ಮುರುಘಾ ಶ್ರೀ ಜಾಮೀನು ಅರ್ಜಿ: ಸಂತ್ರಸ್ತೆಯರಿಗೆ ಹೈಕೋರ್ಟ್ ನೋಟಿಸ್
ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಜಾಮೀನು ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರು (ಅ.15): ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಈ ಕುರಿತು ಮುರುಘಾ ಶರಣರು ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಜೆ.ಎಂ. ಖಾಜಿ ಅವರ ಪೀಠ, ಪ್ರತಿವಾದಿಗಳಾದ ಚಿತ್ರದುರ್ಗ ಗ್ರಾಮೀಣ ಠಾಣಾ ಪೊಲೀಸರು, ಮೈಸೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸಿ.ಚಂದ್ರಕುಮಾರ್ ಹಾಗೂ ಸಂತ್ರಸ್ತ ವಿದ್ಯಾರ್ಥಿನಿಯರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಅ.28ಕ್ಕೆ ಮುಂದೂಡಿದೆ. ಶ್ರೀಮುರುಘರಾಜೇಂದ್ರ ಬೃಹನ್ಮಠದ ಅಕ್ಕ ಮಹಾದೇವಿ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿರುವ ಇಬ್ಬರು ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ ಮರುಘಾ ಶರಣರ ವಿರುದ್ಧ 2022ರ ಆ.26ರಂದು ಮೈಸೂರಿನ ನಜರ್‌ಬಾದ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ದೂರನ್ನು ಚಿತ್ರದುರ್ಗ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಗಿತ್ತು. ಶರಣರ ವಿರುದ್ಧ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ, ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಲಾಗಿದೆ.
ಪ್ರಕರಣ ಸಂಬಂಧ ನ್ಯಾಯಾಂಗ ಬಂಧನಕ್ಕೆ ಒಳಗಾದ ಮುರುಘಾ ಶರಣರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ 2022ರ ಸೆ.23ರಂದು ಚಿತ್ರದುರ್ಗದ ಪೋಕ್ಸೋ ವಿಶೇಷ ನ್ಯಾಯಾಲಯ ಆದೇಶಿಸಿತ್ತು. ಇದರಿಂದ ಹೈಕೋರ್ಟ್ ಮೊರೆ ಹೋಗಿರುವ ಶರಣರು, 2022ರ ಆ.26ರಂದು ಅಕ್ಕ ಮಹಾದೇವಿ ಹಾಸ್ಟೆಲ್‌ನಿಂದ ಇಬ್ಬರು ಮಕ್ಕಳು ಕಾಣೆಯಾಗಿದ್ದರು. ಈ ಸಂಬಂಧ ಹಾಸ್ಟೆಲ್ ವಾರ್ಡನ್ ರಶ್ಮಿ ಎಂಬುವರು ಮಠದ ಆಡಳಿತಾಧಿಕಾರಿ ಬಸವರಾಜು ಮತ್ತವರ ಪತ್ನಿ ವಿರುದ್ಧ ದೂರು ಸಲ್ಲಿಸಿದ್ದರು.
ಇದೇ ಕಾರಣದಿಂದ ಬಸವರಾಜು ಮತ್ತು ಅವರ ಪತ್ನಿಯ ಪ್ರೇರಣೆಯಿಂದ ತಮ್ಮ ವಿರುದ್ಧ ದೂರು ದಾಖಲಿಸಲಾಗಿದೆ. ಸಂತ್ರಸ್ತರಲ್ಲಿ ಒಬ್ಬರು ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರೆ, ಮತ್ತೊಬ್ಬರು ನಿರಾಕರಿಸಿದ್ದಾರೆ. ತಮ್ಮ ವಿರುದ್ಧ ವಿಚಾರಣೆ ಬಹುತೇಕ ಮುಕ್ತಾಯವಾಗಿದ್ದು, ಜಾಮೀನು ನೀಡಬೇಕು ಎಂದು ಕೋರಿದ್ದಾರೆ.
ಬಾಲ ನ್ಯಾಯಮಂಡಳಿ ಮುಂದೆ ಹಾಜರಾದ ಮರಿಸ್ವಾಮಿ: ಮುರುಘಾ ಶ್ರೀ ಮೇಲಿನ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿ ಮರಿಸ್ವಾಮಿ ಶುಕ್ರವಾರ ಇಲ್ಲಿನ ಬಾಲ ನ್ಯಾಯ ಮಂಡಳಿ ಮುಂದೆ ಹಾಜರಾಗಿದ್ದಾನೆ.
ನ್ಯಾಯ ಮಂಡಳಿ ಆತನಿಗೆ ನೋಟೀಸ್ ಜಾರಿ ಮಾಡಿ, ನವೆಂಬರ್ 4 ಕ್ಕೆ ವಿಚಾರಣೆಗೆ ಬರುವಂತೆ ತಿಳಿಸಿದೆ. ಈ ಮೊದಲು ಇಲ್ಲಿನ ಎರಡನೇ ಸತ್ರ ನ್ಯಾಯಾಲಯಕ್ಕೆ ಮರಿಸ್ವಾಮಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ನಮ್ಮ ವ್ಯಾಪ್ತಿಗೆ ಇದು ಬರುವುದಿಲ್ಲ. ಬಾಲನ್ಯಾಯ ಮಂಡಳಿ ಮುಂದೆ ಹೋಗುವಂತೆ ಸೂಚಿಸಿತ್ತು. ಶುಕ್ರವಾರ ಸ್ವಯಂ ಪ್ರೇರಿತವಾಗಿ ಮರಿಸ್ವಾಮಿ ಬಾಲ ನ್ಯಾಯ ಮಂಡಳಿ ಮುಂದೆ ಹಾಜರಾಗಿದ್ದ.
ಮುರುಘಾಶ್ರೀ ಪೀಠತ್ಯಾಗ ಮಾಡಿಸಲು ಬಿಎಸ್ವೈಗೆ ಮನವಿ: ಮಾಜಿ ಸಚಿವ ಎಚ್.ಏಕಾಂತಯ್ಯಅವರು ಶುಕ್ರವಾರ ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಮುರುಘಾ ಮಠದ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು.
SJM ವಿದ್ಯಾಪೀಠದ ಕಾರ್ಯದರ್ಶಿ SB ವಸ್ತ್ರದಮಠಗೆ ಪವರ್ ಆಫ್ ಅಟಾರ್ನಿ ನೀಡಿದ ಮುರುಘಾಶ್ರೀ
ವೀರಶೈವ ಸಮಾಜದ ಮುಖಂಡರೊಂದಿಗೆ ತೆರಳಿದ್ದ ಏಕಾಂತಯ್ಯ, ಮುರುಘಾಶ್ರೀಗಳಿಂದ ಪೀಠತ್ಯಾಗ ಮಾಡಿಸಬೇಕು ಹಾಗೂ ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು. ಹದಿನೈದು ದಿನಗಳ ಹಿಂದೆ ನಿಜಲಿಂಗಪ್ಪ ಸ್ಮಾರಕದ ಆವರಣದಲ್ಲಿ ನಡೆದ ಸಭೆ ಹಾಗೂ ಅಲ್ಲಿ ಕೈಗೊಳ್ಳಲಾದ ನಿರ್ಣಯಗಳ ಬಗ್ಗೆ ಏಕಾಂತಯ್ಯ ಅವರು ಯಡಿಯೂರಪ್ಪ ಅವರ ಗಮನ ಸೆಳೆದರು ಎನ್ನಲಾಗಿದೆ.
ಮುರುಘಾಶ್ರೀ ಪೀಠತ್ಯಾಗ ವಿಚಾರ: ಕೋರ್ಟ್ ಆದೇಶದ ಮೇಲೆ ಸರ್ಕಾರ ಕ್ರಮ: ಆರ್ ಅಶೋಕ್
ಇದಾದ ಬಳಿಕ, ಏಕಾಂತಯ್ಯಅವರು ಸಿಎಂ ಅವರನ್ನು ಭೇಟಿ ಮಾಡಿ, ಚರ್ಚಿಸಿದರು. ಮಾಜಿ ಶಾಸಕ ಎಂ.ಬಿ.ತಿಪ್ಪೇರುದ್ರಪ್ಪ, ಕೆಇಬಿ ಷಣ್ಮುಖಪ್ಪ, ಮಹಡಿ ಶಿವಮೂರ್ತಿ, ಟಿಎಸ್‌ಎನ್ ಜಯಣ್ಣ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.