ಹುಬ್ಬಳ್ಳಿ(ಫೆ.23): ಉತ್ತರ ಕರ್ನಾಟಕದ ಪ್ರತಿಷ್ಠಿತ ಮೂರಸಾವಿರ ಮಠದ ಉತ್ತರಾಧಿಕಾರಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಪೀಠಾಧೀಶ ಗುರುಸಿದ್ಧರಾಜ ಯೋಗೀಂದ್ರರು ಉತ್ತರಾಧಿಕಾರಿ ವಿವಾದ ಕೋರ್ಟ್‌ ಅಂಗಳದಲ್ಲಿದೆ ಎಂದಿದ್ದರೆ, ನಾನೇ ಉತ್ತರಾಧಿಕಾರಿ ಎಂದು ಹೇಳಿಕೊಂಡಿರುವ ಬಾಲೆಹೊಸೂರು ದಿಂಗಾಲೇಶ್ವರ ಶ್ರೀಗಳು ಭಾನುವಾರ ಮಠದಲ್ಲಿ ‘ಸತ್ಯದರ್ಶನ ಸಭೆ’ ನಡೆಸಲು ಮುಂದಾಗಿದ್ದಾರೆ. ಆದರೆ, ಶನಿವಾರ ತಡ ರಾತ್ರಿಯವರೆಗೂ ಈ ಸಭೆ ನಡೆಸಲು ಪೊಲೀಸರ ಅನುಮತಿ ಲಭಿಸಿಲ್ಲ.

ಗುರುಸಿದ್ದ ರಾಜಯೋಗೀಂದ್ರು ಮಠದಲ್ಲಿ ಯಾವುದೇ ಸಭೆಗೆ ಅವಕಾಶ ನೀಡಬಾರದು ಮತ್ತು ಅಂಥ ಚಟುವಟಿಕೆಗೆ ಅವಕಾಶ ನೀಡದಂತೆ ನಿಷೇಧಾಜ್ಞೆ ಜಾರಿ ಮಾಡುವಂತೆ ಗೃಹ ಇಲಾಖೆಗೆ ಮನವಿ ಮಾಡಿದ್ದಾರೆ. ಹಾಗಾಗಿ ಪೊಲೀಸರು ತಮ್ಮ ನಿಲುವನ್ನು ಗೌಪ್ಯವಾಗಿ ಇಟ್ಟಿದ್ದಾರೆ. ಪೊಲೀಸರು ಸ್ಪಷ್ಟವಾಗಿ ಏನನ್ನೂ ಹೇಳುತ್ತಿಲ್ಲ.

ಹುಬ್ಬಳ್ಳಿ ಮೂರುಸಾವಿರ ಮಠ ವಿವಾದ ಮತ್ತಷ್ಟು ಗೊಂದಲ

ಈ ನಡುವೆಯೇ ತಾವೇ ಅಧಿಕೃತ ಉತ್ತರಾಧಿಕಾರಿ ಎಂದು ಹೇಳಿಕೊಂಡಿರುವ ಮೂರುಸಾವಿರ ಮಠದ ಶಾಖಾಮಠವಾಗಿರುವ ಬೆಳಗಾವಿ ಜಿಲ್ಲೆಯ ಘಟಪ್ರಭಾದ ಕೆಂಪಯ್ಯ ಸ್ವಾಮಿ ಮಠದ ಮಲ್ಲಿಕಾರ್ಜುನ ಶ್ರೀಗಳು ಭಾನುವಾರ ನಗರಕ್ಕೆ ಆಗಮಿಸಲಿದ್ದಾರೆ. ಈ ಹಿಂದೆಯೇ ಅವರು ಪೊಲೀಸ್‌ ಇಲಾಖೆಗೆ ಮನವಿ ಪತ್ರ ಕೊಟ್ಟು ತಾವು ಸಭೆ ನಡೆಸುತ್ತೇವೆ ತಮಗೂ ಅನುಮತಿ ಕೊಡಿ ಎಂದು ಕೇಳಿದ್ದುಂಟು.

ಮೌನ ಮುರಿದ ಮೂಜಗು:

ಕಳೆದ ಮೂರು ದಿನಗಳಿಂದ ಉತ್ತರಾಧಿಕಾರಿ ವಿಷಯಕ್ಕೆ ಸಂಬಂಧಪಟ್ಟಂತೆ ಮೌನವಾಗಿಯೇ ಉಳಿದಿದ್ದ ಶ್ರೀಗಳು, ಶನಿವಾರ ಮಾತನಾಡಿ, ನಮ್ಮನ್ನು ಯಾರು ಬಂಧನದಲ್ಲಿಯೂ ಇಟ್ಟಿಲ್ಲ. ನಾವು ಯಾರ ಹಿಡಿತಕ್ಕೂ ಒಳಪಟ್ಟಿಲ್ಲ. ನಾವು ಸ್ವತಂತ್ರವಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು. ಅಲ್ಲದೇ, ಮಠವನ್ನು ನಿಭಾಯಿಸಿಕೊಂಡು ಹೋಗಲು ನಾವು ದೈಹಿಕ ಹಾಗೂ ಬೌದ್ಧಿಕವಾಗಿ ಅತ್ಯಂತ ಸಮರ್ಥರಿದ್ದೇವೆ. ಉತ್ತರಾಧಿಕಾರಿ ವಿವಾದ ಸದ್ಯ ಕೋರ್ಟ್‌ನಲ್ಲಿದೆ. ಹೀಗಾಗಿ ಅದರ ಬಗ್ಗೆ ಮಾತನಾಡಲು ಇಷ್ಟಪಡಲ್ಲ ಎಂದರು.

ನಾನು ಗೂಂಡಾ ಅಲ್ಲ: ಉತ್ತರಾಧಿಕಾರಿ ರೇಸ್‌ನಿಂದ ಹಿಂದೆ ಸರಿದ ದಿಂಗಾಲೇಶ್ವರ ಶ್ರೀ

ಆದರೆ ಉತ್ತರಾಧಿಕಾರಿ ವಿಷಯಕ್ಕೆ ಸಂಬಂಧಪಟ್ಟಂತೆ ಎರಡು ಕಡೆಯವರು ಯಾವುದೇ ಚಟುವಟಿಕೆ ನಡೆಸಬಾರದು. ಮಠದ ಹಾಗೂ ಸಮಾಜದ ಗೌರವಕ್ಕೆ ಧಕ್ಕೆ ತರಬಾರದು ಎಂದು ತಿಳಿಸಿದ್ದಾರೆ.