ಮೈಸೂರಿನ 'ಎಸ್‌ಟಿಜೆ ಗೋಲ್ಡ್' ಮಾಲೀಕ ಸೌಂದರ್‌ರಾಜ್, ಗಿರವಿ ಇಟ್ಟ ಚಿನ್ನ ಬಿಡಿಸಿಕೊಡುವ ನೆಪದಲ್ಲಿ ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾನೆ. ಈ ಪ್ರಕರಣವನ್ನು ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದು, BUDS ಕಾಯ್ದೆಯಡಿ 70ಕ್ಕೂ ಹೆಚ್ಚು ಸಂತ್ರಸ್ತರು ದೂರು ದಾಖಲಿಸಿದ್ದಾರೆ.

ಮೈಸೂರು: ಗಿರವಿ ಇಟ್ಟಿದ್ದ ಚಿನ್ನಾಭರಣಗಳನ್ನು ಬಿಡಿಸಿಕೊಟ್ಟು, ಖರೀದಿಸುವ ನೆಪದಲ್ಲಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಪ್ರಕರಣ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಯಲಾಗಿದೆ. ಮೈಸೂರಿನ ಪ್ರಸಿದ್ಧ 'ಎಸ್‌ಟಿಜೆ ಗೋಲ್ಡ್' (STJ Gold) ಸಂಸ್ಥೆಯ ಮಾಲೀಕ ಸೌಂದರ್‌ರಾಜ್ ಅಲಿಯಾಸ್ ಚಿನ್ನತಂಬಿ ಎಂಬಾತನ ವಿರುದ್ಧ ಈಗ ಸಾಲು ಸಾಲು ದೂರುಗಳು ದಾಖಲಾಗುತ್ತಿದ್ದು, ವಂಚನೆಯ ವ್ಯಾಪ್ತಿ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಈ ಮಲ್ಟಿ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣವನ್ನು ಪ್ರಸ್ತುತ ಮೈಸೂರು ಸಿಸಿಬಿ (CCB) ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.

Add Asianetnews Kannada as a Preferred SourcegooglePreferred

BUDS ಕಾಯ್ದೆಯಡಿ ಪ್ರಕರಣ ದಾಖಲು

ಸಂತ್ರಸ್ತರ ದೂರುಗಳನ್ನು ಆಧರಿಸಿ ಸಿಸಿಬಿ ಪೊಲೀಸರು ಸಾರ್ವಜನಿಕ ಠೇವಣಿ ರಕ್ಷಣೆ ಮತ್ತು ವಂಚನೆ ತಡೆ ಕಾಯ್ದೆಯಾದ BUDS Act (Banning of Unregulated Deposit Schemes Act) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಈವರೆಗೆ ಸುಮಾರು 70ಕ್ಕೂ ಹೆಚ್ಚು ಸಂತ್ರಸ್ತರು ದಾಖಲೆ ಸಮೇತ ಸಿಸಿಬಿ ಪೊಲೀಸರ ಮುಂದೆ ಬಂದು ಚಿನ್ನತಂಬಿ ವಿರುದ್ಧ ಅಧಿಕೃತವಾಗಿ ದೂರು ನೀಡಿದ್ದಾರೆ.

ವಂಚನೆಯ ಜಾಲ ಎಷ್ಟು ದೊಡ್ಡದು?

ಆರೋಪಿ ಚಿನ್ನತಂಬಿ 2017 ರಿಂದಲೂ ಈ ಅಕ್ರಮ ದಂದೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಪ್ರಾಥಮಿಕ ಅಂದಾಜಿನ ಪ್ರಕಾರ ಈತ ಸಾರ್ವಜನಿಕರಿಗೆ ಸುಮಾರು 20 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ವಂಚನೆ ಮಾಡಿರುವ ಬಲವಾದ ಅನುಮಾನ ವ್ಯಕ್ತವಾಗಿದೆ. ದಿನ ಕಳೆದಂತೆ ದೂರು ನೀಡುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ವಂಚನೆಯ ಮೊತ್ತ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.

ವಂಚನೆ ಮಾಡುತ್ತಿದ್ದ ಶೈಲಿ

ಬ್ಯಾಂಕುಗಳಲ್ಲಿ ಅಥವಾ ಖಾಸಗಿ ಫೈನಾನ್ಸ್‌ಗಳಲ್ಲಿ ಜನರು ತುರ್ತು ಪರಿಸ್ಥಿತಿಗಾಗಿ ಅಡವಿಟ್ಟಿದ್ದ ಚಿನ್ನವನ್ನು ತಾನೇ ಹಣ ಕಟ್ಟಿ ಬಿಡಿಸಿಕೊಡುವುದಾಗಿ ಚಿನ್ನತಂಬಿ ನಂಬಿಸುತ್ತಿದ್ದ. ಆ ಬಳಿಕ ಗ್ರಾಹಕರಿಗೆ ವಂಚಿಸಲು ಈ ಕೆಳಗಿನ ಮಾರ್ಗಗಳನ್ನು ಬಳಸುತ್ತಿದ್ದ:

ಹಣ ಪಾವತಿಯಲ್ಲಿ ವಂಚನೆ

ಚಿನ್ನವನ್ನು ಬಿಡಿಸಿಕೊಂಡ ನಂತರ ಒಪ್ಪಂದದ ಪ್ರಕಾರ ಗ್ರಾಹಕರಿಗೆ ನೀಡಬೇಕಾಗಿದ್ದ ಪೂರ್ಣ ಹಣವನ್ನು ನೀಡದೆ ಸತಾಯಿಸುತ್ತಿದ್ದ.

ತೂಕದಲ್ಲಿ ಮೋಸ, ಚಿನ್ನ ಕರಗಿಸಿ ವಂಚನೆ

ಆಭರಣಗಳ ನಿಜವಾದ ತೂಕಕ್ಕಿಂತ ಕಡಿಮೆ ತೂಕ ತೋರಿಸಿ ಜನರನ್ನು ನಂಬಿಸುತ್ತಿದ್ದ. ಕೆಲವು ಪ್ರಕರಣಗಳಲ್ಲಿ ಗ್ರಾಹಕರಿಗೆ ತಿಳಿಸದೆಯೇ ಅವರ ಒಡೆತನದ ಚಿನ್ನವನ್ನು ಕರಗಿಸಿ, ಅದರಲ್ಲಿದ್ದ ಶುದ್ಧ ಚಿನ್ನವನ್ನು ಲಪಟಾಯಿಸಿ ವಂಚಿಸಿದ್ದಾನೆ.

ಕಮಿಷನರ್ ಕಚೇರಿ ಮುಂದೆ ಭಾರಿ ಪ್ರತಿಭಟನೆ:

ತಮ್ಮ ಕಷ್ಟದ ಕಾಲದ ಆಧಾರವಾಗಿದ್ದ ಒಡವೆ ಹಾಗೂ ಕಷ್ಟಪಟ್ಟು ಸಂಪಾದಿಸಿದ ಹಣ ಎರಡನ್ನೂ ಕಳೆದುಕೊಂಡು ರೊಚ್ಚಿಗೆದ್ದ 50ಕ್ಕೂ ಹೆಚ್ಚು ಸಂತ್ರಸ್ತರು ಮೈಸೂರು ನಗರ ಪೊಲೀಸ್ ಕಮಿಷನರ್ ಕಚೇರಿ ಮುಂದೆ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಆರೋಪಿಯನ್ನು ತಕ್ಷಣ ಬಂಧಿಸಿ ತಮಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದ್ದರು.

ದಾಖಲೆ ಸಮೇತ ಬರುವಂತೆ ಪೊಲೀಸರ ಮನವಿ:

ಪ್ರತಿಭಟನೆಯ ತೀವ್ರತೆಯನ್ನು ಅರಿತು ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಸಿಸಿಬಿ ಮೂಲಕ ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದರು. ಅಲ್ಲದೆ, ಸಾರ್ವಜನಿಕರಲ್ಲಿ ಮನವಿ ಮಾಡಿ, "ಯಾರೆಲ್ಲಾ ಈ ಎಸ್‌ಟಿಜೆ ಗೋಲ್ಡ್ ಮಾಲೀಕನಿಂದ ಮೋಸ ಹೋಗಿದ್ದಾರೋ, ಅವರೆಲ್ಲರೂ ಭಯಪಡದೆ ತಮ್ಮಲ್ಲಿರುವ ಅಡವಿಟ್ಟ ರಶೀದಿ ಹಾಗೂ ವ್ಯವಹಾರದ ದಾಖಲೆಗಳ ಸಮೇತ ಬಂದು ದೂರು ನೀಡಬಹುದು" ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ ಈಗ 70ಕ್ಕೂ ಹೆಚ್ಚು ಜನ ಸಾಕ್ಷ್ಯಧಾರಗಳೊಂದಿಗೆ ದೂರು ನೀಡಿದ್ದು, ಆರೋಪಿ ವಿರುದ್ಧ ಕಾನೂನು ಉರುಳು ಬಿಗಿಯಾಗುತ್ತಿದೆ.