ಮೈಸೂರು ನಗರ ಪೊಲೀಸ್ ಘಟಕದಿಂಧ ಮಹಿಳಾ ಸುರಕ್ಷತೆಗೆ ಹೊಸ ಪ್ಲಾನ್
ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಮೈಸೂರು ನಗರ ಪೊಲೀಸ್ ಘಟಕದಲ್ಲಿ ಚಾಮುಂಡಿ ಮಹಿಳಾ ಸುರಕ್ಷಾ ಪಡೆಯನ್ನು ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಒಳಗೊಂಡಂತೆ ರಚಿಸಲಾಗಿದೆ.
ಮೈಸೂರು : ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಮೈಸೂರು ನಗರ ಪೊಲೀಸ್ ಘಟಕದಲ್ಲಿ ಚಾಮುಂಡಿ ಮಹಿಳಾ ಸುರಕ್ಷಾ ಪಡೆಯನ್ನು ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಒಳಗೊಂಡಂತೆ ರಚಿಸಲಾಗಿದೆ.
ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಚಾಮುಂಡಿ ಮಹಿಳಾ ಸುರಕ್ಷತಾ ಪಡೆ ಹಾಗೂ ಪಡೆಯ ಗಸ್ತು ವಾಹನಕ್ಕೆ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರು ಶನಿವಾರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಸಾರ್ವಜನಿಕ ಸ್ಥಳ ಸೇರಿದಂತೆ ಶಾಲಾ ಕಾಲೇಜು ಮತ್ತು ಉದ್ಯೋಗ ಸ್ಥಳದಲ್ಲಿ ಏನಾದರೂ ತೊಂದರೆ ಕಿರುಕುಳ ಸಂಭವಿಸಿದರೆ ವನಿತೆಯ ರಕ್ಷಣೆಗೆ ಚಾಮುಂಡಿ ಮಹಿಳಾ ಸುರಕ್ಷಾ ಪಡೆ ಬರಲಿದೆ. ಈ ಪಡೆ ಕೇವಲ ಮಹಿಳೆಯರು ಮತ್ತು ಮಕ್ಕಳ ರಕ್ಷಣಾ ಕಾರ್ಯಕ್ಕೆ ಸಿಮೀತವಾಗಿರದೇ ರ್ಯಾಗಿಂಗ್, ಲೈಂಗಿಕ ದೌರ್ಜನ್ಯ, ಕೌಟುಂಬಿಕ ದೌರ್ಜನ್ಯ ಸೇರಿದಂತೆ ನಾನಾ ಕಾನೂನು ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಿದೆ.
ಈ ಪಡೆಯಲ್ಲಿ ಎಸ್‌ಐ 16, ಎಎಸ್‌ಐ 4, ಮಹಿಳಾ ಮುಖ್ಯ ಪೇದೆ ಮತ್ತು ಪೇದೆ 20 ಸೇರಿದಂತೆ ಒಟ್ಟು 40 ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದಾರೆ. 2 ವಾಹನಗಳಲ್ಲಿ ಎರಡು ಪಾಳಿಯಲ್ಲಿ ನಗರದೆಲ್ಲೆಡೆ ಗಸ್ತು ತಿರುಗುವ ಮೂಲಕ ವನಿತೆಯರಿಗೆ ಈ ಪಡೆ ಕಾವಾಲಾಗಿದೆ. ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮತ್ತು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಈ ಪಡೆ ಕಾರ್ಯ ನಿರ್ವಹಿಸಲಿದೆ. ಪಡೆಯ ಗಸ್ತಿಗೆ ಎರಡು ವಾಹನಗಳನ್ನು ನೀಡಲಾಗಿದ್ದು, ಪ್ರತಿ ವಾಹನದಲ್ಲಿ ಒಬ್ಬರು ಮಹಿಳಾ ಎಎಸ್‌ಐ, ಮಹಿಳಾ ಮುಖ್ಯ ಪೇದೆ ಮತ್ತು ಪೇದೆಯೊಂದಿಗೆ ಚಾಲಕರಾಗಿ ಪುರುಷ ಪೇದೆ ಕಾರ್ಯ ನಿರ್ವಹಿಸಲಿದ್ದಾರೆ.
ಪಡೆಯ ಕಾರ್ಯಚಟುವಟಿಕೆಗಳು
ಶಾಲಾ ಕಾಲೇಜು ಹೆಣ್ಣು ಮಕ್ಕಳಿಗೆ ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ ನಿಷೇಧ, ಕೌಟುಂಬಿಕ ದೌರ್ಜನ್ಯ ಕಾಯಿದೆ ಬಗ್ಗೆ ಜಾಗೃತಿ ಮೂಡಿಸುವುದು. ಬಸ್ ನಿಲ್ದಾಣ, ರೈಲು ನಿಲ್ದಾಣ, ದೇವಸ್ಥಾನ, ಗಾರ್ಮೆಂಟ್ಸ್ ಗಳ ಬಳಿ ಗಸ್ತು ತಿರುಗುವ ಮೂಲಕ ಮಹಿಳೆಯರಿಗೆ ಪುಂಡರಿಂದ ಆಗುವ ಕಿರುಕುಳ ತಪ್ಪಿಸುವುದು.
ಮಹಿಳೆಯರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಅನುಮಾನಸ್ಪದವಾಗಿ ಕಂಡು ಬರುವವರ ವಶಕ್ಕೆ ಪಡೆದು ಎಚ್ಚರಿಕೆ ನೀಡುವುದು. ಹಾಸ್ಟೆಲ್ ಮತ್ತು ಪಿಜಿಗಳಲ್ಲಿ ವಾಸ್ತವ್ಯವಿರುವ ಮಹಿಳೆಯರು ಮತ್ತು ಮಕ್ಕಳಿಗೆ ಸೂಕ್ತ ಕಾನೂನು ರಕ್ಷಣೆ ಮತ್ತು ನಾನಾ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು. ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ಮತ್ತು ಸ್ವರಕ್ಷಣೆ ಕುರಿತು ತಿಳವಳಿಕೆ ಮೂಡಿಸುವುದು.
ಮಾದಕ ವಸ್ತುಗಳಿಂದ ಆಗುವ ದುಷ್ಪಾರಿಣಾಮದ ಬಗ್ಗೆ ಜಾಗೃತಿ ಮೂಡಿಸುವುದು. ಶಾಲಾ ಕಾಲೇಜು ಮತ್ತು ಮಹಿಳೆಯರು ಕರ್ತವ್ಯ ನಿರ್ವಹಿಸುವ ಸ್ಥಳಗಳಲ್ಲಿ ಪಡೆಯ ಅಧಿಕಾರಿಗಳು ಸಭೆ ನಡೆಸಿ, ಮುಂಜಾಗ್ರತೆವಹಿಸುವುದು. ಸಮಸ್ಯೆಯಾದರೆ ಮಾಹಿತಿ ನೀಡುವಂತೆ ತಿಳವಳಿಕೆ ನೀಡುವುದು.
ಇದೇ ವೇಳೆ ಚಾಮುಂಡಿ ಮಹಿಳಾ ಸುರಕ್ಷಾ ಪಡೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾದಲ್ಲಿ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಡಿಸಿಪಿಗಳಾದ ಎಸ್. ಜಾಹ್ನವಿ, ಮಾರುತಿ, ಎಸಿಪಿಗಳಾದ ಶಾಂತಮಲ್ಲಪ್ಪ, ಗಜೇಂದ್ರಪ್ರಸಾದ್, ಪರಶುರಾಮಪ್ಪ, ಅಶ್ವತ್ಥನಾರಾಯಣ್, ಸಂದೇಶ್ ಕುಮಾರ್, ಚಂದ್ರಶೇಖರ್, ಸುರೇಶ್ ಮೊದಲಾದವರು ಇದ್ದರು.
ಮೈಸೂರು ನಗರದಲ್ಲಿ ಮಹಿಳೆಯರ ರಕ್ಷಣೆಗಾಗಿ ಪ್ರತ್ಯೇಕವಾಗಿ ಚಾಮುಂಡಿ ಮಹಿಳಾ ಸುರಕ್ಷಾ ಪಡೆಯನ್ನು ಸ್ಥಾಪಿಸಲಾಗಿದೆ. ಈ ಪಡೆಯ ಸದಸ್ಯರು ಮಹಿಳೆಯ ಮೇಲಿನ ದೌರ್ಜನ್ಯ ತಡೆಯುವ, ಮಹಿಳೆಯರ ರಕ್ಷಣೆಗೆ ಇರುವ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ. ಈ ಪಡೆಯವ 2 ವಾಹನಗಳು ನಗರದೆಲ್ಲೆಡೆ ಗಸ್ತು ತಿರುಗಲಿದ್ದು, ಪುಂಡರ ಹಾವಳಿ ನಿಯಂತ್ರಿಸಿ ಮಹಿಳೆಯರಿಗೆ ರಕ್ಷಣೆಗೆ ನೀಡಲಿದೆ.
- ರಮೇಶ್ ಬಾನೋತ್, ನಗರ ಪೊಲೀಸ್ ಆಯುಕ್ತ