Dharwad: ನುಗ್ಗಿಕೇರಿ ಘಟನೆಗೆ ಪರೋಕ್ಷವಾಗಿ ಮುಸ್ಲಿಂ ಸಮುದಾಯ ಕಾರಣ: ಶಾಸಕ ಬೆಲ್ಲದ

*   ಹಿಜಾಬ್‌ ವಿಷಯದಲ್ಲಿ ನಡೆದ ಕ್ರಿಯೆಗೆ ಇಂತಹ ಘಟನೆಗಳು ಪ್ರತಿಕ್ರಿಯೆಯಾಗುತ್ತಿವೆ
*  ಗಡ್ಡ ಬಿಟ್ಟು, ಟೋಪಿ ಹಾಕಿಕೊಂಡು ವ್ಯಾಪಾರ ಮಾಡಿದರೆ ಪ್ರಚೋದನೆ ಆಗುತ್ತದೆ
*  ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಎಲ್ಲ ರೀತಿಯ ನೆರವು 
 

Muslim Community Indirectly Responsible for the Nuggikeri Incident in Dharwad grg

ಧಾರವಾಡ(ಏ.12):  ಮುಸ್ಲಿಂ(Muslim) ಸಮುದಾಯ ಹಿಜಾಬ್‌(Hijab) ವಿಷಯದಲ್ಲಿ ನ್ಯಾಯಾಲಯದ ಆದೇಶಕ್ಕೆ ಗೌರವ ನೀಡದಿರುವುದೇ ನುಗ್ಗಿಕೇರಿ ದೇವಸ್ಥಾನದ ಆವರಣದಲ್ಲಿ ಮುಸ್ಲಿಂ ಅಂಗಡಿ ಮೇಲಿನ ದಾಳಿಗೆ ಪರೋಕ್ಷ ಕಾರಣ. ಈ ಅಹಿತಕರ ಘಟನೆ, ಪರಿಸ್ಥಿತಿಗೆ ಮೂಲ ಕಾರಣ ಅವರೇ ಎಂದು ಶಾಸಕ ಅರವಿಂದ ಬೆಲ್ಲದ(Aravind Bellad) ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್‌ ಕುರಿತು ಮುಸ್ಲಿಂ ಸಮುದಾಯ ಕಾನೂನಿಗೆ ಗೌರವ ನೀಡುವುದನ್ನು ಬಿಟ್ಟು ತಮ್ಮ ಧರ್ಮೀಯರಿಗೆ ಅಂಗಡಿ-ಮುಗ್ಗಟ್ಟು ಬಂದ್‌ ಮಾಡಿ ಪ್ರತಿಭಟಿಸಲು ಪ್ರಚೋದನೆ ನೀಡಿತು. ಇದು ಮತ್ತೊಂದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದ್ದು ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ನುಗ್ಗಿಕೇರಿ ದೇವಸ್ಥಾನದಲ್ಲಿ ನಡೆದ ಘಟನೆ ಸುಖಾಸುಮ್ಮನೆ ನಡೆದಿಲ್ಲ. ಕ್ರಿಯೆಗೆ ಪ್ರತಿಕ್ರಿಯೆ. ಈ ಕಾರಣದಿಂದ ಕ್ರಿಯೆ ಆಗದಂತೆ ಮುಸ್ಲಿಂ ಸಮುದಾಯ ನೋಡಿಕೊಳ್ಳಬೇಕು. ಆಗ ಪ್ರತಿಕ್ರಿಯೆ ಆಗದಂತೆ ಮತ್ತೊಂದು ಸಮುದಾಯ ನೋಡಿಕೊಳ್ಳಲಿದೆ. ಅಲ್ಲದೇ, ಘಟನೆ ಬಗ್ಗೆ ಸಿ.ಟಿ. ರವಿ(CT Ravi) ಅವರು, ‘ತಲೆ ಒಡೆದಾಗ ಇಲ್ಲದ ಕಾಳಜಿ ಕೆಲವರಿಗೆ ಕಲ್ಲಂಗಡಿ ಒಡೆದಾಗ ಏತಕ್ಕೆ’ ಎಂಬ ಹೇಳಿಕೆ ಸರಿಯಾಗಿದೆ ಎಂದು ಸಮರ್ಥನೆ ಮಾಡಿಕೊಂಡರು.

Lizard Falling Food ಹುಬ್ಬಳ್ಳಿ ಹೋಟೆಲ್ ಮಾಲೀಕನಿಂದ ಗ್ರಾಹಕರಿಗೆ ₹90,000 ಪರಿಹಾರ

ಗಡ್ಡ-ಟೋಪಿ ಪ್ರಚೋದನೆ:

ಹಿಂದೂ ದೇವಸ್ಥಾನದಲ್ಲಿ(Hindu Temple) ಮುಸ್ಲಿಂ ವ್ಯಾಪಾರಸ್ಥರು(Muslim Traders) ವ್ಯಾಪಾರ ಮಾಡಲು ಅಡ್ಡಿ ಇಲ್ಲ. ಆದರೆ, ನಾನೊಬ್ಬ ಮುಸ್ಲಿಂ ಎಂದು ತೋರಿಸಿಕೊಳ್ಳುವ ರೀತಿಯಲ್ಲಿ ದೇವಸ್ಥಾನದ ಆವರಣದಲ್ಲಿ ಗಡ್ಡ ಬಿಟ್ಟುಕೊಂಡು, ಟೋಪಿ ಧರಿಸಿದರೆ ಕೆಲವೊಮ್ಮೆ ಭಕ್ತರಿಗೆ ಪ್ರಚೋದನೆ ಆಗುವ ಸಾಧ್ಯತೆಗಳು ಇವೆ. ಈ ಕಾರಣದಿಂದ ಮುಸ್ಲಿಂ ಸಮಾಜದ ಮುಖಂಡರು ಇಂತಹ ವಿಚಾರಗಳ ಬಗ್ಗೆ ಚಿಂತನೆ ಮಾಡಿದರೆ ಅಹಿತಕರ ಘಟನೆಗಳು ಆಗೋದಿಲ್ಲ ಎಂಬ ಅಭಿಪ್ರಾಯ ತಮ್ಮದು. ಹಾಗಂತ ನುಗ್ಗಿಕೇರಿ ದೇವಸ್ಥಾನ ಮುಸ್ಲಿಂ ಅಂಗಡಿ ಮೇಲಿನ ದಾಳಿ ಸಮರ್ಥನೆ ಮಾಡುತ್ತಿಲ್ಲ. ಈ ರೀತಿ ತಪ್ಪುಗಳಾಗದಂತೆ ಎರಡೂ ಸಮಾಜ ಎಚ್ಚರ ವಹಿಸಬೇಕು ಎಂದು ಬೆಲ್ಲದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಸಮಸ್ಯೆಯ ಮೂಲಕ್ಕೆ ಪರಿಹಾರ ಒದಗಿಸಬೇಕು. ಧಾರ್ಮಿಕ ಸಮಸ್ಯೆಗಳಿಗೆ ಸಮಾಜವೇ ಪರಿಹಾರ ಕಂಡುಕೊಳ್ಳಬೇಕೆ ಹೊರತು ಎಲ್ಲ ದೇವಸ್ಥಾನಗಳ ಎದುರು ಪೊಲೀಸ್‌ ಪಹರೆ ಹಾಕಲು ಸಾಧ್ಯವಿಲ್ಲ. ಇನ್ನಾದರೂ ಹಿಂದೂ -ಮುಸ್ಲಿಂ ನಾಯಕರು ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದರು ಬೆಲ್ಲದ.

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಎಲ್ಲ ರೀತಿಯ ನೆರವು 

ಸಾಂಸ್ಕೃತಿಕ, ವಿದ್ಯೆ ಹಾಗೂ ವಾಣಿಜ್ಯಕ್ಕೆ ಹೆಸರಾಗಿರುವ ಹುಬ್ಬಳ್ಳಿ-ಧಾರವಾಡ(Hubnalli-Dharwad) ಅವಳಿ ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸದಭಿರುಚಿಯ ಚಲನಚಿತ್ರಗಳ ಪ್ರದರ್ಶನಕ್ಕೆ ಸುಚಿತ್ರಾ ಹಾಗೂ ಚಿತ್ರಾ ಫಿಲ್ಮ್‌ ಸೊಸೈಟಿಗಳು ಜಂಟಿಯಾಗಿ ಆಯೋಜಿಸಲು ಬಯಸಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ(International Film Festival) ಎಲ್ಲ ಅಗತ್ಯ ನೆರವು ಒದಗಿಸಲಾಗುವುದು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಇಲ್ಲಿನ ಸೃಜನಾ ರಂಗಮಂದಿರಲ್ಲಿ ಸೋಮವಾರ ನಡೆದ ಅಂತಾರಾಷ್ಟ್ರೀಯ ಚಲಚಿತ್ರೋತ್ಸವ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸುಚಿತ್ರಾ ಹಾಗೂ ಚಿತ್ರಾ ಎರಡೂ ಫಿಲ್ಮ್‌ ಸೊಸೈಟಿಗಳಿಗೆ 50 ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ ಅವಳಿ ನಗರದಲ್ಲಿ ಅರ್ಥಪೂರ್ಣವಾದ ಚಿತ್ರೋತ್ಸವ ಆಯೋಜನೆಗೆ ಸ್ಥಳೀಯ ಸಂಘ-ಸಂಸ್ಥೆ, ಉದ್ಯಮಗಳು ಹಾಗೂ ಆಡಳಿತದಿಂದ ಅಗತ್ಯ ನೆರವು, ಸಹಕಾರ ಕಲ್ಪಿಸಲಾಗುವುದು. ಇದಕ್ಕಾಗಿ ಪ್ರತ್ಯೇಕ ಸಮಿತಿ ರಚಿಸುವುದು ಸೂಕ್ತ ಎಂದರು.

ಚಲನಚಿತ್ರ ನಟ, ನಿರ್ದೇಶಕ ಪ್ರಕಾಶ ಬೆಳವಾಡಿ ಮಾತನಾಡಿ, ಸಿನಿಮಾ ಸಂಸ್ಕೃತಿ ಬೆಳೆಸುವ ಮೂಲಕ ವಿಫುಲ ಅವಕಾಶ ಹಾಗೂ ಸಾಧ್ಯತೆಗಳನ್ನು ಸೃಷ್ಟಿಸಬಹುದು. ಸ್ಥಳೀಯ ಉದ್ಯಮಿ, ವ್ಯಾಪಾರಿಗಳು, ಕೈಗಾರಿಕೆಗಳ ಮೂಲಕ ಸಂಪನ್ಮೂಲಗಳ ಕ್ರೋಡೀಕರಣ ಮಾಡಿ, ಸರ್ಕಾರದ ಒಂದು ಸಣ್ಣ ಪಾಲಿನ ಅನುದಾನ(Grants) ಪಡೆದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸುವ ಉದ್ದೇಶವಿದೆ. ಸದಭಿರುಚಿಯ ಎಲ್ಲಾ ಚಿತ್ರಗಳು ಒಟಿಟಿ(0TT) ವೇದಿಕೆಯಲ್ಲಿ ಸಿಗುವುದಿಲ್ಲ. ಸಾಮೂಹಿಕವಾಗಿ ಒಟ್ಟಾಗಿ ಸಿನಿಮಾ ವೀಕ್ಷಿಸುವ ಅನುಭವಕ್ಕೂ, ಪ್ರತ್ಯೇಕವಾಗಿ ಒಬ್ಬರೇ ನೋಡುವುದಕ್ಕೂ ವ್ಯತ್ಯಾಸವಿದೆ. ಚಲನಚಿತ್ರೋತ್ಸವದ ಮೂಲಕ ಫಿಲ್ಮ್‌ ಕೋರ್ಸ್‌ಗಳನ್ನು ಜನಪ್ರಿಯಗೊಳಿಸಿ, ಉದ್ಯೋಗ ಸೃಜನೆಗೆ ಅವಕಾಶವಿದೆ ಎಂದು ಹೇಳಿದರು.

ಸುಚಿತ್ರಾ ಫಿಲ್ಮ್‌ ಸೊಸೈಟಿಯ ನರಹರಿರಾವ್‌ ಮಾತನಾಡಿ, ಇಟಲಿಯಲ್ಲಿ ಮುಸಲೋನಿಯ ಕಾಲದಲ್ಲಿ ಚಲನಚಿತ್ರೋತ್ಸವ ಪರಂಪರೆ ಪ್ರಾರಂಭವಾಯಿತು. ಕಾನ್‌, ಬರ್ಲಿನ್‌, ಆಸ್ಕರ್‌ ಪ್ರಶಸ್ತಿ ವಿಜೇತ ಚಿತ್ರಗಳು ನಾಡಿನ ಜನರಿಗೆ ವೀಕ್ಷಿಸಲು ಲಭ್ಯವಾಗಬೇಕು ಎಂದರು.

ಜಿಲ್ಲಾಧಿಕಾರಿ ನಿತೇಶ್‌ ಕೆ. ಪಾಟೀಲ ಮಾತನಾಡಿ, ವಿಮಾನ, ರೈಲು, ಬಸ್‌ ಮತ್ತಿತರ ಉತ್ತಮ ಸಂಪರ್ಕ ವ್ಯವಸ್ಥೆ ಹೊಂದಿರುವ ಹುಬ್ಬಳ್ಳಿ-ಧಾರವಾಡದಲ್ಲಿ ದೊಡ್ಡ ಸಂಖ್ಯೆಯ ವಿದ್ಯಾರ್ಥಿ ಸಮೂಹವಿದೆ. ಒಂದೇ ಕಡೆ ಅನೇಕ ಚಲನಚಿತ್ರಗಳನ್ನು ವೀಕ್ಷಿಸಲು ಸಾಧ್ಯವಾಗುವ ಉತ್ಸವ, ಗೋಷ್ಠಿಗಳನ್ನು ಹಮ್ಮಿಕೊಳ್ಳಬಹುದು. ಸರ್ಕಾರದಿಂದಲೂ ನೆರವು ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಧಾರವಾಡದಲ್ಲಿ ಜಲಜೀವನ್ ಮಿಷನ್ ಯೋಜನೆ ಪರಿಣಾಮಕಾರಿ ಅನುಷ್ಠಾನ

ಮಹಾನಗರಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ ಮಾತನಾಡಿ, ಕೋವಿಡ್‌ ನಂತರದ ದಿನಗಳಲ್ಲಿ ಜನರಿಗೆ ಸದಭಿರುಚಿಯ ಸಾಂಸ್ಕೃತಿಕ ಚಟುವಟಿಕೆಗಳನ್ನು ನೀಡುವ ಅಗತ್ಯವಿದೆ ಎಂದರು.

ರಂಗಾಯಣ ನಿರ್ದೇಶಕ ರಮೇಶ್‌ ಪರವಿನಾಯ್ಕರ್‌ ಮಾತನಾಡಿ, ಆಜಾದಿ ಕಾ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಭಾರತೀಯ ಕಲೆ, ಪರಂಪರೆ ಬಿಂಬಿಸುವ, ಪರಿಸರ ಜಾಗೃತಿಯ ಚಿತ್ರಗಳು ಉತ್ಸವದಲ್ಲಿ ಪ್ರದರ್ಶನಗೊಳ್ಳಲಿ, ರಂಗಾಯಣ ಸಹಕಾರ ಒದಗಿಸಲಿದೆ ಎಂದರು.

ರಂಗಕರ್ಮಿ ಪ್ರಕಾಶ ಗರೂಡ, ಚಿತ್ರ ಫಿಲ್ಮ್‌ ಸೊಸೈಟಿಯ ಎ.ಎಂ. ಖಾನ್‌, ಶ್ರೀನಿವಾಸ ಶಾಸ್ತಿ್ರ, ಆನಂದ ವರ್ಧನ್‌, ವಿಶಾಖ ಅಭಿಷೇಕ ಅಯ್ಯಂಗಾರ, ಸಮೀರ್‌ ಜೋಶಿ, ಅರುಣ ಕರಡಿ ಸಲಹೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ನಿರೂಪಿಸಿದರು. ವಾರ್ತಾ ಇಲಾಖೆಯ ಮಂಜುನಾಥ ಡೊಳ್ಳಿನ ವಂದಿಸಿದರು.
 

Latest Videos
Follow Us:
Download App:
  • android
  • ios