ಮೈಸೂರಿನಲ್ಲಿ ಹೆಚ್ಚುತ್ತಿರುವ ಡ್ರಗ್ ಹಾವಳಿ ನಿಯಂತ್ರಣದಲ್ಲಿ ವಿಫಲವಾದ ಆರೋಪದ ಮೇಲೆ, ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರು ಸಿಸಿಬಿ ವಿಭಾಗಕ್ಕೆ 'ಮೇಜರ್ ಸರ್ಜರಿ' ನಡೆಸಿದ್ದಾರೆ. ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ 10ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಏಕಕಾಲದಲ್ಲಿ ವರ್ಗಾವಣೆ ಮಾಡಿದ್ದಾರೆ.

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಡ್ರಗ್ ಸಂಬಂಧಿತ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ, ನಗರದಲ್ಲಿ ಮಾದಕ ವಸ್ತುಗಳ ಹಾವಳಿ ನಿಯಂತ್ರಣಕ್ಕೆ ಮೈಸೂರು ಪೊಲೀಸರು ವಿಫಲವಾಗಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಒಂದರ ಮೇಲೊಂದು ಡ್ರಗ್ ತಯಾರಿಕಾ ಘಟಕಗಳು ಪತ್ತೆಯಾಗುತ್ತಿದ್ದರೂ, ಅವುಗಳನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚುವಲ್ಲಿ ಸ್ಥಳೀಯ ಸಿಸಿಬಿ (ಕ್ರೈಂ ಇನ್‌ವೆಸ್ಟಿಗೇಷನ್ ಬ್ರಾಂಚ್) ಪೊಲೀಸ್ ವಿಂಗ್ ವಿಫಲವಾಗಿದೆ ಎಂಬ ಟೀಕೆಗಳು ಹೆಚ್ಚಾಗಿದ್ದವು.

Add Asianetnews Kannada as a Preferred SourcegooglePreferred

ಇದೇ ವಿಚಾರವನ್ನು ನಿಮ್ಮ ಏಷ್ಯಾನೆಟ್ ಸುವರ್ಣ ನ್ಯೂಸ್ ನಿರಂತರವಾಗಿ ಬೆಳಕಿಗೆ ತರುತ್ತಾ ಬಂದಿತ್ತು. ಡ್ರಗ್ ಫ್ಯಾಕ್ಟರಿಗಳು ನಗರದಲ್ಲಿ ಸ್ಥಾಪನೆಯಾಗಿದ್ದರೂ, ಸ್ಥಳೀಯ ಪೊಲೀಸರು ಅವುಗಳನ್ನು ಪತ್ತೆಹಚ್ಚಲಾಗದೆ, ಮಹಾರಾಷ್ಟ್ರ ಹಾಗೂ ದೆಹಲಿ ಪೊಲೀಸರೇ ಮೈಸೂರಿನಲ್ಲಿದ್ದ ಡ್ರಗ್ ಘಟಕಗಳನ್ನು ಪತ್ತೆ ಮಾಡಿದ ಘಟನೆಗಳು ನಡೆದಿದ್ದವು. ಇದರಿಂದ ಮೈಸೂರು ಸಿಸಿಬಿ ಪೊಲೀಸರ ಕಾರ್ಯವೈಖರಿಯ ಮೇಲೆ ಗಂಭೀರ ಅನುಮಾನಗಳು ಮೂಡಿದ್ದವು.

ಸಿಸಿಬಿ ಮೇಲೆ ಕಮಿಷನರ್‌ರ ಬಿಗಿ ನಿಗಾ

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರು ಸಿಸಿಬಿ ಪೊಲೀಸ್ ವಿಂಗ್‌ನ ಕಾರ್ಯಚಟುವಟಿಕೆಗಳ ಮೇಲೆ ನಿರಂತರ ನಿಗಾವಹಿಸಿದ್ದರು. ಡ್ರಗ್ ಮಾರಾಟ ನಿಯಂತ್ರಣದಲ್ಲಿ ವಿಫಲವಾಗಿರುವುದು, ಮಾದಕ ವಸ್ತು ಮಾರಾಟಗಾರರ ಬಗ್ಗೆ ಬಂದಿದ್ದ ಸುಳಿವುಗಳನ್ನು ನಿರ್ಲಕ್ಷ್ಯ ಮಾಡಿದ ಆರೋಪಗಳು ಹಾಗೂ ಕರ್ತವ್ಯ ಲೋಪದ ಗಂಭೀರ ಆರೋಪಗಳು ಕೆಲವು ಸಿಬ್ಬಂದಿಗಳ ಮೇಲೆ ಕೇಳಿಬಂದಿದ್ದವು. ಇದರ ಬೆನ್ನಲ್ಲೇ ಕಮಿಷನರ್ ಸೀಮಾ ಲಾಟ್ಕರ್ ಅವರು ಸಿಸಿಬಿ ವಿಂಗ್‌ಗೆ ‘ಮೇಜರ್ ಸರ್ಜರಿ’ ನಡೆಸಿದ್ದಾರೆ. ಒಂದೇ ಬಾರಿಗೆ ಸಿಸಿಬಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು 10ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ಒಂದೇ ಬಾರಿಗೆ ಭಾರೀ ವರ್ಗಾವಣೆ

ಸಾಕಷ್ಟು ವರ್ಷಗಳಿಂದ ಸಿಸಿಬಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾನ್ಸ್‌ಟೇಬಲ್ ಹಾಗೂ ಹೆಡ್ ಕಾನ್ಸ್‌ಟೇಬಲ್‌ಗಳನ್ನು ಸಿಸಿಬಿಯಿಂದ ಕಿತ್ತುಹಾಕಿ, ಅವರನ್ನು ಮೂಲ ಪೊಲೀಸ್ ಠಾಣೆಗಳಿಗೆ ವರ್ಗಾವಣೆ ಮಾಡಿ ಕಮಿಷನರ್ ಆದೇಶ ಹೊರಡಿಸಿದ್ದಾರೆ. ವರ್ಗಾವಣೆಯಾದ ಹಲವರ ಮೇಲೆ ಮಾದಕವಸ್ತು ಮಾರಾಟ ನಿಯಂತ್ರಣದಲ್ಲಿ ನಿರ್ಲಕ್ಷ್ಯ ವಹಿಸಿದ್ದರೆಂಬ ಆರೋಪಗಳು ಇದ್ದವು ಎನ್ನಲಾಗಿದೆ.

ಈ ವರ್ಗಾವಣೆಯ ಮೂಲಕ ಸಿಸಿಬಿ ವಿಂಗ್‌ನಲ್ಲಿ ಹೊಸ ಉತ್ಸಾಹ ಮತ್ತು ಪಾರದರ್ಶಕತೆ ತರಲು ಕಮಿಷನರ್ ಮುಂದಾಗಿದ್ದಾರೆ. ಡ್ರಗ್ ಮಾಫಿಯಾ ವಿರುದ್ಧದ ಹೋರಾಟದಲ್ಲಿ ಯಾವುದೇ ಲೋಪ, ನಿರ್ಲಕ್ಷ್ಯ ಅಥವಾ ಒಳಜಾಲ ಸಹಿಸಲಾಗುವುದಿಲ್ಲ ಎಂಬ ಕಠಿಣ ಸಂದೇಶವನ್ನು ಕಮಿಷನರ್ ಸೀಮಾ ಲಾಟ್ಕರ್ ನೀಡಿದ್ದಾರೆ.

ಕ್ಲೀನ್ ಸಿಸಿಬಿಗೆ ಮುಂದಾದ ಕಮಿಷನರ್

ಒಟ್ಟಾರೆ, ಡ್ರಗ್ ಹಾವಳಿ ನಿಯಂತ್ರಣಕ್ಕೆ ಸಿಸಿಬಿ ವಿಂಗ್‌ನಲ್ಲಿ ಶುದ್ಧೀಕರಣ ಕಾರ್ಯಾಚರಣೆ ನಡೆಸಿರುವ ಕಮಿಷನರ್ ಸೀಮಾ ಲಾಟ್ಕರ್ ಅವರ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಗರದಲ್ಲಿ ಮಾದಕವಸ್ತು ಜಾಲವನ್ನು ಸಂಪೂರ್ಣವಾಗಿ ಕಿತ್ತೊಗೆಯುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮಗಳು ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಾಂಸ್ಕೃತಿಕ ನಗರಿಯ ಹೆಸರಿಗೆ ಮಸಿ ಬಳಿಯದಂತೆ ಮಾಡಲು, ‘ಕ್ಲೀನ್ ಸಿಸಿಬಿ’ ನಿರ್ಮಾಣದ ಮೂಲಕ ಡ್ರಗ್ ಮುಕ್ತ ಮೈಸೂರು ಗುರಿಯೊಂದಿಗೆ ಪೊಲೀಸರು ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದಾರೆ .