, ನಾನು ಅವರಿಗೆ ನಿಂದನೆ ಮಾಡಿದ್ದೀನಿ ಎಂದಾದ ಮೇಲೆ ಅದಕ್ಕೆ ಒಂದು ಕಾರಣ ಬೇಕಲ್ವ. ಅಂಥದ್ದೊಂದು ಕಾರಣ ನನ್ನಲ್ಲಿತ್ತು. ಅದಕ್ಕಾಗಿಯೇ ಅವರಿಗೆ ಬೈದಿದ್ದೀನಿ. ಹೌದು, ದರ್ಶ್‌ ವಿಚಾರವಾಗಿಯೇ ನಾನು ವಿಜಯಲಕ್ಷ್ಮೀ ಅವರ ಮ್ಯಾನೇಜರ್‌ಗೆ ಬೈದಿದ್ದೇನೆ ಎಂದು ಧನ್ವೀರ್‌ ಹೇಳಿದ್ದಾರೆ.

ನಾನು ಬೈದಿರೋದರ ಹಿಂದಿನ ಕಾರಣ ಗೊತ್ತಾದರೆ, ಎಲ್ಲರ ಬಂಡವಾಳಗಳು ಆಚೆ ಬರುತ್ತದೆ. ಒಂದು ಬಲವಾದ ರೀಸನ್‌ ಇಲ್ಲದೆ ಏನೂ ಆಗೋದಿಲ್ಲ. ರೀಸನ್‌ ಏನು ಅಂತಾ ಗೊತ್ತಾದರೆ, ಎಲ್ಲರ ಮುಖವಾಡಗಳೂ ಸಾರ್ವಜನಿಕರ ಮುಂದೆ ಬರುತ್ತೆ ಎಂದು ಹೇಳಿದ್ದಾರೆ.

ಇನ್ನು ವಿಜಯಲಕ್ಷ್ಮೀ ಅವರ ಜೊತೆಗಿನ ಸಂಬಂಧ ಹದಗೆಟ್ಟಿದೆ ಅನ್ನೋ ಬಗ್ಗೆ ಮಾತನಾಡಿದ ಧನ್ವೀರ್‌, ಇದೂ ಕೂಡ ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ. ಯಾವುದು, ಏನು ಅನ್ನೋ ಸತ್ಯಾಂಶ ಎಲ್ಲಾ ಹೊರಗಡೆ ಬರೋ ಟೈಮ್‌ ಬಂದಿದೆ. ನಾನು ಇನ್ನು ಯಾವುದೇ ಕಾರಣಕ್ಕೂ ನಿಲ್ಲೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ದರ್ಶನ್‌ ಅವರ ಜೊತೆಗೆ ಈಗ ಅಂತರ ಕಾಯ್ದುಕೊಂಡಿದ್ದರ ಬಗ್ಗೆ ಮಾತನಾಡಿದ ಅವರು, 'ಇಲ್ಲ ನಾನು ಅಂತರ ಕಾಯ್ದುಕೊಂಡಿಲ್ಲ. ನಾವು ಅಂತರ ಕಾಯ್ದುಕೊಳ್ಳಬೇಕು ಅನ್ನೋ ರೀತಿ ಮಾಡಿದ್ದಾರೆ. ಯಾಕೆಂದರೆ ನಾವು ದರ್ಶನ್‌ ಪರವಾಗಿ ನಿಂತಿದ್ದೇವೆ. ನಾನು ಹಾಗೆ ನಿಂತಿ ಬಿಟ್ಟರೆ, ಅವರ ಕೆಲಸಗಳೆಲ್ಲಾ ಆಗೋದಿಲ್ಲ. ಇದೇ ಕಾರಣಕ್ಕೆ ದೂರ ಮಾಡುತ್ತಿದ್ದಾರೆ. ಅವರ ಮುಖವಾಡ ಕಳಚಿ ಬೀಳೋ ಟೈಮ್‌ ಬಂದಿದೆ ಎಂದು ಪರೋಕ್ಷವಾಗಿ ವಿಜಯಲಕ್ಷ್ಮಿ ಅವರನ್ನು ಧನ್ವೀರ್‌ ಟೀಕಿಸಿದ್ದಾರೆ.

ದರ್ಶನ್‌ಗೆ ಅನ್ಯಾಯ ಮಾಡುತ್ತಿದ್ದಾರೆ

ವಿಜಯಲಕ್ಷ್ಮೀ ಹಾಗೂ ಧನ್ವೀರ್‌ ಅವರನ್ನು ಒಂದು ಮಾಡೋದಕ್ಕೆ ಜೈಲಿನಲ್ಲೇ ದರ್ಶನ್‌ ಪ್ರಯತ್ನ ಪಟ್ಟರು ಅನ್ನೋ ವಿಚಾರಕ್ಕೆ, ಹಾಗೇನಿಲ್ಲ ಸರ್‌. ನಾನು ದರ್ಶನ್‌ ಅವರನ್ನು ಮಾತನಾಡಿಸಿಕೊಂಡು ಬಂದೆ. ಯಾರನ್ನೂ ಸಮಾಧಾನ ಮಾಡೋದು ಅದೆಲ್ಲ ಏನೂ ಇಲ್ಲ. ಈ ಬಾರಿ ಅವರ ಎಲ್ಲಾ ಆಟಗಳನ್ನು ಕಳಚಿಡೋದು ಶತಃಸಿದ್ದ. ನ್ಯಾಯ-ನೀತಿ ಅನ್ನೋದನ್ನು ಪಾಲಿಸಿಕೊಂಡು ಬಂದಿರುವ ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ಯಾರಿಗೂ ಹೆದರೋದು ಇಲ್ಲ. ಯಾರ ಹೆಸರನ್ನೂ ಹೇಳೋದು ನನಗೆ ದೊಡ್ಡದಲ್ಲ. ಹೆದರಿಕೆಯಿಂದ ನಾನು ಬದುಕೇ ಇಲ್ಲ. ಮುಂದೆ ಒಂದು ಪ್ರೆಸ್‌ ಮೀಟ್‌ ಮಾಡಿ ಎಲ್ಲಾ ವಿಚಾರವನ್ನು ಹೇಳುತ್ತೇನೆ ಎಂದು ಆಶ್ವಾಸನೆ ನೀಡಿದ್ದಾರೆ.

ಹೌದು ದರ್ಶನ್‌ ವಿಚಾರವಾಗಿಯೇ ನಾನು ಬೈದಿದ್ದೇನೆ. ಆ ಮನುಷ್ಯನಿಗೆ ಯಾರು ಅನ್ಯಾಯ ಮಾಡೋಕೆ ಹೊರಟಿದ್ದಾರಲ್ಲ ಅವರ ವಿರುದ್ಧವೇ ನಾನು ಧ್ವನಿ ಎತ್ತಿರೋದು. ಅದೇ ಕಾರಣಕ್ಕೆ ನಮ್ಮ ಮೇಲೆ ಇಂಥವೆಲ್ಲ ಆಗುತ್ತೆ. ಇರಲಿ ಬಿಡಿ ಇದನ್ನೂ ನಾನು ಫೇಸ್‌ ಮಾಡ್ತೇನೆ ಎಂದು ಧನ್ವೀರ್‌ ಹೇಳಿದ್ದಾರೆ.