ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಬ್‌ಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಕಾರುಗಳು ನಜ್ಜುಗುಜ್ಜಾಗಿದ್ದರೂ, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIA) ಆವರಣದಲ್ಲಿ ಕ್ಯಾಬ್‌ಗಳ ನಡುವೆ ನಡೆದ ಸರಣಿ ಅಪಘಾತ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಏರ್ಪೋರ್ಟ್ ಒಳಗಿನ ಸೆಕ್ಯುರಿಟಿ ಚೆಕಿಂಗ್ ಪಾಯಿಂಟ್ ಬಳಿ ಈ ಘಟನೆ ನಡೆದಿದ್ದು, ಕೆಲವು ಕಾರುಗಳ ಮುಂಭಾಗ ಮತ್ತು ಹಿಂಭಾಗ ಸಂಪೂರ್ಣ ನಜ್ಜುಗುಜ್ಜಾಗಿರುವುದು ದೃಶ್ಯಗಳಲ್ಲಿ ಕಾಣಿಸಿದೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಮುಂದೆ ಹೋಗುತ್ತಿದ್ದ ಕಾರು ಬ್ರೇಕ್ ಹಾಕಿದ ಕಾರಣ ಹಿಂದಿನಿಂದ ಮತ್ತೊಂದು ಕಾರು ಡಿಕ್ಕಿ. ಮೊದಲ ಡಿಕ್ಕಿಯ ನಂತರ ಇನ್ನೂ ಹಲವು ಕ್ಯಾಬ್‌ಗಳು ಕ್ರಮವಾಗಿ ಪರಸ್ಪರ ಢಿಕ್ಕಿ ಹೊಡೆದು ಸರಣಿ ಅಪಘಾತಕ್ಕೆ ಕಾರಣವಾಗಿವೆ. ಕಾರಿನ ವೇಗ ಮತ್ತು ಸಮೀಪದ ವಾಹನಗಳ ನಡುವೆ ಅಂತರ ಉಳಿಸದಿರುವುದು ಅಪಘಾತದ ತೀವ್ರತೆಯನ್ನು ಹೆಚ್ಚಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ

ಅಪಘಾತದ ರಭಸಕ್ಕೆ ಹಲವು ಕಾರುಗಳು ಗಂಭೀರವಾಗಿ ಹಾನಿಗೊಳಗಾದರೂ, ಕಾರಿನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ವಿಮಾನ ನಿಲ್ದಾಣದ ಸುರಕ್ಷತಾ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಈ ಘಟನೆ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಅಪಘಾತದ ನಿಖರ ಕಾರಣ ತಿಳಿದುಕೊಳ್ಳಲು ತನಿಖೆ ನಡೆಸುತ್ತಿದ್ದಾರೆ. ಏರ್ಪೋರ್ಟ್ ಒಳಗಿನ ಸಂಚಾರ నిಯಮಗಳ ಪಾಲನೆ, ವಾಹನಗಳ ವೇಗ ನಿಯಂತ್ರಣ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ.

ಟ್ರಾಫಿಕ್ ಕೆಲಕಾಲ ವ್ಯತ್ಯಯ

ಅಪಘಾತದಿಂದ ಏರ್ಪೋರ್ಟ್ ಆವರಣದಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾದರೂ, ಹಾನಿಗೀಡಾದ ವಾಹನಗಳನ್ನು ಸ್ಥಳಾಂತರಿಸಿದ ನಂತರ ಸಂಚಾರ ಮತ್ತೆ ಯಥಾಸ್ಥಿತಿಗೆ ಬಂತು. ಈ ಘಟನೆ ಬಳಿಕ ಪ್ರಯಾಣಿಕರು ಮತ್ತು ವಾಹನ ಚಾಲಕರು ಸುರಕ್ಷತಾ ಕ್ರಮಗಳನ್ನು ಬಲಪಡಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ. ಏರ್ಪೋರ್ಟ್ ಪ್ರದೇಶದಲ್ಲಿ ವಾಹನಗಳ ಗರಿಷ್ಠ ವೇಗದ ನಿಯಂತ್ರಣ, ಹೆಚ್ಚುವರಿ ಸಿಸಿಟಿವಿ ಮೇಲ್ವಿಚಾರಣೆ ಮತ್ತು ಚಾಲಕರಿಗೆ ಜಾಗೃತಿ ಅಭಿಯಾನಗಳ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.