Belagavi: ಶಾಹಿ ಮಸೀದಿ ವಿಡಿಯೋ ಸರ್ವೆಗೆ ಆಗ್ರಹ: ಸೋಮವಾರ ಡಿಸಿ ಭೇಟಿಗೆ ಅಭಯ್ ಪಾಟೀಲ್!
• ಸರ್ವವ್ಯಾಪಿ ಆಗುತ್ತಿದೆಯಾ ಜ್ಞಾನವ್ಯಾಪಿ ಮಸೀದಿ ವಿವಾದ..?
• ಕುಂದಾನಗರಿಗೂ ಕಾಲಿಟ್ಟ ಮಂದಿರ V/S ಮಸೀದಿ ಸಮರ..!
• ಶಾಹಿ ಮಸೀದಿ ಹಿಂದೆ ಮಂದಿರ ಆಗಿದ್ದು ಸತ್ಯ ಎಂದ ಬಿಜೆಪಿ ಶಾಸಕ ಅಭಯ್ ಪಾಟೀಲ್
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ (ಮೇ.30): ಜ್ಞಾನವ್ಯಾಪಿ ಮಸೀದಿ ವಿವಾದ ಈಗ ಸರ್ವವ್ಯಾಪಿ ಆಗುತ್ತಿದೆಯಾ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ. ಇದಕ್ಕೆ ಕಾರಣ ಕುಂದಾನಗರಿ ಬೆಳಗಾವಿಗೂ ಮಂದಿರ V/S ಮಸೀದಿ ವಿವಾದ ಕಾಲಿಟ್ಟಿದ್ದು. ಬೆಳಗಾವಿಯ ಬಾಪಟ್ ಗಲ್ಲಿಯಲ್ಲಿರುವ ಶಾಹಿ ಮಸೀದಿ ಈ ಹಿಂದೆ ಮಂದಿರವಾಗಿತ್ತು ಅಂತಾ ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ ಶಾಸಕ ಅಭಯ್ ಪಾಟೀಲ್, 'ಬೆಳಗಾವಿಯ ಬಾಪಟ್ ಗಲ್ಲಿಯಲ್ಲಿರುವ ಶಾಹಿ ಮಸೀದಿ ನೂರಕ್ಕೆ ನೂರು ಮಂದಿರ. ಮಂದಿರ ಕೆಡವಿ ಮಸೀದಿ ಮಾಡಲಾಗಿದೆ ಅಂತಾ ಹಿರಿಯರು ಹೇಳುತ್ತಿದ್ದರು.
ಹೀಗಾಗಿ ನಾನು ಖುದ್ದಾಗಿ ಹೋಗಿ ನೋಡಿದಾಗಲೂ ಸಹ ಅದು ಮೇಲ್ನೋಟಕ್ಕೆ ಮಂದಿರವೇ ಆಗಿತ್ತು ಅನಿಸುತ್ತೆ. ಅಲ್ಲಿರುವ ಕಂಬಗಳು ಹಿಂದೂ ದೇಗುಲದ ಕಂಬಗಳಂತೆ ಇವೆ, ಒಳಗೆ ಹೋಗುವಂತಹ ಬಾಗಿಲು ಸಹ ಗರ್ಭಗುಡಿ ಬಾಗಿಲು ರೀತಿ ವಾಸ್ತು ಇದೆ. ಶಾಹಿ ಮಸೀದಿ ಒಂದು ಕಾಲದಲ್ಲಿ ಮಂದಿರ ಇತ್ತು, ಮಂದಿರದ ಕುರುಹುಗಳು ಮಸೀದಿಯಲ್ಲಿ ಇವೆ. ಅದನ್ನು ಸರ್ವೇ ಮಾಡಿ ಸತ್ಯ ಸಂಗತಿ ಹೊರ ತರಬೇಕು. ಇತಿಹಾಸದಲ್ಲಿ ಆದ ಪ್ರಮಾದಗಳು ತಪ್ಪು ಸರಿಪಡಿಸಲು ಬೆಳಗಾವಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಹೊರಗಿಂದ ನೋಡಿದಾಗ ಮೇಲ್ನೋಟಕ್ಕೆ ಇದು ಮಂದಿರ ಅಂತಾ ಗೊತ್ತಾಗುತ್ತೆ. ಕಂಬಗಳು ಹಿಂದೂ ಮಂದಿರದಲ್ಲಿ ಇದ್ದ ರೀತಿಯೇ ಇವೆ.
ಬೆಳಗಾವಿ ಮಸೀದಿಯೂ ಹಿಂದೂ ದೇವಾಲಯ: ಅಭಯ ಪಾಟೀಲ
ಗರ್ಭಗುಡಿಯೊಳಗೆ ಹೋಗಲು ಹೇಗೆ ಸಣ್ಣ ಬಾಗಿಲು ಇರುತ್ತೋ ಅದೇ ಮಾದರಿಯಲ್ಲಿ ಬಾಗಿಲು ಇದೆ. ಬಾಪಟ್ ಗಲ್ಲಿಯ ಜನರು ಹೇಳಿದ ಬಳಿಕ ನಾನು ಹೋಗಿ ನೋಡಿದಾಗ ನಿಜ ಅನಿಸಿತು. ಸುಮಾರು ಐದನಾರು ವರ್ಷದ ಹಿಂದಿನ ಮಂದಿರ ಇರಬಹುದು ಅಂತಾ ಜನ ಹೇಳ್ತಾರೆ. ಇದೆಲ್ಲಾ ತನಿಖೆಯಿಂದ ಹೊರಬರಬೇಕು. ಜ್ಞಾನವ್ಯಾಪಿ ರೀತಿ ವಿಡಿಯೋ ಸರ್ವೆ ಮಾಡಿ ನೋಡಬೇಕು. ಬಳಿಕ ಅಲ್ಲಿಯ ಜನರ ಮನವೊಲಿಸಲು ಕಾರ್ಯ ಮಾಡಬೇಕು. ಕೆಲವು ಹಿರಿಯರು ಮಾಹಿತಿ ಒದಗಿಸುವುದಾಗಿ ಹೇಳಿದ್ದಾರೆ. ಜಿಲ್ಲಾಡಳಿತ ಬಳಿಯೂ ಈ ಬಗ್ಗೆ ಮಾಹಿತಿ ಇರಬಹುದು. ಅದನ್ನು ಕಲೆ ಹಾಕಬೇಕು, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಬಳಿಕ ಮುಂದಿನ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದ್ದಾರೆ
ಶಾಹಿ ಮಸೀದಿ ವಿವಾದ ಬಗ್ಗೆ ನನಗೆ ಗೊತ್ತಿಲ್ಲ ಅಂದ್ರು ಜಿಲ್ಲಾ ಉಸ್ತುವಾರಿ ಸಚಿವ: ಬೆಳಗಾವಿಯ ಬಾಪಟ್ ಗಲ್ಲಿಯಲ್ಲಿ ಇರುವ ಶಾಹಿ ಮಸೀದಿ ಕಿರಿದಾದ ರಸ್ತೆಯ ಪಕ್ಕದ ಮಸೀದಿ ರಸ್ತೆಯ ಒಂದು ಬದಿ ಮಸೀದಿ ಇದ್ರೆ, ಇನ್ನೊಂದು ಬದಿಯಲ್ಲಿ ಹೋಳಿ ಕಾಮಣ್ಣ ದೇವಸ್ಥಾನ ಹಾಗೂ ಅದರ ಪಕ್ಕದಲ್ಲಿ ಹನುಮಾನ ಮಂದಿರ ಇದೆ. ಈ ಹಿಂದೆಯೂ ಕೆಲವು ಬಾರಿ ಇದೇ ಸ್ಥಳದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಕೋಮುಗಳ ನಡುವೆ ಗಲಾಟೆ, ವಾಗ್ವಾದ ನಡೆದದ್ದೂ ಉಂಟು ಅಂತಾ ಸ್ಥಳೀಯರು ಹೇಳುತ್ತಾರೆ. ಈಗ ಅಭಯ್ ಪಾಟೀಲ್ ಸ್ಫೋಟಕ ಹೇಳಿಕೆಯಿಂದ ಶಾಹಿ ಮಸೀದಿ ಇರುವ ಸ್ಥಳ ವಿವಾದಿತ ಕೇಂದ್ರ ಬಿಂದುವಾಗಿದೆ. ಇನ್ನು ಅಭಯ್ ಪಾಟೀಲ್ ಹೇಳಿಕೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, 'ಶಾಹಿ ಮಸೀದಿ ವಿವಾದದ ಬಗ್ಗೆ ನನಗೆ ಮಾಹಿತಿ ಇಲ್ಲ, ಏನಿದೆ ಅನ್ನೋದು ಗೊತ್ತಿಲ್ಲ. ಅದರ ಬಗ್ಗೆ ತಿಳಿದುಕೊಂಡು ಹೇಳುತ್ತೇನೆ. ಅಭಯ್ ಪಾಟೀಲ್ ನನಗೆ ಏನೂ ಮನವಿ ಮಾಡಿಲ್ಲ. ಜಿಲ್ಲಾಡಳಿತಕ್ಕೂ ಇದುವರೆಗೂ ಮನವಿ ಮಾಡಿದ್ದು ನನಗೆ ಗೊತ್ತಿಲ್ಲ' ಎಂದರು.
ಸೋಮವಾರ ಡಿಸಿ ಭೇಟಿಯಾಗಲಿದ್ದಾರೆ BJP ಶಾಸಕ ಅಭಯ್ ಪಾಟೀಲ್: ಸೋಮವಾರ ಜಿಲ್ಲಾಧಿಕಾರಿಗಳ ಭೇಟಿಯಾಗಿ ಶಾಹಿ ಮಸೀದಿಯ ವಿಡಿಯೋ ಸರ್ವೆಗೆ ಮನವಿ ಮಾಡೋದಾಗಿ ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ನಿರ್ಧರಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿರುವ ಬಿಜೆಪಿ ಶಾಸಕ ಅಭಯ್ ಪಾಟೀಲ್, 'ಹಿರಿಯರು ನನ್ನ ಗಮನಕ್ಕೆ ತಂದ ವಿಷಯಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಮುಂದೆ ಜಿಲ್ಲಾಧಿಕಾರಿಗಳು ಆದಷ್ಟು ಶೀಘ್ರವಾಗಿ ಅದರ ಬಗ್ಗೆ ನಿರ್ಣಯ ಮಾಡಬೇಕು. ಈ ಕುರಿತು ಸಭೆ ಮಾಡಿ, ಜಿಲ್ಲಾಧಿಕಾರಿಗಳೇ ಶಾಹಿ ಮಸೀದಿಗೆ ಖುದ್ದು ಭೇಟಿಯಾಗಿ ಪರಿಶೀಲನೆ ಮಾಡಬೇಕು. ಏನು ಸತ್ಯ ಸಂಗತಿ ಇದೆ ಅದನ್ನು ಸಮಾಜ ಎದುರು ತರುವ ಪ್ರಯತ್ನ ಮಾಡಲು ವಿನಂತಿಸುವೆ. ನೀವು ಅಲ್ಲಿ ಹೋಗಿ ನೋಡಿದರೇನೇ ಗೊತ್ತಾಗುತ್ತೆ ಇಲ್ಲಿ ಮಂದಿರ ಇತ್ತು ಅಂತಾ.
ಮದ್ವೆ ಮನೆಗೆ ಹೊರಟಿದ್ದರವರು ಮಸಣಕ್ಕೆ, ಸಂಭ್ರಮ ತುಂಬಿದ್ದ ಮನೆಯಲ್ಲಿ ಸೂತಕದ ಛಾಯೆ!
ಪಕ್ಕದಲ್ಲೇ ಹನುಮಾನ ಮಂದಿರ ಇದೆ. ಹೀಗಾಗಿ ಜಿಲ್ಲಾಧಿಕಾರಿಗಳು ಹೋಗಿ ಪರಿಶೀಲನೆ ಮಾಡಿ ಸತ್ಯಸಂಗತಿ ಹೊರತನ್ನಿ ಅಂತಾ ವಿನಂತಿಸುವೆ' ಎಂದಿದ್ದಾರೆ. ಇನ್ನೂ ಈ ರೀತಿಯ ಎರಡ್ಮೂರು ಇದೇ ಮಾದರಿ ಮಸೀದಿಗಳು ಬೆಳಗಾವಿ ನಗರದಲ್ಲೇ ಇವೆ ಎಂದು ಜನರು ತಮಗೆ ದೂರವಾಣಿ ಮೂಲಕ ಕರೆ ಮಾಡಿ ಮಾಹಿತಿ ನೀಡುತ್ತಿದ್ದಾರೆ ಎಂದು ಅಭಯ್ ಪಾಟೀಲ್ ಹೇಳಿದ್ದು, ಬೆಳಗಾವಿ ಜಿಲ್ಲೆಯ 15 ರಿಂದ 16 ಸ್ಥಳಗಳಿಂದ ಫೋನ್‌ಗಳು ಸಹ ಬಂದಿವೆ. ದೂರವಾಣಿ ಕರೆ ಬಂದ ತಕ್ಷಣ ನಿಜ ಅಂತಾ ಏನಿಲ್ಲ. ಅಲ್ಲಿಯೂ ಹೋಗಿ ಭೇಟಿ ನೀಡಿದ ಬಳಿಕ ಮಾಹಿತಿ ನೀಡುವೆ' ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೇಳಿಕೆ ನೀಡಿದ್ದಾರೆ. ಸದ್ಯ ಬಿಜೆಪಿ ಶಾಸಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ ಬಳಿಕ ಏನೆಲ್ಲಾ ಬೆಳವಣಿಗೆಗಳು ಆಗುತ್ತೆ ಕಾದು ನೋಡಬೇಕು. ಮುಂಜಾಗ್ರತಾ ಕ್ರಮವಾಗಿ ಶಾಹಿ ಮಸೀದಿ ಬಳಿ ಪೊಲೀಸರನ್ನು ನಿಯೋಜಿಸಿ ಬಿಗಿ ಭದ್ರತೆ ಒದಗಿಸಲಾಗಿದೆ.