ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಬೆಂಗಳೂರು ಗ್ರಾಮಾಂತರದ ಅಶ್ವಿನಿ ಅಂಬರೀಶ್ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರ ಹಸು ಒಟ್ಟು 44.200 ಲೀಟರ್ ಹಾಲು ಕರೆಯುವ ಮೂಲಕ 1 ಲಕ್ಷ ರೂ. ಬಹುಮಾನ ಗೆದ್ದಿದೆ. ಈ ಬಾರಿಯ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಮಿಲ್ಕಿಂಗ್ ಮೆಷಿನ್ ಬಳಸಲು ಅವಕಾಶ ಕಲ್ಪಿಸಲಾಗಿತ್ತು.

ಬಿ. ಶೇಖರ್‌ ಗೋಪಿನಾಥಂ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಭಾಗವಾದ ರೈತ ದಸರಾದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ ಬೆಂಗಳೂರು ಗ್ರಾಮಾಂತರದ ಅಶ್ವಿನಿ ಅಂಬರೀಶ್ ಬಿಡದಿ ಅವರ ಹಸು 44.200 ಲೀಟರ್ ಹಾಲು ಕರೆಯುವ ಮೂಲಕ ಮೊದಲ ಸ್ಥಾನದೊಂದಿಗೆ 1 ಲಕ್ಷ ರೂ. ಬಹುಮಾನ ಪಡೆದುಕೊಂಡರು.

ಕರ್ನಾಟಕ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ

ನಗರದ ಜೆ.ಕೆ. ಮೈದಾನದಲ್ಲಿ ರೈತ ದಸರಾ ಅಂಗವಾಗಿ ಶನಿವಾರ ಬೆಳಗ್ಗೆ ಮತ್ತು ಸಂಜೆ ಕರ್ನಾಟಕ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ ನಡೆಯಿತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಹೆಚ್ಚು ಹಾಲು ಕರೆದ ಹಸುವಿನ ಮಾಲೀಕರಿಗೆ ಬಹುಮಾನ ವಿತರಿಸಲಾಯಿತು.

ಪ್ರಥಮ ಸ್ಥಾನಕ್ಕೆ 1 ಲಕ್ಷ ಬಹುಮಾನ

ಬೆಂಗಳೂರು ಗ್ರಾಮಾಂತರದ ಅಶ್ವಿನಿ ಅಂಬರೀಶ್ ಬಿಡದಿ ಅವರು ತಮ್ಮ ಎಚ್ಎಫ್ ಕಪ್ಪು ಬಿಳಿ ಹಸುವಿನಿಂದ ಬೆಳಗ್ಗೆ 23.300 ಲೀಟರ್ ಮತ್ತು ಸಂಜೆ 20.900 ಲೀಟರ್ ಸೇರಿ ಒಟ್ಟು 44.200 ಲೀಟರ್ ಹಾಲು ಕರೆಯುವ ಮೂಲಕ ಪ್ರಥಮ ಸ್ಥಾನ ಪಡೆದು 1 ಲಕ್ಷ ಬಹುಮಾನ ಪಡೆದರು.

ದ್ವಿತೀಯ ಸ್ಥಾನಕ್ಕೆ 80 ಸಾವಿರ ಬಹುಮಾನ

ಹಾಗೆಯೇ, ಸಾಲಿಗ್ರಾಮದ ಶ್ರೀ ಗುರುರಾಘವೇಂದ್ರ ಡೈರಿ ಫಾರಂನ ಎಚ್ಎಫ್ ಹಸು ಒಟ್ಟು 42.400 ಲೀಟರ್ ಹಾಲು ಕರೆಯುವುದರ ಮೂಲಕ 2ನೇ ಸ್ಥಾನದೊಂದಿಗೆ 80 ಸಾವಿರ ರೂ. ಬಹುಮಾನ ಪಡೆದರು. ಬೆಂಗಳೂರಿನ ಎಸ್. ರವಿ ಬಿನ್ ಸಂಜೀವರಾಜು ಅವರು ತಮ್ಮ ಹಸುವಿನಿಂದ ಒಟ್ಟು 41.750 ಲೀಟರ್ ಹಾಲನ್ನು ಕರೆದು ಮೂರನೇ ಸ್ಥಾನ ಗಳಿಸಿ 60 ಸಾವಿರ ರೂ. ತಮ್ಮದಾಗಿಸಿಕೊಂಡರು. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಕಿರಣ್ ಗೌಡ ಅವರು ಹಸುವಿನಿಂದ ಒಟ್ಟು 40.550 ಲೀಟರ್ ಹಾಲು ಕರೆಯುವ ಮೂಲಕ 4ನೇ ಸ್ಥಾನ ಪಡೆದು, 40 ಸಾವಿರ ರೂ. ಬಹುಮಾನ ಸ್ವೀಕರಿಸಿದರು.

ಎಲ್ಲಾ ಹಸುಗಳಿಗೂ ತಲಾ 10000 ರೂ. ಪ್ರೋತ್ಸಾಹ ಧನ

ಈ ವೇಳೆ ಮುಖ್ಯ ಪಶುವೈದ್ಯಾಧಿಕಾರಿ ಡಾ.ಬಿ.ಎಸ್. ನಂಜೇಶ್ ಮಾತನಾಡಿ, ಈ ಸ್ಪರ್ಧೆಯಲ್ಲಿ ದಿನಕ್ಕೆ 25 ಕೆ.ಜಿ ಗಿಂತ ಹೆಚ್ಚು ಹಾಲು ಕರೆಯುವ ಎಲ್ಲಾ ಹಸುಗಳಿಗೂ ತಲಾ 10000 ರೂ. ಪ್ರೋತ್ಸಾಹ ಧನವನ್ನು ಸಹ ನೀಡಲಾಗುವುದು. ಇದೇ ಮೊದಲ ಬಾರಿಗೆ ಸ್ಪರ್ಧೆಯಲ್ಲಿ ಮಿಲ್ಕಿಂಗ್ ಮೆಷಿನ್ ಬಳಸಿ ಹಾಲು ಕರೆಯಲು ಅವಕಾಶ ಕಲ್ಪಿಸಲಾಗಿತ್ತು. ಅತಿ ಹೆಚ್ಚು ಜಾನುವಾರುಗಳು ನೋಂದಾಯಿಸಿಕೊಂಡಿದ್ದು, ಅಂತಿಮವಾಗಿ 18 ಜಾನುವಾರುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದವು ಎಂದರು.

ರೈತ ದಸರಾ ಉಪಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಸಿದ್ಧರಾಮು, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಜಿ.ಎಚ್. ಮಂಜುನಾಥ್, ಮೈಸೂರು ವಿಭಾಗದ ಜಂಟಿ ನಿರ್ದೇಶಕ ಡಾ. ಶ್ರೀಧರ್ ಮೂರ್ತಿ, ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕ ಡಾ. ರಮೇಶ್, ಮೈಸೂರು ನಗರ ಗೋಪಾಲಕರ ಸಂಘದ ಅಧ್ಯಕ್ಷ ಡಿ. ನಾಗಭೂಷಣ್, ಉಪಾಧ್ಯಕ್ಷ ಜೆ. ಗೋಪಿ ಮೊದಲಾದವರು ಇದ್ದರು.