ಮೈಸೂರು ದಸರಾ ಮಹೋತ್ಸವದ ಮರದ ಅಂಬಾರಿ ತಾಲೀಮಿನ ವೇಳೆ ಮಹೇಂದ್ರ ಆನೆಯು ರಾಜಮಾರ್ಗದಲ್ಲಿ ದಿಢೀರ್ ಹಿಂದೇಟು ಹಾಕಿದೆ. ಆನೆಯ ಸುರಕ್ಷತೆಗಾಗಿ 600 ಕೆ.ಜಿ. ಭಾರದ ಅಂಬಾರಿಯನ್ನು ಕೆಳಗಿಳಿಸಿ ತಾಲೀಮನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಇದರಿಂದಾಗಿ ಈ ಬಾರಿಯ ಅಂಬಾರಿ ಹೊರುವ ಪಟ್ಟಿಯಿಂದ ಮಹೇಂದ್ರ ಆನೆ ಹೊರಬೀಳುವ ಸಾಧ್ಯತೆ ಇದೆ.

ಮೈಸೂರು (ಅ.09): ದಸರಾ ಗಜಪಡೆಯ ಮಹೇಂದ್ರ ಆನೆಯು ಹಿಂದೇಟು ಹಾಕಿದ್ದರಿಂದ ಇದೇ ಮೊದಲ ಬಾರಿಗೆ ಮರದ ಅಂಬಾರಿ ತಾಲೀಮು ರಾಜಮಾರ್ಗದಲ್ಲಿ ಅರ್ಧಕ್ಕೆ ಮೊಟಕುಗೊಂಡಿರುವ ಘಟನೆ ಗುರುವಾರ ಸಂಜೆ ನಡೆದಿದೆ.

ಮೈಸೂರು ಅರಮನೆಯಿಂದ ಮರದ ಅಂಬಾರಿ ಹೊತ್ತು ಸಾಗಿದ ಮಹೇಂದ್ರ ಆನೆಯು ಕೆ.ಆರ್. ವೃತ್ತದಲ್ಲಿ ಹಿಂದೇಟು ಹಾಕಿತು. ಕುಮ್ಕಿ ಆನೆಗಳ ಸಹಾಯದಿಂದ ಮುಂದೆ ಸಾಗಿದ ಮಹೇಂದ್ರ ಬಾಟಾ ಶೋರೂಂ ಜಂಕ್ಷನ್ ಬಳಿ ಮತ್ತೆ ನಿಧಾನವಾಯಿತು. ಅಲ್ಲಿಂದ ಮುಂದೆ ಸಾಗಿದ ಮಹೇಂದ್ರ, ಆಯುರ್ವೇದ ವೃತ್ತದಲ್ಲಿ ಮುಂದೇನೂ ಹೋಗದೇ ಹಿಂದೇನೂ ಬಾರದೇ ನಿಂತೇ ಬಿಟ್ಟಿತ್ತು.

ಹೀಗಾಗಿ, ಆನೆಯ ಸುರಕ್ಷತೆಯ ದೃಷ್ಟಿಯಿಂದ ರಸ್ತೆ ಬದಿಯಲ್ಲಿರುವ ಮರಕ್ಕೆ ಹಗ್ಗ ಕಟ್ಟಿ, ಮರದ ಅಂಬಾರಿಯನ್ನು ಮಹೇಂದ್ರ ಮೈಮೇಲಿಂದ ಇಳಿಸಿ, ಗೂಡ್ಸ್ ಆಟೋದಲ್ಲಿ ಇರಿಸಲಾಯಿತು. ಅಲ್ಲದೆ, ತಾಲೀಮಿನ್ನು ಅರ್ಧಕ್ಕೆ ಮೊಟಕುಗೊಳಿಸಿ ಎಲ್ಲ ಆನೆಗಳು ವಾಪಸ್ ಅರಮನೆಗೆ ಸಾಗಿದವು. ಮರದ ಅಂಬಾರಿಯನ್ನು ಗೂಡ್ಸ್ ಆಟೋದಲ್ಲಿ ಅರಮನೆಗೆ ಸುರಕ್ಷಿತವಾಗಿ ಸಾಗಿಸಲಾಯಿತು.

2ನೇ ಬಾರಿ ಮೊಟಕು

ಮರದ ಅಂಬಾರಿ ಹೊರುವ ತಾಲೀಮು ಮೊದಲ ದಿನ ಹೊತ್ತಿದ್ದ ಮಹೇಂದ್ರ ಆನೆಯು ಮಳೆಯಿಂದಾಗಿ ಅರಮನೆ ಆವರಣಕ್ಕೆ ತಾಲೀಮು ಮೊಟಕುಗೊಂಡಿತ್ತು. ಕಳೆದ ಸೆ.25 ರಂದು ಮರದ ಅಂಬಾರಿ ಹೊತ್ತಿದ್ದ ಮಹೇಂದ್ರ ಆನೆ ಜೋರು ಮಳೆಯ ನಡುವೆ ತಾಲೀಮಿಗೆ ತೆರಳಲು ಒಲ್ಲೆ ಎಂದ ಕಾರಣ ಮರದ ಅಂಬಾರಿಯ ತಾಲೀಮು ಬಲರಾಮ ದ್ವಾರದಲ್ಲಿ ಮೊಟಕುಗೊಂಡಿತು.

ಅದೇ ರೀತಿ ಗುರುವಾರ ಸಂಜೆ 4.30ಕ್ಕೆ ಅರಮನೆ ಆವರಣದಲ್ಲಿ ಸುತ್ತಿಕೊಂಡು ಜಂಬೂಸವಾರಿ ಮಾರ್ಗದಲ್ಲಿ ಸರಾಗವಾಗಿಯೇ ಸಾಗುತ್ತಿದ್ದ ಮಹೇಂದ್ರ ಆನೆಯು ಕೆ.ಆರ್. ವೃತ್ತ ತಲುಪುವಷ್ಟರಲ್ಲಿ ಹಿಂದೇಟು ಹಾಕಲು ಆರಂಭಿಸಿತು. ಮಾವುತ ರಾಜಣ್ಣ, ಕಾವಾಡಿ ಮಲ್ಲಿಕಾರ್ಜುನ ಅಣತಿಯಂತೆ ಮುಂದೆ ಸಾಗಿದ ಮಹೇಂದ್ರ ಆಯುರ್ವೇದ ವೃತ್ತದಲ್ಲಿ ನಿಂತಿದ್ದರಿಂದ ತಾಲೀಮು ಅರ್ಧಕ್ಕೆ ಮೊಟಕುಗೊಂಡಿತು.

ಮೈಮೇಲೆ 600 ಕೆ.ಜಿ. ಭಾರ

ಮೈಸೂರು ಅರಮನೆಯಲ್ಲಿ ರಾಜವಂಶಸ್ಥರು ವಾಸವಾಗಿರುವ ಖಾಸ್ ಅರಮನೆ ಬಳಿ ಮಹೇಂದ್ರ ಆನೆ ಮೈಮೇಲೆ ಮರ ಅಂಬಾರಿ ಕೂರಿಸಿ ಹಗ್ಗದ ಸಹಾಯದಿಂದ ಬಿಗಿಯಾಗಿ ಕಟ್ಟಲಾಯಿತು. ಮರದ ಅಂಬಾರಿಯೊಳಗೆ 4 ಮರಳು ಮೂಟೆಗಳನ್ನು ಇರಿಸಲಾಯಿತು. 280 ಕೆ.ಜಿ ತೂಕದ ಮರದ ಅಂಬಾರಿ, ಗಾದಿ, ನಮ್ದಾ, ಮರಳು ಮೂಟೆಗಳು ಸೇರಿದಂತೆ ಸುಮಾರು 600 ಕೆ.ಜಿ. ಭಾರವನ್ನು ಹೊತ್ತು ಸಾಗಿತು. ಮಹೇಂದ್ರ ಆನೆಯೊಂದಿಗೆ ಕುಮ್ಕಿ ಆನೆಗಳಾಗಿ ಲಕ್ಷ್ಮೀ ಮತ್ತು ರೂಪಾ ಸಾಗಿದವು. ಉಳಿದ ಆನೆಗಳು ಹಿಂಬಾಲಿಸಿದವು.

ಆಯುರ್ವೇದ ವೃತ್ತದಲ್ಲಿ ತಾಲೀಮು ಮೊಟಕುಗೊಂಡಿದ್ದರಿಂದ ಮಹೇಂದ್ರ, ಅಭಿಮನ್ಯು, ಧನಂಜಯ, ಪ್ರಶಾಂತ, ಮಹೇಂದ್ರ, ಸುಗ್ರೀವ, ಏಕಲವ್ಯ, ಗೋಪಿ, ಶ್ರೀಕಂಠ, ಶ್ರೀರಾಮ, ಕಾವೇರಿ, ರೂಪಾ, ಲಕ್ಷ್ಮೀ ಮತ್ತು ಚೈತ್ರಾ ಆನೆಗಳು ಅರಮನೆಯ ಆನೆ ಬಿಡಾರಕ್ಕೆ ವಾಪಸ್ ಆದವು.

----

ಮಹೇಂದ್ರ ಆನೆಯ ಮೇಲೆ ಮೊದಲ ಮರದ ಅಂಬಾರಿ ಹೊರಿಸಿದಾಗ ಜೋರು ಮಳೆ ಕಾರಣ ಅರಮನೆ ಬಲರಾಮ ದ್ವಾರದ ಬಳಿಯೇ ನಿಂತುಕೊಂಡಿತ್ತು. ಆನೆಯ ಸುರಕ್ಷತೆಗಾಗಿ ಮರದ ಅಂಬಾರಿ ಇಳಿಸಲಾಗಿತ್ತು. ಇವತ್ತು ಸಹ ಮಹೇಂದ್ರ ಆನೆಯ ಮೇಲೆ ಮರದ ಅಂಬಾರಿಯಲ್ಲಿ ಅರ್ಧಭಾಗದಷ್ಟು ಭಾರ ಹಾಕಿ ತಾಲೀಮು ಮಾಡಿಲಾಯಿತು. ಆದರೆ, ಆಯುರ್ವೇದ ವೃತ್ತದ ಬಳಿ ನಿಂತುಕೊಂಡಿದ್ದರಿಂದ ಆನೆಯ ಸುರಕ್ಷತೆಯ ದೃಷ್ಟಿಯಿಂದ ಮರದ ಅಂಬಾರಿಯನ್ನು ಇಳಿಸಿ, ವಾಪಸ್ ಕರೆ ತರಲಾಗಿದೆ. ಈವರೆಗೆ ಯಾವುದೇ ಕಾರಣ ತಿಳಿದು ಬಂದಿಲ್ಲ. ಹೀಗಾಗಿ, ಮಹೇಂದ್ರ ಆನೆಯ ಆರೋಗ್ಯ ಪರೀಕ್ಷೆ ಮಾಡಲಾಗುತ್ತಿದೆ.

- ಡಾ.ಐ.ಬಿ. ಪ್ರಭುಗೌಡ, ಡಿಸಿಎಫ್

----

ಅಂಬಾರಿ ಹೊರುವ ಪಟ್ಟಿಯಿಂದ ಮಹೇಂದ್ರ ಔಟ್!?

ದಸರಾ ಮಹೋತ್ಸವಕ್ಕೆ 5ನೇ ಬಾರಿಗೆ ಆಗಮಿಸಿರುವ 42 ವರ್ಷದ ಮಹೇಂದ್ರ ಆನೆಯು ಶ್ರೀರಂಗಪಟ್ಟಣ ದಸರಾದಲ್ಲಿ ಮರದ ಅಂಬಾರಿ ಹೊತ್ತು ಗಮನ ಸೆಳೆದಿತ್ತು. ಈ ಹಿಂದಿನ ವರ್ಷಗಳಲ್ಲಿ ತಾಲೀಮಿನಲ್ಲಿ ಸರಾಗವಾಗಿಯೇ ಮರಳು ಭಾರ, ಮರದ ಅಂಬಾರಿ ಹೊತ್ತು ಗಮನ ಸೆಳೆದಿದ್ದು ಅಲ್ಲದೆ, ಅಂಬಾರಿ ಹೊರುವ ಆನೆಯ ಪಟ್ಟಿಗೆ ಸೇರ್ಪಡೆಯಾಗಿತ್ತು.

ಆದರೆ, ಈ ಸಾಲಿನಲ್ಲಿ ತಾಲೀಮಿನಲ್ಲಿ ಮೊದಲು ಮಳೆಯಿಂದಾಗಿ ಅರ್ಧಕ್ಕೆ ಮೊಟಕು ಗೊಂಡಿತ್ತು. ಈಗ ಭಾರ ಹೊತ್ತು ಮುಂದೆ ಸಾಗಲಾಗದೇ ನಿಂತು ಬಿಟ್ಟಿರುವ ಕಾರಣ ಮಹೇಂದ್ರ ಆನೆಯು ಬಹುತೇಕವಾಗಿ ಈ ಬಾರಿ ಅಂಬಾರಿ ಹೊರುವ ಆನೆಗಳ ಪಟ್ಟಿಯಿಂದ ಔಟ್ ಆಗಿದೆ. ಉಳಿದಂತೆ ಪ್ರಶಾಂತ ಮತ್ತು ಧನಂಜಯ ಆನೆಯು ಅಂಬಾರಿ ಹೊರುವ ಆನೆಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. ಸುಗ್ರೀವ ಮತ್ತು ಏಕಲವ್ಯ ಆನೆಗಳು ಸಹ ಮರದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತು ಭರವಸೆ ಮೂಡಿಸುವ ಮೂಲಕ ಪಟ್ಟಿಯಲ್ಲಿ ಉಳಿದುಕೊಂಡಿವೆ.