ಮೈಸೂರು ದಸರಾ ಮಹೋತ್ಸವದ ವಿಜಯದಶಮಿಯಂದು ಪೊಲೀಸರ ನಿರ್ಬಂಧದಿಂದಾಗಿ ಐತಿಹಾಸಿಕ ವಜ್ರಮುಷ್ಟಿ ಕಾಳಗದ ಸಂಪ್ರದಾಯ ಉಲ್ಟಾಪಲ್ಟಿಯಾಗಿದೆ. ಪಾಸ್ ಇದ್ದರೂ ಜೆಟ್ಟಿಗಳನ್ನು ಒಳಬಿಡದ ಕಾರಣ ಮುಹೂರ್ತ ಮೀರುವ ಆತಂಕದಿಂದ ಮೊದಲು ವಿಜಯಯಾತ್ರೆ ನಡೆಸಲಾಯಿತು.
ಮೈಸೂರು (ಅ.21): ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ವಿಜಯದಶಮಿಯ ಶುಭ ದಿನದಂದು ಮೈಸೂರು ಅರಮನೆ ಆವರಣದಲ್ಲಿ ಪೊಲೀಸರ ಅತಿಯಾದ ನಿರ್ಬಂಧ ಹಾಗೂ ಗೊಂದಲಕಾರಿ ನಡವಳಿಕೆಯಿಂದಾಗಿ ನೂರಾರು ವರ್ಷಗಳಿಂದ ಶ್ರದ್ಧಾಭಕ್ತಿಯಿಂದ ನಡೆದುಕೊಂಡು ಬಂದಿದ್ದ ಸಾಂಪ್ರದಾಯಿಕ ಆಚರಣೆಗಳೇ ಸಂಪೂರ್ಣ ಉಲ್ಟಾಪಲ್ಟಿಯಾದ ಘಟನೆ ನಡೆದಿದೆ. ಅರಮನೆಯಲ್ಲಿ ರಾಜಪರಂಪರೆಯಂತೆ ನಡೆಯಬೇಕಿದ್ದ ಐತಿಹಾಸಿಕ 'ವಜ್ರಮುಷ್ಟಿ ಕಾಳಗ'ದ ಪ್ರಕ್ರಿಯೆಗೆ ಪೊಲೀಸರು ಅಡ್ಡಿಪಡಿಸಿದ್ದು, ಪಾಸ್ ಹೊಂದಿದ್ದರೂ ಜೆಟ್ಟಿ ಪೈಲ್ವಾನರನ್ನು ಒಳಗೆ ಬಿಡದೆ ತಡೆದ ಪರಿಣಾಮ ಅರಮನೆ ಆವರಣದಲ್ಲಿ ಭಾರಿ ಅವ್ಯವಸ್ಥೆ ಹಾಗೂ ವಾಗ್ವಾದ ಸೃಷ್ಟಿಯಾಗಿದೆ.
ವಿಜಯದಶಮಿಯಂದು ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಸಾಂಪ್ರದಾಯಿಕ ವಜ್ರಮುಷ್ಟಿ ಕಾಳಗ ನಡೆಯಬೇಕಿತ್ತು. ಇದಕ್ಕಾಗಿ ಪ್ರಮುಖ ಜೆಟ್ಟಿಗಳು ಅರಮನೆಯ ಶ್ವೇತ ವರಾಹ ಸ್ವಾಮಿ ದೇವಾಲಯದ ಬಳಿ ಜಾತಿಗಳ ಪೂಜೆ ಕಾರ್ಯ ನೆರವೇರಿಸಿ, ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಪೂರ್ವಾಭಾವಿ ಸಿದ್ಧತೆಗಳನ್ನು ಕೈಗೊಳ್ಳಬೇಕಿತ್ತು.
ರಾಜವಂಶಸ್ಥರು ನೀಡಿರುವ ಅಧಿಕೃತ ಪಾಸ್ಗಳನ್ನು ಕೈಯಲ್ಲಿ ಹಿಡಿದುಕೊಂಡು ಬಂದಿದ್ದರೂ ಪೊಲೀಸರು ಜೆಟ್ಟಿಗಳನ್ನು ಹಾಗೂ ಅವರ ಕಡೆಯವರನ್ನು ಅರಮನೆ ಆವರಣಕ್ಕೆ ಬಿಡದೆ ತಡೆದು ವಿಳಂಬ ಮಾಡಿದರು. ಕೆಲವರನ್ನು ಮಾತ್ರ ಒಳಗೆ ಬಿಟ್ಟು, ಇನ್ನು ಕೆಲವರನ್ನು ಹೊರಗೆ ತಡೆದು ನಿಲ್ಲಿಸಲಾಯಿತು. ಅಷ್ಟೇ ಅಲ್ಲದೆ, ಪ್ರಮುಖ ಪೂಜೆ ನಡೆಯಬೇಕಿದ್ದ ಶ್ವೇತ ವರಾಹ ಸ್ವಾಮಿ ದೇವಾಲಯವೂ ಸಮಯಕ್ಕೆ ಸರಿಯಾಗಿ ಓಪನ್ ಆಗಿರಲಿಲ್ಲ.
ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬೆಂಗಳೂರು ಗರಡಿ ಜೆಟ್ಟಿ ಸಂಘದ ಅಧ್ಯಕ್ಷ ಜಗನ್ನಾಥ್ ಎ. ಜೆಟ್ಟಿ, "ಎಲ್ಲಾ ಜೆಟ್ಟಿಗಳು ಒಂದೆಡೆ ಸೇರಿದರಷ್ಟೇ ಕಾಳಗದ ಸಿದ್ಧತೆ ಸಾಧ್ಯ. ಕಾಳಗ ಆರಂಭಕ್ಕೂ ಮುನ್ನ ಒಂದೂವರೆ ಗಂಟೆ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಆದರೆ ಪೊಲೀಸರು ಪಾಸ್ ಇದ್ದರೂ ಒಳಗೆ ಬಿಡದೆ ಅನಗತ್ಯ ಕಿರಿಕಿರಿ ಉಂಟುಮಾಡಿದ್ದಾರೆ" ಎಂದು ಕಿಡಿಕಾರಿದ್ದಾರೆ.
ಸರ್ಕಾರ-ಅರಮನೆ ನಡುವೆ ಸಮನ್ವಯದ ಕೊರತೆ
ಅರಮನೆ ಆಡಳಿತ ಹಾಗೂ ಸರ್ಕಾರದ ಪೊಲೀಸ್ ಇಲಾಖೆ ನಡುವೆ ಸೂಕ್ತ ಸಮನ್ವಯದ ಕೊರತೆ ಎದ್ದು ಕಾಣುತ್ತಿದ್ದು, ರಾಜವಂಶಸ್ಥರಿಗೆ ಪೊಲೀಸ್ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ರಾಜವಂಶಸ್ಥರು ನೀಡಿರುವ ಗೌರವಾನ್ವಿತ ಪಾಸ್ಗಳಿಗೂ ಬೆಲೆ ನೀಡದೆ ಪೊಲೀಸರು ಅತಿಯಾಗಿ ವರ್ತಿಸಿದ್ದರಿಂದ, ಮುಹೂರ್ತದ ಒಳಗಾಗಿ ಅರಮನೆಯೊಳಗೆ ಬಂದು ಸಿದ್ಧತೆ ನಡೆಸಲು ಸಾಧ್ಯವಾಗದೆ ಜೆಟ್ಟಿ ಪೈಲ್ವಾನರು ಹಾಗೂ ಉಸ್ತಾದ್ಗಳು ಕಂಗಾಲಾದರು. ಅಂತಿಮವಾಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಖಾಸಗಿ ದರ್ಬಾರ್ ಮುಗಿಸಿ ವಿಜಯಯಾತ್ರೆ ಹೊರಟ ನಂತರವಷ್ಟೇ ಜಟ್ಟಿಗಳಿಗೆ ಅರಮನೆಯೊಳಗೆ ಪ್ರವೇಶಿಸಲು ಸಾಧ್ಯವಾಯಿತು.
ವಿಜಯಯಾತ್ರೆಯ ಮುಹೂರ್ತ ಮೀರುವ ಆತಂಕ - ಆಚರಣೆ ಉಲ್ಟಾಪಲ್ಟ!:
ಸಾಮಾನ್ಯವಾಗಿ ಅರಮನೆಯಲ್ಲಿ ಮೊದಲು ವಜ್ರಮುಷ್ಟಿ ಕಾಳಗ ನಡೆದು, ಆ ನಂತರ ರಾಜವಂಶಸ್ಥರ ವಿಜಯಯಾತ್ರೆ ನಡೆಯುವುದು ನೂರಾರು ವರ್ಷಗಳ ಸಂಪ್ರದಾಯ. ಆದರೆ ಪೊಲೀಸರ ಕಿರಿಕಿನಿಂದಾಗಿ ಜಟ್ಟಿಗಳು ಕಾಳಗದ ಅಂಕಣ ತಲುಪಲು ತಡವಾಯಿತು. ಈ ನಡುವೆ ವಿಜಯಯಾತ್ರೆಯ ಶುಭ ಮುಹೂರ್ತವೇ ಮೀರಿ ಹೋಗುವ ಆತಂಕ ಸೃಷ್ಟಿಯಾಯಿತು. ಸ್ಥಿತಿಗತಿಯನ್ನು ಅರಿತ ಅರಮನೆ ಮಂಡಳಿ ಹಾಗೂ ರಾಜವಂಶಸ್ಥರು, ಸಾಂಪ್ರದಾಯಿಕ ಕ್ರಮವನ್ನು ಬದಲಿಸಿ ಮೊದಲು ಯದುವೀರ್ ಅವರ 'ವಿಜಯಯಾತ್ರೆ'ಯನ್ನು ಆರಂಭಿಸಿದರು. ವಿಜಯಯಾತ್ರೆ ಹಾಗೂ ಬನ್ನಿ ಪೂಜೆ ಪೂರ್ಣಗೊಂಡ ನಂತರವಷ್ಟೇ ವಜ್ರಮುಷ್ಟಿ ಕಾಳಗ ನಡೆಸಲು ತೀರ್ಮಾನಿಸಲಾಯಿತು.
ಪೊಲೀಸರೊಂದಿಗೆ ಸುದೀರ್ಘ ವಾಗ್ವಾದ ನಡೆಸಿದ ಬಳಿಕ ಕೊನೆಗೂ ಜಟ್ಟಿಗಳು ಕಾಳಗದ ಅಂಕಣಕ್ಕೆ ತೆರಳಿದ್ದಾರಾದರೂ, ಯೋಜಿತ ಸಮಯಕ್ಕೆ ಕಾಳಗ ನಡೆಯದ ಕಾರಣ ಸದ್ಯ ವಜ್ರಮುಷ್ಟಿ ಕಾಳಗ ರದ್ದುಪಡಿಸಲು ತೀರ್ಮಾನಿಸಲಾಗಿದೆ. ಖಾಕಿ ಪಡೆಯ ಈ ಭಾರಿ ಎಡವಟ್ಟಿನ ವಿರುದ್ಧ ಮೈಸೂರಿನ ಸಾಂಪ್ರದಾಯಿಕ ಪ್ರಜಾವರ್ಗ ಹಾಗೂ ರಾಜಮನೆತನದ ಅಭಿಮಾನಿಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.


