ಸೋಮರಡ್ಡಿ ಅಳವಂಡಿ

ಕೊಪ್ಪಳ(ಮಾ.18): ಕೊನೆಗೂ ಎಂಎಸ್‌ಪಿಎಲ್‌ ಉಡಾನ್‌ ಅನುಷ್ಠಾನಕ್ಕೆ ಮುಂದಾಗಿದ್ದು, ಷರತ್ತುಬದ್ಧ ಅನುಮತಿ ನೀಡಲು ಮುಂದೆ ಬಂದಿದೆ. ಎಂಎಸ್‌ಪಿಎಲ್‌ ಕಂಪನಿಯ ಷರತ್ತುಬದ್ಧ ಅನುಮತಿ ಪ್ರಸ್ತಾವನೆಯನ್ನು ಪರಿಗಣಿಸಿರುವ ಜಿಲ್ಲಾಡಳಿತ ಇದರ ಅಗತ್ಯತೆ ಪೂರೈಸಲು 105 ಕೋಟಿ ಪ್ರಸ್ತಾವನೆ ಸಿದ್ಧ ಮಾಡಿದೆ.

ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಉಡಾನ್‌ ಕಳೆದ ಮೂರು ವರ್ಷಗಳ ಹಿಂದೆಯೇ ಜಾರಿಯಾಗಬೇಕಾಗಿತ್ತು. ಆದರೆ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಮತ್ತು ಎಂಎಸ್‌ಪಿಎಲ್‌ ನಿರಾಸಕ್ತಿಯಿಂದ ನನೆಗುದಿಗೆ ಬಿದ್ದಿದೆ. ಈಗ ಇದಕ್ಕೆ ಮತ್ತೆ ಮರುಜೀವ ಬಂದಿದೆ. ಕೊಟ್ಟ ಮಾತಿನಂತೆ ಎಂಎಸ್‌ಪಿಎಲ್‌ ಕಂಪನಿ ತನ್ನ ಬಸಾಪುರ ಬಳಿ ಇರುವ ವಿಮಾನ ತಂಗುದಾಣದಲ್ಲಿ ಉಡಾನ್‌ ಜಾರಿ ಮಾಡಲು ಮುಂದಾಗಿದೆ. ಆದರೆ, ಒಂದಿಷ್ಟು ಅಗತ್ಯತೆಗಳನ್ನು ಪೂರೈಸಬೇಕೆಂದು ಹೇಳಿದೆ.

ಈಗಿರುವ ವಿಮಾನ ತಂಗುದಾಣ ಕೇವಲ 12 ಸೀಟ್‌ ವಿಮಾನ ಇಳಿಯುವ ಸಾಮರ್ಥ್ಯ ಇರುವ ರನ್‌ವೇ ಇದೆ. ಇದನ್ನು 80 ಸೀಟ್‌ ವಿಮಾನ ಇಳಿಯುವ ರನ್‌ವೇ ಆಗಿ ಪರಿವರ್ತನೆ ಮಾಡುವ ಅಗತ್ಯವಿದೆ. ಇದಕ್ಕಾಗಿ ಸುಮಾರು ಹೆಚ್ಚುವರಿ 70 ಎಕರೆ ಭೂಮಿಯ ಅಗತ್ಯವಿದೆ.

4 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕೊಪ್ಪಳ ಏರ್‌ಪೋರ್ಟ್‌ಗೆ ಮರುಜೀವ..!

ಈಗಿರುವ ವಿಮಾನ ನಿಲ್ದಾಣದಲ್ಲಿ ವಿಐಪಿ ಲಾಂಜ್‌ ಇದ್ದು, ಇದನ್ನು ನಾವು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಉಡಾನ್‌ ಜಾರಿ ಮಾಡುವುದರಿಂದ ಪ್ರತ್ಯೇಕ ಲಾಂಜ್‌ ನಿರ್ಮಾಣ ಮಾಡಿಕೊಳ್ಳಬೇಕು. ಒಳ- ಹೊರಹೋಗುವ ಮಾರ್ಗಗಳನ್ನು ರೂಪಿಸಿಕೊಳ್ಳಬೇಕು. ಇಂಧನ ಟ್ಯಾಂಕ್‌ ಸಾಮರ್ಥ್ಯ ಹೆಚ್ಚಳ ಮಾಡಬೇಕು ಸೇರಿದಂತೆ ಮೊದಲಾದ ಅಗತ್ಯೆಗಳ ಪೂರೈಕೆ ಮಾಡುವ ಪ್ರಸ್ತಾವನೆಯನ್ನು ಲಿಖಿತವಾಗಿ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸುಮಾರು 105 ಕೋಟಿ ಪ್ರಸ್ತಾವನೆಯನ್ನು ಸಿದ್ಧ ಮಾಡಿದ್ದು, ಅಂತಿಮವಾಗಿ ಪರಿಶೀಲಿಸಿ ಸರ್ಕಾರಕ್ಕೆ ಕಳಿಸಬೇಕಿದೆ.

ಕೇಂದ್ರ ತಜ್ಞರ ತಂಡ ಭೇಟಿ:

ಕೊಪ್ಪಳ ಜಿಲ್ಲೆಯಲ್ಲಿ ಉಡಾನ್‌ ಜಾರಿ ಕುರಿತು ಕೇಂದ್ರದ ವಿಮಾನಯಾನ ಇಲಾಖೆಯ ತಜ್ಞರ ತಂಡ ಮಾ. 18ರಂದು ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಆದರೆ, ಇದರ ಭೇಟಿಯ ಕುರಿತು ಜಿಲ್ಲಾಡಳಿತ ಗೊಂದಲದಲ್ಲಿ ಇರುವಂತೆ ಕಾಣುತ್ತದೆ. ಎಂಎಸ್‌ಪಿಎಲ್‌ ಕಂಪನಿಯ ವಿಮಾನ ತಂಗುದಾಣಕ್ಕೆ ತಜ್ಞರ ತಂಡ ಭೇಟಿ ನೀಡುತ್ತದೆಯೋ ಅಥವಾ ಈ ಮೊದಲು ಇದ್ದ ಹಂಪಿ ವಿಮಾನ ತಂಗುದಾಣಕ್ಕೆ ಭೇಟಿ ನೀಡುತ್ತದೆಯೋ ಎನ್ನುವುದು ನಿಖರವಾಗಿಲ್ಲ.
ಕೇಂದ್ರ ತಂಡದ ಭೇಟಿಯ ಪತ್ರದಲ್ಲಿ ಗಿಣಿಗೇರಿ ಏರ್‌ಸ್ಟ್ರೀಪ್‌ ಎಂದಷ್ಟೇ ಇದೆ. ಗಿಣಿಗೇರಿ ಬಳಿಯೇ ಹಂಪಿ ವಿಮಾನ ತಂಗುದಾಣವಿದೆ ಮತ್ತು ಖಾಸಗಿ ಕಂಪನಿಯ ವಿಮಾನ ತಂಗುದಾಣವೂ ಇದೆ. ಇದರಲ್ಲಿ ಯಾವುದಕ್ಕೆ ಭೇಟಿ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಮೈಮರೆಯದಿರಿ ಜನಪ್ರತಿನಿಧಿಗಳೇ?:

ಜಿಲ್ಲೆಯ ಶಾಸಕರು, ಸಚಿವರು ಹಾಗೂ ಸಂಸದರು ಈ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿ ಒತ್ತಡವನ್ನು ಹಾಕಿದ್ದರೆ ಎಂದೋ ಉಡಾನ್‌ ಯೋಜನೆ ಜಾರಿಯಾಗಿ ವಿಮಾನಗಳು ಹಾರಾಡುತ್ತಿದ್ದವು. ಎಂಎಸ್‌ಪಿಎಲ್‌ ಕಂಪನಿ ನಿರಾಸಕ್ತಿಯನ್ನು ವಹಿಸಿತು ಎನ್ನುವ ಕಾರಣ ಮುಂದೆ ಮಾಡಿ ಯಾವೊಬ್ಬ ಜನಪ್ರತಿನಿಧಿಗಳು ಧ್ವನಿ ಎತ್ತಲಿಲ್ಲ. ಹೀಗಾಗಿಯೇ ಅದು ನಾಲ್ಕು ವರ್ಷವಾದರೂ ಅನುಷ್ಠಾನವಾಗಲಿಲ್ಲ. ಕೊಪ್ಪಳ ಜಿಲ್ಲೆ ಜತೆಗೆ ಘೋಷಣೆಯಾಗಿದ್ದ ಇತರೆ ಜಿಲ್ಲೆಗಳಲ್ಲಿ ಯೋಜನೆ ಜಾರಿಯಾಗಿ ವಿಮಾನಗಳು ಹಾರಾಡುತ್ತಿವೆ. ಈಗಲಾದರೂ ಜಿಲ್ಲೆಯ ಐವರು ಶಾಸಕರು, ಸಚಿವರು ಹಾಗೂ ಸಂಸದರು ಮೈಮರೆಯದೆ ಮತ್ತೊಮ್ಮೆ ಬಂದಿರುವ ಅವಕಾಶವನ್ನಾದರೂ ಜಾರಿ ಮಾಡುವ ದಿಸೆಯಲ್ಲಿ ಪ್ರಯತ್ನ ಮಾಡಬೇಕಿದೆ.

'ಕೊಪ್ಪಳ ಜಿಲ್ಲೆಗೆ ವಿಮಾನ ನಿಲ್ದಾಣ ಬೇಕೆ ಬೇಕು'

ಉಡಾನ್‌ ಜಾರಿ ಮತ್ತು ರನ್‌ ವೇ ಅಧ್ಯಯನಕ್ಕಾಗಿ ಕೇಂದ್ರ ತಜ್ಞರ ತಂಡ ಆಗಮಿಸುತ್ತಿದೆ. ಈ ನಡುವೆ ಎಂಎಸ್‌ಪಿಎಲ್‌ ಕಂಪನಿ ಉಡಾನ್‌ ಜಾರಿಗೆ ಅಗತ್ಯತೆಗಳನ್ನು ಪೂರೈಕೆ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಿದೆ ಎಂದು ಎಡಿಸಿ ಎಂ.ಪಿ. ಮಾರುತಿ ತಿಳಿಸಿದ್ದಾರೆ. 

ಉಡಾನ್‌ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದನ್ನು ಜಾರಿ ಮಾಡುವ ದಿಸೆಯಲ್ಲಿ ಪ್ರಯತ್ನ ಸಕಾರಾತ್ಮಕವಾಗಿ ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ 

ಕೊನೆಗೂ ಉಡಾನ್‌ ಜಾರಿಯಾಗುವ ಲಕ್ಷಣಗಳು ಕಾಣತೊಡಗಿವೆ. ಪ್ರಯತ್ನಕ್ಕೆ ಫಲ ದೊರೆಯುತ್ತದೆ ಎನ್ನುವ ವಿಶ್ವಾಸ ಮೂಡುತ್ತಿದೆ. ಈಗ ಕೇಂದ್ರ ತಜ್ಞರ ತಂಡವೂ ಭೇಟಿಯಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹಿರಿಯ ನ್ಯಾಯವಾದಿ ಆರ್‌.ಬಿ. ಪಾನಘಂಟಿ ಹೇಳಿದ್ದಾರೆ.