Asianet Suvarna News

ಕಲಬುರಗಿ ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ಎದುರಿಸಲು ಸರ್ವಸನ್ನದ್ಧರಾಗಿ: ನಿರಾಣಿ

* ಭೀಮಾ ನೀರಿನ ಮಾಹಿತಿ ಪಡೆಯಲು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ
* ನಿಗದಿಪಡಿಸಿದ ಕೇಂದ್ರಗಳಲ್ಲೇ ಅಧಿಕಾರಿಗಳು ವಾಸ್ತವ್ಯ ಹೂಡಬೇಕು
* ಪ್ರತಿ ಕಾಳಜಿ ಕೇಂದ್ರಗಳಲ್ಲಿ ಕೋವಿಡ್‌ ನಿಯಮ ಪಾಲಿಸುವಂತೆ ನಿರ್ದೇಶನ
 

Murugesh Nirani Talks Over Flood in Kalaburagi District grg
Author
Bengaluru, First Published Jun 21, 2021, 2:10 PM IST
  • Facebook
  • Twitter
  • Whatsapp

ಕಲಬುರಗಿ(ಜೂ.21):  ಮುಂಗಾರು ಮಳೆ ಆರ್ಭಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಎಲ್ಲ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್‌ ನಿರಾಣಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಮುಂಗಾರು ಪ್ರವಾಹ ಪರಿಸ್ಥಿತಿ ಕುರಿತಂತೆ ಜಿಲ್ಲಾಧಿಕಾರಿಗಳ ಜೊತೆ ನಡೆದ ವಿಡಿಯೋ ಕಾನ್ಫರೆಸ್ಸ್‌ನಲ್ಲಿ ಅವರು ಮಾತನಾಡಿದರು.
ಈಗಾಗಲೇ ಕಲ್ಯಾಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಅನೇಕ ಕಡೆ ನದಿ, ಹಳ್ಳಕೊಳ್ಳ ತುಂಬಿ ಹರಿಯುತ್ತಿದ್ದು ಪ್ರವಾಹ ಉಂಟಾಗಿದೆ. ಕಲಬುರಗಿಯಲ್ಲೂ ನೆರೆ ಹಾವಳಿ ಉಂಟಾಗದಂತೆ ತಕ್ಷಣವೇ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕೆಂದು ಸೂಚಿಸಿದರು.

ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮ ಲೆಕ್ಕಿಗರು, ಕಂದಾಯ ನೀರಿಕ್ಷಕರು ಕೇಂದ್ರ ಸ್ಥಾನದಲ್ಲಿಯೇ ವಾಸ್ತವ್ಯ ಹೂಡಿ ಪರಿಸ್ಥಿತಿಯನ್ನು ನಿಭಾಯಿಸಬೇಕು. ಕಾಳಜಿ ಕೇಂದ್ರಕ್ಕೆ ಬರುವ ನಿರಾಶ್ರಿತ ಜನರಿಗೆ ಸರ್ಕಾರದಿಂದ ಹೊರಡಿಸಲಾಗಿರುವ ಕೋವಿಡ್‌-19 ಸುರಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸಲಹೆ ನೀಡಿದರು.

ಕಲಬುರಗಿ 45 ವರ್ಷದಿಂದಲೂ ಅಭಿವೃದ್ಧಿಯಲ್ಲಿ ಹಿಂದೆ..!

ಪ್ರವಾಹ ಸಂದರ್ಭದಲ್ಲಿ ಕಾಳಜಿ ಕೆಂದ್ರಗಳನ್ನು ತೆರೆಯಬೇಕಾದಲ್ಲಿ ಬಿಸಿಎಂ, ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯಗಳನ್ನು ಉಪಯೋಗಿಸಲು ಅನುಕೂಲವಾಗುವಂತೆ ಕಾಳಜಿ ಕೇಂದ್ರಗಳ ಮಾಹಿತಿ ಪಡೆದುಕೊಂಡು ಮೂಲ ಸೌಕರ್ಯವನ್ನು ಒದಗಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಆದೇಶಿಸಿದರು.

ಜೊತೆಗೆ ಕಾಳಜಿ ಕೇಂದ್ರಗಳಲ್ಲಿ ನಿರಾಶ್ರಿತರಿಗೆ ಅಗತ್ಯವಾದ ಪ್ರಾಥಮಿಕ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲು ಅವಶ್ಯಕತೆ ಇರುವ ಎಲ್ಲಾ ರೀತಿ ಸಲಕರಣೆಗಳು, ಔಷಧಿಗಳನ್ನು ಸಂಗ್ರಹಿಸಿಡಬೇಕೆಂದು ಹೇಳಿದರು. ಒಂದು ವೇಳೆ ಪ್ರವಾಹ ಉಂಟಾದಲ್ಲಿ ಪುರುಷರು, ಮಹಿಳೆಯರು, 60 ವರ್ಷ ಮೇಲ್ಪಟ್ಟವಯಸ್ಕರು, ಗರ್ಭಿಣಿಯರು ಹಾಗೂ ಜಾನುವಾರುಗಳ ಮಾಹಿತಿಯನ್ನು ಪಡೆದುಕೊಂಡು ಅವರಿಗೆ ಗಂಜಿ ಕೇಂದ್ರದ ವ್ಯವಸ್ಥೆಯನ್ನು ಮಾಡಬೇಕು. ಜೊತೆಗೆ ಜಿಲ್ಲೆಯಲ್ಲಿ ನಡುಗಡ್ಡೆ ಇದ್ದಲ್ಲಿ ಅಂತಹ ಸ್ಥಳಗಳಲ್ಲಿ ವಾಸವಾಗಿರುವ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಆಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.

ಆಹಾರ ಇಲಾಖೆಯವರು, ಕಾಳಜಿ ಕೇಂದ್ರಗಳಲ್ಲಿ ಊಟದ ವ್ಯವಸ್ಥೆ, ಅಡುಗೆ ಮಾಡಲು ಅನಿಲ ವ್ಯವಸ್ಥೆ, ಅಡುಗೆ ಮಾಡುವವರು, ಜಾನುವರುಗಳಿಗೆ ಶೆಡ್‌ ವ್ಯವಸ್ಥೆ, ಆಸ್ಪತ್ರೆಗಳ ವ್ಯವಸ್ಥೆ, ಸಾಗಾಣಿಕೆ, ಸಾಮಾಜಿಕ ಅಂತರದೊಂದಿಗೆ ಮಾಡುವುದು ಹಾಗೂ ಜೆಸ್ಕಾಂ ಇಲಾಖೆ, ಲೋಕೋಪಯೋಗಿ, ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್‌ ಇವರು ಜೆನರೇಟರ್‌ ವ್ಯವಸ್ಥೆ ಮಾಡುವಂತೆ ಸಭೆಯ ಗಮನಕ್ಕೆ ತಂದರು ಮತ್ತು ತುರ್ತು ಸಂದರ್ಭದಲ್ಲಿ 05 ಅಧಿಕಾರಿಗಳುಳ್ಳ ಟಾಸ್ಕ್‌ ಪೋರ್ಸ್‌ ಸಮಿತಿ ರಚಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಕಲಬುರಗಿ ಜಿಲ್ಲೆಗೆ ಹೊಂದಿಕೊಂಡಿರುವ ನೆರೆ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ಸಂಬಂಧಪಟ್ಟಇಲಾಖೆ ಅಧಿಕಾರಿಗಳು ಸಮನ್ವಯ ಸಾಧಿಸಿಕೊಳ್ಳಲು ಸಂಬಂಧಪಟ್ಟಎಲ್ಲರೂ ಸಜ್ಜಾಗಬೇಕೆಂದು ಸೂಚನೆ ನೀಡಿದರು.
ಪ್ರವಾಹ ಪರಿಸ್ಥಿತಿಗೊಳಗಾದ ಗ್ರಾಮಗಳ ನಿರಾಶ್ರಿತರಿಗೆ ಕಾಳಜಿ ಕೇಂದ್ರಕ್ಕೆ ತರಬೇಕಾಗಿರುವುದರಿಂದ ತಾಲೂಕು ಕೇಂದ್ರಗಳಲ್ಲಿ 200 ಕಿಟ್‌ಗಳನ್ನು ತಯಾರಿಕೆ, ಗ್ರಾಮದ ರಸ್ತೆ ಸಂಪೂರ್ಣ ಮುಳುಗಡೆಯಾದಾಗ ಪರ್ಯಾಯ ಮಾರ್ಗವಾಗಿ ಗ್ರಾಮಕ್ಕೆ ಸಂಪರ್ಕ ಸಾಧಿಸಲು ಬೇರೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವಂತೆ ತಾಕೀತು ಮಾಡಿದರು.

ಪ್ರವಾಹ ಪರಿಸ್ಥಿತಿಗೊಳಗಾದ ಗ್ರಾಮಗಳ ನಿರಾಶ್ರಿತ ಜನರಿಗೆ ಕಾಳಜಿ ಕೇಂದ್ರಕ್ಕೆ ತರಬೇಕಾಗಿರುವುದರಿಂದ ತಲಾ ತಾಲ್ಲೂಕು ಕೇಂದ್ರಗಳಲ್ಲಿ 200 ಕಿಟ್‌ ಗಳನ್ನು ಇಟ್ಟುಕೊಳ್ಳಬೇಕು. ಭೀಮಾ ಏತ ನೀರಾವರಿ ಯೋಜನೆಯ ಅಫಜಲಪೂರದ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು, ಮಹಾರಾಷ್ಟ್ರ ರಾಜ್ಯದಿಂದ ಭೀಮಾ ನದಿಗೆ ನೀರು ಬಿಡುವ ಜಲಾಶಯದ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಮಾಹಿತಿ ಪಡೆಯಬೇಕು ಎಂದರು.
 

Follow Us:
Download App:
  • android
  • ios