Mysuru : ತಲೆಗೆ ಬಡಿಯುವಂತಿರುವ ನಾಮಫಲಕ!

ಮೈಸೂರಿನ ಜನತೆ ಪಾದಚಾರಿ ಮಾರ್ಗದಲ್ಲಿ ನಡೆದಾಡುವ ಬದಲು ರಸ್ತೆಯ ನಡುವೆಯೇ ನಡೆದಾಡುವ ದುರ್ಗತಿ ಬಂದೊದಗಿದೆ. ಇದಕ್ಕೆ ಮೈಸೂರು ನಗರಪಾಲಿಕೆಯ ಬೇಜವಾಬ್ದಾರಿಯೇ ಕಾರಣ.

Mysuru   Imposing nameplate in a dangerous way  snr

  ಮೈಸೂರು :  ಮೈಸೂರಿನ ಜನತೆ ಪಾದಚಾರಿ ಮಾರ್ಗದಲ್ಲಿ ನಡೆದಾಡುವ ಬದಲು ರಸ್ತೆಯ ನಡುವೆಯೇ ನಡೆದಾಡುವ ದುರ್ಗತಿ ಬಂದೊದಗಿದೆ. ಇದಕ್ಕೆ ಮೈಸೂರು ನಗರಪಾಲಿಕೆಯ ಬೇಜವಾಬ್ದಾರಿಯೇ ಕಾರಣ.

ಮೈಸೂರಿನ ಬಹುತೇಕ ಎಲ್ಲ ರಸ್ತೆಗಳ ಪಾದಚಾರಿ ಮಾರ್ಗಗಳನ್ನು ವ್ಯಾಪಾರಸ್ಥರು ಒತ್ತುವರಿ ಮಾಡಿಕೊಂಡಿರುತ್ತಾರೆ. ಹಾಗಾಗಿ ಪಾದಚಾರಿಗಳು ಪಾದಚಾರಿ ಮಾರ್ಗದಲ್ಲಿ ಸಂಚರಿಸಲಾಗದೆ ವಿಧಿಯಿಲ್ಲದೆ ರಸ್ತೆಯಲ್ಲಿಯೇ ಸಂಚರಿಸಬೇಕಾಗಿದೆ.

ಗಾಯದ ಮೇಲೆ ಬರೆ ಎಂಬಂತೆ ಮೈಸೂರು (Mysuru )  ನಗರ ಪಾಲಿಕೆಯು ಈಗ ಮೈಸೂರಿನ ಎಲ್ಲ ರಸ್ತೆಗಳ ಬದಿಯಿರುವ ಪಾದಚಾರಿ ಮಾರ್ಗದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿದೆ. ಈ ಸೂಚನಾ ಫಲಕಗಳನ್ನು ಪಾದಚಾರಿಗಳು ಓಡಾಡುವ ಭಾಗದಲ್ಲಿ ಕೇವಲ ನಾಲ್ಕೂವರೆ ಅಡಿಗಳಷ್ಟು ಎತ್ತರದಲ್ಲಿ ಅಳವಡಿಸಿರುವುದರಿಂದ ಪಾದಚಾರಿಗಳು ತಲೆಯೆತ್ತಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಮೈಸೂರು ನಗರದಾದ್ಯಂತ ಸಂಚರಿಸುವ ಪಾದಚಾರಿಗಳ ತಲೆಗೆ ಬಡಿಯಲು ಕಾದು ಕುಳಿತ ಈ ಸೂಚನಾ ಫಲಕಗಳಿಗೆ ಹೆದರಿ ಪಾದಚಾರಿಗಳು ಪಾದಚಾರಿ ಮಾರ್ಗವನ್ನು ಬಳಸುವುದಕ್ಕೆ ಹಿಂಜರಿಯುತ್ತಿದ್ದಾರೆ.ನಾಗರಿಕರಿಗೆ ದಾರಿದೀಪವಾಗಬೇಕಿದ್ದ ಈ ನಾಮಫಲಕಗಳು ಪಾದಚಾರಿಗಳ ತಲೆಗೆ ಎರವಾಗುತ್ತಿರುವುದು ವಿಪರ್ಯಾಸ!

ಪಾದಚಾರಿ ಮಾರ್ಗಗಳಿಲ್ಲದ ಅಡ್ಡರಸ್ತೆಗಳಲ್ಲಿ ಹತ್ತು ಅಡಿ ಎತ್ತರದಲ್ಲಿ ಫಲಕಗಳನ್ನು ಅಳವಡಿಸಿರುವ ನಗರ ಪಾಲಿಕೆಯು ಪಾದಚಾರಿ ಮಾರ್ಗಗಳಿರುವ ಮುಖ್ಯ ರಸ್ತೆಗಳಲ್ಲಿ ಮಾತ್ರ ಪಾದಚಾರಿ ಮಾರ್ಗದಲ್ಲಿ ನಾಲ್ಕೂವರೆ ಅಡಿಗಳಷ್ಟುತಗ್ಗಿನಲ್ಲಿ ಫಲಕಗಳನ್ನು ಅಳವಡಿಸಿರುವುದರ ಹಿಂದೆ ದುರುದ್ದೇಶ ಅಡಗಿದೆ.ತಲೆಗೆ ಬಡಿಯುವ ಈ ಫಲಕಗಳಿಗೆ ಹೆದರಿ ಪಾದಚಾರಿಗಳು ಪಾದಚಾರಿ ಮಾರ್ಗವನ್ನು ಬಳಸಲು ಹಿಂಜರಿದರೆ ತದನಂತರ ಈ ಪಾದಚಾರಿ ಮಾರ್ಗವನ್ನು ವ್ಯಾಪಾರಸ್ಥರಿಗೆ ಬಿಟ್ಟುಕೊಡುವ ಹುನ್ನಾರ ಪಾಲಿಕೆಗೆ ಇದ್ದಂತಿದೆ.ಅದಕ್ಕಾಗಿಯೇ ಪಾದಚಾರಿಗಳ ತಲೆಗೆ ಬಡಿಯುವಂತೆ ಈ ಫಲಕಗಳನ್ನು ಅಳವಡಿಸಿರಬಹುದು.

ಮೈಸೂರಿನ ಬಹುತೇಕ ಕಡೆಗಳಲ್ಲಿ ಈ ಫಲಕಗಳು ಪಾದಚಾರಿಗಳ ತಲೆಗೆ ಬಡಿದು ರಕ್ತಗಾಯ ಉಂಟಾದ ಪ್ರಕರಣಗಳೂ ಜರುಗಿವೆ. ಹಾಗಾಗಿ ಸಿದ್ದಪ್ಪ ವೃತ್ತ ಮತ್ತು ಆದಿಚುಂಚನಗಿರಿ ರಸ್ತೆಯ ಬಳಿ ನ್ಯಾಯಾಲಯದ ರಸ್ತೆಯ ಬಳಿ ಇರುವ ಫಲಕಗಳಿಗೆ ಕೆಲವು ಸಹೃದಯರು ಬಟ್ಟೆಗಳನ್ನು ಸುತ್ತಿ ಪಾದಚಾರಿಗಳ ತಲೆಗೆ ಹೆಚ್ಚು ಪೆಟ್ಟು ಬೀಳದಂತೆ ಮಾಡಿದ್ದಾರೆ.

ವಿಪರ್ಯಾಸವೆಂದರೆ ಈ ಫಲಕಗಳಲ್ಲಿ ಆಯಾ ಕ್ಷೇತ್ರದ ಶಾಸಕ ಹಾಗೂ ನಗರ ಪಾಲಿಕೆಯ ಸದಸ್ಯರ ಹೆಸರೂ ಮೆರೆಯುತ್ತಿರುತ್ತದೆ.

ಈ ಫಲಕಗಳಿಂದ ತಲೆಗೆ ಬಡಿಸಿಕೊಂಡ ಪಾದಚಾರಿಗಳು ಶಾಸಕ ಹಾಗೂ ಪಾಲಿಕೆಯ ಸದಸ್ಯರನ್ನು ಶಪಿಸಲೆಂದೇ ಆ ಜನಪ್ರತಿನಿಧಿಗಳ ಹೆಸರನ್ನು ನಮೂದಿಸಿರಬಹುದು ಎಂದೇ ಪಾದಚಾರಿಗಳು ಭಾವಿಸಿದ್ದಾರೆ.

ಬಹುಶಃ ಈ ಫಲಕಗಳಿಂದ ತಲೆಗೆ ಬಡಿಸಿಕೊಂಡವರು ಶಾಸಕ ಹಾಗೂ ಪಾಲಿಕೆಯ ಸದಸ್ಯರ ವಿರುದ್ಧ ದೂರು ನೀಡಲು ಅನುಕೂಲವಾಗಲೆಂದು ಆ ಮಹನೀಯರ ಹೆಸರುಳ್ಳ ಈ ಫಲಕಗಳನ್ನು ಅಳವಡಿಸಿರಬಹುದು.

ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವವರು ತಮ್ಮ ತಲೆಯನ್ನು ಕಾಯ್ದುಕೊಳ್ಳಲು ಹೆಲ್ಮೆಟ್‌ ಧರಿಸುವಂತೆ ಪಾದಚಾರಿ ಮಾರ್ಗದಲ್ಲಿ ಸಂಚರಿಸುವ ಪಾದಚಾರಿಗಳೂ ಸಹ ಈ ಫಲಕಗಳಿಂದ ತಮ್ಮ ತಲೆಯನ್ನು ರಕ್ಷಿಸಿಕೊಳ್ಳಲು ಹೆಲ್ಮೆಟ್‌ ಧರಿಸಿ ಓಡಾಡಬೇಕಾದ ಪರಿಸ್ಥಿತಿ ಮೈಸೂರಿನಲ್ಲಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಮೈಸೂರು ನಗರಪಾಲಿಕೆಯ ಬೇಜವಾಬ್ದಾರಿಯೇ ಕಾರಣ.

ಮೈಸೂರಿನ ನಾಗರೀಕರು ತಾವು ಪಾಲಿಕೆಗೆ ಪಾವತಿಸುವ ತೆರಿಗೆ ಹಣದಲ್ಲಿ ನಿರ್ಮಾಣವಾದ ಈ ಫಲಕಗಳಿಂದ ತಾವೇ ಬಡಿಗೆ ಕೊಟ್ಟು ತಲೆಗೆ ಬಡಿಸಿಕೊಳ್ಳುವಂತಾಗಿದೆ.

ಇದರಿಂದಾಗಿ ನಂಬರ್‌ 1 ಸ್ವಚ್ಛ ನಗರಿ ಎಂಬ ಗರಿಯನ್ನು ಮುಡಿಗೇರಿಸಿಕೊಳ್ಳುವ ಗುರಿಯಿರುವ ಮೈಸೂರು ನಗರಪಾಲಿಕೆಯು ಸದ್ಯದಲ್ಲಿಯೇ ನಂಬರ್‌ 1 ಅಪಾಯಕಾರಿ ನಗರಿ ಎಂಬ ಕೆಟ್ಟಹೆಸರು ಪಡೆಯುವುದರಲ್ಲಿ ಸಂಶಯವಿಲ್ಲ.

ಈ ಕೂಡಲೇ ಮೈಸೂರು ನಗರಪಾಲಿಕೆಯ ಆಯುಕ್ತರು ಮೈಸೂರು ನಗರಾದ್ಯಂತ ಇರುವ ಪಾದಚಾರಿ ಮಾರ್ಗದಲ್ಲಿ ಅಳವಡಿಸಲಾದ ಈ ಫಲಕಗಳ ಎತ್ತರವನ್ನು ಹೆಚ್ಚಿಸಲು ಸಾಧ್ಯವಾಗದಿದ್ದರೆ ಈ ಎಲ್ಲ ಫಲಕಗಳನ್ನು ತೆರವುಗೊಳಿಸಿ ಪಾದಚಾರಿಗಳ ತಲೆಯನ್ನು ರಕ್ಷಿಸಲಿ.

Latest Videos
Follow Us:
Download App:
  • android
  • ios