ಮೈಸೂರು, ಚಾಮರಾಜನಗರ- ಬಿಎಸ್ಪಿಯಿಂದ ಮತ್ತೊಂದು ಹೋರಾಟ
ಮೈಸೂರು ಸಾಮಾನ್ಯ, ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಬಹುಜನ ಸಮಾಜ ಪಕ್ಷವು ಮತ್ತೊಂದು ಹೋರಾಟಕ್ಕೆ ಅಣಿಯಾಗಿದೆ.
ಅಂಶಿ ಪ್ರಸನ್ನಕುಮಾರ್
ಮೈಸೂರು : ಮೈಸೂರು ಸಾಮಾನ್ಯ, ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಬಹುಜನ ಸಮಾಜ ಪಕ್ಷವು ಮತ್ತೊಂದು ಹೋರಾಟಕ್ಕೆ ಅಣಿಯಾಗಿದೆ.
ಮೈಸೂರಿನಿಂದ ರೇಣುಕಾ ರಾಜ್, ಚಾಮರಾಜನಗರದಿಂದ ಮಹದೇವಯ್ಯ ಅವರು ಬಿಎಸ್ಪಿ ಅಭ್ಯರ್ಥಿಗಳಾಗಿದ್ದಾರೆ.
ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಬಿಎಸ್ಪಿ 1994 ರಿಂದಲೂ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದೆ. ಆದರೆ, ಯಶಸ್ಸು ಸಿಕ್ಕಿದ್ದು 2018ರ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಮಾತ್ರ. ಅಲ್ಲಿ ಸತತ ಮೂರು ಸೋಲುಗಳ ನಂತರ ಎನ್.ಮಹೇಶ್ ಗೆದ್ದಿದ್ದರು. ಈಗ ಅವರು ಬಿಜೆಪಿಯಲ್ಲಿದ್ದಾರೆ.
ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಬಿಎಸ್ಪಿ ಪ್ರಥಮವಾಗಿ 2004 ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಎನ್. ಶಿವಮಲ್ಲು ಅವರನ್ನು ಕಣಕ್ಕಿಳಿಸಿತ್ತು. ಅವರು 78,855 ಮತಗಳನ್ನು ಪಡೆದಿದ್ದರು. 2009 ರಲ್ಲಿ ಚಾಮರಾಜನಗರದಿಂದ ಎನ್. ಮಹೇಶ್ ಸ್ಪರ್ಧಿಸಿ, 68,447, ಮೈಸೂರಿನಿಂದ ಸೈಯದ್ ನಿಜಾಂ ಅಲಿ ಸ್ಪರ್ಧಿಸಿ, 19,895 ಮತಗಳನ್ನು ಗಳಿಸಿದ್ದರು.
2014 ರಲ್ಲಿ ಚಾಮರಾಜನಗರದಲ್ಲಿ ಮತ್ತೆ ಶಿವಮಲ್ಲು ಸ್ಪರ್ಧಿಸಿ, 34,846, ಮೈಸೂರಿನಲ್ಲಿ ಸಿ, ಮೋಹನಕುಮಾರ್ ಸ್ಪರ್ಧಿಸಿ, 13,637 ಮತಗಳನ್ನು ಪಡೆದಿದ್ದರು.
2019 ರಲ್ಲಿ ಮೈಸೂರಿನಲ್ಲಿ ಬಿಎಸ್ಪಿಯ ಬಿ. ಚಂದ್ರ- 24,597, ಚಾಮರಾಜನಗರದಲ್ಲಿ ಬಿಎಸ್ಪಿಯ ಡಾ. ಶಿವಕುಮಾರ್- 87,631 ಮತಗಳನ್ನು ಪಡೆದಿದ್ದರು.
ಮೈಸೂರಿನಲ್ಲಿ ಬಿಜೆಪಿಯ ಗೆಲುವಿನ ಅಂತರ ಹೆಚ್ಚಿರುವುದರಿಂದ ಬಿಎಸ್ಪಿಯ ಬಗ್ಗೆ ಪ್ರಸ್ತಾಪವಾಗಲಿಲ್ಲ. ಆದರೆ ಚಾಮರಾಜನಗರದಲ್ಲಿ ಗೆಲುವಿನ ಅಂತರ ತೀರಾ ಕಡಿಮೆ ಅಂದರೆ1,817 ಮತಗಳು ಇತ್ತು. 5,68,537 ಮತಗಳನ್ನು ಪಡೆದ ಬಿಜೆಪಿಯ ವಿ. ಶ್ರೀನಿವಾಸಪ್ರಸಾದ್ ಗೆದ್ದರು. 5.66,720 ಮತಗಳನ್ನು ಪಡೆದ ಕಾಂಗ್ರೆಸ್‌ನ ಆರ್. ಧ್ರುವನಾರಾಯಣ ಸೋತರು. ಹೀಗಾಗಿ ಕಾಂಗ್ರೆಸ್ ಸೋಲಿಗೆ ಬಿಎಸ್ಪಿ ಕಾರಣ ಎಂದು ವಿಶ್ಲೇಷಿಸಲಾಯಿತು. ಆದರೆ ವಾಸ್ತವವಾಗಿ ಜೆಡಿಎಸ್ ಕಣದಲ್ಲಿ ಇಲ್ಲದಿರುವುದು ಹಾಗೂ ಆ ಪಕ್ಷಗಳ ಮತಗಳು ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್‌ಗೆ ವರ್ಗಾವಣೆ ಆಗದಿರುವುದು ಎಂದು ವ್ಯಾಖ್ಯಾನಿಸಬಹುದು.
ಏಕೆಂದರೆ 2009 ರಲ್ಲಿ ಮೈಸೂರು- ಕೊಡಗು ಕ್ಷೇತ್ರದಲ್ಲಿ ಜೆಡಿಎಸ್‌ನ ಬಿ.ಎ. ಜೀವಿಜಯ 2,16,283 ಮತಗಳನ್ನು ಪಡೆದಿದ್ದರು. 3,54.810 ಮತಗಳನ್ನು ಪಡೆದಿದ್ದ ಕಾಂಗ್ರೆಸ್‌ನ ಎಚ್. ವಿಶ್ವನಾಥ್ ಅವರು 3,47,119 ಮತಗಳನ್ನು ಗಳಿಸಿದ್ದ ಬಿಜೆಪಿಯ ಸಿ.ಎಚ್. ವಿಜಯಶಂಕರ್ ಅವರನ್ನು 7,691 ಮತಗಳ ಅಂತರದಿಂದ ಸೋಲಿಸಿದ್ದರು.
2014 ರಲ್ಲಿ ಜೆಡಿಎಸ್‌ನ ಚಂದ್ರಶೇಖರಯ್ಯ ಅವರಿಗೆ 1,38,547 ಮತಗಳು ದೊರೆತಿದ್ದವು. 5,03,908 ಮತಗಳನ್ನು ಪಡೆದಿದ್ದ ಬಿಜೆಪಿಯ ಪ್ರತಾಪ್ ಸಿಂಹ ಅವರು 4,72,300 ಮತಗಳನ್ನು ಗಳಿಸಿದ್ದ ಕಾಂಗ್ರೆಸ್‌ನ ಎಚ್. ವಿಶ್ವನಾಥ್ ಅವರನ್ನು 31,608 ಮತಗಳ ಅಂತರದಿಂದ ಸೋಲಿಸಿದ್ದರು.
2019 ರಲ್ಲಿ ಜೆಡಿಎಸ್ ಕಣದಲ್ಲಿ ಇರಲಿಲ್ಲ. ಬಿಜೆಪಿಯ ಪ್ರತಾಪ್‌ಸಿಂಹ ಕಾಂಗ್ರೆಸ್‌ನ ಸಿ.ಎಚ್. ವಿಜಯಶಂಕರ್ ಅವರನ್ನು 1,38,647 ಮತಗಳ ಅಂತರದಿಂದ ಸೋಲಿಸಿದರು. ಇದು 2014ರ ಚುನಾವಣೆಯಲ್ಲಿ ಜೆಡಿಎಸ್‌ಗೆ ಬಿದ್ದ ಮತಗಳಿಗಿಂತ 100 ಮಾತ್ರ ಹೆಚ್ಚು ಎಂಬುದನ್ನು ಗಮನಿಸಬೇಕು. ಆಗ ಕೂಡ ಅಂದಿನ ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಅವರ ಮೇಲಿನ ಕೋಪಕ್ಕೆ ಜೆಡಿಎಸ್ ಪರೋಕ್ಷವಾಗಿ ಬಿಜೆಪಿಯನ್ನು ಬೆಂಬಲಿಸಿತ್ತು. 2019 ರಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ಸಿಗರು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಕೆಲಸ ಮಾಡಲಿಲ್ಲ ಎಂಬ ಆಕ್ರೋಶದಿಂದ ಮೈತ್ರಿ ಧರ್ಮ ಪಾಲಿಸಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ.
ಚಾಮರಾಜನಗರದಲ್ಲಿ 2009 ರಲ್ಲಿ ಜೆಡಿಎಸ್‌ನ ಕೋಟೆ ಎಂ. ಶಿವಣ್ಣ ಅವರಿಗೆ 1,06,876 ಮತಗಳು ದೊರೆತಿದ್ದವು. 3,69,970 ಮತಗಳನ್ನು ಗಳಿಸಿದ್ದ ಕಾಂಗ್ರೆಸ್‌ನ ಆರ್. ಧ್ರುವನಾರಾಯಣ ಅವರು 3,65,968 ಮತಗಳನ್ನು ಪಡೆದಿದ್ದ ಬಿಜೆಪಿಯ ಎ.ಆರ್. ಕೃಷ್ಣಮೂರ್ತಿ ಅವರನ್ನು 4,002 ಮತಗಳಿಂದ ಸೋಲಿಸಿದ್ದರು. ಬಿಎಸ್ಪಿಯ ಎನ್. ಮಹೇಶ್ 68,446 ಮತಗಳನ್ನು ಪಡೆದಿದ್ದರು.
2014 ರಲ್ಲಿ ಜೆಡಿಎಸ್‌ನ ಕೋಟೆ ಎಂ. ಶಿವಣ್ಣ 58,760 ಮತಗಳನ್ನು ಪಡೆದಿದ್ದರು. 5,67,782 ಮತಗಳನ್ನು ಗಳಿಸಿದ್ದ ಕಾಂಗ್ರೆಸ್‌ನ ಆರ್. ಧ್ರುವನಾರಾಯಣ 4,26,600 ಮತಗಳನ್ನು ಪಡೆದಿದ್ದ ಬಿಜೆಪಿಯ ಎ.ಆರ್. ಕೃಷ್ಣಮೂರ್ತಿ ಅವರನ್ನು 1,41,182 ಮತಗಳ ಅಂತರದಿಂದ ಸೋಲಿಸಿದ್ದರು. ಬಿಎಸ್ಪಿಯ ಶಿವಮಲ್ಲು 34,846 ಮತಗಳನ್ನು ಪಡೆದಿದ್ದರು.
ಈ ಅಂಕಿ ಅಂಶಗಳನ್ನು ಗಮನಿಸಿದಾಗ ತ್ರಿಕೋನ ಹೋರಾಟ ನಡೆದಿದ್ದಲ್ಲಿ ಅಥವಾ ಮೈತ್ರಿ ಧರ್ಮ ಸಮರ್ಪಕವಾಗಿ ಪಾಲನೆಯಾಗಿದ್ದಲ್ಲಿ ಕಳೆದ ಬಾರಿ ವಿಭಿನ್ನ ಫಲಿತಾಂಶ ಬರುವ ಸಾಧ್ಯತೆ ಇತ್ತು. ಎರಡೂ ಕಡೆಯೂ ‘ಕಮಲ’ ಮುದುಡಿ, ‘ಕೈ’ ಮೇಲಾಗುವ ಸಂಭವ ಇತ್ತು.
ಕಳೆದ ಬಾರಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಇದ್ದರೆ ಈ ಬಾರಿ ಬಿಜೆಪಿ- ಜೆಡಿಎಸ್ ಮೈತ್ರಿ ಇದೆ. ಎರಡೂ ಕಡೆಯೂ ಬಿಎಸ್ಪಿ ಕಣದಲ್ಲಿದೆ.