ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ‘ಪಲ್ಸ್ ರಿವಾರ್ಡ್ಸ್’ ಅಪ್ಲಿಕೇಶನ್‌ನಲ್ಲಿ ಚಿಲ್ಲರೆ ವ್ಯಾಪಾರ, ಆಹಾರ ಮತ್ತು ಪಾನೀಯ, ಡ್ಯೂಟಿ ಫ್ರೀ, ಲೌಂಜ್‌ನ ಸೌಲಭ್ಯಗಳಿಂದ ಸರಾಗವಾಗಿ ಅಂಕಗಳನ್ನು ಗಳಿಸಲು ಅನುವು ಮಾಡಿಕೊಡಲಾಗಿದೆ.

ಬೆಂಗಳೂರು (ಸೆ.16): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ತನ್ನ ಪ್ರಯಾಣಿಕರಿಗಾಗಿ ಹೊಸದಾಗಿ ಪಲ್ಸ್ ರಿವಾರ್ಡ್ಸ್ ಎಂಬ ಲಾಯಲ್ಟಿ ಕಾರ್ಯಕ್ರಮ ಪ್ರಾರಂಭಿಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಯಾವುದೇ ಮಳಿಗೆಯಲ್ಲಿ ವಹಿವಾಟು ನಡೆಸಿದರೂ ಅದರಿಂದ ರಿವಾರ್ಡ್‌ ಪಾಯಿಂಟ್‌ ದೊರೆಯಲಿದ್ದು, ಈ ಪಾಯಿಂಟ್‌ ಬಳಸಿಕೊಂಡು ಅನೇಕ ಸೌಲಭ್ಯಗಳನ್ನು ಪಡೆಯಬಹುದು. ಪಲ್ಸ್ ರಿವಾರ್ಡ್ಸ್‌ನ್ನು ಪ್ರಯಾಣದ ಅನುಭವ ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದ್ದು, ಬೆಂಗಳೂರು ವಿಮಾನ ನಿಲ್ದಾಣದ ಪಲ್ಸ್ ಅಪ್ಲಿಕೇಶನ್‌ನಲ್ಲಿ ಚಿಲ್ಲರೆ ವ್ಯಾಪಾರ, ಆಹಾರ ಮತ್ತು ಪಾನೀಯ, ಡ್ಯೂಟಿ ಫ್ರೀ, ಲೌಂಜ್‌ನ ಸೌಲಭ್ಯಗಳಿಂದ ಸರಾಗವಾಗಿ ಅಂಕಗಳನ್ನು ಗಳಿಸಲು ಅನುವು ಮಾಡಿಕೊಡಲಾಗಿದೆ.

ವಿಮಾನ ನಿಲ್ದಾಣದಲ್ಲಿನ ಮಳಿಗೆಗಳಲ್ಲಿ ಗ್ರಾಹಕರು ಖರೀದಿಸುವ ಹಾಗೂ ನಡೆಸುವ ವಹಿವಾಟಿನ ಪ್ರತಿಫಲವಾಗಿ ಪ್ರಯಾಣಿಕರು ಶೇ.2ರಷ್ಟು ಪಾಯಿಂಟ್‌ ಗಳಿಸುತ್ತಾರೆ. 1 ಪಾಯಿಂಟ್ 1 ರೂಪಾಯಿಗೆ ಸಮಾನವಾಗಿರುತ್ತದೆ. ಇದು ವಿಮಾನ ನಿಲ್ದಾಣದಲ್ಲಿ ನಡೆಸುವ ಪ್ರತಿ ಖರೀದಿಯನ್ನು ಹೆಚ್ಚು ಲಾಭದಾಯಕವಾಗಿಸಲು ಅನುವು ಮಾಡಿಕೊಡುತ್ತದೆ. ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದ ಬೋನಸ್ ಪಾಯಿಂಟ್‌ಗಳು, ವಿಶೇಷ ಕಾರ್ಯಕ್ರಮಗಳಿಗೆ ಪ್ರವೇಶ ಮತ್ತು ವಿಶೇಷ ಪಾಲುದಾರರ ಕೊಡುಗೆಗಳನ್ನು ಹೆಚ್ಚುವರಿ ಪ್ರಯೋಜನಗಳಡಿ ಒದಗಿಸಲಾಗಿದೆ.

ಪಲ್ಸ್ ರಿವಾರ್ಡ್ಸ್‌ ಪ್ರಾರಂಭದ ಭಾಗವಾಗಿ ದಸರಾ ಮತ್ತು ದೀಪಾವಳಿ ಹಬ್ಬದ ವಿಶೇಷ ಕೊಡುಗೆಯನ್ನು ಪರಿಚಯಿಸಲಾಗಿದೆ. ಪ್ರಯಾಣಿಕರು ಖರೀದಿ ಮಾಡುವುದು ಅಥವಾ ಊಟ, ತಿಂಡಿ ತಿನಿಸು ಸವಿಯುವ ಮೂಲಕ ಶೇ.2ರಷ್ಟರ ಜೊತೆಗೆ 1000 ಬೋನಸ್ ಅಂಕಗಳನ್ನು ಪಡೆಯುವ ಅವಕಾಶವನ್ನು ನೀಡಲಾಗಿದೆ. ಈ ಕೊಡುಗೆಗಳು ಸೆಪ್ಟೆಂಬರ್ 12 ರಿಂದ ಅಕ್ಟೋಬರ್ 26ರವರೆಗೆ ಮಾನ್ಯವಾಗಿರುತ್ತವೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಮುಖ್ಯ ವಾಣಿಜ್ಯ ಅಧಿಕಾರಿ ಶ್ರೀ ಕೆನ್ನೆತ್ ಗುಲ್ಡ್‌ಬ್ಜೆರ್ಗ್ ಅವರು ಮಾತನಾಡಿ, ಪಲ್ಸ್ ರಿವಾರ್ಡ್ಸ್‌ ಪರಿಚಯಿಸುವ ಮೂಲಕ ಪ್ರಯಾಣಿಕರ ಪ್ರತಿ ವಹಿವಾಟನ್ನೂ ಲಾಭದಾಯಕಗೊಳಿಸಲು ಮುಂದಾಗಿದ್ದೇವೆ.

ಶಾಪಿಂಗ್, ಊಟ ಅಥವಾ ಯಾವುದೇ ವಹಿವಾಟಿಗೂ ಪ್ರಯಾಣಿಕರು ಅಂಕಗಳನ್ನು ಗಳಿಸುತ್ತಿರುತ್ತಾರೆ. ಇದು ಪ್ರಯಾಣವನ್ನು ಮೋಜು, ಆಕರ್ಷಕ ಮತ್ತು ಲಾಭದಾಯಕವಾಗಿಸಲಿದೆ. ಪ್ರಯಾಣಿಕರು ಕೇವಲ ಪ್ರಯಾಣಕ್ಕಾಗಿ ವಿಮಾನ ನಿಲ್ದಾಣವನ್ನು ಅವಲಂಬಿಸುವುದಷ್ಟೇ ಅಲ್ಲದೇ, ವಿಮಾನ ನಿಲ್ದಾಣದಲ್ಲಿ ಪ್ರತಿ ಬಾರಿಯೂ ವಿಶೇಷ ಅನುಭವ ಪಡೆಯುವಂತೆ ಮಾಡುವುದೇ ನಮ್ಮ ಉದ್ದೇಶವಾಗಿದೆ ಎಂದರು.

ಸರಳ ನೋಂದಣಿ

ಪ್ರಯಾಣಿಕರು ಬೆಂಗಳೂರು ವಿಮಾನ ನಿಲ್ದಾಣ ಪಲ್ಸ್ ಅಪ್ಲಿಕೇಶನ್‌ನ್ನು ಡೌನ್‌ಲೋಡ್ ಮಾಡಿ, ತಮ್ಮ ವಿವರ ನೋಂದಾಯಿಸಿಕೊಳ್ಳುವ ಮೂಲಕ ಅಂಕ ಗಳಿಕೆಯನ್ನು ಪ್ರಾರಂಭಿಸಬಹುದು. ವರ್ಷವಿಡೀ, ಪಲ್ಸ್ ರಿವಾರ್ಡ್ಸ್ ವಿಶೇಷ ಕಾರ್ಯಕ್ರಮಗಳು ಮತ್ತು ಪ್ರಚಾರಗಳನ್ನು ಆಯೋಜಿಸಲಾಗುತ್ತದೆ. ಪ್ರಯಾಣಿಕರಿಗೆ ಅನನ್ಯ ಅನುಭವ ಮತ್ತು ಅಂಕಗಳನ್ನು ಗಳಿಸಲು ಹೆಚ್ಚುವರಿ ಅವಕಾಶಗಳನ್ನು ನೀಡಲಾಗುತ್ತದೆ. ಈ ಮೂಲಕ ಖರೀದಿ, ವಿನೋದ, ಆಹಾರದವರೆಗೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿನ ಪ್ರತಿಯೊಂದು ಖರೀದಿಯಲ್ಲೂ ಇದೀಗ ಬೋನಸ್‌ ದೊರೆಯಲಿದೆ.