ಮುಂಬೈ ಮೂಲದ ಮಾಜಿ ರೇಡಿಯೋ ಜಾಕಿ ಮನೀಷಾ ಪ್ರಸಾದ್‌ ಬೆಂಗಳೂರಿನ ತಮ್ಮ ಫ್ಲ್ಯಾಟ್‌ನಲ್ಲಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಸಿಕ್ಕ 3 ಪುಟಗಳ ಡೆತ್‌ನೋಟ್‌ನಲ್ಲಿ, ತಮ್ಮ ಸಾವಿಗೆ ಲಿವಿಂಗ್‌ ಟುಗೆದರ್‌ನಲ್ಲಿದ್ದ ಪ್ರಿಯಕರ ಹರ್ಷವರ್ಧನ್‌ ಸಿಂಗ್‌ನ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಅಮೃತಹಳ್ಳಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೆಂಗಳೂರು: ಮುಂಬೈನಲ್ಲಿ ರೇಡಿಯೋ ಜಾಕಿಯಾಗಿದ್ದ ಮಹಿಳೆಯೊಬ್ಬರು ಡೆತ್‌ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಅಮೃತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

Add Asianetnews Kannada as a Preferred SourcegooglePreferred

ಮುಂಬೈ ಮೂಲದ ಮನೀಷಾ ಪ್ರಸಾದ್‌ (48) ಆತ್ಮ*ಹತ್ಯೆ ಮಾಡಿಕೊಂಡವರು. ಮೇ 23 ರಂದು ಮಾನ್ಯತಾ ಟೆಕ್‌ ಪಾರ್ಕ್‌ ಆವರಣದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲ್ಯಾಟ್‌ನಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಮನೀಷಾ ಪ್ರಸಾದ್‌ ಅವರ ಪ್ರಿಯಕರ ಹರ್ಷವರ್ಧನ್‌ ಸಿಂಗ್ ಬನ್ಸಾಲ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾನ್ಯತಾ ಟೆಕ್ ಪಾರ್ಕ್ ಬಳಿ ಫ್ಲ್ಯಾಟ್‌ ಖರೀದಿ

ಮುಂಬೈನಲ್ಲಿ ರೇಡಿಯೋ ಜಾಕಿಯಾಗಿದ್ದ ಮನೀಷಾ, ಕೌಟುಂಬಿಕ ವಿಚಾರಕ್ಕೆ 2024ರಲ್ಲಿ ತಮ್ಮ ಪತಿಯಿಂದ ವಿಚ್ಛೇದನ ಪಡೆದಿದ್ದರು. ನಂತರ ಕಳೆದ ಏಪ್ರಿಲ್‌ನಲ್ಲಷ್ಟೇ ಬೆಂಗಳೂರಿಗೆ ಆಗಮಿಸಿದ್ದ ಅವರು, ಮಾನ್ಯತಾ ಟೆಕ್ ಪಾರ್ಕ್ ಬಳಿ ಹೊಸದಾಗಿ ಫ್ಲ್ಯಾಟ್‌ ಖರೀದಿಸಿ ಒಂಟಿಯಾಗಿ ವಾಸಿಸುತ್ತಿದ್ದರು. ಮೇ 23 ರಂದು ಮನೀಷಾ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಂಬಂಧಿಕರು ಫೋನ್ ಮಾಡಿದಾಗ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಮನೆಗೆ ಬಂದು ನೋಡಿದಾಗ ಆತ್ಮ*ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.

ಮನೀಷಾ ಅವರು ಪತಿಯಿಂದ ವಿಚ್ಛೇಧನ ಪಡೆದುಕೊಂಡ ಬಳಿಕ, ಮುಂಬೈನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹಿಮಾಚಲ ಪ್ರದೇಶ ಮೂಲದ ಹರ್ಷವರ್ಧನ್‌ ಸಿಂಗ್‌ನನ್ನು ಪ್ರೀತಿಸುತ್ತಿದ್ದರು. ಬಳಿಕ ಇಬ್ಬರು ಸಹ ಜೀವನ ನಡೆಸುತ್ತಿದ್ದರು. ಆದರೆ, ಆತನ ಕಿರುಕುಳ ಹಾಗೂ ಹಿಂಸೆ ತಾಳಲಾರದೆ ಮನೀಷಾ ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿಗೆ ಬಂದು ಮಾನ್ಯತಾ ಟೆಕ್‌ ಪಾರ್ಕ್ ಆವರಣದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್‌ ಕೂಡ ಖರೀದಿಸಿದ್ದರು. ಆದರೆ, ಮುಂಬೈ ಮನೆಯಿಂದ ಎಲ್ಲಾ ವಸ್ತುಗಳನ್ನು ಸ್ಥಳಾಂತರ ಮಾಡಿದ್ದ ದಿನವೇ ಕೋಣೆಯಲ್ಲಿ ನೇಣುಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

3 ಪುಟಗಳ ಡೆತ್‌ನೋಟ್‌ ಪತ್ತೆ

ಆತ್ಮ*ಹತ್ಯೆಗೂ ಮೊದಲು ಮನೀಷಾ 3 ಪುಟಗಳ ಡೆತ್‌ನೋಟ್ ಬರೆದಿಟ್ಟಿದ್ದಾರೆ. ಅದರಲ್ಲಿ ತಮ್ಮ ಸಾವಿಗೆ ಹಿಮಾಚಲ ಪ್ರದೇಶದ ಹರ್ಷವರ್ಧನ್ ಸಿಂಗ್ ಬನ್ಸಾಲ್ ಕಾರಣ ಎಂದು ಉಲ್ಲೇಖಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ನಾನು ಮತ್ತು ಹರ್ಷವರ್ಧನ್ ಸಿಂಗ್ ಸಹ ಜೀವನ ನಡೆಸುತ್ತಿದ್ದೇವು. ಈ ವಿಷಯ ಆತನ ಮನೆಯವರಿಗೂ ತಿಳಿದಿತ್ತು. ಆದರೆ, ಆತ ಪ್ರತಿದಿನ ನನಗೆ ತೀವ್ರ ಮಾನಸಿಕ ಕಿರುಕುಳ ನೀಡುತ್ತಿದ್ದ. ಆತನ ಕಿರುಕುಳವನ್ನು ತಾಳಲಾರದೆ ಮನನೊಂದು ನಾನು ಆತ್ಮ*ಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಮೃತಹಳ್ಳಿ ಠಾಣೆ ಪೊಲೀಸರು ಪರಿಶೀಲಿಸಿ, ಡೆತ್‌ನೋಟ್ ಹಾಗೂ ಮನೀಷಾ ಮೊಬೈಲ್ ಅನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.