Belagavi: ಶಾಸಕ ಅಭಯ್ ಪಾಟೀಲ್ ವಿರುದ್ಧ ಮುಗಿಬಿದ್ದ ಮುಸ್ಲಿಂ ಮುಖಂಡರು!
• ಬೆಳಗಾವಿಯಲ್ಲಿ ದಿನೇದಿನೇ ತೀವ್ರಗೊಳ್ಳುತ್ತಿದೆ ಮಂದಿರ V/S ಮಸೀದಿ ವಿವಾದ
• ಅಭಯ್ ಪಾಟೀಲ್ ಸಾಯಿ ಮಂದಿರ ತೆರವು ಮಾಡಿದ್ದಾರೆ ಎಂದ ಮುಸ್ಲಿಂ ಮುಖಂಡರು
• ಮುಸ್ಲಿಂ ಮುಖಂಡರ ಆರೋಪಕ್ಕೆ ಅಭಯ್ ಪಾಟೀಲ್ ಸ್ಪಷ್ಟನೆ
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ (ಜೂ.01): ಬೆಳಗಾವಿಯ ಬಾಪಟ್ ಗಲ್ಲಿಯಲ್ಲಿರುವ ಶಾಹಿ ಮಸೀದಿ ಈ ಹಿಂದೆ ಹಿಂದೂ ದೇಗುಲವಾಗಿತ್ತು ಎಂದಿದ್ದ ಅಭಯ್ ಪಾಟೀಲ್ ವಿರುದ್ಧ ಮುಸ್ಲಿಂ ಮುಖಂಡರು ತಿರುಗಿ ಬಿದ್ದಿದ್ದಾರೆ. ಮಂದಿರ ಒಡೆದು ಮಸೀದಿ ಕಟ್ಟಿದ್ದಾರೆ ಎನ್ನುವ ಅಭಯ್ ಪಾಟೀಲ್ 11 ವರ್ಷಗಳ ಹಿಂದೆ ಶಾಸಕರಿದ್ದ ವೇಳೆ ತಮ್ಮ ಸ್ವಂತ ಜಾಗದ ಎದುರು ಇದ್ದ ಸಾಯಿ ದೇಗುಲ ತೆರವು ಮಾಡಿದ್ದಾರೆ ಎಂದು ಮುಸ್ಲಿಂ ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ. ಬೆಳಗಾವಿಯಲ್ಲಿ ಮಂದಿರ ವರ್ಸಸ್ ಮಸೀದಿ ವಿವಾದ ದಿನೇದಿನೇ ತೀವ್ರಗೊಳ್ಳುತ್ತಿದೆ. ಬೆಳಗಾವಿಯ ಬಾಪಟ್ ಗಲ್ಲಿಯಲ್ಲಿ ಇರುವ ಶಾಹಿ ಮಸೀದಿ ಈ ಮೊದಲು ದೇಗುಲವಾಗಿತ್ತು.
ಪುರಾತನ ದೇಗುಲ ಒಡೆದು ಅಲ್ಲಿ ಮಸೀದಿ ಕಟ್ಟಲಾಗಿದೆ ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೇಳಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಭೇಟಿಯಾಗಿದ್ದ ಅಭಯ್ ಪಾಟೀಲ್ ಅಗತ್ಯ ದಾಖಲೆ ನೀಡಿ ವಿಡಿಯೋ ಸರ್ವೆಗೆ ಆಗ್ರಹಿಸಿದ್ದರು. ಪುರಾತತ್ವ ಇಲಾಖೆ ಹಾಗೂ ಸ್ಥಳೀಯ ತಹಶಿಲ್ದಾರ್ ಬಳಿ ದಾಖಲೆ ಸಂಗ್ರಹಿಸುವಂತೆ ಕೋರಿದ್ದರು. ಇದಾದ ಬೆನ್ನಲ್ಲೇ ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಫಿರೋಜ್ ಸೇಠ್ ನೇತೃತ್ವದ ಮುಸ್ಲಿಂ ಮುಖಂಡರ ನಿಯೋಕ ಪ್ರಾದೇಶಿಕ ಆಯುಕ್ತರ ಭೇಟಿಯಾಗಿ ಮನವಿ ಸಲ್ಲಿಸಿತ್ತು. ಮಸೀದಿ ಇರುವ ಸ್ಥಳದ ಉತಾರ್ ಸೇರಿ ಅಗತ್ಯ ದಾಖಲೆ ಒದಗಿಸಿತ್ತು.
Belagavi: ಶಾಹಿ ಮಸೀದಿ ವಿಡಿಯೋ ಸರ್ವೆಗೆ ಆಗ್ರಹ: ಸೋಮವಾರ ಡಿಸಿ ಭೇಟಿಗೆ ಅಭಯ್ ಪಾಟೀಲ್!
ಶಾಹಿ ಮಸೀದಿ ಈ ಮೊದಲು ಮಂದಿರವಾಗಿತ್ತು ಎಂಬ ಹೇಳಿಕೆ ನೀಡುತ್ತಿದ್ದಂತೆ ಅಭಯ ವಿರುದ್ಧ ಮುಸ್ಲಿಂ ಸಮುದಾಯದ ನಾಯಕರು ಮುಗಿ ಬಿದ್ದಿದ್ದಾರೆ. ನಿನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿದ್ದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಜ್ಯಾಧ್ಯಕ್ಷ ದಸ್ತಗೀರ್ ಅಗಾ ಅಭಯ್ ಮನವಿ ತಿರಸ್ಕರಿಸುವಂತೆ ಜಿಲ್ಲಾಧಿಕಾರಿಗೆ ಕೋರುವೆ ಎಂದಿದ್ದರು. 2011ರಲ್ಲಿ ಶಾಸಕ ಅಭಯ್ ಪಾಟೀಲ್ ಸಾಯಿ ಮಂದಿರ ಧ್ವಂಸಗೊಳಿಸಿದ್ದರು ಎಂಬ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಶಾಸಕರು ಉತ್ತರಿಸಲಿ ಅಂತಾ ಆಗ್ರಹಿಸಿದ್ದರು.
ಇದೀಗ ಮತ್ತೋರ್ವ ಮುಸ್ಲಿಂ ಮುಖಂಡ ಸಯ್ಯದ್ ಮನ್ಸೂರ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 2011 ರಲ್ಲಿ ಅಭಯ್ ಪಾಟೀಲ್ ಬೆಳಗಾವಿಯ ಭಾರತ ನಗರದ ಶಹಾಪುರ ವಡಗಾವಿ ಮುಖ್ಯ ರಸ್ತೆಯ ಪಕ್ಕದಲ್ಲಿ ತಮ್ಮ ಸ್ವಂತ ಜಮೀನಿನ ಎದುರು ಇರುವ ಸಾಯಿ ಮಂದಿರ ತೆರವು ಗೊಳಿಸಿದ್ದಾರೆ. ಹಿಂದುತ್ವ ಎನ್ನುವ ಅಭಯ್ ಪಾಟೀಲ್ ಇದರ ಬಗ್ಗೆ ಉತ್ತರಿಸಲಿ ಎಂದು ಟಕ್ಕರ್ ಕೊಟ್ಟಿದ್ದಾರೆ. ಅಲ್ಲದೇ ತಮ್ಮ ಸ್ವಂತ ಜಾಗದ ಎದುರಿದ್ದ ಸಾಯಿ ಮಂದಿರವನ್ನು ಅಭಯ್ ಪಾಟೀಲ ತೆರವುಗೊಳಿಸಿದ್ದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಫೋಟೋಗಳ ಬಗ್ಗೆ ಪರ-ವಿರೋಧ ಚರ್ಚೆಗಳು ತೀವ್ರಗೊಂಡಿವೆ.
ಮಾಸ್ಟರ್‌ಪ್ಲ್ಯಾನ್ ವೇಳೆ ಒಂದಲ್ಲ ಎರಡು ಸಾಯಿ ಮಂದಿರ ತೆರವು: ಇನ್ನು 2011ರಲ್ಲಿ ಸಾಯಿ ಮಂದಿರ ತೆರವು ಸಂಬಂಧ ಆರೋಪಗಳಿಗೆ ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ ಸ್ಪಷ್ಟನೆ ನೀಡಿದ್ದಾರೆ. ಮುಸ್ಲಿಂ ಮುಖಂಡರ ಆರೋಪಕ್ಕೆ ಪ್ರತಿಕ್ರಿಯಿಸಿದ ಅಭಯ್ ಪಾಟೀಲ, 'ಮಾಸ್ಟರ್‌ಪ್ಲ್ಯಾನ್ ವೇಳೆ ಸಾಯಿ ಮಂದಿರ ತೆರವು ಮಾಡಲಾಗಿದೆ. ಅಲ್ಲಿಯ ಜನರ ಮನವೊಲಿಸಿ ಸಾಯಿ ಮಂದಿರ ತೆರವು ಮಾಡಲಾಗಿದೆ. ಬೆಳಗಾವಿಯ ನಾಥ್ ಪೈ ಸರ್ಕಲ್‌ನಿಂದ ಯಳ್ಳೂರ ಸರ್ಕಲ್ ವರೆಗೆ ಮಾಸ್ಟರ್ ಪ್ಲ್ಯಾನ್ ಮಾಡಲಾಗಿತ್ತು. ರಸ್ತೆಯ ಮಾಸ್ಟರ್‌ಪ್ಲ್ಯಾನ್ ವೇಳೆ ಸ್ಥಳೀಯರ ಮನವೊಲಿಸಿ ರಸ್ತೆ ಬದಿಯಲ್ಲಿ ಇದ್ದ ಚಿಕ್ಕ ಸಾಯಿ ಮಂದಿರ ತೆರವು ಮಾಡಲಾಗಿದೆ. ನಾನೇನೂ ಸಾಯಿ ಮಂದಿರ ಒಡೆದಿಲ್ಲ, ಮಾಸ್ಟರ್‌ಪ್ಲ್ಯಾನ್‌ಗಾಗಿ ತೆರವು ಮಾಡಿದ್ದೇವೆ. ಕೆಲವೊಂದು ಕಡೆ ಇನ್ನೂ ಇವೆ, ಸ್ಥಳೀಯರ ಮನವೊಲಿಸುವ ಕಾರ್ಯ ನಡೀತಿದೆ.
MLC Election: 'ಸಿದ್ದರಾಮಯ್ಯ, ಡಿಕೆಶಿಗೆ ಮುಜುಗರ ತಪ್ಪಿಸಲು ರಾಜೀನಾಮೆ'
ರಸ್ತೆಯಲ್ಲಿ ದೇಗುಲ ಬರುತ್ತದೆ ಎಂದು ಮಾಸ್ಟರ್‌ಪ್ಲ್ಯಾನ್ ವೇಳೆ ಮಂದಿರಗಳ ತೆರವು ಮಾಡಲಾಗಿದೆ. ಮಾಸ್ಟರ್ ಪ್ಲ್ಯಾನ್ ವೇಳೆ ಒಂದಲ್ಲ, ಎರಡು ದೇಗುಲಗಳನ್ನು ತೆರವು ಮಾಡಲಾಗಿದೆ' ಎಂದು ಸ್ಪಷ್ಟನೆ ನೀಡಿದರು. ಶಾಹಿ ಮಸೀದಿ ಈ ಮೊದಲು ಮಂದಿರವಾಗಿತ್ತು ಎಂದಿದ್ದ ಅಭಯ್ ಪಾಟೀಲ್ ವಿರುದ್ಧ ಮುಸ್ಲಿಂ ನಾಯಕರು ತೀವ್ರ ಆಕ್ತೋಶ ವ್ಯಕ್ತಪಡಿಸುತ್ತಿದ್ದಾರೆ. ಅಭಯ್ ಪಾಟೀಲ್ ತಮ್ಮ ವಿರುದ್ಧ ಆರೋಪಗಳಿಗೇನೋ ಸ್ಪಷ್ಟನೆ ನೀಡಿದ್ದಾರೆ. ಆದ್ರೆ ಶಾಹಿ ಮಸೀದಿ ನೂರಕ್ಕೆ ನೂರರಷ್ಟು ಮಂದಿರ ಆಗಿತ್ತು ಎಂಬ ತಮ್ಮ ವಾದ ಮುಂದುವರಿಸಿದ್ದು ಜಿಲ್ಲಾಡಳಿತ ಕ್ರಮ ಕೈಗೊಂಡು ಸರ್ವೆ ಮಾಡುವಂತೆ ಆಗ್ರಹಿಸಿದ್ದಾರೆ. ಸದ್ಯ ಬೆಳಗಾವಿ ಜಿಲ್ಲಾಡಳಿತದ ಮುಂದಿನ ನಡೆ ಏನಾಗಿರುತ್ತೆ ಎಂಬುದನ್ನು ಕಾದು ನೋಡಬೇಕು.