ಮೈಸೂರು (ಮೇ.06):  ಚಾಮರಾಜನಗರ ಆಕ್ಸಿಜನ್‌ ದುರಂತಕ್ಕೆ ಸಂಬಂಧಿಸಿ ಇದೇ ಮೊದಲ ಬಾರಿಗೆ ತಮ್ಮ ಮೇಲೆ ಕೇಳಿಬಂದಿರುವ ಆರೋಪಗಳಿಗೆ ಸಂಬಂಧಿಸಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ಪಷ್ಟೀಕರಣ ನೀಡಿದ್ದಾರೆ. ‘ಅವರ ಕಷ್ಟಕಾಲದಲ್ಲಿ ರಿಸ್ಕ್ ತೆಗೆದುಕೊಂಡು ಆಸ್ಪತ್ರೆಯಲ್ಲಿದ್ದ 40 ಸಿಲಿಂಡರ್‌ಗಳನ್ನು ಪೂರೈಸಿದ್ದೇವೆ. ಇದು ಮಾನವೀಯತೆ ಅಲ್ಲವೆ? ನನ್ನ ಮೇಲೆ ಕೆಲವರು ಮಾಡಿರುವ ಆರೋಪದಿಂದ ಮನನೊಂದಿದ್ದೇನೆ’ ಎಂದು ಗದ್ಗದಿತರಾಗಿ ನುಡಿದಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚಾಮರಾಜನಗರದಲ್ಲಿ ಆಗಿರುವ ಸಾವುಗಳಿಗೆ ಸಂಬಂಧಿಸಿ ನನಗೂ ನೋವಿದೆ. ಆದರೆ ಈ ವಿಷಯದಲ್ಲಿ ನನ್ನ ಬಗ್ಗೆ ಸಾಕಷ್ಟುಊಹಾಪೋಹಗಳು ಕೇಳಿ ಬಂದಿರುವುದರಿಂದ ತುಂಬಾ ನೋವಾಗಿದೆ. ನನ್ನ 10 ವರ್ಷಗಳ ಸೇವೆಯಲ್ಲಿ ನಾನು ಎಂದೂ ಈ ರೀತಿ ಕೆಲಸ ಮಾಡಿಲ್ಲ. ದೇಶದ ಯಾವುದೇ ಮೂಲೆಯಲ್ಲಿ ಸಾವಾದರೂ ಅದು ಸಾವೇ. ಸತ್ತವರ ಮನೆಯಲ್ಲಿ ನೋವಿರುತ್ತದೆ. ಈ ವೇಳೆ ಈ ರೀತಿ ಆರೋಪ ಮಾಡಬಾರದು. ಮಾಡಿದರೆ ನಮ್ಮ ಮೇಲೆ ತಪ್ಪು ಅಭಿಪ್ರಾಯ ಬರುತ್ತದೆ ಎಂದರು.

ಮೈಸೂರು ಡೀಸಿ ವಿರುದ್ಧ ಸಾರಾ ಮತ್ತೊಂದು ಗಂಭೀರ ಆರೋಪ ...

ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಹೀಗಾಗಿ ಅವರು (ಚಾಮರಾಜನಗರ ಜಿಲ್ಲಾಧಿಕಾರಿ) ಮಾಧ್ಯಮದಲ್ಲಿ ಹೇಳಿಕೆ ನೀಡಿರದಿದ್ದರೆ ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಅವರು ಅಸತ್ಯವಾದ ವಿಚಾರಗಳನ್ನು ಹೇಳಿದ್ದಾರೆ. ಅದಕ್ಕೆ ಸ್ಪಷ್ಟೀಕರಣ ನೀಡುತ್ತಿದ್ದೇನೆ. ತನಿಖೆಯಲ್ಲಿ ಎಲ್ಲವೂ ಗೊತ್ತಾಗಲಿದೆ. ನಾವು ಸ್ಪಂದಿಸಿಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು. ಅವರ ಕಷ್ಟಕಾಲದಲ್ಲಿ ರಿÓ್ಕ… ತೆಗೆದುಕೊಂಡು ಆಕ್ಸಿಜನ್‌ ಕಳುಹಿಸಿದ್ದೇವೆ. ಆಸ್ಪತ್ರೆಯಲ್ಲಿದ್ದ 40 ಸಿಲಿಂಡರ್‌ ಕಳುಹಿಸಿದ್ದೇವೆ. ಎಲ್ಲೂ ಆಸ್ಪತ್ರೆಯಲ್ಲಿರುವ ಸಿಲಿಂಡರ್‌ ಕಳುಹಿಸುವ ತೊಂದರೆ ತೆಗೆದುಕೊಳ್ಳುವುದಿಲ್ಲ ಎಂದರು.

ಮೊದಲೇ ಕೇಳಿದ್ದರೆ ಕಳುಹಿಸುತ್ತಿದ್ದೆವು. ಅವರು ಸರಿಯಾಗಿ ನಿರ್ವಹಣೆ ಮಾಡದೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಈ ರೀತಿ ಆಗಿದ್ದರೆ ಯಾರನ್ನಾದರೂ ಹೇಗಾದರೂ ಸಂಪರ್ಕಿಸಿ ಆಕ್ಸಿಜನ್‌ ಪಡೆಯುತ್ತಿದ್ದೆವು. ಅವರು ಆ ಕೆಲಸ ಮಾಡಿಲ್ಲ ಎಂದು ರೋಹಿಣಿ ದೂರಿದರು.

ಚಾಮರಾಜನಗರ ದುರಂತಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿ ಡಿ.ರವಿ ಅವರು ಮಂಗಳವಾರ ರೋಹಿಣಿ ಸಿಂಧೂರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಆಕ್ಸಿಜನ್‌ ಬೇಡಿಕೆಗೆ ಮೈಸೂರು ಜಿಲ್ಲಾಡಳಿತ ಸಕಾಲದಲ್ಲಿ ಸ್ಪಂದಿಸಿಲ್ಲ ಎಂದು ಆರೋಪಿಸಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona