ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ನಲ್ಲಿ ಕೈಗಾರಿಕಾ ಇಲಾಖೆಯ ಮೂಲಕ ಆಕರ್ಷಕ ಮತ್ತು ಸುಸಜ್ಜಿತ ಕಲಾಲೋಕ ಮಳಿಗೆಯನ್ನು ಸ್ಥಾಪಿಸಲಾಗಿದೆ. ಸಿದ್ದರಾಮಯ್ಯ ಅವರು ಚಿತ್ರಕಲಾ ರಚನೆ ಮತ್ತು ಘಂಟಾ ನಾದದ ಮೂಲಕ ಉದ್ಘಾಟಿಸಿದರು.

ದೇವನಹಳ್ಳಿ (ನ.12): ದೇಶ-ವಿದೇಶಗಳ ಗ್ರಾಹಕರಿಗೆ ಕರ್ನಾಟಕದ ಹೆಮ್ಮೆಯ ಪಾರಂಪರಿಕ ಮತ್ತು ಜಿಐ ಮಾನ್ಯತೆ ಹೊಂದಿರುವ ವಿಶಿಷ್ಟ ಉತ್ಪನ್ನಗಳನ್ನು ತಲುಪಿಸುವ ಉದ್ದೇಶದಿಂದ ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ನಲ್ಲಿ ಕೈಗಾರಿಕಾ ಇಲಾಖೆಯ ಮೂಲಕ ಆಕರ್ಷಕ ಮತ್ತು ಸುಸಜ್ಜಿತ ಕಲಾಲೋಕ ಮಳಿಗೆಯನ್ನು ಸ್ಥಾಪಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರಕಲಾ ರಚನೆ ಮತ್ತು ಘಂಟಾ ನಾದದ ಮೂಲಕ ಈ ಕಲಾಲೋಕ ಉದ್ಘಾಟಿಸಿದರು.

ಈ ವೇಳೆ ಮಾತನಾಡಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜನನಿಬಿಡತೆಯಲ್ಲಿ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಪ್ರತಿ ದಿನವೂ ಇಲ್ಲಿ ಹತ್ತಾರು ಸಾವಿರ ಪ್ರಯಾಣಿಕರು ಬರುತ್ತಿರುತ್ತಾರೆ. ಇಂಥವರಿಗೆ ಇಲ್ಲಿಗೆ ಬಂದ ತಕ್ಷಣವೇ ಕರ್ನಾಟಕದ ಅಭಿಮಾನದ ಪಯಣ ಅರ್ಥವಾಗಬೇಕು ಎನ್ನುವ ಉದ್ದೇಶದಿಂದ ಕಲಾಲೋಕ ಮಳಿಗೆ ನಿರ್ಮಿಸಲಾಗಿದೆ. ಇದರ ಮೂಲಕ ಕರ್ನಾಟಕದ ಹೆಮ್ಮಯ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಪ್ರಚಾರ, ಬ್ರ್ಯಾಂಡಿಂಗ್ ಮತ್ತು ಮಾರಾಟ ಸಾಧಿಸಲಾಗುವುದು’ ಎಂದರು.‌

ಕಾಲಿನ್ಸ್‌ ಇಂಡಿಯಾ ಆಪರೇಷನ್ ಸೆಂಟರ್‌ಗೆ ಚಾಲನೆ

ಬಳಿಕ, ದೇವನಹಳ್ಳಿಯ ಕೆಐಎಡಿಬಿ ಏರೋಸ್ಪೇಸ್‌ ಪಾರ್ಕ್‌ನಲ್ಲಿ ಕಾಲಿನ್ಸ್‌ ಏರೋಸ್ಪೇಸ್‌ ಕಂಪನಿ ಅಭಿವೃದ್ಧಿಪಡಿಸಿರುವ ಕಾಲಿನ್ಸ್ ಇಂಡಿಯಾ ಆಪರೇಷನ್ ಸೆಂಟರ್‌ಗೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಬೆಂಗಳೂರು, ಬೆಳಗಾವಿ, ಮೈಸೂರು, ತುಮಕೂರು ಮತ್ತು ಚಾಮರಾಜನಗರದಲ್ಲಿ ವಿಶ್ವದರ್ಜೆಯ ಏರೋಸ್ಪೇಸ್‌ ಮತ್ತು ಡಿಫೆನ್ಸ್ ಪಾರ್ಕ್‌ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು. ʻಕಾಲಿನ್ಸ್‌ ಏರೋಸ್ಪೇಸ್‌, ರಾಜ್ಯದಲ್ಲಿ ₹225 ಕೋಟಿ ಹೂಡಿಕೆ ಮಾಡುತ್ತಿದೆ. ಈ ನೂತನ ಘಟಕದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ, ಆಧುನಿಕ ತಯಾರಿಕೆಗಳಲ್ಲಿ 2 ಸಾವಿರಕ್ಕೂ ಹೆಚ್ಚು ಕೌಶಲ್ಯಪೂರ್ಣ ಉದ್ಯೋಗ ಸೃಷ್ಟಿ ಆಗಲಿದೆ. ಭಾರತದ ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ರಾಜ್ಯದ ಕೊಡುಗೆ ಶೇಕಡ 65ರಷ್ಟಿದೆ ಎಂದರು.

ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ತೊಡಗಿಸಿಕೊಂಡಿರುವ 2 ಸಾವಿರಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಉದ್ಯಮಗಳು ರಾಜ್ಯದಲ್ಲಿವೆ. ಮಹೀಂದ್ರ ಏರೋಸ್ಪೇಸ್‌, ರಂಗ್‌ಸನ್ಸ್‌ ತರಹದ ವೈಮಾಂತರಿಕ್ಷ ಕಂಪನಿಗಳು ರಾಜ್ಯದಲ್ಲಿ ಅಪಾರ ಹೂಡಿಕೆ ಮಾಡಿದ್ದು, ಈ ವಲಯದಲ್ಲಿ 48 ಒಡಂಬಡಿಕೆಗಳಾಗಿವೆ. ರಂಗ್‌ಸನ್ಸ್‌ ಕಂಪನಿಯು ಬೋಯಿಂಗ್‌ ಕಂಪನಿ ಜತೆ ಸಹಭಾಗಿತ್ವ ಹೊಂದಿದ್ದು, ₹2,915 ಕೋಟಿ ಹೂಡಿಕೆ ಮಾಡುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ₹45 ಸಾವಿರ ಕೋಟಿ ಹೂಡಿಕೆ ಆಕರ್ಷಿಸಿ, 60 ಸಾವಿರ ಉದ್ಯೋಗ ಸೃಷ್ಟಿಸುವ ಗುರಿ ಇದೆ ಎಂದು ಅವರು ತಿಳಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ, ಸಚಿವರಾದ ಕೆ.ಜೆ.ಜಾರ್ಜ್‌, ಕೆ.ಎಚ್.ಮುನಿಯಪ್ಪ ಮತ್ತು ಸಂಸದ ಡಾ। ಕೆ.ಸುಧಾಕರ್‌ ಹಾಗೂ ಕಾಲಿನ್ಸ್‌ ಏರೋಸ್ಪೇಸ್‌ ಕಂಪನಿಯ ಹಿರಿಯ ಉಪಾಧ್ಯಕ್ಷ ರಾಯ್‌ ಗಲಿಕ್ಸನ್ ಉಪಸ್ಥಿತರಿದ್ದರು.