ಧಾರವಾಡ(ಫೆ.21): ಹುಬ್ಬಳ್ಳಿಯ ಮೂರುಸಾವಿರ ಮಠದ ಉತ್ತರಾಧಿಕಾರಿ ಆಗಲು ಕಳೆದ 6 ವರ್ಷಗಳಿಂದ ತೀವ್ರ ಪೈಪೋಟಿ ನಡೆಸಿದ್ದ ಬಾಲೆಹೊಸೂರು ದಿಂಗಾಲೇಶ್ವರ ಶ್ರೀಗಳು ಇದೀಗ ‘ಉತ್ತರಾಧಿಕಾರಿ ಆಗುವ ಆಸೆ ನನಗಿಲ್ಲ. ನನ್ನನ್ನು ಅಯೋಗ್ಯ, ಗೂಂಡಾ ಎಂದು ಬಿಂಬಿಸಿದ್ದು, ಈ ಆರೋಪದಿಂದ ಮುಕ್ತವಾಗಬೇಕಿದೆ ಅಷ್ಟೇ’ ಎನ್ನುವ ಮೂಲಕ ಉತ್ತರಾಧಿಕಾರಿ ರೇಸ್‌ನಿಂದ ಹಿಂದೆ ಸರಿದಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ‘ಉತ್ತರಾಧಿಕಾರಿ ನಾನೇ, ಪಟ್ಟಾಧಿಕಾರ ಮಾತ್ರ ಬಾಕಿ ಉಳಿದಿದೆ’ ಎನ್ನುತ್ತ ಭಕ್ತರ ಸರಣಿ ಸಭೆಗಳನ್ನು ನಡೆಸುತ್ತಿದ್ದ ದಿಂಗಾಲೇಶ್ವರ ಶ್ರೀಗಳು ಗುರುವಾರ ಇದ್ದಕ್ಕಿದ್ದಂತೆ ‘ತಮಗೆ ಉತ್ತರಾಧಿಕಾರಿ ಆಗುವ ಆಸೆ ಇಲ್ಲ’ ಎಂದು ಹಿಂದೆ ಸರಿದಿರುವುದು ಭಕ್ತ ವಲಯದಲ್ಲಿ ಅಚ್ಚರಿ ಮೂಡಿಸಿದೆ.

ನಾನೇ ಮೂರು ಸಾವಿರ ಮಠದ ಉತ್ತರಾಧಿಕಾರಿ: ದಿಂಗಾಲೇಶ್ವರ ಸ್ವಾಮೀಜಿ

ಇಲ್ಲಿನ ಲಿಂಗಾಯತ ಸಭಾಭವನದಲ್ಲಿ ಗುರವಾರ ವೀರಶೈವ ಲಿಂಗಾಯತ ಮುಖಂಡರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯ ಮೂರುಸಾವಿರಮಠದ ಗದ್ದುಗೆ ಏರಲು ದಿಂಗಾಲೇಶ್ವರ ಸ್ವಾಮೀಜಿ ಹಣದ ಲಾಬಿ ನಡೆಸಿದ್ದಾರೆ. ಅವರೊಬ್ಬ ಗೂಂಡಾ ಎಂದೆಲ್ಲಾ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಇದರಿಂದ ನನ್ನ ಬಗ್ಗೆ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತಿದೆ. ಇದರಿಂದ ಮುಕ್ತನಾಗುವ ಉದ್ದೇಶದಿಂದ ಫೆ. 23ರಂದು ಮೂರುಸಾವಿರ ಮಠದಲ್ಲಿ ಸತ್ಯಾನ್ವೇಷಣ ಸಭೆ ಕರೆದಿದ್ದೇನೆ. ಯಾರು ಈ ರೀತಿ ಆರೋಪ ಮಾಡುತ್ತಿದ್ದಾರೋ ಅವರು ಆ ಆರೋಪಗಳನ್ನು ಸಾಬೀತು ಮಾಡಿ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.

ಮೂರುಸಾವಿರ ಮಠದ ಉತ್ತರಾಧಿಕಾರಿ: 'ಮಲ್ಲಿಕಾರ್ಜುನ ಶ್ರೀ ನನ್ನ ಮುಂದೆ ಬೆಳೆದ ಕೂಸು'

ನಾನು ಮೂರುಸಾವಿರ ಮಠದ ಗದ್ದುಗೆಗಾಗಿ ಸಭೆಗಳನ್ನು ಮಾಡುತ್ತಿಲ್ಲ. ಮಠಕ್ಕೆ ಸುತ್ತಿದ ವಿವಾದ ಬಗೆಹರಿಸಲು ಭಕ್ತರ ಸಭೆ ಮಾಡುತ್ತಿದ್ದೇನೆ. ಈ ಸಂಬಂಧ ಹುಬ್ಬಳ್ಳಿಗೆ ಬಂದಿರುವ ಮೂಜಗು ಅವರನ್ನು ಭೇಟಿ ಮಾಡುತ್ತೇನೆ ಎಂದರು. ಸಭೆಯಲ್ಲಿ ವೀರೇಶ ಸೊಬರದಮಠ, ಗುರುರಾಜ ಹುಣಸಿಮರದ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.