ಹುಬ್ಬಳ್ಳಿ(ಫೆ.22): ಇಲ್ಲಿನ ಪ್ರತಿಷ್ಠಿತ ಮೂರು ಸಾವಿರ ಮಠದ ಉತ್ತರಾಧಿಕಾರ ವಿವಾದ ದಿನದಿಂದ ದಿನಕ್ಕೆ ಮತ್ತಷ್ಟು ಗೋಜಲಾಗುತ್ತಲೇ ಸಾಗಿದೆ. ಉತ್ತರಾಧಿಕಾರಿಯನ್ನು ನಿರ್ಣಯಿಸುವ ಸಲುವಾಗಿ ದಿಂಗಾಲೇಶ್ವರ ಶ್ರೀಗಳು ಫೆ.23ರಂದು ನಡೆಸಲು ಉದ್ದೇಶಿಸಿರುವ ಸತ್ಯದರ್ಶನ ಸಭೆಗೆ ಮೂರು ಸಾವಿರ ಮಠದ ಗುರುಸಿದ್ದ ರಾಜಯೋಂಗೀಂದ್ರ ಶ್ರೀಗಳು ಆಕ್ಷೇಪ ವ್ಯಕ್ತಪಡಿಸಿದ್ದು ಸಭೆಗೆ ಅವಕಾಶ ನೀಡದಂತೆ ಗೃಹ ಸಚಿವರಿಗೂ ಪತ್ರ ಬರೆದಿದ್ದಾರೆ. 

ಈ ನಡುವೆ ಸಭೆ ನಡೆಸಿಯೇ ಸಿದ್ಧ ಎಂದು ದಿಂಗಾಲೇಶ್ವರ ಶ್ರೀಗಳು ಪಟ್ಟು ಹಿಡಿದಿದ್ದು, ಮಾತ್ರವಲ್ಲದೆ ಈ ಸಭೆಗೆ ಅನುಮತಿ ನೀಡಬೇಕೆಂದು ಶ್ರೀಗಳ ಭಕ್ತರು ಪೊಲೀಸ್‌ ಕಮಿಷನರೇಟ್‌ಗೆ ಮನವಿ ಸಲ್ಲಿಸಿದ್ದಾರೆ.

ನಾನು ಗೂಂಡಾ ಅಲ್ಲ: ಉತ್ತರಾಧಿಕಾರಿ ರೇಸ್‌ನಿಂದ ಹಿಂದೆ ಸರಿದ ದಿಂಗಾಲೇಶ್ವರ ಶ್ರೀ

ಈ ಹಿಂದೆ ಮೂಜಗು ಶ್ರೀಗಳು ನನ್ನನ್ನೇ ಮೂರು ಸಾವಿರ ಮಠದ ಉತ್ತರಾಧಿಕಾರಿ ಎಂದು ಹೇಳಿದ್ದು, ಇದೀಗ ತನ್ನನ್ನೇ ಉತ್ತರಾಧಿಕಾರಿಯನ್ನಾಗಿ ನೇಮಿಸಬೇಕು ಎಂದು ಆಗ್ರಹಿಸಿ ದಿಂಗಾಲೇಶ್ವರ ಶ್ರೀಗಳು ಸತ್ಯದರ್ಶನ ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಈ ನಡುವೆ ಉದ್ಯಮಿ ವಿಜಯ ಸಂಕೇಶ್ವರ ಸೇರಿದಂತೆ ಮಠದ ಅನೇಕ ಭಕ್ತರು ದಿಂಗಾಲೇಶ್ವರ ಶ್ರೀಗಳೇ ಉತ್ತರಾಧಿಕಾರಿಯಾಗಲು ಸೂಕ್ತ ವ್ಯಕ್ತಿ ಎಂದು ಹೇಳಿಕೆ ನೀಡಿದ್ದರು. ಆದರೆ ಮೂಜಗು ಶ್ರೀಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಘಟಪ್ರಭಾ ಮಠದ ಮಲ್ಲಿಕಾರ್ಜುನ ದೇವರು ಸ್ವಾಮೀಜಿ ಅವರು ಮೂರು ಸಾವಿರ ಮಠದ ಹಿಂದಿನ ಪೀಠಾಧಿಪತಿಗಳಾಗಿದ್ದ ಗಂಗಾಧರೇಂದ್ರ ಸ್ವಾಮೀಜಿ ಅವರು ತನ್ನನ್ನೇ ಉತ್ತರಾಧಿಕಾರಿ ಎಂದು ತಿಳಿಸಿದ್ದರಿಂದ ಸಮಸ್ಯೆ ಮತ್ತಷ್ಟುಜಟಿಲವಾಗಿತ್ತು.

'ಮೂರುಸಾವಿರ ಮಠದ ಉತ್ತರಾಧಿಕಾರಿ ದಿಂಗಾಲೇಶ್ವರ ಶ್ರೀಗಳೇ ಸೂಕ್ತ'

ಈ ವಿವಾದಗಳ ಬಗ್ಗೆ ಈವರೆಗೂ ಫೆ.23ರೊಳಗೆ ಮಠದ ಉನ್ನತಾಧಿಕಾರ ಸಮಿತಿ ಸಭೆ ನಡೆಸುವುದಾಗಿ ಹೇಳಲಾಗಿತ್ತು. ಆದರೆ ಸಭೆ ನಡೆಸುವ ಇಚ್ಛೆ ಸಮಿತಿಗೆ ಇಲ್ಲ ಎಂದು ಪ್ರಕಟಿಸಲಾಗಿದೆ. ಇದೇ ವೇಳೆ, ದಿಂಗಾಲೇಶ್ವರ ಶ್ರೀಗಳು ಫೆ.23ರಂದು ನಡೆಸಲು ಉದ್ದೇಶಿಸಿರುವ ಸತ್ಯದರ್ಶನ ಸಭೆಗೆ ಅವಕಾಶ ನೀಡದಿರಲು ಮಠದ ಆಡಳಿತ ಮಂಡಳಿ ನಿರ್ಧರಿಸಿದೆ.

ಸಹಿ ಮಾಡಿದ ಮಾತ್ರಕ್ಕೆ ಉತ್ತರಾಧಿಕಾರಿಯಾಗಲ್ಲ

ದಿಂಗಾಲೇಶ್ವರರಿಗೆ ಮೋಹನ ಲಿಂಬಿಕಾಯಿ ತಿರುಗೇಟು/ ಮನೆ ಮನೆಗೆ ಹೋಗಿ ಸಹಿ ಮಾಡಿಸಿಕೊಂಡಿರುವ ಪತ್ರ ಅದು. ಯಾರೋ ಒಬ್ಬರು, ಕೆಲವರ ಸಹಿ ಮಾಡಿರುವ ಪತ್ರ ತಂದು ನಾನೇ ಉತ್ತರಾಧಿಕಾರಿ ಎಂದರೆ ಆಗುವುದಿಲ್ಲ. ಅದೇ ರೀತಿ ಮತ್ತೊಬ್ಬರೂ ಪತ್ರಕ್ಕೆ ಸಹಿ ಮಾಡಿಸಿಕೊಂಡು ಬರಬಹುದು. ಆಗ ಏನು ಮಾಡುವುದು? ಸಹಿ ಮಾಡಿದ ಮಾತ್ರಕ್ಕೆ ಮಠದ ಉತ್ತರಾಧಿಕಾರಿಯಾಗಲು ಸಾಧ್ಯವಿಲ್ಲ ಎಂದು ಮೂರುಸಾವಿರ ಮಠದ ಉನ್ನತಾಧಿಕಾರ ಸಮಿತಿ ಸದಸ್ಯ ಮೋಹನ ಲಿಂಬಿಕಾಯಿ ವರು ನಾನೇ ಉತ್ತರಾಧಿಕಾರಿ ಎಂದು ಹೇಳಿಕೊಳ್ಳುತ್ತಿರುವ ದಿಂಗಾಲೇಶ್ವರ ಶ್ರೀಗೆ ತಿರುಗೇಟು ನೀಡಿದ್ದಾರೆ.

ಮೂರುಸಾವಿರ ಮಠದ ಉತ್ತರಾಧಿಕಾರಿ: 'ಮಲ್ಲಿಕಾರ್ಜುನ ಶ್ರೀ ನನ್ನ ಮುಂದೆ ಬೆಳೆದ ಕೂಸು'

ಮೂರುಸಾವಿರ ಮಠದ ಆವರಣದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರುಸಾವಿರ ಮಠಕ್ಕೆ ಯಾರೊಬ್ಬರನ್ನೂ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಿಕೊಂಡಿಲ್ಲ. ಸದ್ಯಕ್ಕೆ ಮಾಡಿಕೊಳ್ಳುವುದಿಲ್ಲ ಎಂದು ಜ. ಗುರುಸಿದ್ದ ರಾಜಯೋಗೀಂದ್ರ ಸ್ವಾಮಿಗಳು 2014ರಲ್ಲೇ ಹೇಳಿದ್ದಾರೆ. ಹೀಗಾಗಿ ಈ ವಿಚಾರ ಮುಗಿದ ಅಧ್ಯಾಯ ಎಂದು ಸ್ಪಷ್ಟಪಡಿಸಿದರು.

ಉತ್ತರಾಧಿಕಾರಿ ನೇಮಕಕ್ಕೆ ಶ್ರೀಮಠದ ಪರಂಪರೆ, ಇತಿಹಾಸದಲ್ಲಿ ಹಾಗೂ ದೇಶದ ಕಾನೂನಿನಲ್ಲಿ ಅದರದ್ದೇ ಆದ ಪ್ರಕ್ರಿಯೆಗಳು ಇವೆ ಎಂಬುದನ್ನು ಅರಿತುಕೊಳ್ಳಬೇಕು. ಶ್ರೀಮಠದ ಸ್ವಾಮಿಗಳು, ಆಡಳಿತ ಮಂಡಳಿ ಮ್ಯಾನೇಜರ್‌, ಕಾರಬಾರಿಗಳು ಇಲ್ಲವೇ? ಜವಾಬ್ದಾರಿ ಇದ್ದವರು ಮಠದಲ್ಲಿ ಸಭೆ ಕರೆಯಬೇಕಾಗುತ್ತದೆ. ಫೆ. 23ರಂದು ಅವರು ಯಾವುದೇ ಸಭೆ ಕರೆದಿಲ್ಲ. ಅದರ ಅವಶ್ಯಕತೆಯೂ ಇಲ್ಲ. ಅಂದು ಶ್ರೀಮಠದಲ್ಲಿ ಯಾವ ಸಭೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ

ಉತ್ತರಾಧಿಕಾರಿ ನೇಮಕ ಮಾಡಬೇಕಾದರೆ, ಮಠದ ಸ್ವಾಮಿಗಳ ನಿರ್ದೇಶನದ ಮೇರೆಗೆ ಜವಾಬ್ದಾರಿ ಇದ್ದವರು ಸಭೆಯ ದಿನಾಂಕ ನಿಗದಿಪಡಿಸಿ ಎರಡು ಪ್ರಮುಖ ಪತ್ರಿಕೆಗಳಲ್ಲಿ ನೋಟಿಸ್‌ ರೂಪದಲ್ಲಿ ಜನರು/ಭಕ್ತರಿಗೆ ತಿಳಿವಳಿಕೆ ನೀಡಲು ಜಾಹಿರಾತು ನೀಡಬೇಕು. ಬಳಿಕ ನಿಗದಿತ ದಿನಾಂಕದಂದು ಸಭೆ ಕರೆದು ಉತ್ತರಾಧಿಕಾರಿ ಕುರಿತು ಜನರು/ಭಕ್ತರೊಂದಿಗೆ ಚರ್ಚಿಸಿ ಅವರ ಒಟ್ಟಾಭಿಪ್ರಾಯ ಕ್ರೋಢಿಕರಿಸಿದ ಬಳಿಕ ಉತ್ತರಾಧಿಕಾರಿಗಳ ನೇಮಕ ಮಾಡುವುದು ಕಾನೂನು ಮತ್ತು ಮಠದ ಪರಂಪರೆ ಹಾಗೂ ಇತಿಹಾಸ. ಇದರ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದು ದಿಂಗಾಲೇಶ್ವರರಿಗೆ ಕಿವಿಮಾತು ಹೆಳಿದರು.

ನಾನೇ ಮೂರು ಸಾವಿರ ಮಠದ ಉತ್ತರಾಧಿಕಾರಿ: ದಿಂಗಾಲೇಶ್ವರ ಸ್ವಾಮೀಜಿ

ಪತ್ರಕ್ಕೆ ಯಾರೋ 52 ಮಂದಿ ಸಹಿ ಮಾಡಿದ್ದಾರೆ ಎಂದಾಕ್ಷಣ ಅವರು ಉತ್ತರಾಧಿಕಾರಿ ಆಗಲು ಸಾಧ್ಯವಿಲ್ಲ. ಅಷ್ಟಕ್ಕೂ ಸಾರ್ವಜನಿಕ ಸಭೆಯಲ್ಲಿ ಸಹಿ ಮಾಡಿದ ಪತ್ರ ಅದ​ಲ್ಲ. ಪತ್ರಕ್ಕೆ ಮನೆಗೆ ಬಂದು ಸಹಿ ಮಾಡಿಸಿಕೊಂಡು ಹೋಗಿದ್ದಾರೆ ಎಂಬುದನ್ನು ಸಹಿ ಮಾಡಿದವರೇ ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಈಗಿರುವ ಸ್ವಾಮಿಗಳು ಸಮರ್ಥರಿದ್ದು, ಮಠದಲ್ಲಿ ಒಳ್ಳೆಯ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರು ಸೂಕ್ತ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಂಡು ಉತ್ತರಾಧಿಕಾರಿ ನೇಮಕ ಮಾಡಿಕೊಳ್ಳುತ್ತಾರೆ ಎಂದು ತಿಳಿಸಿದರು.