ಮುಂಬೈನಲ್ಲಿ ವಾಸವಿದ್ದ 67 ವರ್ಷದ ಜಗದೀಶ್ ಶೆಟ್ಟಿ ಎಂಬುವವರನ್ನು ಅವರ ಪತ್ನಿ ಮತ್ತು ಮಕ್ಕಳೇ ಉಡುಪಿಗೆ ಕರೆತಂದು ಇಂದ್ರಾಳಿ ರೈಲು ನಿಲ್ದಾಣದ ಬಳಿ ಬಿಟ್ಟು ಹೋಗಿದ್ದಾರೆ. ದೈಹಿಕ ಮತ್ತು ಮಾನಸಿಕ ಹಿಂಸೆಯ ಬಗ್ಗೆ ವೃದ್ಧರು ದೂರು ನೀಡಿದ್ದು, ಮಣಿಪಾಲ ಪೊಲೀಸರು ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಣಿಪಾಲ: ರಕ್ತಸಂಬಂಧಗಳೇ ಬೆಲೆ ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಮುಂಬೈಯ ವೃದ್ಧರೊಬ್ಬರನ್ನು ಸ್ವತಃ ಹೆಂಡತಿ ಮಕ್ಕಳೇ ಉಡುಪಿಗೆ ಕರೆದುಕೊಂಡು ಬಂದು ಬಿಟ್ಟು ಹೋದ ಪ್ರಕರಣ ಮಣಿಪಾಲ ಠಾಣೆಯಲ್ಲಿ ದಾಖಲಾಗಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 67 ವರ್ಷದ ವೃದ್ಧರೊಬ್ಬರನ್ನು ಮುಂಬೈ ನಿಂದ ರೈಲಿನಲ್ಲಿ ಕರೆದುಕೊಂಡು ಬಂದು ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದ ಬಳಿ ಬಲವಂತವಾಗಿ ಇಳಿಸಿ, ಬಿಟ್ಟು ಹೋಗಿದ್ದಾರೆ. ಮೂಲತಃ ಮಣಿಪಾಲದವರಾದ ಜಗದೀಶ್ ಶೆಟ್ಟಿ (67) ಎಂಬ ಹಿರಿಯ ಜೀವವೇ ಮನೆಯವರ ಈ ಕ್ರೂರತ್ವಕ್ಕೆ ತುತ್ತಾದ ದುರ್ದೈವಿ. ಇವರು ಮುಂಬೈನ ಪನ್ವೇಲ್‌ನಲ್ಲಿ ತಮ್ಮ ಇಡೀ ಕುಟುಂಬದೊಂದಿಗೆ ವಾಸವಾಗಿದ್ದರು.
ಮುಂಬೈಯಿಂದ ಕರೆತಂದು ರಸ್ತೆಗೆ ತಳ್ಳಿದ ಹೆಂಡತಿ, ಮಕ್ಕಳು
ದೂರುದಾರರಾದ ಜಗದೀಶ್ ಶೆಟ್ಟಿ ಅವರು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಇವರ ಪತ್ನಿ ಸುನಂದಾ, ಪುತ್ರಿಯರಾದ ಶ್ವೇತಾ, ನೀತಾ ಮತ್ತು ಮಗ ನಿತಿನ್ ಸೇರಿ ಜುಲೈ 11 ರಂದು ಜಗದೀಶ್ ಶೆಟ್ಟಿ ಅವರನ್ನು ಮುಂಬೈ ಬಳಿಯ ಪನ್ವೇಲ್‌ನಿಂದ ಬಲವಂತವಾಗಿ ರೈಲಿನಲ್ಲಿ ಉಡುಪಿಗೆ ಕರೆದುಕೊಂಡು ಬಂದಿದ್ದರು.
ಮರುದಿನ ಅಂದರೆ ಜುಲೈ 12 ರಂದು ಬೆಳಗ್ಗೆ ಸುಮಾರು 8:30 ರ ಸುಮಾರಿಗೆ, ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲು ನಿಲ್ದಾಣದ ಬಳಿ ಎಲ್ಲರೂ ಆಟೋರಿಕ್ಷಾದಲ್ಲಿ ಬಂದಿದ್ದಾರೆ. ಅಲ್ಲಿ ಜಗದೀಶ್ ಶೆಟ್ಟಿ ಅವರನ್ನು ಆಟೋದಿಂದ ಬಲವಂತವಾಗಿ ಕೆಳಗೆ ಇಳಿಸಿದ ಕುಟುಂಬಸ್ಥರು, ಇನ್ನು ಮುಂದೆ ನಾವು ನಿನ್ನ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ, ನಿನ್ನನ್ನು ನೋಡಿಕೊಳ್ಳಲು ನಮ್ಮಿಂದ ಸಾಧ್ಯವಿಲ್ಲ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿ ಅಲ್ಲಿಂದ ಹೊರಟು ಹೋಗಿದ್ದಾರೆ.
ದೈಹಿಕ, ಮಾನಸಿಕ ಹಿಂಸೆ ಮತ್ತು ಹಸಿವಿನ ಯಾತನೆ
ಮನೆಯವರಿಂದಲೇ ಬೀದಿಗೆ ತಳ್ಳಲ್ಪಟ್ಟ ಜಗದೀಶ್ ಶೆಟ್ಟಿ ಅವರು ಹೇಗೋ ಮಣಿಪಾಲ ಪೊಲೀಸ್ ಠಾಣೆಗೆ ತಲುಪಿ ತಮ್ಮ ಹೆಂಡತಿ ಹಾಗೂ ಮಕ್ಕಳ ವಿರುದ್ಧ ಗಂಭೀರವಾದ ದೂರು ನೀಡಿದ್ದಾರೆ. "ನಾನು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ ನನ್ನ ಪತ್ನಿ ಮತ್ತು ಮಕ್ಕಳು ನನಗೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆ ಕೊಡಿಸುತ್ತಿರಲಿಲ್ಲ. ಕನಿಷ್ಠ ಪಕ್ಷ ದಿನಕ್ಕೆ ಒಂದು ಹೊತ್ತು ಸರಿಯಾಗಿ ಊಟ-ತಿಂಡಿಯನ್ನೂ ನೀಡದೆ ತೀವ್ರವಾಗಿ ಸತಾಯಿಸುತ್ತಿದ್ದರು. ಕಾನೂನುಬದ್ಧವಾಗಿ ನನ್ನ ಆರೈಕೆ ಮತ್ತು ರಕ್ಷಣೆ ಮಾಡಬೇಕಾದವರೇ ನನಗೆ ದೈಹಿಕ ಹಾಗೂ ಮಾನಸಿಕವಾಗಿ ತೀವ್ರ ಹಿಂಸೆ ನೀಡಿ, ಕೊನೆಗೆ ಒಂಟಿಯಾಗಿ ಕೈಬಿಟ್ಟು ಹೋಗಿದ್ದಾರೆ ಎಂದು ಶೆಟ್ಟಿ ತಮ್ಮ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.
ಮಣಿಪಾಲ ಪೊಲೀಸರಿಂದ ಪ್ರಕರಣ ದಾಖಲು
ಹಿರಿಯ ನಾಗರಿಕರಾದ ಜಗದೀಶ್ ಶೆಟ್ಟಿ ಅವರು ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಮಣಿಪಾಲ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆ, 2007 ರ ಸೆಕ್ಷನ್ 24 ರ ಅಡಿಯಲ್ಲಿ (ಅಪರಾಧ ಸಂಖ್ಯೆ 109/2026) ಆರೋಪಿಗಳಾದ ಪತ್ನಿ ಸುನಂದಾ, ಪುತ್ರಿಯರಾದ ಶ್ವೇತಾ, ನೀತಾ ಮತ್ತು ಪುತ್ರ ನಿತಿನ್ ವಿರುದ್ಧ ಕಠಿಣ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸದ್ಯ ಪೊಲೀಸರು ವೃದ್ಧರಿಗೆ ಸೂಕ್ತ ಆಸರೆ ಕಲ್ಪಿಸಿದ್ದು, ತಲೆಮರೆಸಿಕೊಂಡಿರುವ ಕುಟುಂಬಸ್ಥರ ಪತ್ತೆಗಾಗಿ ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ. ತುತ್ತು ಅನ್ನ ನೀಡದೆ, ಕಾಯಿಲೆಗೆ ಮದ್ದನ್ನೂ ಕೊಡಿಸದೆ ಹೆತ್ತ ತಂದೆಯನ್ನು ಇಳಿವಯಸ್ಸಿನಲ್ಲಿ ಬೀದಿಗೆ ತಳ್ಳಿದ ಮಕ್ಕಳ ಕ್ರೌರ್ಯಕ್ಕೆ ಏನನ್ನಬೇಕೋ


