ಮುರುಘಾಶ್ರೀ ಪೀಠತ್ಯಾಗ ವಿಚಾರ: ಕೋರ್ಟ್ ಆದೇಶದ ಮೇಲೆ ಸರ್ಕಾರ ಕ್ರಮ: ಆರ್ ಅಶೋಕ್
Murugha Shree Row: ಮುರುಘಾ ಶ್ರೀ ಪ್ರಕರಣ ಕೋರ್ಟಿನಲ್ಲಿದೆ, ಕೋರ್ಟ್ ಏನು ತೀರ್ಮಾನ ತೆಗೆದುಕೊಳ್ಳುತ್ತೋ ನೋಡಬೇಕು ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ
ರಾಯಚೂರು (ಅ. 15): ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು (Murugha Shree) ಪೀಠತ್ಯಾಗ ಮಾಡಬೇಕೆಂಬ ಆಗ್ರಹ ತೀವ್ರಗೊಂಡಿದೆ. ಈ ಬೆನ್ನಲ್ಲೇ ರಾಯಚೂರಿನಲ್ಲಿ (Raichur) ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್ (R Ashok) "ಚಿತ್ರದುರ್ಗ ಮುರಘಾ ಮಠದ ಭಕ್ತರು, ಮುಖ್ಯಸ್ಥರು ಸಿಎಂ ಜೊತೆ ಚರ್ಚೆಗೆ ಬಂದಿದ್ದರು, ಪೀಠದ ಬಗ್ಗೆ ಮುಂದೆ ಏನು ಮಾಡಬೇಕು ಎಂದು ಚರ್ಚೆ ಮಾಡಿದ್ದಾರೆ, ಅವರ ಸಲಹೆಯಂತೆ ತೀರ್ಮಾನವನ್ನು ಸಿಎಂ ಘೋಷಣೆ ಮಾಡುತ್ತಾರೆ" ಎಂದರು.
ಮುರುಘಾ ಶ್ರೀ ಪ್ರಕರಣ ಕೋರ್ಟಿನಲ್ಲಿದೆ, ಕೋರ್ಟ್ ಏನು ತೀರ್ಮಾನ ತೆಗೆದುಕೊಳ್ಳುತ್ತೋ ನೋಡಬೇಕು ಎಂದ ಅವರು "ಈಗಾಗಲೇ ಮುರುಗಾ ಶ್ರೀಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಕೋರ್ಟ್ ಆದೇಶದ ಮೇಲೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ, ಹೊಸ ಪ್ರಕರಣಗಳು ಬಂದರೂ ಕೂಡ ಎಲ್ಲಾ ಕೇಸ್ ಒಂದರ ಅಡಿಯಲ್ಲೇ ತನಿಖೆ ಮಾಡುವುದು ಸೂಕ್ತ, ಗೃಹ ಸಚಿವರ ಜೊತೆ ಚರ್ಚೆ ಮಾಡಿ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಸರ್ಕಾರ ಮುಂದಾಗುತ್ತೆ, ಎಷ್ಟೇ ಹೊಸ ಕೇಸ್ ಬಂದರೂ ಎಲ್ಲವೂ ಒಂದರ ಅಡಿಯಲ್ಲೆ ತನಿಖೆ ನಡೆಯುತ್ತೆ" ಎಂದರು.
ಮುರುಘಾಶ್ರೀ ಪೀಠತ್ಯಾಗಕ್ಕೆ ಮನವಿ: ಇನ್ನು ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿ ಮುರುಘಾ ಶ್ರೀ ಜೈಲು ಸೇರಿದ್ದು, ಶೂನ್ಯಪೀಠಕ್ಕೆ ಆವರಿಸಿರುವ ಕತ್ತಲು ನಿವಾರಿಸುವ ಯತ್ನಗಳು ಮುಂದುವರಿದಿವೆ. ಮಾಜಿ ಸಚಿವ ಎಚ್.ಏಕಾಂತಯ್ಯ ಶುಕ್ರವಾರ ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮುರುಘಾ ಮಠದ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ.
SJM ವಿದ್ಯಾಪೀಠದ ಕಾರ್ಯದರ್ಶಿ SB ವಸ್ತ್ರದಮಠಗೆ ಪವರ್ ಆಫ್ ಅಟಾರ್ನಿ ನೀಡಿದ ಮುರುಘಾಶ್ರೀ
ವೀರಶೈವ ಸಮಾಜದ ಮುಖಂಡರೊಂದಿಗೆ ತೆರಳಿದ್ದ ಏಕಾಂತಯ್ಯ, ಮುರುಘಾಶ್ರೀಗಳಿಂದ ಪೀಠತ್ಯಾಗ ಮಾಡಿಸಬೇಕು ಹಾಗೂ ನೂತನ ಉತ್ತರಾಧಿಕಾರಿ ನೇಮಕದ ಬಗ್ಗೆ ಯಡಿಯೂರಪ್ಪ ಅವರ ಮುಂದೆ ಬಲವಾಗಿ ಪ್ರತಿಪಾದನೆ ಮಾಡಿದರು ಎನ್ನಲಾಗಿದೆ. ಹದಿನೈದು ದಿನಗಳ ಹಿಂದೆ ನಿಜಲಿಂಗಪ್ಪ ಅವರ ಸ್ಮಾರಕದ ಆವರಣದಲ್ಲಿ ನಡೆದ ಸಭೆ ಹಾಗೂ ಅಲ್ಲಿ ಕೈಗೊಳ್ಳಲಾದ ನಿರ್ಣಯಗಳ ಬಗ್ಗೆ ಏಕಾಂತಯ್ಯ ಅವರು ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದಾರೆ.
ಇದಾದ ತರುವಾಯ ಏಕಾಂತಯ್ಯ ಅವರು ಸಿಎಂ ಭೇಟಿಗೆ ತೆರಳಿದ್ದು, ಅಲ್ಲಿ ನಡೆದ ಚರ್ಚೆಗಳು ಬಹಿರಂಗಗೊಂಡಿಲ್ಲ. ಮಾಜಿ ಶಾಸಕ ಎಂ.ಬಿ.ತಿಪ್ಪೇರುದ್ರಪ್ಪ, ಕೆಇಬಿ ಷಣ್ಮುಖಪ್ಪ, ಮಹಡಿ ಶಿವಮೂರ್ತಿ,ಟಿಎಸ್‌ಎನ್ ಜಯಣ್ಣ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.