ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಎರಡು ದಿನಗಳ ಕಂಬಳ ಓಟವನ್ನು ಆಯೋಜಿಸಲಾಗಿದೆ. ಸಾತಗಳ್ಳಿಯ ವಿಟಿಯು ಕಾಲೇಜು ಸಮೀಪ ನಡೆಯಲಿರುವ ಈ ಕ್ರೀಡೆಗೆ ಪ್ರವಾಸಿಗರು ಉತ್ಸುಕರಾಗಿದ್ದಾರೆ. ಆದರೆ, ಪ್ರಾಣಿ ಕಲ್ಯಾಣ ಮಂಡಳಿಯ ಅಧಿಕಾರಿಯ ನೇಮಕದ ಬಗ್ಗೆ ಆರ್‌ಟಿಐ ಕಾರ್ಯಕರ್ತರು ಪ್ರಶ್ನಿಸಿದ್ದು, ಕಂಬಳಕ್ಕೆ ಕಾನೂನು ಸಂಕಷ್ಟ ಎದುರಾಗಿದೆ.

ಮೈಸೂರು (ಅ.18): ನಾಡಹಬ್ಬ ಮೈಸೂರು ದಸರಾ(Mysuru dasara) ಅಂಗವಾಗಿ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಆಯೋಜಿಸಿರುವ ಸಾಂಪ್ರದಾಯಿಕ ಕೋಣಗಳ ಓಟದ ಕ್ರೀಡೆಯಾದ ಕಂಬಳಕ್ಕೆ ಇಂದು ಚಾಲನೆ ನೀಡಲಾಗುತ್ತಿದೆ.

ಎರಡು ದಿನಗಳ ಕಂಬಳ ಓಟ

ಇಂದಿನಿಂದ ದಸರಾ ಮಹೋತ್ಸವದಲ್ಲಿ ಕರಾವಳಿಯ ಸಾಂಪ್ರದಾಯಿಕ ಕಂಬಳ ನಡೆಯಲಿದೆ. ಇದು ಮೊದಲ ಬಾರಿ ಆಯೋಜಿಸಿರುವುದರಿಂದ ಮೈಸೂರಿಗೆ ಬರುವ ಪ್ರವಾಸಿಗರಿಗೆ ಕುತೂಹಲ ಮೂಡಿಸಿದೆ. ಇಂದು ಚಾಲನೆ ಸಿಗಲಿದ್ದು, ಎರಡು ದಿನಗಳ ಕಾಲ ನಡೆಯಲಿದೆ.

ಕಂಬಳ ನಡೆಯುವ ಸ್ಥಳ

ಮೈಸೂರಿನ ಸಾತಗಳ್ಳೀಯ ವಿಟಿಯು ಕಾಲೇಜು ಸಮೀಪ ಕಂಬಳ ವೇದಿಕೆ ಸಿದ್ಧಪಡಿಸಲಾಗಿದೆ. ಇಂದು ಬೆಳಗ್ಗೆ 10 ಗಂಟೆಗೆ ಕಂಬಳ ಉದ್ಘಾಟನೆ ನಡೆಯಲಿದೆ. ಈ ವಿಶಿಷ್ಟ ಕರಾವಳಿ ಸಾಂಪ್ರಾದಾಯಿಕ ಕ್ರೀಡೆ ಕಂಬಳವನ್ನು ಕಣ್ತುಂಬಿಕೊಳ್ಳಲು ಕ್ರೀಡಾಭಿಮಾನಿಗಳು, ಪ್ರವಾಸಿಗರು ಉತ್ಸುಕರಾಗಿದ್ದಾರೆ. ಸುಮಾರು 20 ಎಕರೆ ಪ್ರದೇಶದಲ್ಲಿ ಕಂಬಳಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಕೋಣಗಳ ಓಟಕ್ಕಾಗಿ ಸುಮಾರು 147 ಮೀಟರ್ ಉದ್ದದ ಎರಡು ಸಮಾನಾಂತರ ಟ್ರ್ಯಾಕ್‌ಗಳ ನಿರ್ಮಿಸಲಾಗಿದ್ದು, 140 ಮೀಟರ್ ದೂರದ ಕಂಬಳದ ಕರೆಯಲ್ಲಿ ಕೋಣಗಳ ಮಿಂಚಿನವೇಗ, ಜಾಕಿಗಳ ಕೌಶಲ್ಯ, ಕ್ರೀಡಾಕೂಟ ರೋಚಕವಾಗಿರಲಿದೆ.

ನಾಳೆ ಕಂಬಳ ಕಾರ್ಯಕ್ರಮದಲ್ಲಿ ಸಿಎಂ ಭಾಗಿ

ಸಂಜೆ 6 ಗಂಟೆಗೆ ಕಂಬಳ ಉದ್ಘಾಟನಾ ಕಾರ್ಯಕ್ರಮ ನಿಗದಿಯಾಗಿದ್ದು,

ನಾಳೆ ಸಂಜೆ 7 ಗಂಟೆಗೆ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ, ಸಚಿವರು ಭಾಗಿಯಾಗಲಿದ್ದಾರೆ.

ದಸರಾ ಕಂಬಳಕ್ಕೆ ಕಾನೂನು ಸಂಕಷ್ಟ

ಇದೇ ಮೊದಲ ಬಾರಿಗೆ ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಯಿಂದ ಕ್ರೀಡಾಸಕ್ತರು, ಪ್ರವಾಸಿಗರನ್ನು ಆಕರ್ಷಿಸಿದ್ದರೆ ಇನ್ನೊಂದೆಡೆ ಕಂಬಳಕ್ಕೆ ಕಾನೂನು ಸಂಕಷ್ಟ ಎದುರಾಗಿದೆ.

ಹೌದು, ಮೈಸೂರು ದಸರಾದಲ್ಲಿ ಕಂಬಳ ಆಯೋಜಿಸಿದ್ದಕ್ಕೆ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಆಕ್ಷೇಪ ವ್ಯಕ್ತಪಡಿಸಿದ್ದು, ಭಾರತೀಯ ಪ್ರಾಣಿಗಳ ಕಲ್ಯಾಣ ಮಂಡಳಿಯಿಂದ ಅಧಿಕಾರಿಯ ನೇಮಕದ ಬಗ್ಗೆ ಪ್ರಶ್ನಿಸಿದ್ದಾರೆ. ನೇಮಕಾತಿ ಕುರಿತು ಮಾಹಿತಿ, ದಾಖಲೆ ನೀಡದ ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಭಾರತೀಯ ಪ್ರಾಣಿಗಳ ಕಲ್ಯಾಣ ಮಂಡಳಿ ಅನುಮತಿ ಪಡೆಯದಿದ್ರೆ ಕಂಬಳ ನಿಲ್ಲುತ್ತಾ?

ಕೇಂದ್ರ ಸರ್ಕಾರದ ಸುತ್ತೋಲೆ, ಸುಪ್ರೀಂ ಕೋರ್ಟ್ ಸೂಚನೆ ಉಲ್ಲಂಘನೆಯಾಗಿದೆಯಾ ಎಂಬ ಆತಂಕ ಎದುರಾಗಿದೆ. ಒಂದು ವೇಳೆ ಉಲ್ಲಂಘನೆಯಾಗಿದ್ದರೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ. ಪತ್ರದಲ್ಲಿ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು, ಪಶುಸಂಗೋಪನಾ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಅನ್ವಯ ಎಂದು ಉಲ್ಲೇಖಿಸಲಾಗಿದೆ.

ಕಾನೂನು ಸಂಕಷ್ಟದ ನಡುವೆಯೇ ಇಂದು ಬೆಳಗ್ಗೆ 10 ಗಂಟೆಗೆ ಕಂಬಳ ಉದ್ಘಾಟನೆ ನಿಗದಿಯಾಗಿರೋದ್ರಿಂದ. ಬೆಳಗ್ಗೆ 9 ಗಂಟೆಗೆ ಸ್ಥಳಕ್ಕೆ ಭೇಟಿ ನೀಡುವುದಾಗಿ ಸ್ನೇಹಮಯಿಕೃಷ್ಣ ಹೇಳಿದ್ದಾರೆ. ಒಂದು ವೇಳೆ ಭಾರತೀಯ ಪ್ರಾಣಿಗಳ ಕಲ್ಯಾಣ ಮಂಡಳಿಯಿಂದ ಅನುನತಿ ಪಡೆಯದಿದ್ದರೆ ಕಂಬಳ ನಿಲ್ಲಿಸಬೇಕು ಎಂದು ಸ್ನೇಹಮಯಿ ಕೃಷ್ಣ ಪಟ್ಟು ಹಿಡಿಯುವ ಸಾಧ್ಯತೆಯಿದೆ. ಹೀಗಾಗಿ ಮೈಸೂರು ದಸರಾದಲ್ಲಿ ಕಂಬಳ ನಡೆಯುತ್ತಾ ಇಲ್ವಾ? ಅಂತಾ ಕ್ರೀಡಾಭಿಮಾನಿಗಳಿಗೆ ಆತಂಕ ಎದುರಾಗಿದೆ.