ಮೈಸೂರು ದಸರಾ ಎಂದರೆ ಸಂಭ್ರಮ. ವಿಜಯದಶಮಿಯಂದು ಚಿನ್ನದ ಅಂಬಾರಿ ಹೊತ್ತು ಸಾಗುವ ಗಜಪಡೆ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಕಾಯುತ್ತಾರೆ. ಆದರೆ, ಈ ಬಾರಿಯ ದಸರಾ ಸಿದ್ಧತೆಯ ನಡುವೆ ಅಂಬಾರಿ ಹೊರುವ ತರಬೇತಿ ಪಡೆಯುತ್ತಿದ್ದ ಆನೆ ಮಹೇಂದ್ರ ಹಿಂದೆ ಸರಿದಿರುವುದು ಕೌತುಕಕ್ಕೆ ಕಾರಣವಾಗಿದೆ.

ಮೈಸೂರು ದಸರಾ ಎಂದರೆ ಸಂಭ್ರಮ, ಭಕ್ತಿ ಮತ್ತು ಪರಂಪರೆಯ ಸಂಗಮ. ವಿಜಯದಶಮಿಯಂದು ಚಿನ್ನದ ಅಂಬಾರಿ ಹೊತ್ತು ಸಾಗುವ ಗಜಪಡೆ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಕಾಯುತ್ತಾರೆ. ಆದರೆ, ಈ ಬಾರಿಯ ದಸರಾ ಸಿದ್ಧತೆಯ ನಡುವೆ ಅಂಬಾರಿ ಹೊರುವ ತರಬೇತಿ ಪಡೆಯುತ್ತಿದ್ದ ಆನೆ ಮಹೇಂದ್ರ ಹಿಂದೆ ಸರಿದಿರುವುದು ಕೌತುಕಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ದಸರಾ ಸಂದರ್ಭದಲ್ಲಿ ನಡೆದ ಕೆಲವು ಘಟನೆಗಳು ಜನರಲ್ಲಿ ಕುತೂಹಲ ಮೂಡಿಸಿವೆ. ಹಾಗಾದರೆ, ಮಹೇಂದ್ರ ಹಿಂದೇಟು ಹಾಕಿದ್ದೇಕೆ? ಇದು ಕೇವಲ ದೈಹಿಕ ಆಯಾಸವೇ ಅಥವಾ ಆನೆಯ ಸಹಜ ವರ್ತನೆಯೇ?

42 ವರ್ಷದ ಮಹೇಂದ್ರನಿಗೆ ಅಂಬಾರಿ ಹೊರುವ ಅವಕಾಶ ಕೈತಪ್ಪಿದ್ದೇಕೆ?

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಬಳ್ಳೆ ಆನೆ ಶಿಬಿರದ 42 ವರ್ಷದ ಮಹೇಂದ್ರ, ಚಿನ್ನದ ಅಂಬಾರಿ ಹೊತ್ತು ಸಾಗುವ ತರಬೇತಿ ಪಡೆಯುತ್ತಿದ್ದ ಐದು ಗಂಡಾನೆಗಳಲ್ಲಿ ಒಂದಾಗಿತ್ತು. ಸದೃಢ ದೇಹ ಹೊಂದಿರುವ ಮಹೇಂದ್ರ ಈ ಹಿಂದೆ ಬೇರೆ ಕಡೆ ಅಂಬಾರಿ ಹೊತ್ತ ಅನುಭವವನ್ನೂ ಹೊಂದಿದೆ. ಹೀಗಾಗಿ ದಸರಾ ಅಂಬಾರಿ ಹೋರಲು ಆಯ್ಕೆಯಾಗುವ ನಿರೀಕ್ಷೆಯಿತ್ತು.

ಆದರೆ, ತಾಲೀಮು ಮಾರ್ಗದಲ್ಲಿ ಮರದ ಅಂಬಾರಿ ಹೊತ್ತು ಸಾಗುವ ವೇಳೆ ಮಹೇಂದ್ರ ಎರಡು ಬಾರಿ ಮುಂದೆ ಹೋಗಲು ಹಿಂದೇಟು ಹಾಕಿದೆ. ಮೊದಲಿಗೆ ಕೆ.ಆರ್. ವೃತ್ತದ ಪ್ರವೇಶದ್ವಾರದ ಬಳಿ ನಿಂತ ಆನೆ, ಹತ್ತು ನಿಮಿಷಕ್ಕೂ ಹೆಚ್ಚು ಕಾಲ ಅಲ್ಲಿಯೇ ಉಳಿದಿತ್ತು. ಮಾವುತನ ಮನವೊಲಿಕೆಯ ಬಳಿಕ ಮತ್ತೆ ನಡೆಯಲು ಆರಂಭಿಸಿದರೂ, ಕೆಲವೇ ಮೀಟರ್‌ಗಳ ದೂರದಲ್ಲಿ ಮತ್ತೊಮ್ಮೆ ನಿಂತಿತು.

ನಂತರವೂ ನಿಗದಿತ ಮಾರ್ಗದಲ್ಲಿ ಸಾಗುವಾಗ ಹಲವು ಕಡೆಗಳಲ್ಲಿ ಮುಂದೆ ಹೋಗಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ, ಚಿನ್ನದ ಅಂಬಾರಿ ಹೊರುವ ಆನೆಯ ಆಯ್ಕೆಯಿಂದ ಮಹೇಂದ್ರನನ್ನು ಕೈಬಿಟ್ಟು ಪ್ರಶಾಂತನಿಗೆ ಸ್ಥಾನ ನೀಡಲಾಗಿದೆ. ಮೇಲ್ನೋಟಕ್ಕೆ ಮಹೇಂದ್ರನಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳು ಕಂಡುಬಂದಿಲ್ಲ. ಹಾಗಿದ್ದರು ಅಂಬಾರಿ ಹೊರಲು ಹಿಂದೇಟು ಹಾಕಿದ್ದೇಕೆ ಎನ್ನುವ ಪ್ರಶ್ನೆ ಮಾವುತ ರಿಂದ ಹಿಡಿದು ಅಧಿಕಾರಿ ವರ್ಗದವರಿಗೂ ಕಾಡಿದೆ.

600 ಕೆ.ಜಿ. ತೂಕದ ಅಂಬಾರಿ ಹೊತ್ತು ಸುಸ್ತಾಗಿತ್ತೇ?

ಮಹೇಂದ್ರ ಹಿಂದೇಟು ಹಾಕಿರುವುದಕ್ಕೆ ಮಳೆ ಮತ್ತು ಜಾರುವ ನೆಲವೂ ಕಾರಣವಾಗಿರಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಮಳೆಯ ಕಾರಣದಿಂದ ಕಾಲು ಜಾರುವ ಸಾಧ್ಯತೆಯನ್ನು ಅರಿತು ಆನೆ ಎಚ್ಚರಿಕೆಯಿಂದ ನಿಂತಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ, ಎರಡನೇ ಬಾರಿ ಸುಮಾರು 600 ಕೆ.ಜಿ. ತೂಕದ ಮರದ ಅಂಬಾರಿ ಹೊತ್ತಿದ್ದರಿಂದ ಆಯಾಸಗೊಂಡಿರಬಹುದು ಎಂಬ ಮಾತುಗಳೂ ಕೇಳಿಬಂದಿವೆ.

ದಸರಾ ಸಂದರ್ಭದಲ್ಲಿ ನಡೆದ ಘಟನೆಗಳು ಚರ್ಚೆಗೆ ಕಾರಣ!

ಈ ಬಾರಿಯ ಮೈಸೂರು ದಸರಾ ಸಂದರ್ಭದಲ್ಲಿ ನಡೆದ ಕೆಲವು ಘಟನೆಗಳು ಸಾರ್ವಜನಿಕರ ಗಮನ ಸೆಳೆದಿವೆ. ಶುಭಸೂಚಕವೆಂದು ಪರಿಗಣಿಸಲಾಗುವ ನಂದಿ ಧ್ವಜ ದಿಢೀರ್‌ ಮುರಿದು ಬಿದ್ದ ಘಟನೆ, ಖಾಸಗಿ ದರ್ಬಾರ್‌ ವೇಳೆ ಯದುವೀರ್‌ ಒಡೆಯರ್‌ ಸಿಂಹಾಸನದ ಬಳಿ ತಡವರಿಸಿದ ಘಟನೆ ಸೇರಿದಂತೆ ಹಲವು ವಿಚಾರಗಳು ಚರ್ಚೆಗೆ ಬಂದಿವೆ. ಇದರ ಜೊತೆಗೆ ಕಾರ್ಯಕ್ರಮ ಒಂದರಲ್ಲಿ ಚಾಮುಂಡಿ ದೇವಿಯ ಪ್ರತಿಕೃತಿ ಕೈಯಿಂದ ಜಾರಿದ ವಿಡಿಯೋ ವೈರಲ್‌ ಆಗಿದೆ.

ಚಿನ್ನದ ಅಂಬಾರಿ ಹೊರುವ ಆಯ್ಕೆಯಿಂದ ಮಹೇಂದ್ರ ಹೊರಬಿದ್ದಿರುವುದು ಈ ಘಟನೆಗಳ ಚರ್ಚೆಗೆ ಮತ್ತಷ್ಟು ಕುತೂಹಲ ಸೇರಿಸಿದೆ. ಈ ಎಲ್ಲ ಘಟನೆಗಳನ್ನು ಒಟ್ಟಿಗೆ ನೋಡುತ್ತಿರುವ ಕೆಲವರು, 'ತಾಯಿ ಚಾಮುಂಡೇಶ್ವರಿ ಏನಾದರೂ ಸೂಚನೆ ನೀಡುತ್ತಿದ್ದಾಳಾ?' ಎಂಬ ಪ್ರಶ್ನೆಯನ್ನೂ ಮುಂದಿಡುತ್ತಿದ್ದಾರೆ.

ಆನೆಯ ಆರೋಗ್ಯವೇ ಮುಖ್ಯ

ಅಕ್ಟೋಬರ್ 21ರಂದು ನಡೆಯಲಿರುವ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆಯು ಭಕ್ತಸಾಗರದ ನಡುವೆ ಸಾಗಬೇಕಿದೆ. ಇಂತಹ ಸಂದರ್ಭದಲ್ಲಿ ಆನೆಯ ಆರೋಗ್ಯ, ಸ್ವಭಾವ ಮತ್ತು ಆರಾಮದಾಯಕ ಸ್ಥಿತಿಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ.ಮಹೇಂದ್ರನ ಹಿಂದೇಟು ದಸರಾ ಸಿದ್ಧತೆಯ ಪ್ರಮುಖ ಬೆಳವಣಿಗೆಯಾಗಿದ್ದರೂ, ಅದರ ಹಿಂದೆ ಇರುವ ನಿಖರ ಕಾರಣವನ್ನು ತಿಳಿಯಲು ಹೆಚ್ಚಿನ ಮಾಹಿತಿ ಅಗತ್ಯವಿದೆ. ಧಾರ್ಮಿಕ ನಂಬಿಕೆಗಳು ಒಂದೆಡೆಯಾದರೆ, ಆನೆಯ ಸಹಜ ವರ್ತನೆ ಮತ್ತು ಸುರಕ್ಷತೆಯನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳುವುದು ಮತ್ತೊಂದೆಡೆ ಅಷ್ಟೇ ಮುಖ್ಯವಾಗಿದೆ.