ಚಿಕ್ಕಮಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ, ಶಬರಿಮಲೆ ಅಯ್ಯಪ್ಪ ಮಾಲೆ ಧರಿಸಿ ಬಂದ ವಿದ್ಯಾರ್ಥಿಗಳನ್ನು ಸಮವಸ್ತ್ರ ನೀತಿ ಉಲ್ಲಂಘನೆ ಕಾರಣ ನೀಡಿ ತರಗತಿಯಿಂದ ಹೊರಗಿಡಲಾಗಿದೆ. ಈ ಘಟನೆ ಬಗ್ಗೆ ಬಿಜೆಪಿ ಮತ್ತು ಬಜರಂಗದಳದ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದರು.
ಚಿಕ್ಕಮಗಳೂರು (ಡಿ.01): ಶಬರಿಮಲೆ ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸಿ ಕಾಲೇಜಿಗೆ ಬಂದ ಇಬ್ಬರು ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿಯು ಹೊರಗೆ ನಿಲ್ಲಿಸಿದ ಘಟನೆ ಚಿಕ್ಕಮಗಳೂರು ನಗರದ ಪ್ರತಿಷ್ಠಿತ ಎಂ.ಇ.ಎಸ್. ಕಾಲೇಜಿನಲ್ಲಿ ನಡೆದಿದೆ. ಸಮವಸ್ತ್ರ ನೀತಿಯನ್ನು ಉಲ್ಲಂಘಿಸಲಾಗಿದೆ ಎಂದು ಆಡಳಿತ ಮಂಡಳಿ ವಾದಿಸಿದರೆ, ಇದು ಧಾರ್ಮಿಕ ಭಾವನೆಗೆ ಧಕ್ಕೆ ಎಂದು ಬಜರಂಗದಳ ಮತ್ತು ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳನ್ನು ಹೊರಗೆ ನಿಲ್ಲಿಸಿದ ಘಟನೆ
ಎಂ.ಇ.ಎಸ್. ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಅಯ್ಯಪ್ಪ ಮಾಲೆ ಧರಿಸಿ ಕಾಲೇಜಿಗೆ ಆಗಮಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಲೇಜು ಆಡಳಿತ ಮಂಡಳಿ, ಮಾಲೆ ಧರಿಸಿದರೆ ಸಮವಸ್ತ್ರದಲ್ಲಿ 'ಯೂನಿಫಾರ್ಮಿಟಿ' (ಸಮರೂಪತೆ)' ಇರುವುದಿಲ್ಲ ಎಂದು ಕಾರಣ ನೀಡಿ, ಅವರನ್ನು ತರಗತಿಯಿಂದ ಹೊರಗೆ ನಿಲ್ಲಿಸಿದೆ. ಈ ವಿಷಯ ತಕ್ಷಣವೇ ನಗರದಲ್ಲಿ ಕಾವು ಪಡೆದುಕೊಂಡಿತು. ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಸೇರಿದಂತೆ ಬಜರಂಗದಳದ ಕಾರ್ಯಕರ್ತರು ಕಾಲೇಜಿಗೆ ಧಾವಿಸಿ ಕಾಲೇಜಿನ ಆಡಳಿತ ಮಂಡಳಿಯವರನ್ನು ಪ್ರಶ್ನಿಸಿದರು.
ಆಡಳಿತ ಮಂಡಳಿ ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ
ಕಾಲೇಜು ಪ್ರಾಂಶುಪಾಲರ ಕೊಠಡಿಯೊಳಗೆ ನಡೆದ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡು ಮಾತಿನ ಚಕಮಕಿಗೆ ತಿರುಗಿತು. ಆಡಳಿತ ಮಂಡಳಿಯ ಸದಸ್ಯರು ಈ ವರ್ಷದಿಂದ ಮಾಲೆ ಧರಿಸಿ ಕಾಲೇಜಿಗೆ ಬರುವಂತಿಲ್ಲ ಎಂದು ಮೌಖಿಕ ಆದೇಶವಿದೆ ಎಂದು ಸಮರ್ಥಿಸಿಕೊಂಡರು. ಇದಕ್ಕೆ ಆಕ್ಷೇಪಿಸಿದ ಬಿಜೆಪಿ ಮತ್ತು ಬಜರಂಗದಳದ ನಾಯಕರು, 'ಹಾಗಾದರೆ ಬುರ್ಖಾ ಹಾಕಿಕೊಂಡು ಬರುವ ವಿದ್ಯಾರ್ಥಿನಿಯರಿಗೆ ಏನು? ಅಲ್ಲಿ ಸಮವಸ್ತ್ರದ ಸಮರೂಪತೆ ಇರುತ್ತದೆಯೇ? ಎಂದು ಆಡಳಿತ ಮಂಡಳಿಯ ನಿರ್ಧಾರವನ್ನು ಪ್ರಶ್ನಿಸಿದರು.
ಆಕ್ರೋಶಕ್ಕೆ ಮತ್ತೊಂದು ಕಾರಣ
ಸರ್ಕಾರಿ ಅಧಿಕಾರಿಗಳೇ ಮಾಲೆ ಹಾಕಿ ತಮ್ಮ ಕೆಲಸಗಳನ್ನು ಮಾಡುವುದಿಲ್ಲವೇ? ಅವರಿಗೆ ನಿಮ್ಮ ಈ ನಿಯಮಗಳು ಅನ್ವಯಿಸುವುದಿಲ್ಲವೇ? ಎಂದು ಪ್ರಶ್ನಿಸಲಾಯಿತು. ಕಾಲೇಜು ಆಡಳಿತ ಮಂಡಳಿಯವರು ಉದ್ದೇಶಪೂರ್ವಕವಾಗಿ ಹಿಂದೂ ವಿದ್ಯಾರ್ಥಿಗಳನ್ನು ಗುರಿಯಾಗಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಿದ ಕಾಲೇಜು ಆಡಳಿತ ಮಂಡಳಿಯ ಕ್ರಮದ ವಿರುದ್ಧ ಬಿಜೆಪಿ-ಬಜರಂಗದಳದ ಕಾರ್ಯಕರ್ತರು ಪ್ರಾಂಶುಪಾಲರ ಕೊಠಡಿಯಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು.
ಇತ್ತೀಚೆಗೆ ರಾಜ್ಯದ ಹಲವು ಭಾಗಗಳಲ್ಲಿ ಹಿಜಾಬ್ ಮತ್ತು ಸಮವಸ್ತ್ರ ನಿಯಮಗಳ ಕುರಿತು ಗೊಂದಲ ಉಂಟಾಗಿದ್ದ ಬೆನ್ನಲ್ಲೇ, ಶಬರಿಮಲೆ ಮಾಲೆಯ ವಿಚಾರದಲ್ಲಿ ಈ ಘಟನೆ ನಡೆದಿರುವುದು ಮತ್ತೊಂದು ಧಾರ್ಮಿಕ ಮತ್ತು ಸಮವಸ್ತ್ರ ವಿವಾದಕ್ಕೆ ನಾಂದಿ ಹಾಡಿದಂತಾಗಿದೆ.


